ಮೈಸೂರು

5 ಕಡೆ ಸಂಚಾರಿ ಆರೋಗ್ಯ ಸೇವೆ

Published On :


ಕ.ಪ್ರ.ವಾರ್ತೆ   ಮೈಸೂರು   ಅ. 11
ದಸರಾ ಮಹೋತ್ಸವ ಅಂಗವಾಗಿ ನಗರಕ್ಕೆ ಆಗಮಿಸುವ ಪ್ರವಾಸಿಗರು ಮತ್ತು ಸಾರ್ವಜನಿಕರ ಹಿತದೃಷ್ಟಿಯಿಂದ ನಗರದ ಐದು ಕಡೆಗಳಲ್ಲಿ ದಸರಾ ವಿಶೇಷ ಆರೋಗ್ಯ ಸೇವಾ ಕೇಂದ್ರಗಳನ್ನು(ಸಂಚಾರಿ) ತೆರೆಯಲಾಗಿದೆ.
ದಸರಾ ಆರೋಗ್ಯ ಉಪ ಸಮಿತಿಯು ಈ ಸೌಲಭ್ಯ ಕಲ್ಪಿಸಿದೆ. ಪ್ರಮುಖವಾಗಿ ಚಾಮುಂಡಿಬೆಟ್ಟದ ಪೊಲೀಸ್ ಠಾಣೆ ಮುಂದೆ, ಮೃಗಾಲಯ ಆವರಣ, ಆಹಾರ ಮೇಳೆ, ದಸರಾ ವಸ್ತು ಪ್ರದರ್ಶನ ಸಮೀಪದ ದೇವಸ್ಥಾನ ಆವರಣ ಮತ್ತು ಚಾಮುಂಡಿ ವಿಹಾರ ಕ್ರೀಡಾಂಗಣದ ಬಳಿ ಈ ವಾಹನ ಕಾರ್ಯ ನಿರ್ವಹಿಸಲಿದೆ. ಇದರ ಜೊತೆ ಜೊತೆಗೆ ಆರೋಗ್ಯ ಸೇವಾ ಸೌಲಭ್ಯ ಮಾಹಿತಿ ಪ್ರಚಾರ ವಾಹಿನಿಗೂ ಸಹ ಚಾಲನೆ ನೀಡಲಾಗಿದೆ.
ಬೆಳಗ್ಗೆ 8ರಿಂದ ರಾತ್ರಿ 8ರವರೆಗೆ: ಆರೋಗ್ಯ ಸೇವಾ ಕೇಂದ್ರದ ವಾಹನದಲ್ಲಿ ಒಬ್ಬರು ವೈದ್ಯರು, ಒಬ್ಬರು ಶುಶ್ರೂಷಕಿ ಮತ್ತೊಬ್ಬರು ಡಿ ಗ್ರೂಪ್ ನೌಕರರು ಇರುತ್ತಾರೆ. ಸ್ಥಳದಲ್ಲಿ ಯಾರಿಗಾದರೂ ಆರೋಗ್ಯದಲ್ಲಿ ವ್ಯತ್ಯಾಸವಾದರೆ ಅಥವಾ ಅಪಘಾತಗಳು ಸಂಭವಿಸಿದರೆ ಕೂಡಲೆ ಆಯಾ ಸಂಚಾರಿ ಸೇವಾ ಕೇಂದ್ರದ ಸದಸ್ಯರು ತೆರಳಿ ಅಗತ್ಯ ಚಿಕಿತ್ಸೆ ನೀಡುವರು. ಬೆಳಗ್ಗೆ 8ರಿಂದ ರಾತ್ರಿ 8ರವರೆಗೆ ಈ ಕೇಂದ್ರ ಸಾರ್ವಜನಿಕರಿಗೆ ಅಗತ್ಯ ಸೇವೆ ನೀಡಲಿದೆ. ಕೇಂದ್ರದಲ್ಲಿನ ನೌಕರರು ಎರಡು ಪಾಳಿಯಲ್ಲಿ(ಬೆಳಗ್ಗೆ 8ರಿಂದ ಮಧ್ಯಾಹ್ನ 2 ಮತ್ತು ಮಧ್ಯಾಹ್ನ 2ರಿಂದ ರಾತ್ರಿ 8ರವರೆಗೆ) ಕಾರ್ಯ ನಿರ್ವಹಿಸುವರು.
ಆರೋಗ್ಯ ಇಲಾಖೆ ಮತ್ತು ಆರೋಗ್ಯ ಉಪ ಸಮಿತಿಯು ಜಂಟಿಯಾಗಿ ಈ ಸಂಚಾರಿ ವಾಹನದ ವ್ಯವಸ್ಥೆ ಮಾಡಿದೆ. ದಸರಾ ಮಹೋತ್ಸವದಲ್ಲಿ ಸಾವಿರಾರು ಮಂದಿ ಭಾಗವಹಿಸುವುದರಿಂದ ಆರೋಗ್ಯದಲ್ಲಿ ಏರುಪೇರಾಗುವುದು, ಅವಘಡಗಳು ಸಂಭವಿಸುವುದು ಸಾಮಾನ್ಯ. ಅಲ್ಲದೆ ಆಹಾರ ಮೇಳದಲ್ಲಿ ಆಹಾರ ವ್ಯತ್ಯಾಸದಿಂದ ಉಂಟಾಗಬಹುದಾದ ಸಮಸ್ಯೆ ನಿವಾರಿಸುವ ಉದ್ದೇಶದಿಂದ ಈ ಸಂಚಾರಿ ವಾಹನಗಳನ್ನು ಕಾರ್ಯಾಚರಣೆಗೆ ಬಿಡಲಾಗಿದೆ.
ಪ್ರಚಾರ: ಆರೋಗ್ಯ ಸೇವಾ ಸೌಲಭ್ಯ ಮಾಹಿತಿ ಪ್ರಚಾರ ವಾಹಿನಿಯು ನಗರದ ಪ್ರಮುಖ ಜನನಿಬಿಡ ಪ್ರದೇಶಗಳಾದ ರೈಲು ನಿಲ್ದಾಣ, ಬಸ್ ನಿಲ್ದಾಣ, ಅರಮನೆ, ಮೃಗಾಲಯ, ಚಾಮುಂಡಿಬೆಟ್ಟ, ಆಹಾರ ಮೇಳ ಮುಂತಾದ ಕಡೆಗಳಲ್ಲಿ ಸಂಚರಿಸಿ ರಾಜ್ಯ ಮತ್ತು ಕೇಂದ್ರ ಸರ್ಕಾರದ ಆರೋಗ್ಯ ಯೋಜನೆಗಳ ಕುರಿತು ಪ್ರಚಾರ ಮಾಡಲಿದೆ. ಪ್ರತಿದಿನ ಸಂಜೆ 7ರಿಂದ 8ರವರೆಗೆ ರಕ್ತದಾನ, ನೇತ್ರದಾನ ಮುಂತಾದ ವಿಷಯಗಳು ಮತ್ತು ಸರ್ಕಾರದ ಎಲ್ಲಾ ಆರೋಗ್ಯ ಯೋಜನೆಗಳ ವಿವರವನ್ನು ಕಿರು ಪರದೆಯ ಮೂಲಕ ಪ್ರಚಾರ ಮಾಡಲಿದೆ.
ನಗರ ಪಾಲಿಕೆ ಕಚೇರಿ ಆವರಣದಲ್ಲಿ ಆರೋಗ್ಯ ಸೇವಾ ಕೇಂದ್ರವನ್ನು ತೆರೆದಿದೆ. ಪಾಲಿಕೆಯ ಸಹಾಯವಾಣಿಯನ್ನೆ ಬಳಸಿಕೊಂಡು ಈ ಕೇಂದ್ರ ಸೇವೆ ನೀಡಲಿದೆ. ಜಿಲ್ಲೆಯ ಆರೋಗ್ಯ ಇಲಾಖೆಯ ಅಧಿಕಾರಿಗಳ ಸಂಖ್ಯೆ ಮತ್ತು ಆರೋಗ್ಯ ಸೇವೆಯ ವಿವರ ಇರುವ ಕಿರು ಮಾಹಿತಿ ಪುಸ್ತಕವನ್ನು ಉಚಿತವಾಗಿ ವಿವರಿಸುತ್ತಿದೆ.
ಆರೋಗ್ಯ ಉಪ ಸಮಿತಿ ಅಧ್ಯಕ್ಷ ಎಂ. ವೆಂಕಟರಾಮ, ಜಿಲ್ಲಾ ಶಸ್ತ್ರ ಚಿಕಿತ್ಸಕ ಹಾಗೂ ಕಾರ್ಯದರ್ಶಿ ಡಾ. ಜಿ.ಎಂ. ವಾಮದೇವ, ವಲಯ ಆಯುಕ್ತ ಹಾಗೂ ಸಮಿತಿ ಕಾರ್ಯಾಧ್ಯಕ್ಷ ಆರ್. ಲೋಕನಾಥ್ ಅವರ ಕಲ್ಪನೆಯಿಂದ ಈ ಸೇವೆ ಲಭ್ಯವಾಗುತ್ತಿದೆ.
ಡಿ.ಎನ್. ಮಹೇಂದ್ರ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.