ಎಸ್ಜೆಸಿಇಯಿಂದ ಪದವಿ ಪ್ರದಾನ
ಕ.ಪ್ರ.ವಾರ್ತೆ , ಮೈಸೂರು , ಅ. 26
ನಗರದ ಜೆಎಸ್ಎಸ್ ಮಹಾವಿದ್ಯಾಪೀಠದ ಅಂಗಸಂಸ್ಥೆಯಾದ ಶ್ರೀ ಜಯಚಾಮರಾಜೇಂದ್ರ ಎಂಜಿನಿಯರಿಂಗ್ ಕಾಲೇಜು (ಎಸ್ಜೆಸಿಇ) ವತಿಯಿಂದ 2012-13ನೇ ಸಾಲಿನಲ್ಲಿ ತೇರ್ಗಡೆಯಾದ ಪದವೀಧರರಿಗೆ ಶನಿವಾರ ಪದವಿ ಪ್ರದಾನ ಮಾಡಲಾಯಿತು.
ಸಂಸ್ಥೆಯ ಆವರಣದಲ್ಲಿ ನಡೆದ ಸಮಾರಂಭದಲ್ಲಿ ಸುಪ್ರೀಂಕೋರ್ಟ್ನ ನಿವೃತ್ತ ಮುಖ್ಯ ನ್ಯಾಯಮೂರ್ತಿಗಳಾದ ಎಂ.ಎನ್. ವೆಂಕಟಾಚಲಯ್ಯ ಅವರು ಪದವಿ ಪ್ರದಾನ ಮಾಡಿದರು. ಎಂ.ಟೆಕ್ ಸ್ನಾತಕೋತ್ತರ ಹಾಗೂ ಬಿ.ಇ. ಸ್ನಾತಕ ಪದವಿಯಲ್ಲಿ ಅತ್ಯುತ್ತಮ ಅಂಕ ಗಳಿಸಿ ರ್ಯಾಂಕ್ ಪಡೆದವರಿಗೆ ಚಿನ್ನದ ಪದಕ ವಿತರಿಸಿದರು.
ಎಂ.ಟೆಕ್ ಸ್ನಾತಕೋತ್ತರ ಪದವಿ ಪರೀಕ್ಷೆಯಲ್ಲಿ ರ್ಯಾಂಕ್ ಗಳಿಸಿದ ಪ್ರಭಂಜನ್ ಗೈ, ಸಿ.ಎಂ. ವಿಕ್ರಂ, ಸಿ. ರಶ್ಮಿ, ಕೆ.ಆರ್. ಶಿವಾನಂದ, ಟಿ.ಕಾವ್ಯಾ, ಡಿ.ಆರ್. ಕುಸುಮಾ, ಮಧುಸೂದನ ಜಿ.ಕಾಳಿಭಟ್, ವಿ.ಎಸ್. ನಿರಂಜನ್ಕುಮಾರ್, ಸಿ.ಮಾನಸ, ಆರ್.ಕೆ.ಶ್ರುತಿ, ಡಿ.ಎಸ್. ಸುಪ್ರಿಯಾ, ಎಸ್.ವಿ. ಅರಣಕುಮಾರ್, ಎಂಬಿಎ ಪದವಿಯ ಪಿ.ಬಿ. ವಿಶ್ವನಾಥ್, ಎಂಸಿಎ ಪದವಿಯ ಆನಂದಕುಮಾರ್ ಸಿಂಗ್, ಬಿ.ಇ ಪದವಿಯ ಪ್ರಣಿತಾ ವಸಂತ ಪಾಟೀಲ್, ಜಿ. ರಶ್ಮಿ, ಪಿ.ಹರ್ಷಿತಾ, ಪ್ರತಿಭಾ ಶೆಣೈ, ಶಿಲ್ಪಾ, ಎಂ.ಸಿ. ಕಿರಣ್, ಕೆ.ಸಾಧನಾ, ಎನ್. ನಂದಿತಾ, ಸ್ವಾತಿ ಪ್ರಭಾಕರ್, ವಿ. ಶ್ರೀನಿಧಿ, ಟಿ. ಪ್ರದೀಪ್, ಮಾಳವಿಕಾ ಅರವಿಂದ ಅವರಿಗೆ ಚಿನ್ನದ ಪದಕ ನೀಡಿ ಗೌರವಿಸಲಾಯಿತು.
ಇನ್ನು 2012-13ನೇ ಸಾಲಿನ ಬಿ.ಇ. ಪದವಿಯ 840, ಎಂ.ಟೆಕ್ ಪದವಿಯ 189, ಎಂಸಿಎ ಪದವಿಯ 56 ಹಾಗೂ ಎಂಬಿಎ ಪದವಿಯ 89 ವಿದ್ಯಾರ್ಥಿಗಳು ಪದವಿ ಪ್ರಮಾಣ ಪತ್ರ ಸ್ವೀಕರಿಸಿದರು. ಹೆಚ್ಚು ಅಂಕ ಗಳಿಸಿದವರಿಗೆ 15 ಚಿನ್ನದ ಪದಕಗಳು ಹಾಗೂ 11 ದತ್ತಿ ಪದಕಗಳನ್ನು ವಿತರಿಸಲಾಯಿತು. ಜೆಎಸ್ಎಸ್ ಮಹಾವಿದ್ಯಾಪೀಠದ ತಾಂತ್ರಿಕ ನಿರ್ದೇಶಕ ಪ್ರೊ.ಎಂ.ಎಚ್. ಧನಂಜಯ್ ವಿದ್ಯಾರ್ಥಿಗಳಿಗೆ ಪ್ರಮಾಣ ವಚನ ಬೋಧಿಸಿದರು.
ಸುತ್ತೂರು ಮಠಾಧ್ಯಕ್ಷ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಜೆಎಸ್ಎಸ್ ಮಹಾವಿದ್ಯಾಪೀಠದ ಕಾರ್ಯನಿರ್ವಾಹಕ ಕಾರ್ಯದರ್ಶಿ ಬಿ.ಎನ್. ಬೆಟ್ಕೆರೂರ್, ಜೆಎಸ್ಎಸ್ಎಂವಿಪಿ ನಿರ್ದೇಶಕ ಡಾ.ವಿ. ಪ್ರಕಾಶ್, ಎನ್ಎಎಲ್ ಮಾಜಿ ನಿರ್ದೇಶಕ ಡಾ.ಎ.ಆರ್. ಉಪಾಧ್ಯಾಯ, ಪರೀಕ್ಷಾ ನಿಯಂತ್ರಣಾಧಿಕಾರಿ ಪ್ರೊ.ಕೆ.ಎನ್. ಉದಯಕುಮಾರ್, ಎಸ್ಜೆಸಿಇ ಉಪಪ್ರಾಂಶುಪಾಲ ಶಕೀಬ್ ಉರ್ ರೆಹಮಾನ್, ಡಾ.ಬಿ. ಶಿವಮೂರ್ತಿ, ಡಾ.ಜಿ.ಎಂ. ಶಶಿಧರ ಇದ್ದರು. ಎಸ್ಜೆಸಿಇ ಪ್ರಾಂಶುಪಾಲ ಡಾ.ಬಿ.ಜಿ. ಸಂಗಮೇಶ್ವರ್ ಸ್ವಾಗತಿಸಿದರು.
'ಶಿಕ್ಷಣ ವ್ಯವಸ್ಥೆಯಲ್ಲಿ ದೌರ್ಬಲ್ಯ'
ಏಷ್ಯಾ ಖಂಡದಲ್ಲಿ ಭಾರತವು ಜಾಗತಿಕ ಶಿಕ್ಷಣ ಕೇಂದ್ರವಾಗಿ ಮಾರ್ಪಟ್ಟಿದ್ದರೂ ನುರಿತ ಸಿಬ್ಬಂದಿ, ದೂರದೃಷ್ಟಿ ಚಿಂತನೆ ಹಾಗೂ ಭವಿಷ್ಯದ ಚೌಕಟ್ಟಿನ ಕೊರತೆಗಳು ದೌರ್ಬಲ್ಯಗಳಾಗಿ ಪರಿಣಮಿಸಿವೆ ಎಂದು ಸುಪ್ರೀಂಕೋರ್ಟ್ನ ನಿವೃತ್ತ ನ್ಯಾ. ಎಂ.ಎನ್. ವೆಂಕಟಾಚಲಯ್ಯ ಪ್ರತಿಪಾದಿಸಿದರು.
ಇತ್ತೀಚೆಗೆ ನಡೆದ ಸಮೀಕ್ಷೆಯ ಪ್ರಕಾರ ದೇಶದಲ್ಲಿ 621 ವಿವಿಗಳು, 32974 ಕಾಲೇಜುಗಳು ಮತ್ತು 11095 ಸ್ವಾಯತ್ತ ಸಂಸ್ಥೆಗಳಿವೆ. ಇವುಗಳ ಹೊರತಾಗಿ 178 ಖಾಸಗಿ ವಿವಿಗಳಿದ್ದು, ಮುಕ್ತ ವಿವಿಗಳು ಗುರುತರ ಕಾರ್ಯಚಟುವಟಿಕೆ ಹಮ್ಮಿಕೊಂಡು ಹೊಸ ವ್ಯಾಖ್ಯಾನ ನೀಡಿವೆ. 95 ವಿವಿಗಳು ದೂರಶಿಕ್ಷಣ ವಿಧಾನವನ್ನು ಅನುಸರಿಸಿವೆ. ಇಷ್ಟಿದ್ದರೂ ಉನ್ನತ ಶಿಕ್ಷಣ ವ್ಯವಸ್ಥೆ ಒತ್ತಡಕ್ಕೆ ಸಿಲುಕಿದೆ. ಇದಕ್ಕೆ ನುರಿತ ಸಿಬ್ಬಂದಿ ಕೊರತೆ ಮುಖ್ಯ ಕಾರಣವಾಗಿದೆ. ವಿವಿಗಳಲ್ಲಿ ಕೈಗೊಳ್ಳುವ ಸಂಶೋಧನೆ ಮತ್ತು ಅಭಿವೃದ್ಧಿಗಳ ಸ್ಥಿತಿಗತಿ ಆಶಾದಾಯಕವಾಗಿಲ್ಲ ಎಂದರು.
ಪಾಶ್ಚಿಮಾತ್ಯ ದೇಶಗಳಲ್ಲಿನ ವಿವಿಗಳು ಬೌದ್ಧಿಕ ಶಕ್ತಿ ಕೇಂದ್ರಗಳಾಗಿವೆ. ಭಾರತದ ವಿವಿಗಳು ಉನ್ನತ ದರ್ಜೆ ಮಟ್ಟದಲ್ಲಿ ಇಲ್ಲವಾಗಿವೆ. ಐಐಟಿ, ಐಐಎಂ ಸಂಸ್ಥೆಗಳೂ ತಮ್ಮ ಹೊಳಪು ಮತ್ತು ಸಂಶೋಧನೆಯಲ್ಲಿ ಪುಷ್ಟಿ ಕಳೆದುಕೊಂಡಿವೆ. ಈ ನಿಟ್ಟಿನಲ್ಲಿ ನೂತನ ಪದವೀಧರರು ಅವಕಾಶಗಳನ್ನು ಬಳಸಿಕೊಂಡು ಉದ್ಯೋಗಾವಕಾಶಗಳನ್ನು ಹೆಚ್ಚಿಸಿ ಈಗಿನ ಸ್ಥಿತಿಗತಿಯನ್ನು ಬದಲಾಯಿಸಲು ಕಟಿಬದ್ಧರಾಗಬೇಕು. ಭಾರತವು ಜಗತ್ತಿನಲ್ಲಿಯೇ ಆರ್ಥಿಕವಾಗಿ ಸಾಧನೆ ಮಾಡಿದ ಮೊಟ್ಟ ಮೊದಲ ದೇಶವಾಗಿದ್ದು, ಇದಕ್ಕಾಗಿ ಸಂಘರ್ಷ ಮಾಡದೆ ತನ್ನ ಬುದ್ಧಿಮತ್ತೆಯನ್ನು ಪ್ರಯೋಗಿಸಿತು ಅಷ್ಟೆ ಎಂದು ಅಭಿಪ್ರಾಯಪಟ್ಟರು.
ಒಬ್ಬ ವಿದ್ವಾಂಸರು ಹೇಳುವ ಹಾಗೆ ಜಗತ್ತು ಸೈದ್ಧಾಂತಿಕವಾಗಿ ವಿಭಾಗವಾಗದೆ ತಂತ್ರಜ್ಞಾನದಿಂದ ವಿಭಾಗವಾಗಿದೆ. ಸದ್ಯ ಪ್ರಪಂಚದಲ್ಲಿ ಶೇ.15 ರಷ್ಟು ಮಂದಿ ಹೊಸ ತಂತ್ರಜ್ಞಾನ ಆವಿಷ್ಕರಿಸುತ್ತಿದ್ದರೆ, ಶೇ.50 ರಷ್ಟು ಮಂದಿ ಹಳೆ ತಂತ್ರಜ್ಞಾನವನ್ನು ಅಳವಡಿಸಿಕೊಂಡಿದ್ದಾರೆ. ಉಳಿದ ಶೇ.35 ರಷ್ಟು ಮಂದಿ ತಂತ್ರಜ್ಞಾನದಿಂದ ಹೊರತಾಗಿದ್ದಾರೆ ಎಂದು ಅವರು ತಿಳಿಸಿದರು. ಮುಂದಿನ ದಿನಗಳಲ್ಲಿ ಸಮಾಜಕ್ಕೆ ಹಲವು ಸವಾಲುಗಳು ಎದುರಾಗಲಿವೆ. ಮೊದಲನೆಯದಾಗಿ ವೇಗವಾಗಿ ಬದಲಾಗುತ್ತಿರುವ ಕೈಗಾರಿಕಾ ತಂತ್ರಜ್ಞಾನ, ಸ್ಪರ್ಧಾತ್ಮಕ ಮನೋಭೂಮಿಕೆಯಿಂದ ಆರ್ಥಿಕ ಜ್ಞಾನ ಸಂಪಾದನೆ ಮತ್ತು ನಿರ್ವಹಣೆ, ಎರಡನೆಯದು ಹೆಚ್ಚುತ್ತಿರುವ ಜನಸಂಖ್ಯೆ ಮಾರುಕಟ್ಟೆ ಉದ್ಯೋಗ ಮತ್ತು ಗ್ರಾಹಕ ನೀತಿಗಳ ಮೇಲೆ ಪರಿಣಾಮ ಬೀರುತ್ತಿರುವುದು, ಮೂರನೆಯದು ನಾಗರಿಕತೆ ಬೆಳೆಯುತ್ತಿರುವುದು ಹಾಗೂ ನಾಲ್ಕನೆಯದು ಮುಂದಿನ ಪೀಳಿಗೆಯವರಿಗೆ ಪರಿಸರವನ್ನು ಹೇಗೆ ವರ್ಗಾಯಿಸುವುದು ಎಂಬ ಸವಾಲುಗಳು ಕಾಡಲಿವೆ ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

