ಮೈಸೂರು

ಒಂದು ಕೋಟಿ ರು. ಚೆಕ್ ಬೌನ್ಸ್

Published On :

ಕ.ಪ್ರ.ವಾರ್ತೆ , ಮೈಸೂರು , ಅ. 27
ಚೆಕ್ ಬೌನ್ಸ್ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮೈಸೂರಿನ ಪ್ರಧಾನ ಪ್ರಥಮ ಸಿವಿಲ್ ನ್ಯಾಯಾಧೀಶರ ನ್ಯಾಯಾಲಯವು ಮಂಗಳೂರು ಮೂಲದ ಉದ್ಯಮಿಯೊಬ್ಬರ ವಿರುದ್ಧ ಜಾಮೀನು ರಹಿತ ಬಂಧನ ವಾರಂಟ್ ಹೊರಡಿಸಿ, ಅಪರಾಧಿಯಿಂದ 1 ಕೋಟಿ 5 ಸಾವಿರ ವಸೂಲಾತಿಗೆ ಫೈನ್ ಲೆವಿ ವಾರಂಟ್ ಹೊರಡಿಸಿದೆ.
ಮಂಗಳೂರಿನಲ್ಲಿ ಪನಾಮ ಇಂಪೋರ್ಟ್ ಆ್ಯಂಡ್ ಎಕ್ಸ್‌ಪೋರ್ಟ್ ಎಂಬ ಸಂಸ್ಥೆಯ ಉದ್ಯಮಿಯಾದ ಬಿ. ವಿವೇಕರಾಜ್ ಎಂಬವರು ಮೈಸೂರಿನ ಮೆ. ಏಕದಂತ ಹೊಟೇಲ್ಸ್ ಪ್ರೈ.ಲಿ. ಸಂಸ್ಥೆಯ ಪಿ. ಪ್ರಭುರಾಂ ಎಂಬವರಿಂದ 1 ಕೋಟಿ ಸಾಲವಾಗಿ ಪಡೆದಿದ್ದು, ಈ ಸಾಲದ ಮರುಪಾವತಿಗಾಗಿ ಪ್ರಭುರಾಂ ಅವರಿಗೆ 50 ಲಕ್ಷ ಮೌಲ್ಯದ ಎರಡು ಚೆಕ್‌ಗಳನ್ನು ನೀಡಿದ್ದರು. ಸದರಿ ಚೆಕ್‌ಗಳು ಬೌನ್ಸ್ ಆದ ಕಾರಣ ಪ್ರಭುರಾಂ ತಮ್ಮ ವಕೀಲರ ಮುಖಾಂತರ ನೋಟಿಸ್ ನೀಡಿದರೂ ಸಹ ಹಣ ಮರುಪಾವತಿ ಮಾಡಲಿಲ್ಲ. ಹೀಗಾಗಿ ಮೈಸೂರಿನ ನ್ಯಾಯಾಲಯದಲ್ಲಿ ದಾವೆ ಹೂಡಿದ್ದರು.
ವಿಚಾರಣೆ ನಡೆಸಿದ ನ್ಯಾಯಾಧೀಶ ಎಚ್. ಶಶಿಧರ್ ಶೆಟ್ಟಿ ಅವರು ಬಿ. ವಿವೇಕರಾಜ್ ಅವರಿಗೆ 6 ತಿಂಗಳ ಸಾದಾ ಕಾರಾಗೃಹ ವಾಸ ಹಾಗೂ 1,50,10,000 ದಂಡ ವಿಧಿಸಿ ತೀರ್ಪು ನೀಡಿದ್ದರು.
ಈ ಮೊತ್ತದಲ್ಲಿ ಒಂದೂವರೆ ಕೋಟಿ ರುಪಾಯಿಗಳನ್ನು ಪಿರ್ಯಾದುದಾರ ಪ್ರಭುರಾಂ ಅವರಿಗೂ, 10 ಸಾವಿರ ರು. ಅನ್ನು ಸರ್ಕಾರಕ್ಕೂ ಪಾವತಿಸುವಂತೆ ನ್ಯಾಯಾಲಯ ಆದೇಶಿಸಿತ್ತು. ಈ ಆದೇಶ ಪ್ರಶ್ನಿಸಿ ವಿವೇಕ್‌ರಾಜ್ ಮೈಸೂರಿನ ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಧೀಶರ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಿದ್ದರು. ಮನವಿ ಆಲಿಸಿದ ನ್ಯಾ. ಎಸ್.ವೈ. ಈರಣ್ಣನವರ್ ಮೇಲ್ಮನವಿಯನ್ನು ವಜಾ ಮಾಡಿ ಕೆಳ ನ್ಯಾಯಾಲಯದ ತೀರ್ಪನ್ನು ಎತ್ತಿ ಹಿಡಿದಿದ್ದರು.
ಈ ಜಿಲ್ಲಾ ನ್ಯಾಯಾಲಯದ ತೀರ್ಪನ್ನು ಪ್ರಶ್ನಿಸಿ ವಿವೇಕರಾಜ್ ಹೈಕೋರ್ಟ್‌ನಲ್ಲಿ ಪುನರೀಕ್ಷಣ ಅರ್ಜಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾ. ಸಿ.ಆರ್. ಕುಮಾರ್‌ಸ್ವಾಮಿ ಆದೇಶ ಹೊರಡಿಸಿ ಪ್ರಭುರಾಂ ಮತ್ತು ವಿವೇಕರಾಜ್ ಅವರು ಸಲ್ಲಿಸಿದ ರಾಜೀ ಅರ್ಜಿಯಾಧಾರದ ಮೇಲೆ ವಿವೇಕರಾಜ್ ಅವರು 90 ಲಕ್ಷ ರು. ಪಾವತಿಸುವಂತೆಯೂ, ಈ 90 ಲಕ್ಷ ರು.ನಲ್ಲಿ ಈಗಾಗಲೇ 45 ಲಕ್ಷ ರು. ನ್ಯಾಯಾಲಯದಲ್ಲಿ ಜಮೆ ಮಾಡಿರುವುದರಿಂದ ಉಳಿದ 45 ಲಕ್ಷ ರು. ಅನ್ನು 5 ತಿಂಗಳೊಳಗಾಗಿ ಪಾವತಿಸುವಂತೆ 19 ಏಪ್ರಿಲ್ 2013ರಂದು ಆದೇಶಿಸಿದ್ದರು. ಈ ಆದೇಶ ಪಾಲಿಸುವಲ್ಲಿ ವಿಫಲರಾದರೆ ಕೆಳ ನ್ಯಾಯಾಲಯದ ಆದೇಶ ಚಾಲ್ತಿಗೆ ಬರುವುದೆಂದು ಆದೇಶವಿತ್ತರು ಈ ಆದೇಶ ಪಾಲಿಸುವಲ್ಲಿ ವಿವೇಕ್‌ರಾಜ್ ವಿಫಲರಾದ ಹಿನ್ನೆಲೆಯಲ್ಲಿ ಮೈಸೂರಿನ ಪ್ರಧಾನ ಪ್ರಥಮ ಸಿವಿಲ್ ನ್ಯಾಯಾಧೀಶ ಎಚ್. ಶಶಿಧರ್ ಶೆಟ್ಟಿ ಅವರು ವಿವೇಕ್‌ರಾಜ್ ವಿರುದ್ಧ ಜಾಮೀನು ರಹಿತ ಬಂಧನದ ವಾರಂಟ್ ಹೊರಡಿಸಿದ್ದಾರೆ. ಜತೆಗೆ 1 ಕೋಟಿ 5 ಸಾವಿರ ರು. ವಸೂಲಾತಿಗೂ ಆದೇಶಿಸಿದ್ದಾರೆ. ಏಕದಂತ ಹೊಟೇಲ್ಸ್ ಪ್ರೈ.ಲಿ. ಪರವಾಗಿ ವಕೀಲ ಕೆ. ಈಶ್ವರ ಭಟ್ ವಕಾಲತ್ತು ವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.