ಮೃಗಾಲಯದ ನೌಕರರ ಅವಧಿ ನವೀಕರಣ
ಕ.ಪ್ರ.ವಾರ್ತೆ, ಮೈಸೂರು, ಸೆ. 11-
ಮೈಸೂರಿನ ಶ್ರೀ ಚಾಮರಾಜೇಂದ್ರ ಮೃಗಾಲಯದ 88 ಗುತ್ತಿಗೆ ನೌಕರರಿಗೆ ಗುತ್ತಿಗೆ ಅವಧಿಯನ್ನು ಮತ್ತೆ ನವೀಕರಿಸಿಕೊಳ್ಳುವಂತೆ ಸೂಚಿಸಲಾಗಿದೆ.
ಈ ನೌಕರರು ಮೊದಲು ಹೊರಗುತ್ತಿಗೆ ಆಧಾರದ ಮೇಲೆ ಕಾರ್ಯ ನಿರ್ವಹಿಸುತ್ತಿದ್ದರು. ಕಳೆದ ವರ್ಷ ಮೃಗಾಲಯದ ಆಡಳಿತ ಮಂಡಳಿಯೇ ಅವರನ್ನು ಗುತ್ತಿಗೆ ಆಧಾರದ ಮೇಲೆ ನೇಮಿಸಿಕೊಂಡಿತು. ತಮ್ಮ ನೌಕರಿ ಕಾಯಂ ಆಗಬಹುದು ಎಂದು ತಿಳಿದು, ನೌಕರರು ಆಡಳಿತ ಮಂಡಳಿ ಹೇಳಿದ್ದ ಪತ್ರಗಳಿಗೆಲ್ಲ ಸಹಿ ಮಾಡಿಕೊಟ್ಟಿದ್ದರು. ಆದರೆ ತಮ್ಮದು ಆರು ತಿಂಗಳಿಗೊಮ್ಮೆ ನವೀಕರಣವಾಗುವ ಗುತ್ತಿಗೆ ನೌಕರರ ಪದ್ಧತಿ ಎಂದು ಗೊತ್ತಾದ ನಂತರ ಹಲವರು ಆಕ್ಷೇಪಿಸಿದರು. ತಮ್ಮನ್ನು ಕಾಯಂ ಮಾಡುವಂತೆ ಕೋರಿದರು. ಆದರೆ ಕಾಯಂ ಮಾಡಲು ಸಾಧ್ಯವಿಲ್ಲ ಎಂದಾಗ ವಿವಾದವನ್ನು ಸಹಾಯಕ ಕಾರ್ಮಿಕ ಆಯುಕ್ತರ ನ್ಯಾಯಾಲಯಕ್ಕೆ ತೆಗೆದುಕೊಂಡರು. ಪ್ರಕರಣ ನ್ಯಾಯಾಯದಲ್ಲಿರುವಾಗಲೇ ಮತ್ತೆ ನವೀಕರಣ ವಚನಬಂಧ ಪತ್ರಕ್ಕೆ ಸಹಿ ಮಾಡುವಂತೆ ಆಡಳಿತ ಮಂಡಳಿ ಸೂಚಿಸಿದೆ.
ಮನವಿ ಸ್ಪಂದಿಸದ ನಾಯಕರು: ಜಿಲ್ಲೆಯವರೇ ಆದ ಮುಖ್ಯಮಂತ್ರಿ ಸಿದ್ದರಾಮಯ್ಯ, ಜಿಲ್ಲಾ ಉಸ್ತುವಾರಿ ಸಚಿವ ವಿ. ಶ್ರೀನಿವಾಸಪ್ರಸಾದ್, ಕೃಷ್ಣರಾಜ ಕ್ಷೇತ್ರದ ಶಾಸಕ ಎಂ.ಕೆ. ಸೋಮಶೇಖರ್ ಅವರಿಗೆ ಗುತ್ತಿಗೆ ನೌಕರರು ಮನವಿಪತ್ರ ಸಲ್ಲಿಸಿ, ತಮಗೆ ನ್ಯಾಯ ದೊರಕಿಸಿಕೊಡುವಂತೆ ಕೋರಿದ್ದಾರೆ. ಆದರೆ ಈವರೆಗೂ ಯಾವುದೇ ಪ್ರಯೋಜನವಾಗಿಲ್ಲ.
ಈ 88 ಮಂದಿ ಹತ್ತಾರು ವರ್ಷಗಳಿಂದ ಮೃಗಾಲಯದಲ್ಲಿ ಕೆಲಸ ಮಾಡುತ್ತಿದ್ದಾರೆ. ಹಿಂದೆ ಮೃಗಾಲಯದ ಪ್ರಾಧಿಕಾರದ ಅಧ್ಯಕ್ಷರಾಗಿದ್ದವರು, ಕಾರ್ಯನಿರ್ವಾಹಕ ನಿರ್ದೇಶಕರಾಗಿದ್ದವರು ಇವರಿಗೆ ಕಾಯಂ ಮಾಡುವ ಭರವಸೆ ನೀಡಿದ್ದರು. ಹತ್ತಾರು ವರ್ಷಗಳಿಂದ ದುಡಿಯುತ್ತಿದ್ದ ನೌಕರರೂ ಈ ಮಾತನ್ನೇ ನಂಬಿದ್ದರು. ಆದರೆ ಈವರೆಗೂ ಈಡೇರಿಲ್ಲ.
ಸುತ್ತೋಲೆಯಲ್ಲಿ ಏನಿದೆ?: ಏಪ್ರಿಲ್ 1, 2013 ರಿಂದ ಸೆಪ್ಟೆಂಬರ್ 9, 2013ರವರೆಗಿನ 6 ತಿಂಗಳ ಅವಧಿಗೆ ಮೃಗಾಲಯದಲ್ಲಿ ಕೆಲಸ ನಿರ್ವಹಿಸುತ್ತಿರುವ ಎಲ್ಲ ಗುತ್ತಿಗೆ ಆಧಾರಿತ ನೌಕರರು ಮಾಡಿಕೊಂಡಿರುವ ಗುತ್ತಿಗೆ ಕರಾರು ಅವಧಿಯು ಸೆಪ್ಟೆಂಬರ್ 30, 2013ಕ್ಕೆ ಅಂತ್ಯಗೊಳ್ಳಲಿದೆ. ಆದ್ದರಿಂದ ಗುತ್ತಿಗೆ ಅವಧಿಯನ್ನು ಅಕ್ಬೋಬರ್ 1, 2013ರಿಂದ ಮಾರ್ಚ್ 31, 2014ರವರೆಗೆ 6 ತಿಂಗಳು ನವೀಕರಿಸಿಕೊಳ್ಳಲು ಅವರ ಒಪ್ಪಿಗೆ ಇರುವ ಅಥವಾ ಇಲ್ಲದ ಬಗ್ಗೆ ಲಿಖಿತ ರೂಪದಲ್ಲಿ ಸಲ್ಲಿಸುವಂತೆ ಸೂಚಿಸಲಾಗಿದೆ. ಒಪ್ಪಿಗೆ ಇದ್ದವರು ಮಾತ್ರ ವಚನಬಂಧದಲ್ಲಿ (ಅಂಡರ್ ಟೇಕಿಂಗ್) ನಮೂದಿಸಿರುವಂತೆ 20 ಮೌಲ್ಯದ ಛಾಪಾ ಕಾಗದದ ಮೇಲೆ ಮುದ್ರಿಸಿ, ಸಹಿ ಮಾಡಿ ಸಲ್ಲಿಸುವಂತೆ ಸೂಚಿಸಲಾಗಿದೆ. ಗುತ್ತಿಗೆ ಕರಾರುಪತ್ರವನ್ನು ಸಹಿ ಮಾಡಿ, ಕಚೇರಿಗೆ ಸಲ್ಲಿಸುವವರಿಗೆ ಮಾತ್ರ ಗುತ್ತಿಗೆಯನ್ನು ನವೀಕರಿಸಲಾಗುವುದು ಎಂದು ಸ್ಪಷ್ಟಪಡಿಸಲಾಗಿದೆ.
ನೌಕರರಲ್ಲಿಯೇ ಕಾಣದ ಒಗ್ಗಟ್ಟು: ಈ ವಿಷಯದಲ್ಲಿ ಗುತ್ತಿಗೆ ನೌಕರರಲ್ಲಿಯೇ ಒಗ್ಗಟ್ಟು ಕಾಣಿಸುತ್ತಿಲ್ಲ. ಕೆಲವರು ಆಡಳಿತ ಮಂಡಳಿ ಹೇಳಿದಂತೆ ಸಹಿ ಮಾಡಿಕೊಟ್ಟಿದ್ದರೆ ಮತ್ತೆ ಕೆಲವರು ಕಾರ್ಮಿಕ ನ್ಯಾಯಾಲಯದ ತೀರ್ಪಿಗೆ ಕಾಯುತ್ತಿದ್ದಾರೆ. ಕಾಯಂ ನೌಕರರಿಗೆ ಅನ್ವಯವಾಗುವ ಯಾವುದೇ ಸೌಲಭ್ಯಗಳು ಗುತ್ತಿಗೆ ನೌಕರರಿಗೆ ಅನ್ವಯವಾಗುತ್ತಿಲ್ಲ. ಇತ್ತೀಚೆಗೆ ಬೇಟಾ ಚೀತಾ ನೋಡಿಕೊಳ್ಳುತ್ತಿದ್ದ ಗುತ್ತಿಗೆ ನೌಕರ ಬಸವರಾಜು ಎಂಬವರ ಕೈಬೆರಳು ಚೀತಾ ದಾಳಿಯಿಂದ ತುಂಡಾಯಿತು. ಆದರೆ ಮೃಗಾಲಯ ಆಡಳಿತ ಮಂಡಳಿ ಶಾಂತವೇರಿ ಗೋಪಾಲಗೌಡ ಆಸ್ಪತ್ರೆಗೆ ದಾಖಲಾಗಿದ್ದ ಆ ನೌಕರಿಗೆ ಚಿಕಿತ್ಸಾ ವೆಚ್ಚ ಭರಿಸಿದೆಯೇ ಹೊರತು ಯಾವುದೇ ಪರಿಹಾರ ನೀಡಿಲ್ಲ. ಗುತ್ತಿಗೆ ನೌಕರರಿಗೆ ಪರಿಹಾರ ನೀಡಲು ಬರುವುದಿಲ್ಲ ಎಂದು ತಳ್ಳಿ ಹಾಕಲಾಗಿದೆ. ಕಾಯಂ ನೌಕರರು, ಗುತ್ತಿಗೆ ನೌಕರರು ಸಮಾನ ರೀತಿಯ ಕೆಲಸ ನಿರ್ವಹಿಸುತ್ತಿದ್ದಾರೆ. ಆದರೆ ಸೌಲಭ್ಯಗಳು ಏಕರೂಪವಾಗಿಲ್ಲ ಎಂಬುದು ಇದರಿಂದ ಸಾಬೀತಾಗಿದೆ. ಕಾರ್ಮಿಕ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿರುವ ನೌಕರರು ಇದೇ ಆಧಾರದ ಮೇಲೆ ಹೋರಾಟ ಮುಂದುವರಿಸಿದ್ದಾರೆ. ]
- ಅಂಶಿ ಪ್ರಸನ್ನಕುಮಾರ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

