ಮೈಸೂರು

ಸಂಚಾರ ಸುಧಾರಣೆಗೆ ಅರ್ಧ 'ದಂಡ'

Published On :

ಕ.ಪ್ರ.ವಾರ್ತೆ  ಮೈಸೂರು  ಸೆ. 14
ನಗರದ ಸಂಚಾರ ಸುಧಾರಣೆಗಾಗಿ ಸಂಚಾರ ಪೊಲೀಸರು ಸಂಗ್ರಹಿಸುವ ದಂಡದ ಮೊತ್ತದಲ್ಲಿ ಅರ್ಧ ಭಾಗವನ್ನು ನೀಡಲಾಗುವುದು ಎಂದು ಕಂದಾಯ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ವಿ.ಶ್ರೀನಿವಾಸಪ್ರಸಾದ್ ಹೇಳಿದರು.
ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಸಂಚಾರ ಆಟೋಮೇಟೆಡ್ ಚಲನಿಂಗ್ ಸಿಸ್ಟಮ್ ಹಾಗೂ ಟ್ರಾಫಿಕ್ ಕೋಬ್ರಾ ಸೇವಾ ಕಾರ್ಯಕ್ರಮಕ್ಕೆ ಶನಿವಾರ ಚಾಲನೆ ನೀಡಿ ಮಾತನಾಡಿದರು.
ಬೆಂಗಳೂರು ಸಂಚಾರ ಪೊಲೀಸರು ಸಂಗ್ರಹಿಸುವ ದಂಡದ ಮೊತ್ತದಲ್ಲಿ ಅರ್ಧ ಭಾಗವನ್ನು ಸಂಚಾರ ಸುಧಾರಣೆಗಾಗಿ ನೀಡಲಾಗುತ್ತಿದೆ. ಅದೇ ಮಾದರಿಯಲ್ಲಿ ಮೈಸೂರು ನಗರ ಪೊಲೀಸರಿಗೂ ನೀಡುವಂತೆ ಶಾಸಕ ತನ್ವೀರ್ ಸೇಠ್ ಸಲಹೆ ನೀಡಿದ್ದಾರೆ. ಈ ವಿಚಾರದ ಬಗ್ಗೆ ಚರ್ಚಿಸಿ, ಸರ್ಕಾರದ ಮಟ್ಟದಲ್ಲಿ ಕ್ರಮ ಕೈಗೊಳ್ಳಬೇಕಿದೆ. ಇದಕ್ಕೆ ಎಲ್ಲ ಶಾಸಕರ ಬೆಂಬಲ ಅಗತ್ಯ. ಸಂಚಾರ ಸುಧಾರಣೆಗಾಗಿ ಶಾಸಕರು, ಸಂಸದರು ತಮ್ಮ ಪ್ರದೇಶಾಭಿವೃದ್ಧಿ ನಿಧಿಯಿಂದ ಅನುದಾನ ನೀಡಬೇಕು ಎಂದು ತಿಳಿಸಿದರು.
ಪೊಲೀಸರಿಗೆ ಸಾರ್ವಜನಿಕರ ಸಹಕಾರ ಅಗತ್ಯ. ಸಮಾಜದಲ್ಲಿ ಪೊಲೀಸರು ಇಲ್ಲದಿದ್ದರೆ ಕಾನೂನು ಸುವ್ಯವಸ್ಥೆ ಹದಗೆಡುತ್ತದೆ. ಅಪರಾಧ, ಸಂಚಾರ ದಟ್ಟಣೆ ಹೆಚ್ಚಾಗುತ್ತದೆ. ಪೊಲೀಸ್ ಇಲಾಖೆ ಎಂದರೆ ಸೇವೆಯಲ್ಲಿ ಉತ್ತಮವಾದದ್ದು ಹಾಗೂ ತುಂಬಾ ಕೆಟ್ಟದ್ದು ಎಂಬ ಹೆಸರಿದೆ. ಪೊಲೀಸರು ಕೆಟ್ಟದಕ್ಕೆ ಅವಕಾಶ ನೀಡದೆ ಸಾರ್ವಜನಿಕರಲ್ಲಿ ವಿಶ್ವಾಸ ಮೂಡಿಸುವ ಉತ್ತಮ ಕೆಲಸ ಮಾಡಬೇಕು ಎಂದರು.
ನಗರ ಪೊಲೀಸ್ ಆಯುಕ್ತ ಡಾ. ಎಂ.ಎ.ಸಲೀಂ ಮಾತನಾಡಿ, ಸಂಚಾರ ನಿಯಮ ಉಲ್ಲಂಘನೆಗಳ ವಿರುದ್ಧ ಪೂರ್ಣ ಪ್ರಮಾಣದಲ್ಲಿ ಕಾನೂನಿನಡಿಯಲ್ಲಿ ಕ್ರಮ ಕೈಗೊಂಡು ನಿಯಂತ್ರಿಸುವ ಉದ್ದೇಶದಿಂದ ಆಟೋಮೇಟೆಡ್ ಟ್ರಾಫಿಕ್ ಚಲನಿಂಗ್ ಸಿಸ್ಟಂ ಜಾರಿಗೊಳಿಸಲಾಗಿದೆ. ನಗರದ ವಿವಿಧೆಡೆ ಸಿಸಿ ಟಿವಿ, ರೆಡ್ ಸ್ಪೀಡ್ ವೈಲೇಷನ್ ಕ್ಯಾಮರಾಗಳು ಹಾಗೂ ಕರ್ತವ್ಯ ನಿರತ ಪೊಲೀಸರ ಮೂಲಕ ನಿಯಮ ಉಲ್ಲಂಘನೆ ಚಿತ್ರೀಕರಿಸಿ ಅವುಗಳನ್ನು ಆಟೋಮೇಟೆಡ್ ಟ್ರಾಫಿಕ್ ಚಲನಿಂಗ್ ಸಿಸ್ಟಂ ಕೇಂದ್ರಕ್ಕೆ ಆಧುನಿಕ ತಂತ್ರಜ್ಞಾನದ ಮೂಲಕ ರವಾನಿಸಲಾಗುತ್ತದೆ. ಸಂಚಾರ ನಿಯಮ ಉಲ್ಲಂಘಿಸಿದ ವಾಹನದ ನೋಂದಣಿ, ಮಾಲೀಕರ ವಿಳಾಸವನ್ನು ಆರ್‌ಟಿಒ ಕಚೇರಿಯ ಆನ್‌ಲೈನ್ ನೇರ ಸಂಪರ್ಕದ ಮುಖೇನ ಪಡೆದು ನೋಟಿಸ್ ಕಳುಹಿಸಲಾಗುತ್ತದೆ. ಬೆಂಗಳೂರಿನಲ್ಲಿದ್ದ ಈ ವ್ಯವಸ್ಥೆಯನ್ನು ಮೈಸೂರು ನಗರದಲ್ಲಿ ಆರಂಭಿಸಲಾಗಿದೆ ಎಂದು ತಿಳಿಸಿದರು.
ಕೆಲವು ವೇಳೆ ಸಣ್ಣಪುಟ್ಟ ಅಪಘಾತ ಸಂಭವಿಸಿದಾಗ ವಾಹನ ಸವಾರರು ಜಗಳವಾಡುತ್ತಾರೆ. ಈ ವೇಳೆ ವಾಹನಗಳನ್ನು ರಸ್ತೆಯಲ್ಲಿ ನಿಲ್ಲಿಸುತ್ತಾರೆ. ಇಂತಹ ಹಲವಾರು ಸಮಯಗಳಲ್ಲಿ ಆ ಸ್ಥಳಕ್ಕೆ ತುರ್ತಾಗಿ ಹೋಗಿ ಸಂಚಾರ ಸುಗಮಗೊಳಿಸಲು ಸಹಕಾರಿಯಾಗುವಂತೆ ಮೈಸೂರು ನಗರದಲ್ಲಿ 7 ಕೋಬ್ರಾ ದ್ವಿಚಕ್ರ ವಾಹನ ವ್ಯವಸ್ಥೆಗೊಳಿಸಲಾಗಿದೆ ಎಂದರು.
ಇದೇ ವೇಳೆ ನರಸಿಂಹರಾಜ, ವಿಜಯನಗರ, ಸರಸ್ವತಿಪುರಂ, ಕುವೆಂಪುನಗರ ಹಾಗೂ ಸಿಸಿಬಿ ಘಟಕದ ಪೊಲೀಸರು ಸರ ಅಪಹರಣಕಾರರನ್ನು ಬಂಧಿಸಿ ವಶಪಡಿಸಿಕೊಂಡಿದ್ದ 45 ಪ್ರಕರಣಗಳ ಫಿರ್ಯಾದುದಾರರಿಗೆ ಚಿನ್ನದ ಸರಗಳನ್ನು ಹಿಂದಿರುಗಿಸಲಾಯಿತು.
ಶಾಸಕ ಎಂ.ಕೆ. ಸೋಮಶೇಖರ್ ಅಧ್ಯಕ್ಷತೆ ವಹಿಸಿದ್ದರು. ಶಾಸಕರಾದ ತನ್ವೀರ್ ಸೇಠ್, ವಾಸು, ಗೋ. ಮಧುಸೂದನ್, ಸಿ.ಎಚ್. ವಿಜಯಶಂಕರ್, ಸಂದೇಶ್ ನಾಗರಾಜ್, ಮೇಯರ್ ಎನ್.ಎಂ.ರಾಜೇಶ್ವರಿ, ಡಿಸಿಪಿಗಳಾದ ಎ.ಎನ್.ರಾಜಣ್ಣ, ಎಂ.ಎಂ.ಮಹದೇವಯ್ಯ, ಪ್ರಭಾಶಂಕರ ಇದ್ದರು. ಕುವೆಂಪುನಗರ ಠಾಣೆ ಇನ್ಸ್‌ಪೆಕ್ಟರ್ ಕೆ.ಎನ್.ಯಶವಂತಕುಮಾರ್ ನಿರೂಪಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.