ಮೈಸೂರು

17 ದಿನ ಯೋಗ ದಸರಾ ಆಚರಣೆಗೆ ಸಜ್ಜು

Published On :

ಕ.ಪ್ರ.ವಾರ್ತೆ ಮೈಸೂರು ಸೆ. 20
ದಸರಾ ಮಹೋತ್ಸವ ಅಂಗವಾಗಿ ಯೋಗ ದಸರಾ ಉಪ ಸಮಿತಿಯಿಂದ ಸೆ.26 ರಿಂದ ಅ. 12 ರವರೆಗೆ ಯೋಗ ಪ್ರಬೋಧ, ಯೋಗ ನೃತ್ಯ ರೂಪಕ, ಯೋಗ ವನಿತೆ ಮುಂತಾದ ಹಲವು ಕಾರ್ಯಕ್ರಮ ಆಯೋಜಿಸಲಾಗಿದೆ.
ಸೆ.26 ರಿಂದ ಅ.5 ರವರೆಗೆ ಯೋಗ ಪುನಶ್ಚೇತನ, ಮನನ, ಮಾಹಿತಿ ಶಿಬಿರವು ಲಲಿತಾದ್ರಿಪುರದ ಜೆಎಸ್‌ಎಸ್ ಆಯುರ್ವೇದ ಆಸ್ಪತ್ರೆಯಲ್ಲಿ ಈ ವೇಳೆ ಹಿಂದುಳಿದ, ಅಲ್ಪಸಂಖ್ಯಾತ ಮತ್ತು ಪ.ಜಾತಿ, ಪಂಗಡಗಳ ವಿದ್ಯಾರ್ಥಿಗಳಿಗೆ ಯೋಗ ಪ್ರಬೋಧ ಕಾರ್ಯಕ್ರಮ ನಡೆಯಲಿದೆ. ಸೆ.27 ರಂದು ಮಹಾರಾಜ ಕಾಲೇಜು ಶತಮಾನೋತ್ಸವ ಭವನದಲ್ಲಿ ಯೋಗ ನೃತ್ಯರೂಪಕ ನಡೆಯಲಿದೆ. ಸೆ.28ಕ್ಕೆ ಸಶಸ್ತ್ರ ಮೀಸಲು ಪಡೆಯವರಿಗೆ ಮತ್ತು ಸಂಚಾರ ಪೊಲೀಸರಿಗೆ ದಸರಾ ಪ್ರಾಯೋಗಿಕ ಯೋಗ ತರಬೇತಿ ಶಿಬಿರ ಹಾಗೂ ಪ್ರಾಣೀಕ್ ಹೀಲಿಂಗ್ ಯೋಗ ಕೌಶಲವು ನಗರ ಸಶಸ್ತ್ರ ಮೀಸಲುಪಡೆ ಆವರಣದಲ್ಲಿ ನಡೆಸುವುದಾಗಿ ಯೋಗ ದಸರಾ ಉಪ ಸಮಿತಿ ಅಧ್ಯಕ್ಷ ಎಲ್. ಭಾಸ್ಕರ್ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಸೆ.29 ರಂದು ಶಾಲಾ ಮಕ್ಕಳಿಗೆ ರಸಧಾರೆ ರಸಪ್ರಶ್ನೆ ಕಾರ್ಯಕ್ರಮ, ಎಸ್ಸೆಸ್ಸೆಲ್ಸಿ ಮಕ್ಕಳಿಗೆ ವಿಶೇಷ ಯೋಗ ಕಾರ್ಯಕ್ರಮವು ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ನಡೆಯುವುದು, ಕಾರಾಗೃಹ ಕೈದಿಗಳಿಗೆ ಯೋಗ ಪರಿವರ್ತನಾ ಕಾರ್ಯಕ್ರಮವು ಸೆ.29 ರಿಂದ ಅ.5 ರವರೆಗೆ ನಡೆಯುವುದು. ಲಯನ್ಸ್, ರೋಟರಿ ಕುಟುಂಬದವರಿಗೆ ಯೋಗ ವನಿತೆ ಹೆಸರಿನ ಉಚಿತ ಯೋಗ ಕಾರ್ಯಕ್ರಮ, ಸೆ.30 ರಂದು ಮುಖ್ಯೋಪಾಧ್ಯಾಯರು, ಶಾಲಾ ಶಿಕ್ಷಕರಿಗೆ ಯೋಗ ಕಾರ್ಯಕ್ರಮ ಆಯೋಜಿಸಲಾಗಿದೆ. ಅ.1ರಂದು ಜಯಲಕ್ಷ್ಮೀಪುರಂ ಜೆಎಸ್‌ಎಸ್ ಹಿರಿಯ ನಾಗರಿಕರ ಸಹಾಯವಾಣಿಯವರಿಗೆ ಆನಂದಯೋಗ ಕಾರ್ಯಕ್ರಮ ರೂಪಿಸಿರುವುದಾಗಿ ತಿಳಿಸಿದರು.
ಅ.2 ರಿಂದ 10 ರವರೆಗೆ ಮನೆಯಂಗಳದಲ್ಲಿ ದಸರಾ ಯೋಗ ಕಲಿಕಾ ಶಿಬಿರ, ಸರ್ಕಾರಿ, ಖಾಸಗಿ ಶಾಲೆ ಹಾಗೂ ಕಾಲೇಜು ವಿದ್ಯಾರ್ಥಿಗಳಿಗೆ ಯೋಗ, ಅ.3ರಂದು ಕಿವುಡ ಮತ್ತು ಮೂಕ ಮಕ್ಕಳಿಗೆ ಪ್ರೇರಣಾ ಯೋಗ ಕಾರ್ಯಕ್ರಮ, ಅ.4 ರಿಂದ 10 ರವರೆಗೆ ವಿಶೇಷ ಮಕ್ಕಳಿಗಾಗಿ ಯೋಗ ಚೇತನ ಕಾರ್ಯಕ್ರಮ, ಅ.5 ರಂದು ಒಡನಾಡಿ ಸಂಸ್ಥೆ ಆವರಣದಲ್ಲಿ ವಿದೇಶಿಯರಿಂದ ಯೋಗ ಪ್ರದರ್ಶನ, ದಸರಾ ಯೋಗ ಜ್ಞಾನ ವಿಕಸನ ತರಬೇತಿ ಮತ್ತು ಸ್ಪರ್ಧೆಯು ಸೆ.30 ರಿಂದ ಅ.5 ರವರೆಗೆ ನಡೆಯಲಿದೆ. ಅ.6ರಂದು ಯೋಗ ದಸರಾ ಉದ್ಘಾಟನೆ ನಡೆಯಲಿದ್ದು, ಬೆಂಗಳೂರಿನ ಗಾಂಧಿಭವನ ಅಧ್ಯಕ್ಷ ಓ. ಶ್ರೀನಿವಾಸಯ್ಯ ಉದ್ಘಾಟಿಸುವರು ಎಂದು ಹೇಳಿದರು.
ಅ.7ರಂದು ನಗರ ಪಾಲಿಕೆ ಸದಸ್ಯರಿಗೆ ಸೇವಾ ಯೋಗ, ಅ.8 ರಂದು ಪತ್ರಿಕಾ ಪ್ರತಿನಿಧಿಗಳಿಗೆ ಯೋಗ ವಾಹಿನಿ, ಅ.9 ರಂದು ಮಂಗಳಮುಖಿಯರಿಗೆ ಯೋಗ ಮಂಗಲೆ, ಅಲೋಪತಿ, ಆಯುಷ್ ವೈದ್ಯರಿಗೆ ಯೋಗ ಕ್ಷೇಮ ಹೆಸರಿನಲ್ಲಿ ಯೋಗ ಶಿಬಿರ, ಅಂಗನವಾಡಿ ಮತ್ತು ಆಶಾ ಕಾರ್ಯಕರ್ತರಿಗೆ ಆಶಾ ಯೋಗ ಕಾರ್ಯಕ್ರಮ ಆಯೋಜಿಸಿರುವುದಾಗಿ ವಿವರಿಸಿದರು.
ರಾಷ್ಟ್ರಮಟ್ಟದ ಯೋಗ: ಅ.11 ಮತ್ತು 12 ರಂದು ರಾಷ್ಟ್ರಮಟ್ಟದ ಯೋಗ ಸಮ್ಮೇಳನ ಆಯೋಜಿಸಲಾಗಿದೆ. ಯೋಗ ದಸರಾದಲ್ಲಿ ಸುಮಾರು 50 ಸಾವಿರ ಮಂದಿ ಭಾಗವಹಿಸುವ ನಿರೀಕ್ಷೆ ಇದೆ. ಬೆಂಗಳೂರಿನಲ್ಲಿ 10 ಕಡೆ ಯೋಗ ಪ್ರದರ್ಶನವನ್ನು ತಾವರೆ ಟ್ರಸ್ಟ್ ವತಿಯಿಂದ ಮಾಡಲಾಗುತ್ತಿದೆ. ತಮ್ಮ ಉಪ ಸಮಿತಿಗೆ 6 ಲಕ್ಷ ಅನುದಾನ ನೀಡುವುದಾಗಿ ಜಿಲ್ಲಾಡಳಿತ ಭರವಸೆ ನೀಡಿದೆ ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.