4 ಬುಡಕಟ್ಟು ಜನಾಂಗಗಳ ಅಧ್ಯಯನ
ಕ.ಪ್ರ.ವಾರ್ತೆ , ಮೈಸೂರು , ಸೆ. 29
ಕರ್ನಾಟಕ ಜಾನಪದ ವಿಶ್ವವಿದ್ಯಾಲಯ ಚಾಮರಾಜನಗರ ಜಿಲ್ಲೆ ಮಹದೇಶ್ವರ ಬೆಟ್ಟದಲ್ಲಿ ಆರಂಭಿಸಿರುವ ಪ್ರಾದೇಶಿಕ ಕೇಂದ್ರ ಹಾಗೂ ಜಾನಪದ ಅಧ್ಯಯನದ ಕೇಂದ್ರದ ಮೂಲಕ ನಾಲ್ಕು ಬುಡಕಟ್ಟು ಜನಾಂಗಗಳ ಬಗ್ಗೆ ಅಧ್ಯಯನ ನಡೆಸಲಿದೆ.
ಈ ಬುಡಕಟ್ಟು ಯೋಜನೆಯ ನಿರ್ದೇಶಕರಾಗಿ ಲೇಖಕ ಡಾ.ಬಂಜಗೆರೆ ಜಯಪ್ರಕಾಶ್ ಕಾರ್ಯನಿರ್ವಹಿಸುತ್ತಿದ್ದಾರೆ. ಬೇಡಕಂಪಣ, ಸೋಲಿಗರು, ಬೆಟ್ಟಕುರುಬರು ಹಾಗೂ ಕಾಡುಕುರುಬರ ಬಗ್ಗೆ ಅಧ್ಯಯನ ನಡೆಯಲಿದೆ ಎಂದು ಜಾನಪದ ವಿವಿ ಕುಲಪತಿ ಪ್ರೊ.ಅಂಬಳಿಕೆ ಹಿರಿಯಣ್ಣ 'ಕನ್ನಡಪ್ರಭ'ಕ್ಕೆ ತಿಳಿಸಿದರು.
ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಎಸ್. ಮಹದೇವಪ್ರಸಾದ್, ಸಂಸದ ಆರ್. ಧ್ರುವನಾರಾಯಣ, ಹನೂರು ಕ್ಷೇತ್ರದ ಶಾಸಕ ಆರ್. ನರೇಂದ್ರ ಅವರ ಸಹಕಾರದಿಂದ ಮಹದೇಶ್ವರ ಬೆಟ್ಟದಲ್ಲಿ ಜಾನಪದ ವಿವಿ ಪ್ರಾದೇಶಿಕ ಕೇಂದ್ರ ಹಾಗೂ ಜಾನಪದ ಅಧ್ಯಯನ ಕೇಂದ್ರ ತೆರೆಯಲಾಗಿದೆ. ಸದ್ಯಕ್ಕೆ ಮುಜರಾಯಿ ಇಲಾಖೆಗೆ ಸೇರಿದ ಕಟ್ಟಡ ನೀಡಿದ್ದು, ಈ ಸಂಬಂಧ ಇರುವ ಸಮಸ್ಯೆಗಳನ್ನು ನಿವಾರಿಸಲು ಜನಪ್ರತಿನಿಧಿಗಳು ಗಮನಿಸಬೇಕಿದೆ.
ಜಾನಪದ ಕಲೆಗಳ ಕಲಿಕಾ ಕೇಂದ್ರ: ಮಹದೇಶ್ವರ ಬೆಟ್ಟದಲ್ಲಿ ಜಾನಪದ ಕಲೆಗಳ ಕಲಿಕಾ ಕೇಂದ್ರವನ್ನೂ ತೆರೆದಿದ್ದು, ಅಲ್ಲಿ ಬೀಸು ಕಂಸಾಳೆ, ಡೊಳ್ಳು ಕುಣಿತ, ಗೊರವರ ಕುಣಿತ ಹಾಗೂ ಹಾಲಿ ಸಿಎಂ ಸಿದ್ದರಾಮಯ್ಯ ಅವರ ಅಚ್ಚು ಮೆಚ್ಚಿನ ವೀರಮಕ್ಕಳ ಕುಣಿತ ಕಲಿಕಾ ತರಬೇತಿ ನೀಡಲಾಗುವುದು. ಈ ತರಬೇತಿ ಗಿರಿಜನರಿಗೆ ಉಚಿತವಾಗಿರುತ್ತದೆ.
6 ಸ್ನಾತಕೋತ್ತರ ಕೋರ್ಸ್ಗಳ ಆರಂಭ: ಹಾವೇರಿ ಜಿಲ್ಲೆ ಗೋಟಗೋಡಿಯನ್ನು ಕೇಂದ್ರ ಸ್ಥಾನವಾಗಿ ಹೊಂದಿರುವ ಜಾನಪದ ವಿವಿಯು 6 ಸ್ನಾತಕೋತ್ತರ ಕೋರ್ಸ್ಗಳನ್ನು ಆರಂಭಿಸಿದೆ. ಗ್ರಾಮೀಣ ಮತ್ತು ಗಿರಿಜನರ ಕೃಷಿ ಕುರಿತ ಎಂಬಿಎ, ಜಾನಪದ ತತ್ವಗಳು, ಜಾನಪದ ಪ್ರವಾಸೋದ್ಯಮ, ಜಾನಪದ ಕಲೆಗಳು, ಜಾನಪದ ವಿಜ್ಞಾನ, ಜಾನಪದ ಸಾಹಿತ್ಯ ಕುರಿತ ಎಂಎ ಕೋರ್ಸ್ಗಳು ಈ ವಿವಿಯಲ್ಲಿ ಲಭ್ಯವಿವೆ.
ಬಯಲು ವಸ್ತು ಸಂಗ್ರಹಾಲಯ: ಜಾನಪದ ವಿವಿಯ 10 ಎಕರೆ ಪ್ರದೇಶದಲ್ಲಿ ಗ್ರಾಮ ಕರ್ನಾಟಕ ಬಯಲು ವಸ್ತು ಸಂಗ್ರಹಾಲಯ ತಲೆ ಎತ್ತಲಿದೆ. ರಾಜ್ಯದ 30 ಜಿಲ್ಲೆಗಳ ಸಂಸ್ಕೃತಿ ಬಿಂಬಿಸುವ ಪ್ರಾಚ್ಯ ವಸ್ತುಗಳನ್ನು ಇಲ್ಲಿ ಸಂಗ್ರಹಿಸಿ, ಪ್ರವಾಸಿ ಕೇಂದ್ರವಾಗಿ ರೂಪಿಸುವ ಗುರಿ ಇದೆ. ಮೈಸೂರಿನ ಮಾನಸ ಗಂಗೋತ್ರಿಯಲ್ಲಿರುವಂತೆ ಒಳಾಂಗಣ ವಸ್ತು ಸಂಗ್ರಹಾಲಯವೂ ತಲೆ ಎತ್ತಲಿದೆ. ಈಗಾಗಲೇ ಶಿಗ್ಗಾವಿ, ಸವಣೂರು ತಾಲೂಕುಗಳಲ್ಲಿ 5000 ವಸ್ತುಗಳನ್ನು ಜಾನಪದ ಕ್ಷೇತ್ರ ಸಂಶೋಧಕರು ಸಂಗ್ರಹಿಸಿ, ತಂದಿದ್ದಾರೆ.
ಗ್ರಾಮಚರಿತ ಕೋಶ ರಚನಾ ಕಾರ್ಯ ನಡೆಯುತ್ತಿದ್ದು, ಸದ್ಯಕ್ಕೆ ಹಾವೇರಿ ಜಿಲ್ಲೆಯ ಕ್ಷೇತ್ರ ಅಧ್ಯಯನ ಮುಗಿದಿದೆ. ಮುಂದೆ ಉಳಿದ 29 ಜಿಲ್ಲೆಗಳ ಕ್ಷೇತ್ರ ಅಧ್ಯಯನ ಕಾರ್ಯ ನಡೆಸಬೇಕಿದೆ.
ಕಡಿಮೆಯಾದ ಅನುದಾನ: ಜಾನಪದ ವಿವಿ ಸ್ಥಾಪನಾ ಪ್ರಕ್ರಿಯೆಗಳಿಗೆ 2010-11ನೇ ಸಾಲಿನಲ್ಲಿ 1 ಕೋಟಿ ನೀಡಲಾಗಿತ್ತು. 2011-12ನೇ ಸಾಲಿನ ಬಜೆಟ್ನಲ್ಲಿ 2.5 ಕೋಟಿ, 2012-13ನೇ ಸಾಲಿನಲ್ಲಿ 8.50 ಕೋಟಿ ನೀಡಲಾಯಿತು. ಆದರೆ ವಿಧಾನಸಭೆ ಚುನಾವಣೆಗೂ ಮುನ್ನ ಅಂದಿನ ಸಿಎಂ ಜಗದೀಶ್ ಶೆಟ್ಟರ್ ಅವರು ಮಂಡಿಸಿದ್ದ ಬಜೆಟ್ನಲ್ಲಿ 6 ಕೋಟಿ ಒದಗಿಸಲಾಗಿತ್ತು. ಆದರೆ ಕಾಂಗ್ರೆಸ್ ಸರ್ಕಾರ ಬಂದ ನಂತರ ಸಿದ್ದರಾಮಯ್ಯ ಅವರು ಮಂಡಿಸಿದ ಬಜೆಟ್ನಲ್ಲಿ ಇದನ್ನು 4.93 ಕೋಟಿಗೆ ಇಳಿಸಿದ್ದಾರೆ. ಗುತ್ತಿಗೆ ಆಧಾರದ ಮೇಲೆ 400 ಮಂದಿಯನ್ನು ನೇಮಿಸಿಕೊಂಡು ಕ್ಷೇತ್ರ ಅಧ್ಯಯನ ನಡೆಸಲಾಗುತ್ತಿದೆ.
- ಅಂಶಿ ಪ್ರಸನ್ನಕುಮಾರ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

