ಮೈಸೂರು

ಕಾಮಗಾರಿ ತಂದ ಸಂಚಾರ ಸಂಚಕಾರ

Published On :

ಕ.ಪ್ರ.ವಾರ್ತೆ ,  ಕೆ.ಆರ್.ನಗರ ,  ಸೆ. 30
ಕುಡಿಯುವ ನೀರು ಸರಬರಾಜು ಮಾಡುವ ಪೈಪ್‌ಲೈನ್ ದುರಸ್ತಿಗೆಂದು ಪಟ್ಟಣದ ಹೊರವಲಯದ ಬಳಿ ಹಾಸನ- ಮೈಸೂರು ರಾಜ್ಯ ಹೆದ್ದಾರಿ ರಸ್ತೆಯನ್ನು 15 ಅಡಿಗಳಷ್ಟು ಆಳ ಅಗೆದು ಕಾಮಗಾರಿ ಪೂರ್ಣಗೊಳಿಸದಿರುವುದರಿಂದ ಸಂಚಾರಕ್ಕೆ ತೊಂದರೆಯಾಗಿದೆ.
ರಸ್ತೆಯ ಅರ್ಧ ಭಾಗ ಅಗೆದು ಕಾಮಗಾರಿ ಮುಗಿಸದೆ ಗುಂಡಿಗೆ ಸ್ವಲ್ಪ ಮಣ್ಣನ್ನು ಹಾಕಿ, ಬ್ಯಾರಿಕೇಡ್ ನಿಲ್ಲಿಸಿರುವುದರಿಂದ ಅಪಾಯಕ್ಕೆ ಆಹ್ವಾನ ನೀಡುತ್ತಿದೆ. ಈ ಮೂಲಕ ಕಾಮಗಾರಿ ನಿರ್ವಹಿಸುತ್ತಿರುವ ಪುರಸಭೆಯವರು 10 ದಿನಗಳಿಂದ ನಿರ್ಲಕ್ಷ್ಯ ತೋರುತ್ತಿದ್ದಾರೆ.
ಈ ರಸ್ತೆಯು ರಾಜ್ಯ ಹೆದ್ದಾರಿಯಾಗಿರುವುದರಿಂದ ನಿತ್ಯ ಸಾವಿರಾರು ವಾಹನಗಳು, ಜನರು ಸಂಚಾರ ಮಾಡುತ್ತಾರೆ. ಹೀಗಾಗಿ ಸ್ವಲ್ಪ ಎಚ್ಚರ ತಪ್ಪಿದರೂ ಅಪಾಯ ಕಟ್ಟಿಟ್ಟ ಬುತ್ತಿ. ರಾತ್ರಿ ಸಮಯದಲ್ಲಿ ಈಗಾಗಲೇ ಹಲವರು ಬಿದ್ದು ಗಾಯಗೊಂಡಿದ್ದಾರೆ. ಆದರೂ ಪುರಸಭೆಯವರಿಗೆ ಈ ಸಮಸ್ಯೆಯ ಅರಿವಿಲ್ಲ.
ನಿತ್ಯ ರೈತರು ಜಮೀನಿಗೆ ತೆರಳಲು ತಮ್ಮ ಜಾನುವಾರುಗಳೊಂದಿಗೆ ತೆರಳುವಾಗ ಎದುರಿನಿಂದ ಭಾರಿ ವಾಹನಗಳು ಎದುರಾದರೆ ಪರದಾಡಬೇಕಿದೆ. ಅಲ್ಲದೆ, ಜೀವ ಭಯದಿಂದ ನಡೆದಾಡುವ ಸ್ಥಿತಿ ಇದೆ.
ಪೈಪ್‌ಲೈನ್ ದುರಸ್ತಿ ಕಾಮಗಾರಿ ಆರಂಭಿಸುವಾಗ ಲೋಕೋಪಯೋಗಿ ಇಲಾಖೆಯವರಿಗೆ ಪತ್ರ ಬರೆದಿದ್ದ ಪುರಸಭೆಯವರು ರಸ್ತೆಬದಿಯಲ್ಲಿ ಸ್ವಲ್ಪ ಕಾಮಗಾರಿಗಾಗಿ ಅನುಮತಿ ಪಡೆದಿದ್ದರು. ನಂತರ ಅರ್ಧಭಾಗ ಅಗೆದು ಪೈಪ್ ಸೋರುವುದನ್ನು ಪತ್ತೆ ಮಾಡಲು ಸಾಧ್ಯವಾಗದಿದ್ದಾಗ ಕಾಮಗಾರಿ ಸ್ಥಗಿತಗೊಳಿಸುವಂತೆ ಇಲಾಖೆಯವರು ಸೂಚಿಸಿರುವುದರಿಂದ ಸಂಚಾರ ಅಯೋವುಯವಾಗಿದೆ.
ಕೂಡಲೇ ಸಂಬಂಧಿತರು ತುರ್ತುಕ್ರಮ ಕೈಗೊಂಡು ಕಾಮಗಾರಿ ಪೂರ್ಣಗೊಳಿಸಿ ಸಾರ್ವಜನಿಕ ಸಂಚಾರಕ್ಕೆ ಅನುಕೂಲ ಕಲ್ಪಿಸಬೇಕು ಎಂದು ನಾಗರಿಕರು ಆಗ್ರಹಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.