ಮೈಸೂರು

ಬನ್ನಿ, ತಪ್ಪದೇ ಮತದಾನ ಮಾಡಿ

Published On :

ಕ.ಪ್ರ.ವಾರ್ತೆ   ಮೈಸೂರು   ಏ. 2
ಲೋಕಸಭಾ ಚುನಾವಣೆಯಲ್ಲಿ ತಪ್ಪದೇ ಮತದಾನ ಮಾಡುವಲ್ಲಿ ನಾಗರಿಕರು ಸಕ್ರಿಯರಾಗಬೇಕು ಎಂಬ ಸಂದೇಶ ಸಾರ ಹೊತ್ತ ಜಾಗೃತಿ ಅಭಿಯಾನ ಕಾರ್ಯಕ್ರಮವು ಬುಧವಾರ ವಿವಿಧೆಡೆ ನಡೆಯಿತು.
ಕೂರ್ಗಳ್ಳಿ ಗ್ರಾಮದ ಹೂಟಗಳ್ಳಿಯ ಕೈಗಾರಿಕಾ ಬಡಾವಣೆಯಲ್ಲಿರುವ ಎನ್‌ಐಇ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ವತಿಯಿಂದ ಕಾಲ್ನಡಿಗೆ ಜಾಥಾ ಏರ್ಪಡಿಸಲಾಗಿತ್ತು. 18 ವರ್ಷದ ಮೇಲ್ಪಟ್ಟವರು ಮತದಾನಕ್ಕೆ ಅರ್ಹರು, ತಪ್ಪದೇ ಮತದಾನ ಮಾಡಿ, ಮತದಾನ ಮಾಡಲು ಆಮಿಷಗಳಿಗೆ ಒಳಗಾಗದಿರಿ ಈ ಮುಂತಾದ ಘೋಷಣಾ ಫಲಕ ಹಿಡಿದು ಸಾಗಿದರು.
ಹೂಟಗಳ್ಳಿಯ ಸರ್ಕಾರಿ ಶಾಲೆಯ ಮುಂಭಾಗದಿಂದ ಆರಂಭವಾದ ಈ ಮೆರವಣಿಗೆಯು ಆಟೋಮೋಟಿವ್ ಆಕ್ಸಲ್ ಬಳಸಿಕೊಂಡು ಕೂರ್ಗಳ್ಳಿ ಬಸ್ ನಿಲ್ದಾಣದ ಮುಖಾಂತರ ಪ್ರಮುಖ ರಸ್ತೆಗಳಲ್ಲಿ ಸಾಗಿ ನಂತರ ಸಂಸ್ಥೆ ತಲುಪಿತು. ಜಾಥಾ ವೇಳೆ ಪ್ರಮುಖ ರಸ್ತೆಗಳಲ್ಲಿ ವಿದ್ಯಾರ್ಥಿಗಳಾದ ಹರ್ಷ ಮತ್ತು ರಾಹುಲ್ ತಂಡದವರು ಮತದಾನದ ಮಹತ್ವ ಸಾರುವ ಬೀದಿ ನಾಟಕವನ್ನು ಪ್ರದರ್ಶಿಸಿ ಅರಿವು ಮೂಡಿಸಿದರು.
ಎನ್‌ಐಇ ಸಂಸ್ಥೆಯ ಗೌರವ ಕಾರ್ಯದರ್ಶಿ ಎಂ.ಶ್ರೀಪಾದರಾವ್, ಸಾರ್ವಜನಿಕ ಸಂಪರ್ಕಾಧಿಕಾರಿ ಎನ್.ಆರ್. ಗಾಯಕವಾಡ್, ಪ್ರಾಧ್ಯಾಪಕರಾದ ಉಷಾ ಸುರೇಂದ್ರ, ಡಾ.ನಳಿನಿ, ಡಾ.ಈಶ್ವರ್ ಹಾಗೂ ಡಾ.ರಾಜ್, ಪ್ರಾಂಶುಪಾಲೆ ಡಾ.ವಿದ್ಯಾ ರಾಜ್ ಇದ್ದರು. 200ಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ಹಾಗೂ 40 ಕ್ಕೂ ಹೆಚ್ಚಿನ ಶಿಕ್ಷಕರು ಮತ್ತು ಸಿಬ್ಬಂದಿ ಭಾಗವಹಿಸಿದ್ದರು.
ನಿಮ್ಮ ಮತ ನಿಮ್ಮ ಹಕ್ಕು: ವಿವೇಕಾನಂದ ನಾಯಕತ್ವ ತರಬೇತಿ ಸಂಸ್ಥೆಯು ಮೈಸೂರು ನಂಜನಗೂಡು ರಸ್ತೆಯಲ್ಲಿರುವ ಗಣಪತಿ ಸಚ್ಚಿದಾನಂದ ಆಶ್ರಮದ ಮುಂಭಾಗ ಬುಧವಾರ ಪ್ರಜಾಪ್ರಭುತ್ವ ಸಬಲೀಕರಣ ಕಾರ್ಯಕ್ರಮದಡಿ ಲೋಕಸಭಾ ಚುನಾವಣೆಗೆ ಜಾಗೃತಿ ಅಭಿಯಾನ ನಡೆಯಿತು.
ಮುಖ್ಯ ಅತಿಥಿಯಾಗಿದ್ದ ನೇತ್ರತಜ್ಞರಾದ ಡಾ.ಮಣಿಕರ್ಣಿಕಾ ಹಾಗೂ ಸಮಾಜ ಸೇವಕ ನಂಜನಗೂಡಿನ ನಾಗರಾಜ ಶೆಟ್ಟಿ ಅವರ ಬೃಹತ್ ಬಲೂನ್ ಹಾರಿಬಿಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ನಂತರ ಇಲ್ಲಿನ ಗುಂಡೂರಾವ್‌ನಗರ, ದತ್ತನಗರ, ಗೌರಿಶಂಕರನಗರದ ಮನೆ ಮನೆಗೆ ತೆರಳಿ ಕರಪತ್ರ ಹಂಚುವ ಮೂಲಕ ಚುನಾವಣೆ ಮಹತ್ವ ಮತ್ತು ಭಾಗವಹಿಸುವಿಕೆ ಹಾಗೂ ಉತ್ತಮ ಅಭ್ಯರ್ಥಿಗಳನ್ನು ಆಯ್ಕೆ ಮಾಡುವಲ್ಲಿ ಜಾಗೃತಿ ಮೂಡಿಸಲಾಯಿತು.
ಕಾರ್ಯಕರ್ತರು ಬೀದಿ ನಾಟಕವನ್ನೂ ಪ್ರದರ್ಶಿಸಿದರು. ಸಂಚಾಲಕರಾದ ಜಯಶ್ರೀ ಹಾಗೂ ಪರಮೇಶ್ವರ್ ಇದ್ದರು. ಸಂತ ಜೋಸೆಫ್ ಕಾಲೇಜಿನಲ್ಲಿ ಏರ್ಪಡಿಸಿದ್ದ ವಿದ್ಯಾರ್ಥಿ ಸಂಘದ ಉದ್ಘಾಟನೆ ಕಾರ್ಯಕ್ರಮದಲ್ಲಿ ಮತದಾನ ಪ್ರತಿಜ್ಞಾ ವಿಧಿ ಸ್ವೀಕರಿಸಲಾಯಿತು. ಮತದಾನದ ಮಹತ್ವ ಕುರಿತು ಡಾ.ಎ.ಶ್ರೀನಿವಾಸನ್ ಹಾಗೂ ಹರೀಶ್ ಮಾತನಾಡಿದರು. ಪ್ರೊ.ಮೇರಿ ರೋಸ್ ಅಧ್ಯಕ್ಷತೆ ವಹಿಸಿದ್ದರು. ವಿದ್ಯಾರ್ಥಿ ಸಂಘದ ಡಾ. ಅಂತೋಣಿ ಪೌಲ್ ರಾಜ್, ಉಪಾಧ್ಯಕ್ಷೆ ಎಂ. ಗ್ರೇಸಿ, ಅನಂತಕುಮಾರ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.