ದಸಂಸ ಬಣಗಳಿಂದ ಕೈಗೆ ಬೆಂಬಲ
ಮೈಸೂರು: ಕೋಮುವಾದಿ ಬಿಜೆಪಿ, ಜಾತಿವಾದಿ ಜೆಡಿಎಸ್ ಪಕ್ಷಗಳಿಂದ ದೇಶ ಹಾಗೂ ಸಂವಿಧಾನಕ್ಕೆ ಒದಗಬಹುದಾದ ಗಂಡಾಂತರವನ್ನು ತಪ್ಪಿಸಲು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯ ಎಲ್ಲಾ ಬಣಗಳು ಕಾಂಗ್ರೆಸ್ ಪಕ್ಷ ಬೆಂಬಲಿಸಲಿವೆ ಎಂದು ವಿಭಾಗೀಯ ಸಂಚಾಲಕ ನಿಂಗರಾಜ ಮಲ್ಲಾಡಿ ಘೋಷಿಸಿದರು.
ಭಾರತದಲ್ಲಿ ಹಲವಾರು ಧರ್ಮಗಳು, ನೂರಾರು ಭಾಷೆಗಳು, ಸಾವಿರಾರು ಜಾತಿಯ ಜನರು ನೆಲೆಸಿದ್ದು ಎಲ್ಲರೂ ತಮ್ಮ ನೆಲೆ ಕಂಡುಕೊಳ್ಳಲು ಹವಣಿಸುತ್ತಿದ್ದಾರೆ. ಆದರೆ, ಕೋಮುವಾದಿ ಬಿಜೆಪಿ ಜಾತಿ ಜಾತಿಗಳ ನಡುವೆ ಕಂದಕ ಏರ್ಪಡಿಸಿ ಅಲ್ಲಲ್ಲಿ ಕೋಮು ಗಲಭೆಗಳನ್ನು ಸೃಷ್ಟಿಸಿ ದೇಶದಲ್ಲಿ ಅಶಾಂತಿ ಮೂಡಿಸುತ್ತಿವೆ. ಗುಜರಾತ್ನಲ್ಲಿ ನರಮೇಧ ನಡೆಸಿದ ನರೇಂದ್ರ ಮೋದಿಯನ್ನು ಈ ದೇಶದ ಪ್ರಧಾನಿ ಎಂದು ಬಿಂಬಿಸುತ್ತಿರುವುದು ದುರಂತವೇ ಸರಿ ಎಂದು ಅವರು ಸೋಮವಾರ ಸುದ್ದಿಗೋಷ್ಠಿಯಲ್ಲಿ ಟೀಕಿಸಿದರು.
ಇನ್ನು ರಾಜ್ಯದಲ್ಲಿರುವ ಜೆಡಿಎಸ್ ಪಕ್ಷ ಒಂದೇ ಜಾತಿಗೆ ಹಾಗೂ ಒಂದೇ ಕುಟುಂಬಕ್ಕೆ ಸೀಮಿತವಾಗಿದೆ. ಎಲ್ಲಾ ಜಾತಿಯವರಿಗೆ ಪಕ್ಷದಲ್ಲಿ ಸ್ಥಾನಮಾನ ನೀಡಿ ದುಡಿಸಿಕೊಂಡು ಕೊನೆಗೆ ಅಧಿಕಾರವನ್ನು ಆ ಕುಟುಂಬದವರು ಮಾತ್ರ ಅನುಭವಿಸುತ್ತಾರೆ. ದುಡಿದವರನ್ನು ದೂರ ತಳ್ಳುತ್ತಾರೆ. ಒಗ್ಗಟ್ಟಿನಿಂದ ಇರುವವರನ್ನು ನಯವಾಗಿ ಒಡೆಯುವುದನ್ನು ದೇವೇಗೌಡರು ಕರಗತ ಮಾಡಿಕೊಂಡಿದ್ದಾರೆ. ಹೀಗೆ ಉರಿವ ಮನೆಯಲ್ಲಿ ಗಳ ಇರಿಯುವ ಕೆಲಸವನ್ನು ದೇವೇಗೌಡ, ಕುಮಾರಸ್ವಾಮಿ ಮಾಡುತ್ತಿದ್ದಾರೆ ಎಂದು ದೂರಿದರು.
ದಸಂಸ ಬಣಗಳಾಗಲು ದೇವೇಗೌಡ ಕಾರಣ: ಕರ್ನಾಟಕ ದಲಿತ ಸಂಘರ್ಷ ಸಮಿತಿ ವಿವಿಧ ಬಣಗಳಾಗಲು ಮಾಜಿ ಪ್ರಧಾನಿ ದೇವೇಗೌಡರೇ ಕಾರಣ. 1996 ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಗುಲ್ಬರ್ಗ ಕ್ಷೇತ್ರದಿಂದ ಬಿ.ಜಿ. ಸಾಗರ್ಗೆ ಟಿಕೆಟ್ ನೀಡುವಂತೆ ದಸಂಸ ಮನವಿ ಸಲ್ಲಿಸಿತ್ತು. ಅಂದು ಟಿಕೆಟ್ ನಿರಾಕರಿಸಿದ ಹಿನ್ನೆಲೆಯಲ್ಲಿ ದಸಂಸ ಬಣಗಳಾದವು. ದಲಿತರಿಗೆ ದೇವೇಗೌಡ ಮೋಸ ಮಾಡಿದರು ಎಂದು ಕಿಡಿಕಾರಿದರು.
ಪದಾಧಿಕಾರಿಗಳಾದ ದೇವಗಳ್ಳಿ ಸೋಮಶೇಖರ್, ಬೆಲವತ್ತ ರಾಮಚಂದ್ರ, ಚುಂಚನಹಳ್ಳಿ ಮಲ್ಲೇಶ್, ಪುಟ್ಟಲಕ್ಷ್ಮಮ್ಮ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

