ಮೈಸೂರು

ಶಂಕರಲಿಂಗೇಗೌಡರ ಅಂತ್ಯಕ್ರಿಯೆ

Published On :

ಕ.ಪ್ರ.ವಾರ್ತೆ ್ಣ ಮೈಸೂರು ್ಣ ಏ. 7
ಅನಾರೋಗ್ಯದಿಂದ ಭಾನುವಾರ ರಾತ್ರಿ ಬೆಂಗಳೂರಿನಲ್ಲಿ ನಿಧನರಾದ ಮಾಜಿ ಶಾಸಕ ಎಚ್.ಎಸ್. ಶಂಕರಲಿಂಗೇಗೌಡ ಅವರ ಪಾರ್ಥಿವ ಶರೀರವನ್ನು ನಗರದ ತೊಣಚಿಕೊಪ್ಪಲು ಬಡಾವಣೆಯ ಅವರ ನಿವಾಸದ ಬಳಿ ಸೋಮವಾರ ಸಾರ್ವಜನಿಕರ ದರ್ಶನಕ್ಕೆ ಇರಿಸಲಾಗಿತ್ತು.
ಬೆಂಗಳೂರಿನ ಬಿಜಿಎಸ್ ಅಪೋಲೋ ಆಸ್ಪತ್ರೆಯಲ್ಲಿ ಮೃತಪಟ್ಟ ಶಂಕರಲಿಂಗೇಗೌಡರ ಮೃತದೇಹವನ್ನು ತಡರಾತ್ರಿ 1.30ರ ಸುಮಾರಿನಲ್ಲಿ ಅವರ ಹುಟ್ಟೂರಾದ ಹೆಮ್ಮಿಗೆಗೆ ಕೊಂಡೊಯ್ದು ಕೆಲಕಾಲ ಇರಿಸಿದ್ದರು. ನಂತರ ಬೆಳಗಿನ ಜಾವ 4.15ರ ಸುಮಾರಿಗೆ ಮೈಸೂರಿನ ಅವರ ನಿವಾಸದ ಆವರಣದಲ್ಲಿ ಸಾರ್ವಜನಿಕರ ದರ್ಶನಕ್ಕೆ ಇರಿಸಲಾಯಿತು.
ವಿಷಯ ತಿಳಿಯುತ್ತಿದ್ದಂತೆಯೇ ಸುತ್ತಮುತ್ತಲ ನಾಗರಿಕರು ಮತ್ತು ಶಂಕರಲಿಂಗೇಗೌಡರ ಅಭಿಮಾನಿಗಳು ಆಗಮಿಸಿ, ಅಂತಿಮ ದರ್ಶನ ಪಡೆದರು. ಮೃತರ ಪಾರ್ಥಿವ ಶರೀರವನ್ನು ಸಾರ್ವಜನಿಕರ ದರ್ಶನಕ್ಕೆ ಇರಿಸಿದ್ದ ಹಿನ್ನೆಲೆಯಲ್ಲಿ ಆ ಭಾಗದಲ್ಲಿ ವಾಹನ ಸಂಚಾರ ನಿಷೇಧಿಸಲಾಗಿತ್ತು.
ಮೃತ ಎಚ್.ಎಸ್. ಶಂಕರಲಿಂಗೇಗೌಡ ಅವರ ಪಾರ್ಥೀವ ಶರೀರಕ್ಕೆ ಆದಿಚುಂಚನಗಿರಿ ಮಠದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ, ಮೈಸೂರು ಶಾಖಾ ಮಠದ ಶ್ರೀ ಸೋಮನಾಥ ಸ್ವಾಮೀಜಿ, ಬಿಷಪ್ ಡಾ.ಥಾಮಸ್ ಆಂಥೋಣಿ ವಾಳಪಿಳ್ಳೈ, ಪ್ರೊ.ಭಾಷ್ಯಂ ಸ್ವಾಮಿ, ಸಚಿವರಾದ ವಿ. ಶ್ರೀನಿವಾಸಪ್ರಸಾದ್, ಎಚ್.ಎಸ್.ಮಹದೇವಪ್ರಸಾದ್, ಶಾಸಕರಾದ ತನ್ವೀರ್ಸೇಠ್, ಎಂ.ಕೆ. ಸೋಮಶೇಖರ್, ಜಿ.ಟಿ. ದೇವೇಗೌಡ, ಸಾ.ರಾ. ಮಹೇಶ್, ಎಸ್.ಚಿಕ್ಕಮಾದು, ಗೋ. ಮಧುಸೂದನ್, ಸಿದ್ದರಾಜು, ಸಂದೇಶ್ ನಾಗರಾಜ್, ಎಂ.ಪಿ. ಅಪ್ಪಚ್ಚು ರಂಜನ್, ವಾಸು, ಡಿ.ಸಿ. ತಮ್ಮಣ್ಣ, ಸಂಸದ ಎಚ್.ವಿಶ್ವನಾಥ್, ಮಾಜಿ ಸಚಿವರಾದ ಎಸ್.ಎ. ರಾಮದಾಸ್, ಎಂ. ಮಹದೇವ್, ರಾಮಚಂದ್ರೇಗೌಡ, ಮೈಸೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪ್ರತಾಪ್ ಸಿಂಹ, ಜೆಡಿಎಸ್ ಅಭ್ಯರ್ಥಿ ಚಂದ್ರಶೇಖರಯ್ಯ, ಮಾಜಿ ಶಾಸಕರಾದ ತೋಂಟದಾರ್ಯ, ಪ್ರೊ.ಕೆ.ಆರ್. ಮಲ್ಲಿಕಾರ್ಜುನಪ್ಪ, ಎಸ್. ಬಾಲರಾಜ್, ಸಾಹಿತಿಗಳಾದ ಡಾ.ದೇಜಗೌ, ಪ್ರೊ.ಸಿ. ನಾಗಣ್ಣ, ಪ್ರೊ.ಕೆ.ಎಸ್. ಭಗವಾನ್, ನಗರ ಪೊಲೀಸ್ ಆಯುಕ್ತ ಡಾ.ಎಂ.ಎ. ಸಲೀಂ, ಮುಖಂಡರಾದ ಪಿ. ಗೋವಿಂದರಾಜು, ಚಲನಚಿತ್ರ ನಟ ಮಂಡ್ಯ ರಮೇಶ್, ಅರ್ಪಿತಾ ಪ್ರತಾಪ್ಸಿಂಹ, ರಂಗಾಯಣ ನಿರ್ದೇಶಕ ಎಚ್. ಜನಾರ್ದನ್, ವಸ್ತು ಪ್ರದರ್ಶನ ಪ್ರಾಧಿಕಾರದ ಮಾಜಿ ಅಧ್ಯಕ್ಷ ಎಸ್.ಡಿ. ಮಹೇಂದ್ರ, ಮೃಗಾಲಯ ಪ್ರಾಧಿಕಾರದ ಮಾಜಿ ಅಧ್ಯಕ್ಷ ಎಂ. ನಂಜುಂಡಸ್ವಾಮಿ, ನಗರ ಬಿಜೆಪಿ ಅಧ್ಯಕ್ಷ ಇ. ಮಾರುತಿರಾವ್ ಪವಾರ್, ನಗರ ಜೆಡಿಎಸ್ ಅಧ್ಯಕ್ಷ ರಾಜಣ್ಣ, ಜಿಲ್ಲಾ ಕಸಾಪ ಅಧ್ಯಕ್ಷ ಎಂ. ಚಂದ್ರಶೇಖರ್, ಜ್ಯೂನಿಯರ್ ವಿಷ್ಣುವರ್ಧನ್, ಮಾಜಿ ಮೇಯರ್ಗಳಾದ ನಾರಾಯಣ್, ಸಂದೇಶ್ ಸ್ವಾಮಿ, ಮುಖಂಡರಾದ ಎಂ.ಅಪ್ಪಣ್ಣ, ಎಚ್.ವಿ. ರಾಜೀವ್, ಯು.ಎಸ್. ಶೇಖರ್, ಹೊಟೇಲ್ ಮಾಲೀಕರ ಸಂಘದ ಅಧ್ಯಕ್ಷ ರಾಜೇಂದ್ರ ಮುಂತಾದವರು ಅಂತಿಮ ನಮನ ಸಲ್ಲಿಸಿದರು.
ನಗರದ ಹಲವೆಡೆ ಮೆರವಣಿಗೆ: ಮಾಜಿ ಶಾಸಕ ಎಚ್.ಎಸ್. ಶಂಕರಲಿಂಗೇಗೌಡ ಅವರ ಪಾರ್ಥಿವ ಶರೀರವನ್ನು ನಗರದ ವಿವಿಧ ರಸ್ತೆಗಳಲ್ಲಿ ಮೆರವಣಿಗೆ ನಡೆಸಲಾಯಿತು. ಶಂಕರಲಿಂಗೇಗೌಡರ ನಿವಾಸದಿಂದ ಹೊರಟ ಮೆರವಣಿಗೆಯು ಕಾಮಾಕ್ಷಿ ಆಸ್ಪತ್ರೆ ರಸ್ತೆ, ಬಲ್ಲಾಳ್ ವೃತ್ತ, ರಾಮಸ್ವಾಮಿ ವೃತ್ತ, ಜೆಎಲ್ಬಿ ರಸ್ತೆ, ರೇಲ್ವೆ ನಿಲ್ದಾಣ, ಇರ್ವಿನ್ ರಸ್ತೆ, ಅಶೋಕ ರಸ್ತೆ, ಕೋಟೆ ಆಂಜನೇಯಸ್ವಾಮಿ ದೇವಸ್ಥಾನ, ಹಾರ್ಡಿಂಜ್ ವೃತ್ತ, ಬಸವೇಶ್ವರ ವೃತ್ತ, ನಗರ ಪಾಲಿಕೆ, ಕೆ.ಆರ್. ವೃತ್ತ, ದೇವರಾಜ ಅರಸು ರಸ್ತೆ, ಜೆಎಲ್ಬಿ ರಸ್ತೆ, ರೇಲ್ವೆ ನಿಲ್ದಾಣ, ಕೆ.ಆರ್.ಎಸ್ ರಸ್ತೆ ಮೂಲಕ ಹೆಬ್ಬಾಳಿನ ಜೆ.ಕೆ. ಟೈರ್ಸ್ ಸಮೀಪ ಕುಟುಂಬಕ್ಕೆ ಸೇರಿದ್ದ ಸ್ಥಳದಲ್ಲಿ ಶಂಕರಲಿಂಗೇಗೌಡರ ಅಂತ್ಯಕ್ರಿಯೆ ನೆರವೇರಿತು. ಅವರ ಹಿರಿಯ ಪುತ್ರ ಹಾಗೂ ನಗರ ಪಾಲಿಕೆ ಸದಸ್ಯ ನಂದೀಶ್ ಪ್ರೀತಂ ಅಂತ್ಯಕ್ರಿಯೆಯ ವಿಧಿ ವಿಧಾನ ನೆರವೇರಿಸಿದರು.
ಸುತ್ತೂರು ಶ್ರೀ ಭೇಟಿ
ಮೈಸೂರು: ಮಾಜಿ ಶಾಸಕ ಎಚ್.ಎಸ್. ಶಂಕರಲಿಂಗೇಗೌಡ ಅವರ ಅಂತ್ಯಕ್ರಿಯೆ ವೇಳೆ ಸುತ್ತೂರು ಮಠದ ಶ್ರೀ ಶಿವರಾತ್ರಿದೇಶಿಕೇಂದ್ರ ಸ್ವಾಮೀಜಿ ಭೇಟಿ ನೀಡಿದ್ದರು. ಹೆಬ್ಬಾಳು ಕೈಗಾರಿಕಾ ಪ್ರದೇಶ ವ್ಯಾಪ್ತಿಯ ಎಚ್.ಎಸ್. ಶಂಕರಲಿಂಗೇಗೌಡ ಅವರಿಗೆ ಸೇರಿದ ಸ್ಥಳದಲ್ಲಿ ನಡೆದ ಅಂತ್ಯಕ್ರಿಯೆ ವೇಳೆ ಶ್ರೀಗಳು ಭೇಟಿ ನೀಡಿ ಮೃತರ ಅಂತಿಮ ದರ್ಶನ ಪಡೆದರು. ಅಲ್ಲದೆ ಮಾಜಿ ಶಾಸಕಿ ಅನಿತಾ ಕುಮಾರಸ್ವಾಮಿ ಸಹ ಮೃತರ ಅಂತಿಮ ದರ್ಶನ ಪಡೆದಿದ್ದಾರೆ.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.