ಮೈಸೂರು

ಸಮರ ವೇಳೆ ನಾಯಕರ ಪಕ್ಷಾಂತರ

Published On :

ಅಂಶಿ ಪ್ರಸನ್ನಕುಮಾರ್
ಮೈಸೂರು: ಚುನಾವಣೆ ಬಂದರೆ ಸಾಕು ಪಕ್ಷಾಂತರ ಪರ್ವ. ಈ ಬಾರಿ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಮೈಸೂರು- ಚಾಮರಾಜನಗರ ಜಿಲ್ಲೆಯಲ್ಲಿ ಒಬ್ಬ ಮಾಜಿ ಸಚಿವರು ಸೇರಿದಂತೆ ಐವರು ಪಕ್ಷಾಂತರ ಮಾಡಿದ್ದಾರೆ. ಮಾಜಿ ಸಚಿವ ಎಂ.ಮಹದೇವ್, ಮಾಜಿ ಶಾಸಕರಾದ ಪ್ರೊ.ಕೆ.ಆರ್. ಮಲ್ಲಿಕಾರ್ಜುನಪ್ಪ, ಎಸ್.ಬಾಲರಾಜ್, ಸಿ. ಗುರುಸ್ವಾಮಿ ಹಾಗೂ ಮುಖಂಡ ಎಚ್.ಡಿ. ಗಣೇಶ್ ಪಕ್ಷಾಂತರ ಮಾಡಿದವರು.
ಎಂ. ಮಹದೇವ್: ಎಂ.ಮಹದೇವ್ ಗುಂಡೂರಾವ್ ಅವರ ಶಿಷ್ಯ. 1983ರಲ್ಲಿ ಕಾಂಗ್ರೆಸ್ ಟಿಕೆಟ್ ಗಿಟ್ಟಿಸಿ, ನಂಜನಗೂಡು ವಿಧಾನಸಭಾ ಕ್ಷೇತ್ರದಿಂದ ಜನತಾಪಕ್ಷದ ಕೆ.ನರಸೇಗೌಡರನ್ನು ಅತ್ಯಲ್ಪ ಮತಗಳ ಅಂತರದಿಂದ ಸೋಲಿಸಿದ್ದರು. 1985 ರಲ್ಲಿ ಕಾಂಗ್ರೆಸ್ ಟಿಕೆಟ್ ಹೆಜ್ಜಿಗೆ ಲಿಂಗಣ್ಣ ಪಾಲಾಗಿತ್ತು. ಆದರೆ ಗೆದ್ದಿದ್ದು ಮಾತ್ರ ಜನತಾಪಕ್ಷದ ಡಿ.ಟಿ. ಜಯಕುಮಾರ್.
1989ರಲ್ಲಿ ಕಾಂಗ್ರೆಸ್ ಟಿಕೆಟ್ ಮೇಲೆ ಎರಡನೇ ಬಾರಿಗೆ ಆಯ್ಕೆಯಾದ ಮಹದೇವ್ ಅವರು ವೀರೇಂದ್ರ ಪಾಟೀಲ್, ಎಂ.ರಾಜಶೇಖರಮೂರ್ತಿ ಅವರೊಂದಿಗೆ ಗುರುತಿಸಿಕೊಂಡಿದ್ದರು. ಎಸ್.ಬಂಗಾರಪ್ಪ, ಎಂ.ವೀರಪ್ಪ ಮೊಯ್ಲಿ ಸಂಪುಟದಲ್ಲಿ ಸಚಿವರಾಗಲು ಯತ್ನಿಸಿ, ವಿಫಲರಾಗಿದ್ದರು. 1994 ರಲ್ಲಿ ಅವರು ಜನತಾದಳದ ಡಿ.ಟಿ. ಜಯಕುಮಾರ್ ಎದುರು ಸೋತರು.
1999ರಲ್ಲಿ ಮೂರನೇ ಬಾರಿಗೆ ವಿಧಾನಸಭೆ ಪ್ರವೇಶಿಸಿದ ಮಹದೇವ್ ಎಸ್.ಎಂ. ಕೃಷ್ಣ ಸಂಪುಟದಲ್ಲಿ ರೇಷ್ಮೆ ಹಾಗೂ ಸಕ್ಕರೆ ಸಚಿವರಾಗಿದ್ದರು. ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವರಾಗಿ ಆ ಜಿಲ್ಲೆಯಲ್ಲಿ ಜಿಪಂ, ತಾಪಂ ಸೇರಿದಂತೆ ಎಲ್ಲಾ ಸ್ಥಳೀಯ ಸಂಸ್ಥೆಗಳಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲು ಕಾರಣರಾದರು. 2004ರಲ್ಲಿ ಅವರು ಡಿ.ಟಿ. ಜಯಕುಮಾರ್ ಎದುರು ಸೋತರು. 2006ರ ವೇಳೆಗೆ ಸಿದ್ದರಾಮಯ್ಯ ಕಾಂಗ್ರೆಸ್ ಸೇರಿದ್ದರು. ಕಾಂಗ್ರೆಸ್ ಬಂಡಾಯ, ಲೋಕಶಕ್ತಿ, ಸಮತಾ ಪಾರ್ಟಿ, ಜೆಡಿಎಸ್- ಎಂದು ಹೊರಹೋಗಿದ್ದ ಶ್ರೀನಿವಾಸಪ್ರಸಾದ್ ಕೂಡ ಅವರನ್ನು ಹಿಂಬಾಲಿಸಿದರು. ಈ ಹಿಂದೆ ಮಹದೇವ್ ಹಾಗೂ ಶ್ರೀನಿವಾಸಪ್ರಸಾದ್ ಇಬ್ಬರೂ ಒಂದು ಪಕ್ಷದಲ್ಲಿದ್ದರೂ ಬೆಂಕಿ- ಬಿರುಗಾಳಿಯಂತೆ ಇದ್ದರು. ಸಿದ್ದರಾಮಯ್ಯ- ಶ್ರೀನಿವಾಸಪ್ರಸಾದ್ ಕಾಂಗ್ರೆಸ್ ಪ್ರವೇಶದಿಂದಾಗಿ ಇರಿಸುಮುರಿಸು ಉಂಟಾಯಿತು. ಒಮ್ಮೆ ಮೈಸೂರಿನ ನರಸಿಂಹರಾಜ ಕ್ಷೇತ್ರದ ಆರ್.ಕೆ. ಫಂಕ್ಷನ್ ಹಾಲ್ನಲ್ಲಿ ಸಿದ್ದರಾಮಯ್ಯ- ಮಹದೇವ್ ನಡುವೆ ಗುದ್ದಾಟದ ಪ್ರಕರಣವೂ ನಡೆದು ಹೋಯಿತು.
ಬಿಜೆಪಿಗೆ ಜಿಗಿತ: ಅಲ್ಲದೇ ಸಾಮಾನ್ಯ ಕ್ಷೇತ್ರವಾಗಿದ್ದ ನಂಜನಗೂಡು 2008ರ ವಿಧಾನಸಭಾ ಚುನಾವಣಾ ವೇಳೆಗೆ ಕ್ಷೇತ್ರ ಪುನರ್ ವಿಂಗಡಣೆ ಪರಿಣಾಮ ಪ.ಜಾತಿಯ ಮೀಸಲು ಕ್ಷೇತ್ರವಾಯಿತು. ಆಗ ಮಹದೇವ್ ಕಾಂಗ್ರೆಸ್ನಲ್ಲಿ ಟಿಕೆಟ್ ಕೈತಪ್ಪಬಹುದು ಎಂದು ಬಿಜೆಪಿಗೆ ಕಡೆ ಜಿಗಿದರು. ಚಾಮರಾಜನಗರದಿಂದ ಆ ಪಕ್ಷದ ಅಭ್ಯರ್ಥಿಯೂ ಆದರು.
ಜೆಡಿಎಸ್ನ ವಚನಭ್ರಷ್ಟತೆಯಿಂದಾಗಿ ರಾಜ್ಯಾದ್ಯಂತ ಬಿಜೆಪಿ ಅಲೆ ಜೋರಾಗಿತ್ತು. ಯಡಿಯೂರಪ್ಪ ನೇತೃತ್ವದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಿತು. ಆದರೆ ಮಹದೇವ್ ಕಾಂಗ್ರೆಸ್ ಅಭ್ಯರ್ಥಿ ಸಿ.ಪುಟ್ಟರಂಗಶೆಟ್ಟಿ ಎದುರು ಅಲ್ಪ ಮತಗಳ ಅಂತರದಿಂದ ಸೋತರು. ನಂತರ ಯಡಿಯೂರಪ್ಪ ಇವರನ್ನು ರಾಜ್ಯ ಉಗ್ರಾಣ ನಿಗಮದ ಅಧ್ಯಕ್ಷರನ್ನಾಗಿ ಮಾಡಿದ್ದರು. ಮೈಸೂರು- ಚಾಮರಾಜನಗರ ಸ್ಥಳೀಯ ಸಂಸ್ಥೆಗಳಿಂದ ಮೇಲ್ಮನೆಗೆ ಚುನಾವಣೆ ಎದುರಾದಾಗ ಮಹದೇವ್ ಕೂಡ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದರೆ ಟಿಕೆಟ್ ಪ್ರೊ.ಮಲ್ಲಿಕಾರ್ಜುನಪ್ಪ ಪಾಲಾಗಿದ್ದರಿಂದ ರಾಜಿನಾಮೆ ನೀಡಿ, ಜೆಡಿಎಸ್ ಸೇರಿದರು.
ಜೆಡಿಎಸ್ ಅವರನ್ನು ರಾಷ್ಟ್ರೀಯ ಪರಿಷತ್ ಸದಸ್ಯರನ್ನಾಗಿ ಮಾಡಿ, ರಾಜ್ಯಾದ್ಯಂತ ಪ್ರಚಾರದಲ್ಲಿ ಬಳಸಿಕೊಂಡಿತು. 2013ರ ಚುನಾವಣೆಯಲ್ಲಿ ಅವರು ಚಾಮರಾಜನಗರ, ಚಾಮುಂಡೇಶ್ವರಿ ಅಥವಾ ಹನೂರಿನಿಂದ ಟಿಕೆಟ್ ಆಕಾಂಕ್ಷಿಯಾಗಿದ್ದರು. ವರಿಷ್ಠರು ಪರಿಗಣಿಸಲಿಲ್ಲ. ಆದರೂ ಅವರು ಚಾಮರಾಜನಗರ ಜಿಲ್ಲಾದ್ಯಂತ ವ್ಯಾಪಕ ಪ್ರಚಾರ ನಡೆಸಿದರು. ಅದರಲ್ಲೂ ನಂಜನಗೂಡಿನಲ್ಲಿ ಪಕ್ಷದ ಅಭ್ಯರ್ಥಿ ಕಳಲೆ ಕೇಶವಮೂರ್ತಿ ಕಾಂಗ್ರೆಸ್ಗೆ ಪ್ರಬಲ ಪೈಪೋಟಿ ನೀಡುವ ವಾತಾವರಣ ನಿರ್ಮಿಸಿದರು. 2014ರ ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದರೂ ಮೈಸೂರು ಕ್ಷೇತ್ರದಿಂದ ಟಿಕೆಟ್ ನೀಡಿಕೆಯ ಬಗ್ಗೆ ಯಾವುದೇ ಭರವಸೆ ನೀಡಲಿಲ್ಲ. ನಂತರ ಮಹದೇವ್ ಜೆಡಿಎಸ್ಗೆ ರಾಜಿನಾಮೆ ಕಳುಹಿಸಿ, ಸಮಾಜವಾದಿ ಪಕ್ಷದ ಸೈಕಲ್ ಏರುವ ಯತ್ನ ನಡೆಸಿದರು. ಯಾವುದೂ ಕೈಗೂಡದಿದ್ದಾಗ ತಟಸ್ಥವಾಗಿದ್ದರು. ಆಗ ಬಿಜೆಪಿಯ ನಾಯಕರು ವಿ. ಸೋಮಣ್ಣ ಅವರ ಮೂಲಕ ಮನವೊಲಿಸಿ, ಅಂತಿಮವಾಗಿ ಬಿಜೆಪಿ ಸೇರಿದರು.
ಜೆಎಸ್ಎಸ್ ಪದವಿ ಕಾಲೇಜಲ್ಲಿ ಅರ್ಥಶಾಸ್ತ್ರ ಪ್ರಾಧ್ಯಾಪಕರಾಗಿದ್ದ ಕೆ.ಆರ್. ಮಲ್ಲಿಕಾರ್ಜುನಪ್ಪ ಅವರದ್ದು ರಾಜಕೀಯ ಕುಟುಂಬ. ಮಾವ ಎಂ.ಸಿ. ಬಸಪ್ಪ ಚಾಮರಾಜನಗರ ಕ್ಷೇತ್ರದಿಂದ ಎರಡು ಬಾರಿ ಶಾಸಕರಾಗಿದ್ದರು. ಸ್ವಯಂ ನಿವೃತ್ತಿ ಪಡೆದು ರಾಜಕೀಯ ಪ್ರವೇಶಿಸಿದ ಮಲ್ಲಿಕಾರ್ಜುನಪ್ಪ ಅವರನ್ನು ಜಂಗಲ್ ಲಾಡ್ಜಸ್ ಮತ್ತು ರೆಸಾರ್ಟ್ಸ್ ಅಧ್ಯಕ್ಷರಾಗಿ ನೇಮಿಸಲಾಗಿತ್ತು. ನಂತರ ಸ್ಥಳೀಯ ಸಂಸ್ಥೆಗಳಿಂದ ಮೇಲ್ಮನೆ ಚುನಾವಣೆಯಲ್ಲಿ ಟಿಕೆಟ್ ನೀಡಲಾಯಿತು. ಅವರು ಗೆದ್ದು ದಾಖಲೆ ನಿರ್ಮಿಸಿದರು. ಚಾಮರಾಜನಗರ ಜಿಲ್ಲಾ ಬಿಜೆಪಿ ಅಧ್ಯಕ್ಷರೂ ಆದರು. ಬಿಜೆಪಿ- ಕೆಜೆಪಿ ಎಂದಾದಾಗ ಕೆಜೆಪಿ ಜೊತೆ ಗುರುತಿಸಿಕೊಂಡರು. ಮೇಲ್ಮನೆ ಸದಸ್ಯತ್ವ ಇನ್ನೂ ಎರಡು ವರ್ಷ ಇದ್ದರೂ ರಾಜಿನಾಮೆ ನೀಡಿ, ಳೆದ ವಿಧಾನಸಭಾ ಚುನಾವಣೆಯಲ್ಲಿ ಚಾಮರಾಜನಗರದಿಂದ ಸ್ಪರ್ಧಿಸಿ, ಪರಾಭವಗೊಂಡರು.  ಯಡಿಯೂರಪ್ಪ ಅವರು ಬಿಜೆಪಿಗೆ ಮರಳಿದರೂ ತಮಗೆ ಸೂಕ್ತ ಸ್ಥಾನಮಾನ ಸಿಕ್ಕಿಲ್ಲ ಎಂದು ಮುನಿಸಿಕೊಂಡು, ಮೈಸೂರು ಲೋಕಸಭಾ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗುವ ಯತ್ನ ನಡೆಸಿದ್ದರು. ಅದು ಕೈಗೂಡಲಿಲ್ಲ. ಆದರೆ ಬೆಂಕಿ ಮಹದೇವ್ ಬಿಜೆಪಿ ಸೇರ್ಪಡೆಯಾಗುತ್ತಾರೆ ಎಂದು ತಿಳಿದು, ಕಾಂಗ್ರೆಸ್ ಸೇರಿದ್ದಾರೆ.
ಎಸ್. ಬಾಲರಾಜ್ಕಾಂಗ್ರೆಸ್ನಿಂದ ರಾಜಶೇಖರಮೂರ್ತಿ ಅವರ ಹಿಂದೆ ಬಿಜೆಪಿಗೆ ಹೋಗಿದ್ದರು. ಟಿಕೆಟ್ ಸಿಗದಿದ್ದಾಗ 2004 ರಲ್ಲಿ ರಾಜಶೇಖರಮೂರ್ತಿ ಅವರ ಭಾವಚಿತ್ರ ಹಾಕಿಕೊಂಡು ಪಕ್ಷೇತರರಾಗಿ ಸ್ಪರ್ಧಿಸಿ, ಆಯ್ಕೆಯಾಗಿದ್ದರು. ಜೆಡಿಎಸ್ನಲ್ಲಿ ಗುರುತಿಸಿಕೊಂಡಿದ್ದ ಅವರು, 2008 ರಲ್ಲಿ ಟಿಕೆಟ್ ಸಿಗದಿದ್ದಾಗ ಪಕ್ಷೇತರರಾಗಿ ಸ್ಪರ್ಧಿಸಿ ಸೋತರು. 2009ರ ಉಪ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ, 2013 ರಲ್ಲಿ ಕೆಜೆಪಿ ಅಭ್ಯರ್ಥಿಯಾಗಿ ಸೋತರು. ಈಗ ಕಾಂಗ್ರೆಸ್ ಸೇರಿದ್ದಾರೆ.
ಎಚ್.ಡಿ. ಗಣೇಶ್ 2004 ಹಾಗೂ 2008ರಲ್ಲಿ ಪಿರಿಯಾಪಟ್ಟಣ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಹೆಚ್ಚು ಮತಗಳನ್ನು ಪಡೆದಿದ್ದ ಎಚ್.ಡಿ. ಗಣೇಶ್ 2013 ರಲ್ಲಿ ಬಿಎಸ್ಸಾರ್ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಡಿಮೆ ಮತ ಪಡೆದರು. ಈ ನಡುವೆ ಕಾಂಗ್ರೆಸ್ಗೂ ಹೋಗಿ, ಕೆಪಿಸಿಸಿ ಸದಸ್ಯರಾಗಿ ಶಾಸಕ ಕೆ. ವೆಂಕಟೇಶ್ ಜೊತೆ ಹೊಂದಾಣಿಕೆಯಾಗದೇ ವಾಪಸ್ ಆಗಿದ್ದರು. ಇದೀಗ ಮುಂದಾಲೋಚನೆಯಿಂದ ಬಿಜೆಪಿ ಸೇರಿದ್ದಾರೆ.

ಜನತಾದಳದ ಟಿಕೆಟ್ ಮೇಲೆ ಮೈಸೂರು ಜಿಪಂ ಸದಸ್ಯರಾಗಿ ರಾಜಕೀಯ ಆರಂಭಿಸಿದ ಸಿ.ಗುರುಸ್ವಾಮಿ ನಂತರ ಎರಡು ಬಾರಿ ಅದೇ ಪಕ್ಷದ ಅಭ್ಯರ್ಥಿಯಾಗಿ ಚಾಮರಾಜನಗರದಿಂದ ಸೋತಿದ್ದರು. 1999 ರಲ್ಲಿ ಬಿಜೆಪಿ ಟಿಕೆಟ್ ಮೇಲೆ ವಿಧಾನಸಭೆಗೆ ಆಯ್ಕೆಯಾದರು. ನಂತರ ಕಾಂಗ್ರೆಸ್ ಸೇರಿದ್ದರು. ಜಿಲ್ಲಾ ಘಟಕದ ಅಧ್ಯಕ್ಷರೂ ಆಗಿದ್ದರು. ಕಾಂಗ್ರೆಸ್ನಲ್ಲಿ ತಮ್ಮನ್ನು ಕಡೆಗಣಿಸಲಾಗುತ್ತಿದೆ ಎಂದು ಬಿಜೆಪಿ ಸೇರುತ್ತಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.