ಮೈಸೂರು

ಕಾಂಗ್ರೆಸ್ ಪರ ಪ್ರಚಾರ

Published On :

ಹುಣಸೂರು: ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎಚ್.ವಿಶ್ವನಾಥ್ ಪರವಾಗಿ ರಾಜ್ಯ ಆದಿಜಾಂಬವ ಸಮಾಜದ ಅಧ್ಯಕ್ಷ ಡಾ.ಡಿ.ತಿಮ್ಮಯ್ಯ ತಾಲೂಕಿನ ಆಗ್ರಹಾರ, ಮೈಲಾಂಬೂರು, ಸಣ್ಣೇನಹಳ್ಳಿ, ತಿಪ್ಪಲಾಪುರ ಸೇರಿದಂತೆ ಹಲವು ಗ್ರಾಮಗಳಲ್ಲಿ ಮತಯಾಚಿಸಿದರು. ಮುಖಂಡರಾದ ಡಿ. ಕುಮಾರ್, ಬೆಳತ್ತೂರು ಮಹದೇವ್,  ಸುರೇಶ್, ಶಿವಣ್ಣ, ಶಿವರಾಮು, ಹೊಬಳಯ್ಯ ಇದ್ದರು.

ಪುಟ್ಟರಾಜು ಪ್ರಚಾರ ಇಂದು
ಕೆ.ಆರ್. ನಗರ: ಮಂಡ್ಯ ಲೋಕಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಸಿ.ಎಸ್. ಪುಟ್ಟರಾಜು ಏ.13 ರಂದು ಪಟ್ಟಣ ಸೇರಿದಂತೆ ತಾಲೂಕಿನ ವಿವಿಧ ಗ್ರಾಮಗಳಿಗೆ ತೆರಳಿ ಪ್ರಚಾರ ನಡೆಸುವರು. ಶಾಸಕ ಸಾ.ರಾ. ಮಹೇಶ್, ಜಿಪಂ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಸಿ.ಜೆ.ದ್ವಾರಕೀಶ್, ತಾಲೂಕು ಜೆಡಿಎಸ್ ಅಧ್ಯಕ್ಷ ಚಂದ್ರಶೇಖರ್ ಸೇರಿದಂತೆ ಇತರೆ ಮುಖಂಡರ ಜತೆ ಮತಯಾಚನೆ ಮಾಡುವರು. ಬೆಳಗ್ಗೆ 8ಕ್ಕೆ ಕೆ.ಆರ್. ನಗರ ಪಟ್ಟಣ, ತಾಲೂಕಿನ ಚಿಕ್ಕವಡ್ಡರಗುಡಿ, ಹೊಸಅಗ್ರಹಾರ, ಭೇರ್ಯ, ಮೇಲೂರು, ಮುಂಜನಹಳ್ಳಿ, ಮುದುಗುಪ್ಪೆ, ಗುಳುವಿನಅತ್ತಿಗುಪ್ಪೆ, ಸಾಲಿಗ್ರಾಮ, ಮಿರ್ಲೆ, ಹರದನಹಳ್ಳಿ, ಕರ್ತಾಳು, ಹೊಸೂರು ಸೇರಿದಂತೆ ಹಲವಾರು ಗ್ರಾಮಗಳಿಗೆ ತೆರಳಿ ಮತಯಾಚನೆ ಮಾಡಲಿದ್ದಾರೆ ಎಂದು ಜೆಡಿಎಸ್ ವಕ್ತಾರ ರಮೇಶ್ ತಿಳಿಸಿದ್ದಾರೆ.  

ಜವರಯ್ಯ ಮನವಿ
ಎಚ್.ಡಿ. ಕೋಟೆ: ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಬಂಡವಾಳಶಾಹಿ ಮತ್ತು ಶ್ರೀಮಂತ ವರ್ಗದವರು ಸ್ಪರ್ಧಿಸಿದ್ದು, ಅವರ ವಿರುದ್ಧ ಸಿಪಿಐ-ಎಂಎಲ್ ಪಕ್ಷವು ರಾಷ್ಟ್ರಮಟ್ಟದಲ್ಲಿ ಚುನಾವಣೆಗೆ ತನ್ನ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿದ್ದು, ಅವರನ್ನು ಮತದಾರರು ಬೆಂಬಲಿಸುವಂತೆ ಕಾರ್ಯದರ್ಶಿ ಚೌಡಹಳ್ಳಿ ಜವರಯ್ಯ ಮನವಿ ಮಾಡಿದರು. ರಾಜ್ಯದ ದಾವಣಗೆರೆ, ಬಳ್ಳಾರಿ, ಕೊಪ್ಪಳ, ಚಾಮರಾಜನಗರ ಲೋಕಸಭಾ ಕ್ಷೇತ್ರಗಳಲ್ಲಿ ತನ್ನ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿದ್ದು, ಮತದಾರರು ಬೆಂಬಲಿಸಬೇಕೆಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಕೇಂದ್ರದಲ್ಲಿ ಆಡಳಿತವನ್ನು ನಡೆಸಿದ ಕಾಂಗ್ರೆಸ್, ಬಿಜೆಪಿ ಜನಪರವಾದ ಉತ್ತಮವಾದ ಕೆಲಸ ಮಾಡಿಲ್ಲ. ಆದ್ದರಿಂದ ಮತದಾರರು ತಮ್ಮ ಪಕ್ಷವನ್ನು ಬೆಂಬಲಿಸುವಂತೆ ಕೋರಿದರು. ಶಿವಕುಮಾರ್, ಜವರ, ಶಿವರಾಜು ಭಾಗವಹಿಸಿದ್ದರು.

ಮತಬೇಟೆ
ಸುತ್ತೂರು: ಚಾಮರಾಜನಗರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಆರ್.ಧ್ರುವನಾರಾಯಣ್ ಪರ ಕಾಂಗ್ರೆಸ್ ಯುವ ಮುಖಂಡ ರಾಕೇಶ್ ಸಿದ್ದರಾಮಯ್ಯ ನಂಜನಗೂಡು ತಾಲೂಕಿನ ಬಿಳುಗಲಿ ಗ್ರಾಮದಲ್ಲಿ ಪ್ರಚಾರ ನಡೆಸಿದರು. ಉಪ್ಪಾರ ಜನಾಂಗ ಮುಖಂಡ ಲಿಂಗಪ್ಪ, ಕೆಪಿಸಿಸಿ ಸದಸ್ಯ ಬಿಳುಗಲಿ ಪುರುಷೋತ್ತಮ್, ಕಲ್ಮಳ್ಳಿ ವಿಜಯಕುಮಾರ್ ಇದ್ದರು.

ಪ್ರಚಾರ
ಸುತ್ತೂರು: ಮೈಸೂರು ತಾಲೂಕು ಕುಪ್ಪೇಗಾಲ ಗ್ರಾಮದಲ್ಲಿ ಜಿಪಂ ಸದಸ್ಯ ಎಂ.ಬಿ.ಸಿದ್ದೇಗೌಡ ಕಾಂಗ್ರೆಸ್ ಅಭ್ಯರ್ಥಿ ಆರ್.ಧ್ರುವನಾರಾಯಣ್ ಪರ ಮತಯಾಚಿಸಿದರು. ತಾಪಂ ಸದಸ್ಯ ಮಹದೇವಪ್ಪ, ಮಹೇಂದ್ರ, ಮುಖಂಡರಾದ ಕೆಂಪೀರಯ್ಯ, ಬಸವರಾಜು, ಬೀರೇಗೌಡ ಇದ್ದರು.

ಮಹಿಳೆ ಆತ್ಮಹತ್ಯೆ
ಪಿರಿಯಾಪಟ್ಟಣ: ನೇಣು ಬಿಗಿದುಕೊಂಡು ಮಹಿಳೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲೂಕಿನ ಮುತ್ತೂರು ರಾಜೀವ ಗ್ರಾಮದಲ್ಲಿ ಶುಕ್ರವಾರ ಜರುಗಿದೆ. ಮಹದೇವ ಎಂಬವರ ಪತ್ನಿ ಗೀತಾ (20) ಆತ್ಮಹತ್ಯೆ ಮಾಡಿಕೊಂಡವರು. ಆತ್ಮಹತ್ಯೆ ಬಗ್ಗೆ ಸಂಶಯ ವ್ಯಕ್ತಪಡಿಸಿರುವ ಗೀತಾಳ ತಾಯಿ ಚೋಮಿ ಅವರು, ಗೀತಾಳ ಪತಿ ಮಹದೇವ, ಅತ್ತೆ ಕಾಳಮ್ಮ ವಿರುದ್ಧ ಪಟ್ಟಣ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ದೂರು ದಾಖಲಿಸಿಕೊಂಡಿರುವ ಎಸ್‌ಐ ರಫೀಕ್ ಆರೋಪಿಗಳನ್ನು ಬಂಧಿಸಿ, ತನಿಖೆ ಮುಂದುವರೆಸಿದ್ದಾರೆ.

ಆಧುನೀಕರಣ ಯಂತ್ರದ ಮೂಲಕ ನಾಟಿ ಪ್ರಾತ್ಯಕ್ಷಿಕೆ
ಹುಣಸೂರು: ವಿದೇಶದ ತಂತ್ರಜ್ಞಾನದ ಬಗ್ಗೆ ಅಧ್ಯಯನ ಮಾಡಿ, ಭಾರತದಲ್ಲಿ ಬಳಕೆ ಮಾಡಿ, ಕಡಿಮೆ ಖರ್ಚು ಹೆಚ್ಚು ಶ್ರಮವಿಲ್ಲದೇ ಗುಣಮಟ್ಟದಿಂದ ಕೂಡಿರುವ ಅತ್ಯಧಿಕ ತಂಬಾಕು ಬೆಳೆಯುವ ತಂತ್ರಜ್ಞಾನವನ್ನು ರೈತರಿಗೆ ಪರಿಚಯಿಸಿ ಕೊಡಲಾಗಿದೆ ಎಂದು ಐಟಿಸಿ ಕಂಪನಿ ಮಾರುಕಟ್ಟೆ ವ್ಯವಸ್ಥಾಪಕ ಮೋಹನ್ ಕುಮಾರ್ ಹೇಳಿದರು. ತಾಲೂಕಿನ ಬೀಜಗನಹಳ್ಳಿ ಗ್ರಾಮದಲ್ಲಿ ಐಟಿಸಿ ಕಂಪನಿ ವತಿಯಿಂದ ರಾಮೇಗೌಡರ ಜಮೀನಿನಲ್ಲಿ ನಾಟಿ ಮಾಡುವ ಮೂಲಕ ಆಧುನಿಕ ಯಂತ್ರಗಳಿಗೆ ಚಾಲನೆ ನೀಡಿ, ರೈತರಿಗೆ ಅರಿವು ಮೂಡಿಸಿದ ಬಳಿಕ ಮಾತನಾಡಿದ ಅವರು, ಹುಣಸೂರು, ಪಿರಿಯಾಪಟ್ಟಣ, ಎಚ್.ಡಿ.ಕೋಟೆ, ಕೆ.ಆರ್.ನಗರ ತಾಲೂಕುಗಳಿಗೆ ತಲಾ ಒಂದೊಂದು ರೈತರಿಗೆ ಆಧುನಿಕವಾಗಿರುವ ನಾಟಿ ಮಾಡುವ ಯಂತ್ರ ಮತ್ತು ಸಮತಟ್ಟು ಮಾಡುವ ಐದು ಯಂತ್ರಗಳಿಗೆ ಐಟಿಸಿ ಕಂಪನಿ ಸಹಾಯಧನ ನೀಡಿ, ಪ್ರಾಯೋಗಿಕವಾಗಿ ಖರೀದಿ ಮಾಡಿ ರೈತರಿಗೆ ನೀಡಲಾಗಿದೆ. ಉಳಿದ ರೈತರು ಬಾಡಿಗೆ ಆಧಾರದಲ್ಲಿ ತೆಗೆದುಕೊಂಡು ಉಳುಮೆ ಮತ್ತು ನಾಟಿ ಮಾಡಲು ಈ ಯಂತ್ರವನ್ನು ಬಳಕೆ ಮಾಡಿಕೊಳ್ಳಬಹುದಾಗಿದೆ. ಪ್ರತ್ಯೇಕವಾಗಿ ಖರೀದಿ ಮಡಿಕೊಳ್ಳಬೇಕೆನ್ನುವ ರೈತರಿಗೆ ತಂಬಾಕು ಮಂಡಳಿ ಸಬ್ಸಿಡಿ ನೀಡುವ ಯೋಚನೆ ಮಾಡುತ್ತಿದೆ ಬಳಕೆ ಮಾಡಿಕೊಳ್ಳಿ ಎಂದು ತಿಳಿಸಿದರು. ತಂತ್ರಜ್ಞಾನ ಕುರಿತು ಲೋಕೇಶ್ ಉಪನ್ಯಾಸ ನೀಡಿದರು. ಅರುಣ್ ಪ್ರಕಾಶ್, ಪ್ರಶಾಂತ್ ಶಾಲಿಗೆರಾಜೀವ್, ಸಂದೀಪ್, ಯಶವಂತ್ ಇದ್ದರು.

ಪಾದಯಾತ್ರೆ ಮೂಲಕ ವಿಶ್ವನಾಥ್ ಪ್ರಚಾರ
ಮೈಸೂರು: ಚುನಾವಣೆ ದಿನಾಂಕ ಸಮೀಪಿಸುತ್ತಿದ್ದಂತೆ ಅಭ್ಯರ್ಥಿಗಳ ಮತಬೇಟೆ ತೀವ್ರಗೊಂಡಿದ್ದು, ವಿವಿಧ ಪಕ್ಷಗಳ ಹುರಿಯಾಳುಗಳು ಮತದಾರರ ಮನೆ ಬಾಗಿಲಿಗೆ ಹೋಗಿ ಅವರನ್ನು ಬೆಂಬಿಡದೆ ಕಾಡುತ್ತಿದ್ದಾರೆ. ಮೈಸೂರು- ಕೊಡಗು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸಂಸದ ಎಚ್.ವಿಶ್ವನಾಥ್ ಬೆಳಗ್ಗೆ ಊಟಿ ರಸ್ತೆಯ ಗೌರಿಶಂಕರನಗರದಲ್ಲಿ ಪಾದಯಾತ್ರೆ ನಡೆಸಿ ಪ್ರಚಾರ ನಡೆಸಿದರು. ಬಳಿಕ ಅಶೋಕಪುರಂಗೆ ತೆರಳಿದ ಅವರು ಮನೆ ಮನೆಗೆ ಭೇಟಿ ನೀಡಿ ತಮಗೆ ಮತ ನೀಡುವಂತೆ ಕೋರಿದರು. ಇವರಿಗೆ ಶಾಸಕ ಎಂ.ಕೆ. ಸೋಮಶೇಖರ್, ಬನುಮಯ್ಯ ಚೌಕದ ಎಸ್.ಎನ್. ರಾಜೇಶ್, ಮಾಜಿ ಮೇಯರ್ ಪುರುಷೋತ್ತಮ, ಮುಖಂಡರಾದ ವಿ.ರಾಮಸ್ವಾಮಿ, ಎಚ್.ಎ. ವೆಂಕಟೇಶ್, ಶಾಂತ ವೀರೇಂದ್ರಸ್ವಾಮಿ, ಮಲ್ಲೇಶ್, ರೇವಣ್ಣ, ಮೈಸೂರು ಬಸವಣ್ಣ, ರವಿಶಂಕರ್ ಸಾಥ್ ನೀಡಿದರು.

ಆಪ್ ಗಮ್ಮತ್ತು
ಮೈಸೂರು: ಮೈಸೂರು- ಕೊಡಗು ಲೋಕಸಭಾ ಕ್ಷೇತ್ರದ ಆಮ್ ಆದ್ಮಿ ಪಾರ್ಟಿ ಅಭ್ಯರ್ಥಿ ಎ.ವಿ. ಪದ್ಮಮ್ಮ ತಮ್ಮ ಚುನಾವಣಾ ಪ್ರಚಾರವನ್ನು ಹುಣಸೂರು ಮತ್ತು ಪಿರಿಯಾಪಟ್ಟಣದಲ್ಲಿ ಮುಂದುವರಿಸಿದರು. ಬಳಿಕ ಮೈಸೂರಿಗೆ ಆಗಮಿಸಿದ ಅವರು ವಿಮಾ ನೌಕರರ ಸಂಘದ ವತಿಯಿಂದ ಸನ್ಮಾನ ಸ್ವೀಕರಿಸಿದರು. ನಂತರ ತೆರೆದ ವಾಹನದಲ್ಲಿ ರೋಡ್ ಶೋ ನಡೆಸಿ ಮತಯಾಚಿಸಿದರು. ಮುಖಂಡರಾದ ವಿದ್ಯಾರಣ್ಯ, ವಿವೇಕ್, ಸವಿತಾ, ವಿಜಯಲಕ್ಷ್ಮೀ ಸಾಥ್ ನೀಡಿದರು.

ಜೆಡಿಎಸ್ ಅಭ್ಯರ್ಥಿ ಮತಯಾಚನೆ ಅಬ್ಬರ
ಮೈಸೂರು: ಮೈಸೂರು- ಕೊಡಗು ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಚಂದ್ರಶೇಖರಯ್ಯ ಕೆ.ಆರ್. ಕ್ಷೇತ್ರದ 11ನೇ ವಾರ್ಡ್‌ನಲ್ಲಿ ಪಾದಯಾತ್ರೆ ನಡೆಸಿ ಮತಯಾಚಿಸಿದರು. ಬಳಿಕ ಬೋಟಿ ಬಜಾರ್, ಶಿವರಾಂಪೇಟೆ, ಕೆ.ಟಿ. ಸ್ಟ್ರೀಟ್, ಸರಸ್ವತಿಪುರಂ, ಕುಕ್ಕರಹಳ್ಳಿ, ಕೆ.ಜಿ. ಕೊಪ್ಪಲು ಸೇರಿದಂತೆ ವಿವಿಧೆಡೆ ತೆರಳಿ ಈ ಬಾರಿ ತೃತೀಯ ರಂಗ ಅಧಿಕಾರಕ್ಕೆ ಬರಲು ತಮ್ಮನ್ನು ಆಯ್ಕೆ ಮಾಡುವಂತೆ ಕೋರಿದರು. ಜೆಡಿಎಸ್ ನಗರಾಧ್ಯಕ್ಷ ರಾಜಣ್ಣ, ಉಪಮೇಯರ್ ವಿ.ಶೈಲೇಂದ್ರ, ಪಾಲಿಕೆ ಸದಸ್ಯರಾದ ಎಂ.ಜೆ. ರವಿಕುಮಾರ್, ಆರ್. ಲಿಂಗಪ್ಪ, ಬಾಲು, ಆರ್ಟಿಸ್ಟ್ ಎಸ್.ನಾಗರಾಜು, ಫಾಲ್ಕನ್ ಬೋರೇಗೌಡ, ಬಸವರಾಜು, ಸಂತೋಷ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.