ಮೈಸೂರು

ಬಸವಣ್ಣನ ಕಿರೀಟ ಕಿರಿಕ್

Published On :

ಮೈಸೂರು: ಹನ್ನೇರಡನೆ ಶತಮಾನದ ಕ್ರಾಂತಿಪುರುಷ ಬಸವಣ್ಣ ಸರಳ ವ್ಯಕ್ತಿತ್ವದವರು. ಆದರೆ ಅವರನ್ನು ಶ್ರೀಮಂತನಂತೆ ದೃಶ್ಯ (ಕಲಾ) ಮಾಧ್ಯಮದಲ್ಲಿ ವೈಭವೀಕರಿಸಲಾಗಿದೆ ಎಂಬುದು ಹಿರಿಯ ಕಲಾವಿದ ಎಲ್.ಶಿವಲಿಂಗಪ್ಪ ಅವರ ಆಕ್ಷೇಪ.
ಬಸವಣ್ಣ ಅವರು ಸರಳ ವ್ಯಕ್ತಿತ್ತ ಹೊಂದಿದ್ದರು ಎಂಬುದನ್ನು ಪ್ರತಿಪಾದಿಸುವ ಸಲುವಾಗಿ ಅವರು ದೃಶ್ಯ ಮಾಧ್ಯಮದಲ್ಲಿ ಬಸವಣ್ಣ ಎಂಬ ಕೃತಿ ರಚಿಸಿದ್ದಾರೆ. ಮೈಸೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಮೈಸೂರು ಆರ್ಟ್ ಗ್ಯಾಲರಿ ಸಹಯೋಗದಲ್ಲಿ ಏ.27 ರಂದು ಸಂಜೆ 5ಕ್ಕೆ ಅರಮನೆ ಉತ್ತರ ದ್ವಾರದ ಕಸಾಪ ನಗರ ಕಚೇರಿಯಲ್ಲಿ ಏರ್ಪಡಿಸಿರುವ ಸಮಾರಂಭದಲ್ಲಿ ಹಿರಿಯ ಚಿತ್ರಕಲಾವಿದ ಎಲ್.ಎಸ್.ಎನ್. ಆಚಾರ್ ಕೃತಿ ಬಿಡುಗಡೆ ಮಾಡುವರು. ಹಿರಿಯ ಸಾಹಿತಿ ಪ್ರೊ.ದೇಜಗೌ ಅಧ್ಯಕ್ಷತೆ ವಹಿಸಲಿದ್ದು, ಕೃತಿ ಕುರಿತು ಮೈಸೂರು ವಿವಿ ಪ್ರಸಾರಾಂಗ ನಿರ್ದೇಶಕ ಪ್ರೊ.ಸಿ. ನಾಗಣ್ಣ ಮಾತನಾಡುವರು. ಪ್ರಕಾಶಕ ಶಶಿಕುಮಾರ್ ಉಪಸ್ಥಿತರಿರುವರು.
ಬಸವಣ್ಣ ಅವರನ್ನು ಕಲಾವಿದರು ವಜ್ರ, ವೈಢೂರ್ಯಗಳಿಂದ ಕೂಡಿದ ಕಿರೀಟ, ಕಂಠಾಭರಣ, ಮುಂಗೈನಲ್ಲಿ ಚಿನ್ನದ ಕಪ್ಪ, ಬೆರಳುಗಳಲ್ಲಿ ಮುತ್ತಿನ ಉಂಗುರ, ಕಿವಿಯಲ್ಲಿ ಮಕರ ಕುಂಡಲ, ಮೈಮೇಲೆ ಹೊದ್ದಿರುವ ಜರಿ ಅಂಚಿನ ರೇಷ್ಮೆವಸ್ತ್ರ, ಇರುವಂತೆ ಚಿತ್ರಿಸಿದ್ದಾರೆ. ಅನುಭವ ಮಂಟಪದಲ್ಲಿ ಇರುವಾಗ, ಬಡವನನ್ನು ನೋಡಲು ಕೂಡ ಬಸವಣ್ಣ ಕಿರೀಟಧಾರಿಯಾಗಿ ಹೋಗಿರುವಂತೆ ಚಿತ್ರಿಸಲಾಗಿದೆ. ಕೊನೆಗೆ ಕೂಡಲಸಂಗಮದಲ್ಲಿ ಐಕ್ಯವಾಗುವಾಗಲೂ ಕಿರೀಟಧಾರಿಯಾಗಿದ್ದ ಎಂದು ಚಿತ್ರಿಸಲಾಗಿದೆ. ಆದರೆ ನನ್ನ ಅಧ್ಯಯನ ಪ್ರಕಾರ, ಇವು ಸರಿಯಲ್ಲ ಎಂಬುದು ಶಿವಲಿಂಗಪ್ಪ ಅವರ ವಾದ.
ಈವರೆಗೆ ಆಗಿರುವ ಪ್ರದರ್ಶನ ಶಿಲ್ಪಗಳಲ್ಲಿ ಮಂತ್ರಿತ್ವದ ಪೋಷಾಕು, ಆಡಳಿತಾತ್ಮಕ ಗಾಂಭೀರ್ಯ, ಅಶ್ವಾರೋಹಿ ಬಸವಣ್ಣ ಅವರನ್ನು ನೋಡಿ, ವಿಚಾರವಾದಿ, ಮುತ್ಸದ್ಧಿ, ಸಮಾಜಮುಖಿ, ದಲಿತೋದ್ಧಾರಕ ಎಂಬ ಭಾವನೆ ಬಂದಿಲ್ಲ ಎಂದು ವಿಷಾದಿಸುತ್ತಾರೆ. ಬಸವಣ್ಣ ಅವರನ್ನು ವ್ಯಕ್ತಿಯಾಗಿ ಚಿತ್ರಿಸಿದ್ದಾರೆಯೇ ಹೊರತು ವ್ಯಕ್ತಿತ್ವದ ಹಿನ್ನೆಲೆಯಲ್ಲಿ ಅಲ್ಲ ಎಂಬುದು ಅವರ ಅನಿಸಿಕೆ.
ನಿಷ್ಠೆ ಮುಖ್ಯ ಎಂದಿದ್ದರು: ಬಸವಣ್ಣ ಮಾನವನ ಸರ್ವಾಂಗೀಣ ಔನ್ನತ್ಯದಲ್ಲಿ ಹೇಗೆ ಶ್ರಮಿಸಿದ, ದಲಿತರಿಗೆ ಧ್ವನಿಯಾದ, ಹೆಣ್ಣಿಗೆ ವಾಕ್ ಸ್ವಾತಂತ್ರ್ಯ ನೀಡಿದ, ದೇವರನ್ನು ನಿನ್ನಲ್ಲೇ ಕಾಣು, ದೇವಾಲಯದಲ್ಲಿ ಇಲ್ಲವೆಂದ, ಕೆಲಸ ಯಾವುದಾದರೇನು ನಿಷ್ಠೆ ಮುಖ್ಯ ಎಂದ. ಸಕಲ ಜೀವಾತ್ಮರಿಗೆ ಲೇಸನ್ನೇ ಬಯಸಿದ, ಅನ್ನ, ವಿದ್ಯಾ ದಾಸೋಹಗಳ ಮಹತ್ವ ತಿಳಿಸಿದ, ಬಸವಣ್ಣನ ಮಾನವ ಕಲ್ಯಾಣ ಒಂದೇ. ಇವುಗಳನ್ನು ಪ್ರಕಟಿಸಿದರೆ ಬಸವಣ್ಣ ಜನಮಾನಸದಲ್ಲಿ ಬಹುಕಾಲ ಉಳಿಯುತ್ತಾರೆ ಎನ್ನುತ್ತಾರೆ ಅವರು.
ಅನಾರೋಗ್ಯಪೀಡಿತ ಕೇತನನ್ನು ಮುಟ್ಟಿ ಸಂತೈಸುವುದು, ಅಕ್ಕನಿಗೂ ಉಪನಯನ ಮಾಡಿ, ಬಿಜ್ಜಳನ ಆಸ್ಥಾನದಲ್ಲಿ ತಾಮ್ರಪತ್ರ ಓದುವುದು, ಹರಳಯ್ಯ ದಂಪತಿ ತಮ್ಮ ಚರ್ಮದಿಂದ ಚಪ್ಪಲಿ ಮಾಡುವುದು, ಇದು ಸಂಗಮನಾಥನಿಗೆ ಸೇರಬೇಕು ಎಂದು ಬಸವಣ್ಣ ತಲೆಯ ಮೇಲೆ ಇಟ್ಟುಕೊಳ್ಳುವುದು, ಕೊಂಡಗ ಮಂಚಣ್ಣ ಮತ್ತಿತರು ಬಿಜ್ಜಳ ರಾಜನಿಗೆ ಬಸವಣ್ಣ ಅಂತರ್ಜಾತಿ ವಿವಾಹ ಮಾಡಿಸಿದ ಎಂದು ದೂರು ಸಲ್ಲಿಸುವುದು, ದಲಿತೋದ್ಧಾರ ಒಪ್ಪಿಗೆಯಾಗದಿದ್ದಲ್ಲಿ ಅಧಿಕಾರವೇ ಬೇಡ ಎಂದು ತ್ಯಜಿಸುವುದು, ಕಪ್ಪೆ ಸರ್ಪ ನೆಳಲಲ್ಲಿಪ್ಪಂತೆ ಎನ್ನಗಾಯಿತ್ತಯ್ಯಾ.., ನೆರೆ ಕೆನ್ನಗೆ, ತೆರೆಗಲ್ಲಕೆ ಶರೀರ ಗೂಡುವೋಗದ ಮುನ್ನ...,  ಇವಾರವ,. ಇವನಾರವ..... ಎನಿಸುಕಾಲ ನೀರೋಳಗಿದ್ದರೇನು... ಮೊದಲಾದವುಗಳನ್ನು  ಕುರಿತು ಶಿವಲಿಂಗಪ್ಪ ಅವರು ಕಲಾಕೃತಿಗಳನ್ನು ರಚಿಸಿದ್ದಾರೆ.
ದೇಜಗೌ ಆಕ್ರೋಶ: ಬಸವಣ್ಣ ಅವರ ಹೆಸರನ್ನು ಬಳಸಿಕೊಂಡು ಮತ, ಮಠ, ಆಶ್ರಮಗಳನ್ನು ಕಟ್ಟಿಕೊಂಡು ಮೇಲೆದ್ದವರೂ ಅವರನ್ನು ತಬ್ಬಲಿ ಮಾಡಿದ್ದುಂಟು. ಬೌದ್ಧ ಧರ್ಮವನ್ನು ಗಡಿಪಾರು ಮಾಡಿ, ಧರ್ಮವನ್ನು ಹಿಂದಕ್ಕೆ ಸರಿಸಿ, ವಿದೇಶಿ ಧರ್ಮಗಳಿಗೆ ಆಹ್ವಾನ ನೀಡಿದ ಮೂರ್ಖರೇ, ಜಗತಿನಲ್ಲಿಯೇ ಸರ್ವಶ್ರೇಷ್ಠವಾದ ಬಸವಧರ್ಮದ ಕೊಲೆಗಾರರೂ ಹೌದು ಎಂದು ಹಿರಿಯ ಸಾಹಿತಿ ಪ್ರೊ.ದೇಜಗೌ ಮುನ್ನುಡಿಯಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಸವೇಶ್ವರ ಐತಿಹಾಸಿಕ ವ್ಯಕ್ತಿಯಾದರೂ ಅವರ ರೂಪ ಚಿತ್ರಗಳಾಗಲಿ, ಶಿಲ್ಪಗಳಾಗಲಿ ದೊರೆಯುವುದಿಲ್ಲ. ಅವರನ್ನು ಕುರಿತು ರಚಿತವಾಗಿರುವ ಕೃತಿಗಳ ಆಧಾರದ ಮೇಲೆ ಕಲಾವಿದರು ತಮಗೆ ತೋರಿದಂತೆ ಚಿತ್ರಗಳನ್ನು ಸೃಷ್ಟಿಸಿದ್ದಾರೆ. ಬಸವಣ್ಣ ಅವರ ಸರಳ ವ್ಯಕ್ತಿತ್ವವನ್ನು ಲಕ್ಷಿಸದೆ, ಮಹಾಮಂತ್ರಿ ಬಸವಣ್ಣ ಅವರನ್ನು ವೈಭವೀಕರಿಸುವಲ್ಲಿ ಕಲಾಕಾರರು ತೋರಿಸಿರುವ ಕೌಶಲವನ್ನು ಶಿವಲಿಂಗಪ್ಪ ಅವರು ಪೂರ್ಣವಾಗಿ ಒಪ್ಪಿಕೊಳ್ಳುವುದಿಲ್ಲ ಎನ್ನುತ್ತಾರೆ.
ಬಸವಣ್ಣ ಅವರ ಜೀವನದಲ್ಲಿಯೂ ಅನೇಕ ಪವಾಡಸದೃಶ ಘಟನೆಗಳು ನಡೆದಿವೆ. ಬುದ್ಧ, ಕ್ರಿಸ್ತರಿಗೆ ದೊರೆತಂಥ ಶಿಷ್ಯರು ಬಸವೇಶ್ವರರಿಗೆ ದೊರಕಲಿಲ್ಲ ಎಂಬುದು ಕನ್ನಡಿಗರ ತಲೆತಗ್ಗಿಸಬೇಕಾದ ಸಂಗತಿ. ದೇಶದ ಸಾಮಾಜಿಕ ಸಮಸ್ಯೆಗಳಿಗೆ ಬ್ರಾಹ್ಮಣ ಜಾತಿಯೇ ಕಾರಣವೆಂದು ಘೋಷಿಸಿ, ಅದನ್ನು ತ್ಯಜಿಸಿ ಹೊರಬಂದಿದ್ದರಿಂದ ಅವರನ್ನು ಕಂಡರೆ ಬ್ರಾಹ್ಮಣರಿಗಾಗದು. ವೀರಶೈವ ಮಠಗಳು ವೈದಿಕ ಮಾರ್ಗವನ್ನು ಅನುಸರಿಸುವುದರಿಂದ ಬಸವಣ್ಣ ಅವರ ಮಾನವೀಯತೆಯ ಸಂಸ್ಕಾರವುಳ್ಳ ಉದಾರ ನೀತಿ ಮಠಾಧೀಶರಿಗೆ ಹಿಡಿಸುವುದಿಲ್ಲ. ಜಾತೀಯತೆ, ಅಸ್ಪೃಶ್ಯತೆ ತೊಲಗಿಸಲು ಅವರು ಸಿದ್ಧರಿಲ್ಲ. ಬುದ್ಧ, ಕ್ರಿಸ್ತರಷ್ಟೇ ಉನ್ನತ ವ್ಯಕ್ತಿತ್ವವುಳ್ಶ ಬಸವಣ್ಣ ಅವರು ತಬ್ಬಲಿಯಾಗಿದ್ದಾರೆ ಎನ್ನುತ್ತಾರೆ ದೇಜಗೌ.
ಬಸವಣ್ಣ ಅವರ ಚಿತ್ರ- ಶಿಲ್ಪಗಳಿಂದ ಈ ಬಗೆಯ ವಿಚಾರಗಳು ಈವರೆಗೆ ಸ್ಪುರಿಸಲೇ ಇಲ್ಲ. ಕಿರೀಟರಹಿತವಾದ ಬಸವಣ್ಣ ಅವರ ಚಿತ್ರಗಳು ಸರಳತೆ, ಸೋಪಜ್ಞತೆ ಮತ್ತು ನೈಜ ವ್ಯಕ್ತಿತ್ವ ಕಟ್ಟಿಕೊಡುತ್ತವೆ ಎಂದು ಬೆನ್ನುಡಿ ಬರೆದಿರುವ ಪ್ರೊ.ಎಂ.ಎಸ್. ಹುಲ್ಲೋಳಿ ಅಭಿಪ್ರಾಯಪಟ್ಟಿದ್ದಾರೆ.


ಅಂಶಿ ಪ್ರಸನ್ನಕುಮಾರ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.