ಕಾಡಾನೆ ದಾಳಿಗೆ ಕಾರ್ಮಿಕ ಬಲಿ
ಕ.ಪ್ರ.ವಾರ್ತೆ ಸರಗೂರು ಏ. 26
ಕಾಡಾನೆ ತುಳಿದು ವ್ಯಕ್ತಿಯೊಬ್ಬ ಮೃತಪಟ್ಟಿರುವ ಘಟನೆ ಎಚ್.ಡಿ. ಕೋಟೆ ತಾಲೂಕಿನ ಕೊಡಗಿ ಹಾಡಿಯಲ್ಲಿ ಶುಕ್ರವಾರ ರಾತ್ರಿ ಜರುಗಿದೆ.
ಕೊಡಗಿ ಹಾಡಿಯ ನಟರಾಜು ಉ. ಚಲ್ಲ (33) ಮೃತಪಟ್ಟ ದುರ್ದೈವಿ. ಈತ ಬೆಟ್ಟಕುರುಬ ಜನಾಂಗಕ್ಕೆ ಸೇರಿದವನಾಗಿದ್ದು, ಶುಕ್ರವಾರ ರಾತ್ರಿ ಕುರ್ಣೆಗಾಲ ಗ್ರಾಮದಿಂದ ಕೂಡಗಿ ಗ್ರಾಮಕ್ಕೆ ಬರುವಾಗ ಕಾಡಾನೆ ದಾಳಿ ಮಾಡಿದಾಗ ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ತಾಯಿ ಸುಗುಣಮ್ಮ ಅವರಿಗೆ ನಟರಾಜು ಒಬ್ಬನೆ ಪುತ್ರ. ಈತ ಕೂಲಿ ಕೆಲಸ ಮಾಡಿ ಜೀವನ ಸಾಗಿಸುತ್ತಿದ್ದನು. ಕಾಡು ಪ್ರಾಣಿಗಳ ಹಾವಳಿಯಿಂದ ರಸ್ತೆಯಲ್ಲಿ ಯಾರು ತಿರುಗಾಡದೆ ಇದ್ದುದ್ದರಿಂದ, ರಾತ್ರಿಯಿಡಿ ಮೃತದೇಹ ಬಿದ್ದಿತ್ತು. ಬೆಳಗಿನ ಜಾವ ಗ್ರಾಮಸ್ಥರು ನೋಡಿ, ಅರಣ್ಯ ಇಲಾಖೆಗೆ ವಿಷಯ ತಿಳಿಸಿದರು.
ವನ್ಯ ಪ್ರಾಣಿಗಳು ಸುಮಾರು ದಿನಗಳಿಂದಲೂ ಹೊಲಗಳಲ್ಲಿ ಅಡ್ಡಾಡಿ ರೈತರು ಬೆಳೆದ ಫಸಲನ್ನು ತಿಂದು ನಾಶ ಮಾಡುತ್ತಿವೆ. ಹಗಲು ರಾತ್ರಿ ಸಮಯದಲ್ಲಿ ಎಲ್ಲೆಂದರಲ್ಲಿ ಕಾಣಿಸಿಕೊಳ್ಳುತ್ತಿದ್ದು, ರೈತರು ಜಮೀನಿಗೆ ಹೋಗಿ ಬರಲು ಕಷ್ಟವಾಗಿದೆ. ರೈತರು ಕಾಡು ಪ್ರಾಣಿಗಳ ಹಾವಳಿಯಿಂದ ನಮ್ಮ ಬೆಳೆಗಳನ್ನು ಉಳಿಸಿಕೊಡುವಂತೆ ಅರಣ್ಯ ಅಧಿಕಾರಿಗಳಲ್ಲಿ ಮನವಿ ಮಾಡಿದರು.
ಅರಣ್ಯ ಇಲಾಖೆಯವರಲ್ಲಿ ಎಷ್ಟೇ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ ಎಂದು ಗ್ರಾಮಸ್ಥರಾದ ನಿಂಗಯ್ಯ, ಕೆ.ಟಿ. ಸ್ವಾಮಿ, ಪುಟ್ಟದಾಸಯ್ಯ, ಬೊಮ್ಮ, ಗೋವಿಂದ, ಚಂದ್ರಶೇಖರ್, ರವಿಕುಮಾರ್, ರವಿ, ನಾಗೇಶ್, ವಿಜಯ, ಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.
ಮೃತನ ಕುಟುಂಬಕ್ಕೆ ಪರಿಹಾರ: ಸ್ಥಳಕ್ಕೆ ಶಾಸಕ ಎಸ್.ಚಿಕ್ಕಮಾದು ಭೇಟಿ ನೀಡಿ, ಮೃತ ವ್ಯಕ್ತಿ ನಟರಾಜು ಅವರ ತಾಯಿಗೆ ಒಂದು ಲಕ್ಷ ರು. ಚೆಕ್ ವಿತರಿಸಿದರು. ಇನ್ನುಳಿದ 4 ಲಕ್ಷ ಚೆಕ್ ಅನ್ನು ಮರಣೋತ್ತರ ಪರೀಕ್ಷೆ ಬಂದ ನಂತರ ನೀಡಲಾಗುವುದು. ಮನೆ ನಿರ್ಮಿಸಲು ಅನುದಾನ ನೀಡಲಾಗುವುದು ಎಂದು ಭರವಸೆ ನೀಡಿದರು.
ಅರಣ್ಯಾಧಿಕಾರಿ ಕಾಂತರಾಜು ಮಾತನಾಡಿ, ಕಾಡು ಪ್ರಾಣಿಗಳು ಕಾಡಿನಿಂದ ಹೊರಗೆ ಬಾರದ ಹಾಗೆ ಈಗಾಗಲೆ ಆನೆ ಟ್ರಂಚ್ ನಿರ್ಮಾಣ ಮಾಡುತ್ತಿದ್ದು, ಈಗಾಗಲೆ 9 ಕಡೆ ಜೆಸಿಬಿ ಕೆಲಸ ನಡೆಯುತ್ತಿದೆ. ನುಗು ಅರಣ್ಯದ ಸುತ್ತ ನಾಲ್ಕು ಕಿ.ಮೀ., ಮೊಳಿಯೂರು ಅರಣ್ಯ ವ್ಯಾಪ್ತಿಯಲ್ಲಿ 7 ಕಿ.ಮೀ. ಟ್ರಂಚ್ ತೆಗೆಯಲಾಗಿದೆ. ಹಿಂದುಪುರ ಹಾಗೂ ಸಕಲೇಶಪುರ ಇನ್ನೂ ಕೆಲವು ಕಡೆಗಳಲ್ಲಿ ರೇಲ್ವೆ ಟ್ರಾಕ್‌ಗಳನ್ನು ತಂದು ಇವನ್ನು ಅಳವಡಿಸಲಾಗುವುದು ಎಂದು ಹೇಳಿದರು. ಜಿಪಂ ಮಾಜಿ ಸದಸ್ಯ ಪಿ.ರವಿ, ಮಾಜಿ ಪ್ರಧಾನ ಎಂ.ಸಿ. ದೊಡ್ಡನಾಯ್ಕ, ಜೆಡಿಎಸ್ ಮುಖಂಡ ನರಸಿಂಹೇಗೌಡ, ತಾಪಂ ಉಪಾಧ್ಯಕ್ಷ ಮಹೇಂದ್ರ ಸ್ಥಳಕ್ಕೆ ಭೇಟಿ ನೀಡಿ, ಮೃತನ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

