ಕೃಷಿ ಭೂಮಿಯಲ್ಲಿ ಬಡಾವಣೆ!
ಕ.ಪ್ರ.ವಾರ್ತೆ ಮೈಸೂರು ಫೆ.1
ಸರ್ಕಾರಿ ಮತ್ತು ಕೃಷಿ ಭೂಮಿಯನ್ನು ಕಬಳಸಿ ಬಡಾವಣೆ ನಿರ್ಮಿಸಿರುವುದಕ್ಕೆ ಅಧಿಕಾರಿಗಳೇ ಸಹಕರಿಸುವ ಘಟನೆ ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕು ದೇಬೂರು ಗ್ರಾಮದಲ್ಲಿ ನಡೆದಿದೆ.
ಜಿಪಂ ಸಭಾಂಗಣದಲ್ಲಿ ಶನಿವಾರ ನಡೆದ ಸಾರ್ವಜನಿಕರ ದೂರುಗಳ ವಿಚಾರಣೆ ಹಾಗೂ ವಿಲೇವಾರಿ ಕಾರ್ಯಕ್ರಮದಲ್ಲಿ ದೇಬೂರಿನ ನಿವಾಸಿ ಗಣೇಶ್ ಎಂಬವರು ನೀಡಿರುವ ದೂರಿನ್ವಯ ಉಪ ಲೋಕಾಯುಕ್ತ ನ್ಯಾ. ಸುಭಾಷ್ ಬಿ. ಆಡಿ ಅವರು ವಿಚಾರಣೆ ನಡೆಸಿದರು. ಪತ್ರ ಬರಹಗಾರ ನಾಗರಾಜ ಅರಸು ಎಂಬಾತ ದೇಬೂರು ಗ್ರಾಮದ ಸರ್ವೆ ನಂ. 179/1, 180/1 ರಲ್ಲಿರುವ ಸರ್ಕಾರಿ ಮತ್ತು ಕೃಷಿ ಭೂಮಿಯನ್ನು ಒತ್ತುವರಿ ಮಾಡಿಕೊಂಡು, ಅಕ್ರಮವಾಗಿ ಬಡಾವಣೆ ನಿರ್ಮಿಸಿ ಸಾರ್ವಜನಿಕರಿಗೆ ಮಾರಾಟ ಮಾಡಿದ್ದಾರೆ. ಇದಕ್ಕೆ ಅಧಿಕಾರಿಗಳು ಸಹಕರಿಸಿದ್ದಾರೆ ಎಂದು ಗಣೇಶ್ ದೂರಿದರು.
ಈ ವಿಚಾರವಾಗಿ ಉಪ ನೋಂದಣಾಧಿಕಾರಿ, ತಾಪಂ ಇಒ, ಪಿಡಿಒ ಸೇರಿದಂತೆ ವಿವಿಧ ಅಧಿಕಾರಿಗಳನ್ನು ನ್ಯಾ. ಆಡಿ ಅವರು ವಿಚಾರಣೆ ನಡೆಸಿದರು. ಅಕ್ರಮ ಎಂಬುದು ಕಂಡು ಬಂದ ಹಿನ್ನೆಲೆಯಲ್ಲಿ ಬಡಾವಣೆ ನಿರ್ಮಾಣವನ್ನು ರದ್ದುಗೊಳಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು. ಹಾಗಾದರೇ ಹಣ ಕೊಟ್ಟು ನಿವೇಶನ ಖರೀದಿಸದ ಜನರಿಗೆ ಪರಿಹಾರ ನೀಡುವವರು ಯಾರು ಎಂಬ ನ್ಯಾ. ಆಡಿ ಅವರ ಪ್ರಶ್ನೆಗೆ ಅಧಿಕಾರಿಗಳು ತಡಬಡಾಯಿಸಿದರು. ಅಲ್ಲದೆ, ಖಾಸಗಿಯವರು ಸಾದರಪಡಿಸಿರುವ ಬೇಡಿಕೆ ನೋಂದಣಿಯಲ್ಲಿ ಪಿಡಿಒ ಪಿ. ರಾಜಶೇಖರ್ ಸಹಿ ವಿಚಾರವು ಸಹ ಚರ್ಚೆಗೆ ಬಂತು. ಈ ಹಿನ್ನೆಲೆಯಲ್ಲಿ ನ್ಯಾ. ಆಡಿ ಅವರು, ಪಿಡಿಒ ಪಿ. ರಾಜಶೇಖರ್ ಸಹಿಯನ್ನು ಹಸ್ತಾಕ್ಷರ ನಿಪುಣರಿಂದ ಪರಿಶೀಲಿಸಬೇಕು.ಈ ಭೂ ಕಬಳಿಕೆಗೆ ಸಹಕರಿಸಿರುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು. ಸಂಬಂಧಪಟ್ಟವರ ವಿರುದ್ಧ ಕ್ರಿಮಿನಲ್ ಪ್ರಕರಣ ಮತ್ತು ಇಲಾಖಾ ವಿಚಾರಣೆಗೆ ಜಿಲ್ಲಾಧಿಕಾರಿ ಸೂಚಿಸಬೇಕು.
3 ತಿಂಗಳಲ್ಲಿ ಇತ್ಯರ್ಥಕ್ಕೆ ಸೂಚನೆ: ಈ ಹಿಂದಿನ ಡಿಡಿಪಿಐ ನಾಗೇಂದ್ರಕುಮಾರ್ ಅವರು ವರ್ಗಾವಣೆ ನಿರಾಕರಿಸಿದ್ದಾರೆ ಎಂದು ಶಿಕ್ಷಕ ಕೆ. ಮಹದೇವ್ ದೂರು ನೀಡಿದ್ದರು. ಇದರ ವಿಚಾರಣೆ ನಡೆಸಿದ ನ್ಯಾ. ಆಡಿ ಅವರು, ಸರ್ಕಾರಿ ನೌಕರರೊಬ್ಬ ಅಮಾನತ್ತಿನಲ್ಲಿರುವಾಗ ಬೇರೆಡೆ ವರ್ಗಾವಣೆ ಮಾಡಲು ಸಾಧ್ಯವಿಲ್ಲ. ಇಲಾಖಾ ವಿಚಾರಣೆ ನೆಪದಲ್ಲಿ 5 ವರ್ಷದಿಂದ ಅಮಾನತಿನಲ್ಲಿ ಇರಿಸಿರುವುದು ಸರಿಯಲ್ಲ. ಈಗಿನ ಡಿಡಿಪಿಐ ಅವರು ಈ ಪ್ರಕರಣದಲ್ಲಿ ಇಲಾಖಾ ತನಿಖೆ ನಡೆಸಿ, ಆ ವರದಿ ಆಧರಿಸಿ 3 ತಿಂಗಳೊಳಗೆ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು. ಬಿದರಗೂಡು ಗ್ರಾಮದಲ್ಲಿ ಶಿವಣ್ಣ ಎಂಬವರು ನಕಲಿ ದಾಖಲೆ ಸೃಷ್ಟಿಸಿ ಸರ್ಕಾರಿ ಜಾಗವನ್ನು ಕಬಳಿಸಿದ್ದಾರೆ ಎಂದು ಚೆನ್ನಮಲ್ಲಪ್ಪ ದೂರಿದರು. ನಕಲಿ ದಾಖಲೆ ಸೃಷ್ಟಿಸಿ ಸರ್ಕಾರಿ ಜಾಗ ಕಬಳಿಸಿರುವು ಸ್ಪಷ್ಟವಾದರೇ ಸರ್ಕಾರಿ ಜಾಗವನ್ನು ವಶಪಡಿಸಿಕೊಳ್ಳುವಂತೆ ನ್ಯಾ. ಆಡಿ ಅಧಿಕಾರಿಗಳಿಗೆ ಸೂಚಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

