ಮೈಸೂರು

ಹುಂಡಿ ವಿವಾದ: ವರದಿ ನೀಡಿ

Published On :

ಮೈಸೂರು:  ಟಿ. ನರಸೀಪುರ ತಾಲೂಕು ವಡ್ಡಗಲ್ಲು ರಂಗನಾಥಸ್ವಾಮಿ ಬೆಟ್ಟದಲ್ಲಿರುವ ದೇವಸ್ಥಾನದ ಹುಂಡಿ ವಿವಾದ ಸಂಬಂಧ 2 ತಿಂಗಳೊಳಗೆ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಜಿಲ್ಲಾಧಿಕಾರಿ, ಉಪ ವಿಭಾಗಾಧಿಕಾರಿ ಮತ್ತು ತಹಸೀಲ್ದಾರ್ ಅವರಿಗೆ ಉಪ ಲೋಕಾಯುಕ್ತ ನ್ಯಾ. ಸುಭಾಷ್ ಬಿ. ಆಡಿ ಸೂಚಿಸಿದರು.
ವಡ್ಡಗಲ್ಲು ರಂಗನಾಥಸ್ವಾಮಿ ಬೆಟ್ಟದಲ್ಲಿ ಅಕ್ರಮವಾಗಿ ಸೇವಾ ಸಮಿತಿ ರಚಿಸಿಕೊಂಡು, ಹುಂಡಿ ಹಣವನ್ನು ದುರುಪಯೋಗ ಮಾಡಿಕೊಳ್ಳಲಾಗಿದೆ. ಇದಕ್ಕೆ ಅಧಿಕಾರಿಗಳು ಸಹಕರಿಸಿದ್ದಾರೆ ಎಂದು ಬೆಟ್ಟದ ಎಚ್. ನಾಗರಾಜು ದೂರಿದರು. 2008ರಿಂದ ಹುಂಡಿ ಇರಿಸಲಾಗಿದ್ದು, ವರ್ಷಕ್ಕೊಮ್ಮೆ ಹುಂಡಿಯಲ್ಲಿ ಸಂಗ್ರಹವಾಗುವ ಹಣವನ್ನು ತೆಗೆದು ದೇವಸ್ಥಾನದ ಹೆಸರಿನಲ್ಲಿ ಬ್ಯಾಂಕಿನ ಖಾತೆಗೆ ಹಾಕಲಾಗಿದೆ ಎಂದು ಹಿಂದಿನ ತಹಸೀಲ್ದಾರ್ ಸವಿತಾ ಉತ್ತರಿಸಿದರು.
ಬಹಳ ವರ್ಷಗಳಿಂದ ಹುಂಡಿ ಇರಿಸಿ ಹಣ ದುರುಪಯೋಗ ಮಾಡಲಾಗಿದೆ ಎಂದು ನಾಗರಾಜ್ ಆರೋಪಿಸಿದರು. ಹೀಗಾಗಿ ಈ ಸಂಬಂಧ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ನ್ಯಾ. ಆಡಿ ಆದೇಶಿಸಿದರು.
ಕೆರೆ ಅಭಿವೃದ್ಧಿಯಲ್ಲಿ ಗೋಲ್‌ಮಾಲ್: ಬಿ. ಸೀಹಳ್ಳಿ- ಮಾರಗುಂಡನಹಳ್ಳಿ ಕೆರೆ ಅಭಿವೃದ್ಧಿಗೆ ನೀರಾವರಿ ಇಲಾಖೆಯಿಂದ ರು.72 ಲಕ್ಷ ಟೆಂಡರ್ ಅನ್ನು ವೇಣುಗೋಪಾಲ್ ಎಂಬ ಗುತ್ತಿಗೆದಾರನಿಗೆ ನೀಡಲಾಗಿದೆ. ಆದರೆ, ಕೆರೆಯ ಅಭಿವೃದ್ಧಿ ಕೆಲಸ ಆರಂಭವಾಗದಿದ್ದರೂ ಮೊದಲ ಹಂತದಲ್ಲಿ ರು. 46 ಲಕ್ಷ  ಬಿಡುಗಡೆ ಮಾಡಲಾಗಿದೆ ಎಂದು ಬೀಸಿಹಳ್ಳಿಯ ಎಸ್.ಕೆ. ರಾಜುಗೌಡ ದೂರಿದರು. ನೀರಾವರಿ ಇಲಾಖೆ ಅಧಿಕಾರಿಗಳ ವಿಚಾರಣೆ ನಡೆಸಿದ ನ್ಯಾ.ಆಡಿ ಅವರು, ಕೆರೆ ಅಭಿವೃದ್ಧಿಗೆ ಕೈಗೊಳ್ಳಲಾಗಿರುವ ಕಾಮಗಾರಿ ಹಾಗೂ ಇನ್ನಿತರ ವಿಚಾರಗಳನ್ನು ಖಾಸಗಿ ಎಂಜಿನಿಯರ್ ಅವರಿಂದ ಪರಿಶೀಲನೆ ಮಾಡಿಸಿ, 3 ತಿಂಗಳೊಳಗೆ ವರದಿ ಸಲ್ಲಿಸುವಂತೆ ಜಿಲ್ಲಾಧಿಕಾರಿಗೆ ಆದೇಶಿಸಿದರು.
ತಲಕಾಡು ಗ್ರಾಮದಲ್ಲಿ ಸರ್ಕಾರಿ ಉದ್ಯಾನವನದಲ್ಲಿ ಖಾಸಗಿ ಕಟ್ಟಡ ನಿರ್ಮಾಣ ಸಂಬಂಧ ರೈತ ಸಂಘದವರು ನೀಡಿದ್ದಾರೆ. ಇದನ್ನು ಜಿಪಂ ಸಿಇಒ ಪರಶೀಲಿಸಿ ಕ್ರಮ ಕೈಗೊಳ್ಳಬೇಕು. ಸ್ವಜಾತಿಯವರಿಂದಲೇ ಬಹಿಷ್ಕಾರಕೊಳಗಾಗಿರುವ ಲಕ್ಷ್ಮಿ ಮತ್ತು ಕುಟುಂಬದವರಿಗೆ ಸ್ಥಳೀಯ ಪೊಲೀಸರು ಮಧ್ಯಸ್ಥಿಕೆ ವಹಿಸಿ, ಸಮಸ್ಯೆ ಪರಿಹರಿಸುವಂತೆ ನ್ಯಾ. ಆಡಿ ಹೇಳಿದರು.
ಮೂಗೂರು ಗ್ರಾಮದ ಶಿವಮೂರ್ತಿ, ಶೇಷಣ್ಣ, ತಲಕಾಡು ಗ್ರಾಮದ ರಂಗಸ್ವಾಮಿ, ಶಿವಕುಮಾರ್, ದಾಸೇಗೌಡ, ಯಡತೋರೆಯ ಶಿವಣ್ಣ, ಡಿ. ಸಾಲುಂಡಿ ಕೆ. ಬಸವರಾಜು ಅವರ ಭೂ ವಿವಾದ ಕುರಿತು ದೂರುಗಳ ವಿಚಾರಣೆ ಸಹ ನಡೆಯಿತು. ಜಿಲ್ಲಾಧಿಕಾರಿ ಸಿ. ಶಿಖಾ, ಜಿಪಂ ಸಿಇಒ ಪಿ.ಎ. ಗೋಪಾಲ್, ಲೋಕಾಯುಕ್ತ ಎಸ್ಪಿ ಎಸ್.ಎಂ. ಜಗದೀಶ್‌ಪ್ರಸಾದ್, ಮೈಸೂರು ಎಸ್ಪಿ ಅಭಿನವ್ ಖರೆ, ಡಿಸಿಪಿ ಎ.ಎನ್. ರಾಜಣ್ಣ, ಎಂಡಿಎ ಆಯುಕ್ತ ಎಸ್. ಪಾಲಯ್ಯ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.