ಸಿಎಂ ಸಿದ್ಧಾಂತ ಎಲ್ಲಿ ಹೋಯಿತು?
ಮೈಸೂರು: ಸುತ್ತೂರು ಮಠಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹೋಗಿರುವುದಕ್ಕೆ ಸಮಾಜವಾದಿ ಚಿಂತಕ ಪ.ಮಲ್ಲೇಶ್ ಟೀಕಿಸಿದ್ದಾರೆ.
ಭಾನುವಾರ ರಂಗಾಯಣದ ಶ್ರೀರಂಗ ವೇದಿಕೆಯಲ್ಲಿ ನಡೆದ ಪ್ರಜಾಪ್ರಭುತ್ವದ ಮೌಲ್ಯಗಳು- ಒಂದು ಸಂವಾದ ಹಾಗೂ ಎ.ಕೆ. ಸುಬ್ಬಯ್ಯ ಅವರ ಆರ್ಎಸ್ಎಸ್ ಅಂತರಂಗ ಕೃತಿ ಕುರಿತ ವಿಚಾರ ಸಂಕಿರಣದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಮಠಗಳು ಜಾತಿಯ ಬೀಜಾಸುರರಂತಾಗಿವೆ. ಜಾತಿಗಳನ್ನು ಹುಟ್ಟು ಹಾಕುತ್ತಿರುವ ಮಠಗಳಿಗೆ ರಾಜಕಾರಣಿಗಳು ಬೆಂಬಲ ನೀಡುತ್ತಾರೆ. ಇದಕ್ಕೆ ಸಿದ್ದರಾಮಯ್ಯ ಕೂಡ ಹೊರತಾಗಿಲ್ಲ. ಹಿಂದೆ ಮಠಕ್ಕೆ ಹೋಗುವುದಿಲ್ಲ ಎಂದಿದ್ದ ಅವರು, ಇಂದು ತಮಗಾಗಿ ಸುತ್ತೂರು ಜಾತ್ರೆಯನ್ನೇ ಒಂದು ದಿನ ಮುಂದಕ್ಕೆ ಹಾಕಿಸಿ ಹೋಗಿದ್ದಾರೆ. ಅವರ ಸಮಾಜವಾದ ಸಿದ್ಧಾಂತ ಎಲ್ಲಿ ಹೋಯಿತು ಎಂದು ಪ್ರಶ್ನಿಸಿದರು.
ಮಹಾತ್ಮ ಗಾಂಧೀಜಿ ಹಾಗೂ ಸರ್ದಾರ್ ವಲ್ಲಭಬಾಯ್ ಪಟೇಲ್ ಇಬ್ಬರೂ ಗುಜರಾತಿನವರು. ಆದರೆ, ನರೇಂದ್ರ ಮೋದಿ ಅವರು ತಮ್ಮ ಬೇಳೆ ಬೇಯಿಸಿಕೊಳ್ಳಲು ಪಟೇಲ್ ಏಕತಾ ಪ್ರತಿಮೆ ಸ್ಥಾಪಿಸಲು ಹೊರಟಿದ್ದಾರೆ. ಇದರ ಹಿಂದೆ ಆರ್ಎಸ್ಎಸ್ ಹುನ್ನಾರ ಅಡಗಿದೆ. ಮುಂದಿನ ದಿನಗಳಲ್ಲಿ ಮೋದಿ ವಿರುದ್ಧ ಮೈಸೂರಿನಲ್ಲಿ 5 ಸಾವಿರ ಮಂದಿಯನ್ನು ಒಟ್ಟುಗೂಡಿಸಿ ಚಳವಳಿ ಮಾಡಲು ಪ್ರಗತಿಪರರ ಬೆಂಬಲ ನೀಡಬೇಕು ಎಂದರು.
ನಮ್ಮಲ್ಲಿ ಒಗ್ಗಟ್ಟಿಲ್ಲ: ದಲಿತ ಸಂಘರ್ಷ ಸಮಿತಿ, ರೈತ ಸಂಘಗಳು ಒಗ್ಗಟ್ಟಾಗಿದ್ದರೆ, ಇಂದು ಈ ಪರಿಸ್ಥಿತಿ ಬರುತ್ತಿರಲಿಲ್ಲ. ಕೆಲವು ಹೋರಾಟಗಾರರಲ್ಲಿ ಒಣ ಪ್ರತಿಷ್ಠೆ, ವ್ಯಕ್ತಿಗತ ಪ್ರತಿಷ್ಠೆ ಮನೆ ಮಾಡಿರುವುದರಿಂದ ಪ್ರಗತಿಪರ ಚಳವಳಿ ಹಳ್ಳ ಹಿಡಿದಿದೆ. ಈಗಲಾದರು ನಮ್ಮ ನ್ಯೂನ್ಯತೆ ಸರಿಪಡಿಸಿಕೊಂಡು ಸಂಘಟನೆಯತ್ತ ಗಮನ ಹರಿಸಬೇಕು ಎಂದು ಸಲಹೆ ನೀಡಿದರು.
ಹಜಾರೆ ಹಿಂದೆ ಕಾರ್ಪೊರೆಟ್ ವಲಯ: ಜನಲೋಕಪಾಲ್ ಅನುಷ್ಠಾನಕ್ಕೆ ಆಗ್ರಹಿಸಿ ಅಣ್ಣಾ ಹಜಾರೆ ಚಳವಳಿಗೆ ಧುಮಿಕಿದಾಗ ಏನಾದರು ಬದಲಾಗಬಹುದು ಎಂದು ನಿರೀಕ್ಷಿಸಿದ್ದೆವು. ಆದರೆ, ನಮಗೆಲ್ಲ ನಿರಾಸೆಯಾಯಿತು. ಅವರ ಚಳವಳಿಯಲ್ಲಿ ಭಾಗವಹಿಸಿದ್ದ ಜನರೆಲ್ಲ ಟೋಪಿ ಹಾಕಿಕೊಂಡಿದ್ದರು. ಒಂದೊಂದು ಟೋಪಿಗೂ 100 ಎಂದರೆ ಸಾವಿರಾರು ಜನರಿಗೆ ಟೋಪಿ ಹಾಕಲು ಹಣ ಎಲ್ಲಿಂದ ಬಂತು ಎಂದು ಪ್ರಶ್ನಿಸಿದ ಅವರು, ಕಾರ್ಪೊರೇಟ್ ವಲಯ ಹಜಾರೆ ಹಿಂದೆ ಇರುವುದು ಖಾತ್ರಿಯಾಗುತ್ತದೆ ಎಂದರು.
ಮಲ್ಲೇಶ್ ಜೊತೆ ರಾಜೇಂದ್ರ ಶ್ರೀ ಬಳಿ ಹೋಗುತ್ತಿದ್ದರಂತೆ
ಒಂದು ಕಡೆ ಪ. ಮಲ್ಲೇಶ್ ಈ ರೀತಿ ಮಾತನಾಡಿದರೆ ಸುತ್ತೂರಿನಲ್ಲಿ ನಡೆದ ಸಮಾರಂಭದಲ್ಲಿ ನಾನು ಪ. ಮಲ್ಲೇಶ್ ಜೊತೆ ರಾಜೇಂದ್ರ ಶ್ರೀಗಳನ್ನು (ಸುತ್ತೂರು ಮಠದ ಹಿಂದಿನ ಶ್ರೀಗಳು) ನೋಡಲು ಹೋಗುತ್ತಿದ್ದೆ ಎಂದರು. ಸಿದ್ದರಾಮಯ್ಯ ಅವರು ಭಾಷಣ ಮಾಡುವಾಗ ಇದನ್ನು ಜ್ಞಾಪಿಸಿದ್ದು ಲೋಕೋಪಯೋಗಿ ಸಚಿವ ಡಾ.ಎಚ್.ಸಿ. ಮಹದೇವಪ್ಪ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

