ಮೈಸೂರು

ಪೊಲೀಸ್ ಕ್ಯಾಂಟೀನ್ ಆರಂಭ

Published On :

ಕ.ಪ್ರ.ವಾರ್ತೆ ,  ಮೈಸೂರು ,  ಫೆ. 4
ನಗರದ ಲಲಿತಮಹಲ್ ರಸ್ತೆಯಲ್ಲಿರುವ ಕೆಎಆರ್‌ಪಿ ಮೌಂಟೆಡ್ ಕಟ್ಟಡದಲ್ಲಿ ಸ್ಥಾಪಿಸಲಾಗಿರುವ ಪೊಲೀಸ್ ಕ್ಯಾಂಟೀನ್‌ಗೆ ಮಂಗಳವಾರ ಚಾಲನೆ ನೀಡಲಾಯಿತು.
ಬೆಂಗಳೂರಿನ ಪೊಲೀಸ್ ಪ್ರಧಾನ ಕಚೇರಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಮೈಸೂರು ನಗರ, ಮೈಸೂರು ಜಿಲ್ಲೆ, ಮಂಡ್ಯ, ಕೋಲಾರ, ತುಮಕೂರು ಸೇರಿದಂತೆ ಒಟ್ಟು 8 ಜಿಲ್ಲೆಗಳಲ್ಲಿ ಆನ್‌ಲೈನ್ ಮೂಲಕ ಏಕಕಾಲಕ್ಕೆ ಕ್ಯಾಂಟೀನ್‌ಗಳನ್ನು ಉದ್ಘಾಟಿಸಿದರು.
ನಗರದ ಕೆಎಸ್‌ಆರ್‌ಪಿ, ಸಿಎಆರ್, ಸಿವಿಲ್ ಪೊಲೀಸರು, ಅಶ್ವದಳ ಮತ್ತು ಸಂಚಾರ ಪೊಲೀಸರು ಸೇರಿದಂತೆ ಒಟ್ಟು 3 ಸಾವಿರ ಮಂದಿ ಈ ಪೊಲೀಸ್ ಕ್ಯಾಂಟೀನ್‌ನ ಸೇವೆ ಪಡೆದುಕೊಳ್ಳಲಿದ್ದಾರೆ. ಪೊಲೀಸ್ ಕುಟುಂಬದವರು ಮೊದಲ ದಿನವೇ ಗೃಹೋಪಯೋಗಿ ವಸ್ತುಗಳನ್ನು ಖರೀದಿಸಿದರು. ವಸ್ತುಗಳನ್ನು ಖರೀದಿ ಮಾಡಲು ಪೊಲೀಸರಿಗೆ ಸ್ಮಾರ್ಟ್ ಕಾರ್ಡ್ ಸಹ ನೀಡಲಾಗಿದೆ.
ನಗರ ಕಾನೂನು ಮತ್ತು ಸುವ್ಯವಸ್ಥೆ ಡಿಸಿಪಿ ಎ.ಎನ್. ರಾಜಣ್ಣ ಸುದ್ದಿಗಾರರೊಂದಿಗೆ ಮಾತನಾಡಿ, ಮೌಂಟೆಡ್ ಕಟ್ಟಡದಲ್ಲಿ ತಾತ್ಕಾಲಿಕವಾಗಿ ಪೊಲೀಸ್ ಕ್ಯಾಂಟೀನ್ ಆರಂಭಿಸಲಾಗಿದೆ. ಬೆಂಗಳೂರಿನ ಬಿಎಸ್‌ಎಫ್ ಕ್ಯಾಂಟೀನ್‌ನಿಂದ ವಸ್ತುಗಳನ್ನು ತರಲಾಗುತ್ತಿದೆ.
ಸೌಂದರ್ಯವರ್ಧಕ, ಗೃಹೋಪಯೋಗಿ ಸೇರಿದಂತೆ ವಿವಿಧ ವಸ್ತುಗಳನ್ನು ಶೇ.20 ರಿಂದ 30 ರಿಯಾಯಿತಿ ದರದಲ್ಲಿ ಮಾರಾಟ ಮಾಡಲಾಗುತ್ತದೆ. ಒಂದು ಕುಟುಂಬ ತಿಂಗಳಿಗೆ 3,000 ವಸ್ತುಗಳನ್ನು ಖರೀದಿಸಬಹುದು. ಪೇದೆಯಿಂದ ಆಯುಕ್ತರವರೆಗೆ ಕ್ಯಾಂಟೀನ್ ಸೌಲಭ್ಯ ಪಡೆದುಕೊಳ್ಳಬಹುದಾಗಿದೆ ಎಂದು ತಿಳಿಸಿದರು. ಅಪರಾಧ ಮತ್ತು ಸಂಚಾರ ಡಿಸಿಪಿ ಎಂ.ಎಂ. ಮಹದೇವಯ್ಯ, ಅಶ್ವಾರೋಹಿದಳದ ಕಮಾಂಟೆಂಡ್ ಆರ್. ಜನಾರ್ಧನ್, ನಗರ ಸಂಚಾರ ಉಪ ವಿಭಾಗದ ಎಸಿಪಿ ಪ್ರಭಾಕರ ಬಿ. ಬಾರ್ಕಿ, ದೇವರಾಜ ಉಪ ವಿಭಾಗದ ಎಸಿಪಿ ಎಂ.ಪಿ. ಜಯಮಾರುತಿ ಇದ್ದರು.
ಡಿಎಆರ್ ಆವರಣದಲ್ಲಿ
ಮೈಸೂರು ಜಿಲ್ಲಾ ಪೊಲೀಸರಿಗಾಗಿ ಜ್ಯೋತಿನಗರ ಡಿಎಆರ್ ಆವರಣದಲ್ಲಿ ಪೊಲೀಸ್ ಕ್ಯಾಂಟೀನ್ ತೆರೆಯಲಾಗಿದೆ. ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಪೊಲೀಸರ ಕುಟುಂಬದವರು ಈ ಕ್ಯಾಂಟೀನ್‌ನಲ್ಲಿ ವಸ್ತುಗಳನ್ನು ಖರೀದಿಸಬಹುದು. ಈ ಕ್ಯಾಂಟೀನ್‌ಗೂ ಸಹ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆನ್‌ಲೈನ್ ಮೂಲಕ ಚಾಲನೆ ನೀಡಿದರು. ಡಿಎಆರ್ ಇನ್ಸ್‌ಪೆಕ್ಟರ್ ಎಚ್.ಪಿ. ಸತೀಶ್ ಮತ್ತು ಸಿಬ್ಬಂದಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.