ಮೈಸೂರು

ರಥಸಪ್ತಮಿ: 1080 ಸೂರ್ಯ ನಮಸ್ಕಾರ

Published On :

ಮೈಸೂರು: ರಥಸಪ್ತಮಿ ಅಂಗವಾಗಿ ನಗರದ ಕೋಟೆ ಆಂಜನೇಯಸ್ವಾಮಿ ದೇವಸ್ಥಾನ ಆವರಣದಲ್ಲಿ ನೂರಾರು ಮಂದಿ ಸಾರ್ವಜನಿಕರು ಮತ್ತು ವಿದೇಶಿಯರು ಸಾಮೂಹಿಕ ಸೂರ್ಯ ನಮಸ್ಕಾರ ಮಾಡಿದರು.
ಮೈಸೂರು ಯೋಗ ಒಕ್ಕೂಟ, ಪತಂಜಲಿ ಯೋಗ ಕೇಂದ್ರ ಸೇರಿದಂತೆ ಹಲವು ಸಂಘ- ಸಂಸ್ಥೆಗಳ ಸಹಯೋಗಿತ್ವದಲ್ಲಿ ಆಯೋಜಿಸಿದ್ದ ಸಾಮೂಹಿಕ 108 ಸೂರ್ಯ ನಮಸ್ಕಾರ ಹಾಗೂ ಸೂರ್ಯಯಜ್ಞ ಕಾರ್ಯಕ್ರಮದಲ್ಲಿ ವಿದೇಶಿಯರು ಸೇರಿದಂತೆ ಹಲವು ಮಂದಿ ಭಾಗವಹಿಸಿದ್ದರು.
ಒಕ್ಕೂಟದ ಕಾರ್ಯಾಧ್ಯಕ್ಷ ಡಾ.ಎ.ಎಸ್. ಚಂದ್ರಶೇಖರ್ ಮಾರ್ಗದರ್ಶನದಲ್ಲಿ ನೂರಾರು ಮಂದಿ ಯೋಗಪಟುಗಳು 10 ಹಂತಗಳಲ್ಲಿ (ಪ್ರತಿ ಹಂತದಲ್ಲಿಯೂ 108 ಬಾರಿ ಸೂರ್ಯ ನಮಸ್ಕಾರ) ಒಟ್ಟು 1080 ಬಾರಿ ಸೂರ್ಯ ನಮಸ್ಕಾರ ಮಾಡಿದರು. ಗುರುವಾರ ಬೆಳಗ್ಗೆ 6ಕ್ಕೆ ರಾಮಕೃಷ್ಣ ಆಶ್ರಮದ ರಾಮಕೃಷ್ಣ ನೈತಿಕ ಹಾಗೂ ಆಧ್ಯಾತ್ಮಿಕ ಶಿಕ್ಷಣ ಸಂಸ್ಥೆಯ ಮುಖ್ಯಸ್ಥ ಶ್ರೀ ಸ್ವಾಮಿ ಮಹೇಶಾತ್ಮನಂದಾಜೀ ಕಾರ್ಯಕ್ರಮ ಉದ್ಘಾಟಿಸಿ ಶುಭ ಕೋರಿದರು. ಬೆಳಗ್ಗೆ 6ಕ್ಕೆ ಆರಂಭವಾದ ಸೂರ್ಯ ನಮಸ್ಕಾರ 8 ರವರೆಗೆ ನೆರವೇರಿತು. 8 ವರ್ಷದಿಂದ 85 ವರ್ಷದವರೂ ಈ ಸೂರ್ಯ ನಮಸ್ಕಾರದಲ್ಲಿ ಭಾಗವಹಿಸಿದ್ದು ವಿಶೇಷವಾಗಿತ್ತು. ಪೊಲಿಯೋ ಪೀಡಿತ ಬಾಲಕ, ವಿದೇಶಿ ಮಹಿಳೆಯರು, ಪುರುಷರು ಈ ಸೂರ್ಯ ನಮಸ್ಕಾರ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಪ್ರತಿ ಆಸನಕೂ ಸೂರ್ಯನ ವಿವಿಧ ನಾಮಾವಳಿಯನ್ನು ಪಠಿಸಲಾಯಿತು. ರಥಸಪ್ತಮಿ ದಿನದಂದು ಸೂರ್ಯನು ತನ್ನ ಧಿಕ್ಕನ್ನು ಬದಲಿಸುವುದರಿಂದ ಆತನ ಆರಾಧನೆ ಮಾಡಲಾಗುತ್ತದೆ ಎಂದು ಡಾ.ಎ.ಎಸ್. ಚಂದ್ರಶೇಖರ್ ತಿಳಿಸಿದರು.
ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ಅಧ್ಯಕ್ಷ ಡಾ.ಬಿ.ಎನ್. ಮಾರುತಿ ಮುಖ್ಯ ಅತಿಥಿಯಾಗಿ ಆಗಮಿಸಿದ್ದರು. ಮಾರುತಿ ಯೋಗ ಶಿಕ್ಷಣ ಕೇಂದ್ರದ ಟಿ. ಜಲೇಂದ್ರಕುಮಾರ್, ಪತಂಜಲಿ ಅಷ್ಟಾಂಗ ವಿನ್ಯಾಸ ಪ್ರತಿಷ್ಠಾನದ ಎಸ್.ವಿ. ವೆಂಕಟೇಶಯ್ಯ ಇದ್ದರು.
ಅರಮನೆ ದೇವಸ್ಥಾನಗಳಲ್ಲಿ
ವಿಶೇಷ ಪೂಜೆ
ಮೈಸೂರು: ರಥಸಪ್ತಮಿ ಅಂಗವಾಗಿ ಗುರುವಾರ ವಿಶ್ವವಿಖ್ಯಾತ ಮೈಸೂರು ಅರಮನೆ ಆವರಣದ ವಿವಿಧ ದೇವಸ್ಥಾಗಳಲ್ಲಿ ವಿಶೇಷ ಪೂಜೆ ನೆರವೇರಿತು. ಬೆಳಗ್ಗೆ 6 ಗಂಟೆಯಿಂದಲೇ ಅರಮನೆ ಆವರಣ ತ್ರಿಣೇಶ್ವರ, ಗಾಯತ್ರಿ ದೇವಸ್ಥಾನ, ಲಕ್ಷ್ಮೀ ನಾರಾಯಣ, ಪ್ರಸನ್ನ ಕೃಷ್ಣಸ್ವಾಮಿ, ಶ್ವೇತವರಾಹಸ್ವಾಮಿ ದೇವಸ್ಥಾನ, ಅಂಭುಜವಲ್ಲಿ ದೇವಸ್ಥಾನ, ಕೋಡಿ ಸೋಮೇಶ್ವರ, ಕೋಡಿ ಬೈರವೇಶ್ವರ, ಶ್ರೀ ಭುವನೇಶ್ವರಿ, ಕೋಟೆ ಆಂಜನೇಯಸ್ವಾಮಿ ಮತ್ತು ಕೋಟೆ ವಿಘ್ನೇಶ್ವರಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆ ನೆರವೇರಿತು. ದೇವರ ವಿವಿಧ ಉತ್ಸವ ಮೂರ್ತಿಗಳನ್ನು ಅರಮನೆ ಆವರಣದ ಮೆರವಣಿಗೆ ನಡೆಸಿ ಪೂಜೆ ಸಲ್ಲಿಸಲಾಯಿತು. ಬಳಿಕ ಮಧ್ಯಾಹ್ನ 12 ಗಂಟೆಯವರಿಗೆ ಸಾರ್ವಜನಿಕರ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಅರಮನೆಯ ಎಲ್ಲಾ ದ್ವಾರಗಳ ಮೂಲಕ ಸಾರ್ವಜನಿಕರಿಗೆ ಪ್ರವೇಶಾವಕಾಶ ಕಲ್ಪಿಸಲಾಗಿತ್ತು. ಅಂತೆಯೆ ನಗರದ ನೂರೊಂದು ಗಣಪತಿ ದೇವಸ್ಥಾನ, ಅವಧೂತ ದತ್ತಪೀಠ, ಒಂಟಿಕೊಪ್ಪಲು ದೇವಸ್ಥಾನ ಸೇರಿದಂತೆ ಹಲವು ದೇವಸ್ಥಾನಗಳಲ್ಲಿ ವಿಶೇಷ ಪೂಜೆ ನೆರವೇರಿತು. ಹಲವು ಕಡೆಗಳಲ್ಲಿ ಭಕ್ತರಿಗೆ ಪ್ರಸಾದ ವಿತರಿಸಲಾಯಿತು. ರಥಸಪ್ತಮಿ ಅಂಗವಾಗಿ ಸವಿತಾ ಮಹರ್ಷಿಗಳ ಭಾವಚಿತ್ರ ಮೆರವಣಿಗೆ ನಡೆಸಲಾಯಿತು. ನೂರೊಂದು ಗಣಪತಿ ದೇವಸ್ಥಾನ ವೃತ್ತದಿಂದ ಆರಂಭವಾದ ಮೆರವಣಿಗೆ ಅಗ್ರಹಾರ, ಸಯ್ಯಾಜಿರಾವ್ ರಸ್ತೆ ಮೂಲಕ ಬಸವಮಂದಿರ ತಲುಪಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.