ಖೋಖೋ ಲೋಕದ 'ಮೇಘ' ಮಂದಾರ
-ಡಿ.ಎನ್. ಮಹೇಂದ್ರ
ಕ.ಪ್ರ.ವಾರ್ತೆ ಮೈಸೂರು ಫೆ. 11
ಹುಟ್ಟಿದ್ದು ಹಳ್ಳಿಯಾದರೂ ಬೆಳೆದಿದ್ದು ಮಾತ್ರ ದಿಲ್ಲಿಯ ಮಟ್ಟಕ್ಕೆ. ಮನಸ್ಸಲ್ಲಿ ಛಲ, ಗೆಲ್ಲುವ ವಿಶ್ವಾಸವೊಂದಿದ್ದರೆ ಯಾರೂ ಸಾಧಿಸಬಹುದು ಎಂಬುದಕ್ಕೆ ಕುರುಬೂರಿನ ಕೆ.ಎಸ್. ಮೇಘ ಉತ್ತಮ ಉದಾಹರಣೆ.
ಮೈಸೂರು ಜಿಲ್ಲೆ ಟಿ. ನರಸೀಪುರ ತಾಲೂಕು ಕುರುಬೂರಿನ ಕೆ.ಎಸ್. ಮೇಘ ಕ್ರೀಡೆಯಲ್ಲಿನ ತನ್ನ ಅದ್ವಿತೀಯ ಸಾಧನೆಯಿಂದ ರಾಜ್ಯ, ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟಕ್ಕೆ ಹೆಸರು ಮಾಡಿ, ಹಲವು ಪ್ರಶಸ್ತಿಗಳನ್ನು ಬಾಚಿಕೊಂಡಿದ್ದಾಳೆ.
ಅಪ್ಪಟ ಕೃಷಿಕ ಕುಟುಂಬದಿಂದ ಬಂದಿರುವ ಮೇಘ ಹಣೆಗೆ ವಿಭೂತಿ ಹಚ್ಚಿಕೊಂಡು ಮೈದಾನಕ್ಕಿಳಿದರೆ ಒಂದಲ್ಲ ಒಂದು ಬಹುಮಾನವಿಲ್ಲದೆ ಹಿಂದಿರುಗಿದ್ದಿಲ್ಲ. ತಂದೆ ಕೆ.ಬಿ. ಶಾಂತಮೂರ್ತಿ ರೈತರು. ಕ್ರೀಡೆಯ ಬಗ್ಗೆ ಅವರಿಗೆ ಅಷ್ಟೊಂದು ತಿಳಿದಿಲ್ಲವಾದರೂ, ಮಗಳ ಈ ಸಾಧನೆ ಕಂಡು ಬೆರಗಾಗಿ, ಪ್ರೋತ್ಸಾಹ ನೀಡುತ್ತಿದ್ದಾರೆ. ಅಲ್ಲದೇ ಈಕೆ 10ನೇ ತರಗತಿ ಓದುತ್ತಿರುವ ಕುರುಬೂರಿನ ಶ್ರೀ ನಿರ್ವಾಣಸ್ವಾಮಿ ಗ್ರಾಮಾಂತರ ಪ್ರೌಢಶಾಲೆಯ ಆಡಳಿತ ಮಂಡಳಿಯವರು ಮತ್ತು ಕ್ರೀಡಾ ಶಿಕ್ಷಕ ಮಂಜುನಾಥ್ ಅವರ ಬೆಂಬಲವಿದೆ.
ದಿನ ಬೆಳಗಾದರೆ ಬಾಲಕ- ಬಾಲಕಿಯರ 40 ಮಂದಿಯ ತಂಡ ಖೋಖೋ, ಕ್ರಿಕೆಟ್ ಮುಂತಾದ ತರಬೇತಿಗೆ ನಿಲ್ಲುತ್ತದೆ. ಇವರೆಲ್ಲರಿಗೂ ಮೇಘ ಗೈಡ್. ಅನೇಕ ಶಿಬಿರಗಳಿಗೆ ತೆರಳಿದಾಗ ಅಲ್ಲಿ ತನಗೆ ಹೇಳಿ ಕೊಟ್ಟ ಪ್ರತಿ ಕೌಶಲ್ಯಗಳನ್ನು ತನ್ನ ಗೆಳತಿಯರಿಗೆಲ್ಲಾ ತಿಳಿಸಿಕೊಟ್ಟು ತರಬೇತಿ ನೀಡುತ್ತಾಳೆ. ಇದರ ಜೊತೆಗೆ ತಾನೆ ಸ್ವಂತವಾಗಿ ತರಬೇತಿ ಪಡೆದುಕೊಳ್ಳುತ್ತಾಳೆ. ಅಂತೆಯೆ ಸಂಜೆ ವೇಳೆ ಸಹ ತರಬೇತಿ ಪಡೆಯುತ್ತಾಳೆ. ಈ ಎಲ್ಲ ಕಾರಣಗಳಿಗಾಗಿ ನಮ್ಮ ಶಾಲೆಯ ನಿಜವಾದ ದೈಹಿಕ ಶಿಕ್ಷಕಿ ಮೇಘ ಎಂದು ಶಾಲೆಯ ತರಬೇತುದಾರ ಮಂಜುನಾಥ್ ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ.
ಖೋಖೋ ಪಂದ್ಯಾವಳಿಯಲ್ಲಿ ಕರ್ನಾಟಕವನ್ನು ರಾಷ್ಟ್ರ ಮಟ್ಟದಲ್ಲಿ ಪ್ರತಿನಿಧಿಸಿರುವ ಮೇಘಳಿಗೆ ಹಿಮಾಚಲ ಪ್ರದೇಶದ ಸೋಲಾನ್ ಸಂಸ್ಥೆ ಪ್ರತಿಷ್ಠಿತ ಜಾನಕಿ ಪ್ರಶಸ್ತಿ ನೀಡಿ ಗೌರವಿಸಿದೆ. ಬೆಂಗಳೂರಿನ ಯೂತ್ ಅಸೋಷಿಯೇಷನ್ ಉದಯೋನ್ಮುಖ ಕ್ರೀಡಾ ರತ್ನ ಪ್ರಶಸ್ತಿ ನೀಡಿ ಅಭಿನಂದಿಸಿದೆ.
2011ರಲ್ಲಿ ತುಮಕೂರಿನಲ್ಲಿ ನಡೆದ ರಾಷ್ಟ್ರೀಯ ಮಹಿಳಾ ಪೈಕಾ ಖೋಖೋ ಪಂದ್ಯಾವಳಿಯಲ್ಲಿ, ಮಂಡ್ಯದ ಕ್ಯಾತನಹಳ್ಳಿಯಲ್ಲಿ ನಡೆದ ರಾಷ್ಟ್ರೀಯ ಸೀನಿಯರ್ ದಕ್ಷಿಣ ವಲಯ ಖೋ ಖೋ ಚಾಂಪಿಯನ್ ಶಿಪ್ನಲ್ಲಿಯೂ ಚಿನ್ನದ ಪದಕ ತನ್ನದಾಗಿಸಿಕೊಂಡಿದ್ದಾಳೆ.
ಹಿಮಾಚಲ ಪ್ರದೇಶದಲ್ಲಿ ನಡೆದ ಜೂನಿಯರ್ ನ್ಯಾಷನಲ್ ಖೋ ಖೋ ಚಾಂಪಿಯನ್ ಶಿಪ್ನಲ್ಲಿ ಚಿನ್ನ, ಬೆಳಗಾವಿಯಲ್ಲಿ ನಡೆದ ನ್ಯಾಷನಲ್ ಸ್ಕೂಲ್ಗೇಮ್ಸ್ ಖೋ ಖೋ ಪಂದ್ಯಾವಳಿಯಲ್ಲಿ ಚಿನ್ನದ ಪದಕ ಪಡೆಯುವ ಜೊತೆಗೆ, ಉತ್ತಮ ಆಲ್ರೌಂಡರ್ ಪ್ರಶಸ್ತಿ ಪಡೆದಿದ್ದಾಳೆ. ಪಂಜಾಬಿನ ಅಮೃತಸರ್ನಲ್ಲಿ ನ್ಯಾಷನಲ್ ಸ್ಕೂಲ್ ಗೇಮ್ಸ್ ಖೋಖೋ ಚಾಂಪಿಯನ್ಶಿಪ್ನಲ್ಲಿ ದ್ವಿತೀಯ ಸ್ಥಾನ ಪಡೆದು ಬೆಳ್ಳಿ ಪದಕ ಪಡೆದಿದ್ದಾಳೆ.
ಇಲ್ಲಿ ಉದಾಹರಿಸಿರುವುದು ಕೆಲವೆ ಕೆಲವು ಬಹುಮಾನಗಳಷ್ಟೆ. ಇಂತಹ ಹಲವು ಬಹುಮಾನಗಳನ್ನು ಮೇಘ ಪಡೆದಿದ್ದಾಳೆ. ಕೇವಲ ಖೋಖೋ ಮಾತ್ರವಲ್ಲದೆ ಅಥ್ಲೆಟಿಕ್ಸ್ನ ಹಲವು ಆಟಗಳಲ್ಲಿ ಆಕೆ ನೈಪುಣ್ಯತೆ ಸಾಧಿಸಿದ್ದಾಳೆ. ಕ್ರಿಕೆಟ್ನಲ್ಲಿಯೂ ತಾನೇನು ಕಡಿಮೆ ಇಲ್ಲ ಎಂಬುದನ್ನು ಸಾಬೀತುಪಡಿಸಿದ್ದಾಳೆ. ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡುವ ಈಕೆಯನ್ನು ಕ್ರೀಡಾಲೋಕ ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯಬೇಕಿದೆ. ಗ್ರಾಮೀಣ ಪ್ರದೇಶದ ಶಾಲೆಯೊಂದರಲ್ಲಿ ಓದಿ ಇಷ್ಟೊಂದು ಸಾಧನೆ ಮಾಡಿರುವ ಮೇಘಾಳಿಗೆ ಎಲ್ಲ ರೀತಿಯ ಸೌಲಭ್ಯ ಲಭಿಸಿದರೆ ಕ್ರೀಡಾಲೋಕದ ಮಂದಾರವಾಗುವುದರಲ್ಲಿ ಸಂಶಯ ಇಲ್ಲ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

