ನೇರ ಫೋನ್ ಇನ್ ಕಾರ್ಯಕ್ರಮ
ಮೈಸೂರು: ತಾಪಂ ಕಚೇರಿ ವತಿಯಿಂದ ಸಾರ್ವಜನಿಕರ ಕುಂದುಕೊರತೆ ಅರ್ಜಿ ವಿಲೇವಾರಿ ಬಗ್ಗೆ ಫೆ.14ರ ಬೆಳಿಗ್ಗೆ 10ರಿಂದ 11ರವರೆಗೆ ತಾಪಂ ಕಚೇರಿಯಲ್ಲಿ ಕಾರ್ಯ ನಿರ್ವಾಹಣಾಧಿಕಾರಿ ನೇರ ಫೋನ್ಇನ್ ಕಾರ್ಯಕ್ರಮ ನಡೆಸುವರು. ಸಾರ್ವಜನಿಕರು ದೂ. 2414433ಗೆ ಕರೆ ಮಾಡಿ ತಮ್ಮ ಕುಂದುಕೊರತೆಗಳ ಬಗ್ಗೆ ಚರ್ಚಿಸಬಹುದು.
ಹಾರೋಹಳ್ಳಿ ಡೇರಿಗೆ ಆಯ್ಕೆ
ಮೈಸೂರು: ತಾಲೂಕಿನ ಜಯಪುರ ಹೋಬಳಿಯ ಹಾರೋಹಳ್ಳಿಯ ಹಾಲು ಉತ್ಪಾದಕರ ಸಹಕಾರ ಸಂಘದ ಪದಾಧಿಕಾರಿಗಳಾಗಿ ಎನ್.ಮಹದೇವಪ್ಪ (ಅಧ್ಯಕ್ಷರು), ಎಚ್.ರಾಮದಾಸ್ (ಉಪಾಧ್ಯಕ್ಷರು), ನಿಂಗೇಗೌಡ, ಎನ್. ಮಹದೇವಪ್ಪ, ಪುಟ್ಟನಂಜಪ್ಪ, ಮಹದೇವಪ್ಪ, ಆರ್. ಶಿವಣ್ಣ, ಪಾಪಯ್ಯ, ಶಿವಣ್ಣ, ಜಯಲಕ್ಷ್ಮಿ, ಪುಟ್ಟಮಣಮ್ಮ, ಎಚ್. ರಾಮದಾಸ್ (ನಿರ್ದೇಶಕರು) ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಕಾಂಕ್ರಿಟ್ ರಸ್ತೆ ಕಾಮಗಾರಿಗೆ ಸಂಸದರಿಂದ ಚಾಲನೆ
ಸುತ್ತೂರು: ಗ್ರಾಮೀಣ ಪ್ರದೇಶದ ಮೂಲ ಸೌಕರ್ಯ ಒದಗಿಸಲು ಸರ್ಕಾರವು ಯೋಜನೆಗಳನ್ನು ಹಮ್ಮಿಕೊಂಡಿದ್ದು, ಮುಂದಿನ ಬಜೆಟ್ನಲ್ಲಿ ಬಿಡುಗಡೆಯಾಗಲಿದೆ ಎಂದು ಸಂಸದ ಆರ್. ಧ್ರುವನಾರಾಯಣ ಹೇಳಿದರು.
ನಂಜನಗೂಡು ತಾ. ಕಲ್ಮಳ್ಳಿ ಗ್ರಾಮದಲ್ಲಿ ಸುವರ್ಣಭೂಮಿ ಯೋಜನೆಯಲ್ಲಿ ಕಾಂಕ್ರಿಟ್ ರಸ್ತೆ ಕಾಮಗಾರಿಗೆ ಸಂಸದ ಆರ್. ಧ್ರುವನಾರಾಯಣ ಭೂಮಿಪೂಜೆ ನೆರವೇರಿಸಿ, ಮಾತನಾಡಿ, ಗ್ರಾಮೀಣ ಪ್ರದೇಶದಲ್ಲಿ ರಸ್ತೆ, ನೀರಿಗೆ ಪ್ರಮುಖ ಆದ್ಯತೆ ನೀಡಲಾಗುವುದು ಹಾಗೂ ಮನೆ ನೀಡಲು ಯೋಜನೆ ರೂಪಿಸಲಾಗುವುದು ಎಂದರು.
ಕಾಂಗ್ರೆಸ್ ಮುಖಂಡ ರಾಕೇಶ್ ಸಿದ್ದರಾಮಯ್ಯ ಮಾತನಾಡಿದರು. ಜಿಪಂ ಅಧ್ಯಕ್ಷ ಕೂರ್ಗಳ್ಳಿ ಮಹದೇವು, ಮಾಜಿ ಅಧ್ಯಕ್ಷರಾದ ಎಸ್.ಸಿ. ಬಸವರಾಜು, ಧರ್ಮೇಂದ್ರ ರಾಜು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಂಗಸ್ವಾಮಿ, ಎಸ್ಸಿ ಘಟಕದ ಅಧ್ಯಕ್ಷ ಸುರೇಶ್ಬಾಬು, ಪ್ರಕಾಶ್, ಲಿಂಗಣ್ಣ, ವಿಜಯಕುಮಾರ್, ಪ್ರಭುಸ್ವಾಮಿ ಇದ್ದರು.
ಉಪ್ಪಾರರಿಗೆ ವಿಶೇಷ ಪ್ಯಾಕೇಜ್ ಘೋಷಿಸಿ
ಪಿರಿಯಾಪಟ್ಟಣ: ಉಪ್ಪಾರ ಜನಾಂಗವು ಆರ್ಥಿಕ, ಶೈಕ್ಷಣಿಕ ಹಾಗೂ ಸಾಮಾಜಿಕವಾಗಿ ಹಿಂದುಳಿದಿದ್ದು, ಸರ್ಕಾರವು ಉಪ್ಪಾರ ಜನಾಂಗಕ್ಕೆ ವಿಶೇಷ ಪ್ಯಾಕೆಜ್ ಘೋಷಿಸಬೇಕು ಎಂದು ಭಗೀರಥ ಉಪ್ಪಾರ ಸಂಘದ ಮುಖಂಡ ಕೃಷ್ಣೇಗೌಡ ಹೇಳಿದರು.
ತಾಲೂಕಿನ ಹರದೂರು ಗ್ರಾಮದಲ್ಲಿ ಭಗೀರಥ ಜಯಂತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ರಾಜ್ಯದಲ್ಲಿ 40 ಲಕ್ಷದಷ್ಟು ಉಪ್ಪಾರ ಸಮುದಾಯದವರಿದ್ದು, ಸರ್ಕಾರ ಭಗೀರಥ ಉಪ್ಪಾರ ಅಭಿವೃದ್ಧಿ ನಿಗಮ ಸ್ಥಾಪಿಸಿ ಸಮುದಾಯದ ಸಮಗ್ರ ಅಭಿವೃದ್ಧಿಗೆ ಕಾರ್ಯಯೋಜನೆ ರೂಪಿಸುವಂತೆ ಒತ್ತಾಯಿಸಿದರು. ಇದೇ ವೇಳೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ವೀರಗಾಸೆ ಕಲಾತಂಡಗಳೊಂದಿಗೆ ಭಗೀರಥರ ಭಾವಚಿತ್ರವನ್ನು ಮೆರವಣಿಗೆ ಮಾಡಲಾಯಿತು. ಬೆಟ್ಟದಪುರ ಗ್ರಾಪಂ ಸದಸ್ಯ ಜವರೇಗೌಡ, ಮೈಲಾರಿಗೌಡ, ವಿಎಸ್ಎಸ್ಎನ್ ಮಾಜಿ ಅಧ್ಯಕ್ಷ ಶಿವಣ್ಣ, ಮಹದೇವ್, ಶಂಕರ್, ಪ್ರಸನ್ನ, ಸರೇಶ್ಗೌಡ, ಬಿ.ಟಿ. ಸತೀಶ ಇದ್ದರು.
ಸ್ವಯಂ ಸೇವಕರಿಗೆ ನೈಪುಣ್ಯತೆ ಹೆಚ್ಚಲಿ
ಪಿರಿಯಾಪಟ್ಟಣ: ಅನಕ್ಷರಸ್ಥರ ಬಾಳನ್ನು ಬೆಳಕಾಗಿಸುವ ನಿಟ್ಟಿನಲ್ಲಿ ಸ್ವಯಂ ಸೇವಕರಿಗೆ ಕಲಿಸುವ ನೈಪುಣ್ಯತೆ ಹೆಚ್ಚು ಬೇಕಾಗಿದೆ ಎಂದು ಸಮನ್ವಯ ಅಧಿಕಾರಿ ವರದಯ್ಯ ಹೇಳಿದರು.
ಕ್ಷೇತ್ರ ಸಮನ್ವಯಾಧಿಕಾರಿ ಕಚೇರಿ ಸಭಾಂಗಣದಲ್ಲಿ ತಾ. ಲೋಕ ಶಿಕ್ಷಣ ವತಿಯಿಂದ ನಡೆದ ಮೂರು ದಿನಗಳ ಸಾಕ್ಷರ ಭಾರತ್ ಕಾರ್ಯಕ್ರಮದಲ್ಲಿ ಮುಖ್ಯ ತರಬೇತಿದಾರರಾಗಿ ಏರ್ಪಡಿಸಿದ್ದ ತರಬೇತಿ ಕಾರ್ಯಾಗಾರರಲ್ಲಿ ಮಾತನಾಡಿದ ಅವರು, ಮುಂದಿನ ದಿನಗಳಲ್ಲಿ ಸಾಕ್ಷರ ಅಭಿಯಾನ ಎಂದು ಹೊಸ ಕಾರ್ಯಕ್ರಮ ರೂಪುಗೊಳ್ಳಲಿದ್ದು, ಇದರಲ್ಲಿ ಸಾಕ್ಷರ ಅಭಿಯಾನದಡಿಯಲ್ಲಿ ನಡೆಯಲಿರುವ ಕಾರ್ಯಕ್ರಮ ಹೆಚ್ಚು ಬದಲಾವಣೆಯಾಗಿ ಅನಕ್ಷರಸ್ಥರಿಗೆ ಅನುಕೂಲವಾಗುತ್ತದೆ ಎಂದು ತಿಳಿಸಿದರು.
ಜಿಲ್ಲಾ ಸಂಯೋಜಕರಾದ ಎಂ. ಮಂಜನಾಥ್, ತಾ. ಸಂಯೋಜಕರಾದ ಎಸ್.ಆರ್. ಅನಂತ್, ಸಂಪನ್ಮೂಲ ವ್ಯಕ್ತಿಗಳಾದ ಎಂ.ಡಿ. ಶಿವಕುಮಾರ್, ಶ್ರೀನಿವಾಸಗೌಡ, ಎಂ.ಎಸ್. ಸುರೇಶ್, ಭೃಗೇಶ್, ದಯಾನಂದ ಇದ್ದರು.
ಸಿಂಧುತ್ವ ಪ್ರಶ್ನಿಸಿ ಸಲ್ಲಿಸಿದ ಅರ್ಜಿ ವಜಾ
ಹುಣಸೂರು: ಪುರಸಭಾ ಸದಸ್ಯರಾಗಿ ಆಯ್ಕೆ ಸಿಂಧುತ್ವ ಪ್ರಶ್ನಿಸಿ ಹೂಡಿದ್ದ ಮೊಕದ್ದಮೆಯನ್ನು ಪಟ್ಟಣದ ಹಿರಿಯ ಶ್ರೇಣಿ ಸಿವಿಲ್ ನ್ಯಾಯಾಲಯ ಬುಧವಾರ ವಜಾಗೊಳಿಸಿದೆ.
ಪಟ್ಟಣದ 9ನೇ ವಾರ್ಡಿನಿಂದ ಕಾಂಗ್ರೆಸ್ನ ಸುನೀತಾ ಜಯರಾಮೇಗೌಡರ ವಿರುದ್ಧ ಸ್ಪರ್ಧಿಸಿ ಪರಾಭವಗೊಂಡಿದ್ದ ಜೆಡಿಎಸ್ನ ಗೀತಾ ನಿಂಗರಾಜು ಚುನಾವಣಾ ಅಕ್ರಮ ನಡೆದಿದೆಯೆಂದು ಆರೋಪಿಸಿ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಿದ್ದರು.
2013, ಮಾ.7ರಂದು ನಡೆದ ಪುರಸಭಾ ಚುನಾವಣೆಯಲ್ಲಿ ವಿಜೇತ ಅಭ್ಯರ್ಥಿ ಸುನೀತ ಜಯರಾಮೇಗೌಡರು ಪ್ರಭಾವ ಬೀರಿ ಪಕ್ಕದ ಹಳೆ ಚಿಕ್ಕಹುಣಸೂರಿನ ಹಲವರನ್ನು 9ನೇ ವಾರ್ಡ್ನ ಮತದಾರರ ಪಟ್ಟಿಗೆ ಸೇರಿಸಿದ್ದರು. ಅಲ್ಲದೇ ಚುನಾವಣಾಧಿಕಾರಿಗಳು ಮತ ಪತ್ರದ ಕ್ರಮ ಸಂಖ್ಯೆಯನ್ನು ಸಹ ತಮಗೆ ತಪ್ಪಾಗಿ ನೀಡಿದ್ದರಿಂದ ತಾವು ಸೋಲು ಅನುಭವಿಸಬೇಕಾಯಿತೆಂದು ದೂರಿ, ಅವರ ಆಯ್ಕೆಯನ್ನು ಅಸಿಂಧುಗೊಳಿಸಬೇಕೆಂದು ನ್ಯಾಯಾಲಯದಲ್ಲಿ ಪ್ರಕರಣದ ದಾಖಲಿಸಿದ್ದರು. ವಿಚಾರಣೆ ನಡೆದು ಅಕ್ರಮ ಸಾಬೀತಾಗದ ಕಾರಣ, ಮೊಕದ್ದಮೆಯನ್ನು ವಜಾಗೊಳಿಸಿ ಪ್ರತಿವಾದಿಗೆ ಮೊಕದ್ದಮೆಯ ಖರ್ಚು ಭರಿಸುವಂತೆ ನ್ಯಾಯಾಧೀಶೆ ಬಿ.ಎಂ. ಶೈಲಾ ತೀರ್ಪು ನೀಡಿದರು.
ಆಕಸ್ಮಿಕ ಬೆಂಕಿ; ಅಂಗಡಿ ಭಸ್ಮ
ಬೈಲಕುಪ್ಪೆ: ಅಂಗಡಿಯೊಂದಕ್ಕೆ ಬೆಂಕಿ ಬಿದ್ದ ಪರಿಣಾಮ ಅಂಗಡಿಯಲ್ಲಿದ್ದ ವಸ್ತುಗಳು ಸಂಪೂರ್ಣ ಸುಟ್ಟು ಹೋಗಿದ್ದು, ಸುಮಾರು 10 ಲಕ್ಷಕ್ಕೂ ಹೆಚ್ಚು ನಷ್ಟ ಸಂಭವಿಸಿರುವ ಘಟನೆ ಬುಧವಾರ ಬೈಲಕುಪ್ಪೆ 1ನೇ ಕ್ಯಾಂಪ್ ರಸ್ತೆಯಲ್ಲಿ ಜರುಗಿದೆ. ಬೆಳಗಿನ ಜಾವ 4ರ ಸಮಯದಲ್ಲಿ ಬೆಂಕಿ ಬಿದ್ದಿದ್ದು, ಕುಶಾಲನಗರ ಹಾಗೂ ಪಿರಿಯಾಪಟ್ಟಣದ ಅಗ್ನಿ ಶಾಮಕದಳ ಬಂದು ಬೆಂಕಿ ನಂದಿಸಿದರು. ಅಂಗಡಿ ಮಾಲೀಕ ಅನ್ಸರ್ ಬೈಲುಕುಪ್ಪೆ ದೂರು ನೀಡಿದ್ದಾರೆ.
15ರಂದು ಸಾಮೂಹಿಕ ವಿವಾಹ
ಕೆ.ಆರ್. ನಗರ: ಪಟ್ಟಣದ ಜಾಮೀಯಾ ಮಸೀದಿ ಸಮಿತಿಯ ವತಿಯಿಂದ ಫೆ.14ರಂದು ಮೊಹಮ್ಮದ್ ಪೈಗಂಬರ್ ಹುಟ್ಟುಹಬ್ಬ ಮತ್ತು ಫೆ.15ರಂದು ಸಾಮೂಹಿಕ ವಿವಾಹ ಸಮಾರಂಭ ಹಮ್ಮಿಕೊಳ್ಳಲಾಗಿದೆ.
ಫೆ.14ರ ಮಧ್ಯಾಹ್ನ 12.30ರಿಂದ 2ರವರೆಗೆ ಸಾಮೂಹಿಕ ಪ್ರಾರ್ಥನೆ ನಂತರ ಸಂಜೆ 4ರವರೆಗೆ ಪ್ರವಾದಿ ಮೊಹಮ್ಮದ್ ಪೈಗಂಬರ್ ದಿವ್ಯ ವಸ್ತುಗಳ ಪ್ರದರ್ಶನದ ರಾತ್ರಿ 9ಕ್ಕೆ ಪೈಗಂಬರ್ರವರ ಜೀವನ ಕುರಿತು ಧಾರ್ಮಿಕ ಪ್ರವಚನ ಏರ್ಪಡಿಸಿದೆ. ಫೆ.15ರಂದು ಮುಸ್ಲಿಂ ಸಮುದಾಯದ ಸಾಮೂಹಿಕ ವಿವಾಹ ಸಮಾರಂಭ ಜಾಮೀಯಾ ಮಸೀದಿ ಮುಂಭಾಗದ ಮಿಲಾದ್ ಬಾಗ್ನಲ್ಲಿ ನಡೆಯಲಿದೆ. ಡಾ. ಮೆಹಬೂಬ್ಖಾನ್, ಸೂಪಿಮೊಕ್ತಾರ್, ಸಯ್ಯದ್ ತಾಜುದ್ದೀನ್ಪಾಷಾ, ಶಾಸಕರಾದ ಸಾ.ರಾ. ಮಹೇಶ್, ತನ್ವೀರ್ಸೇಠ್, ಸಂಸದರಾದ ವಿಶ್ವನಾಥ್, ರಮ್ಯಾ, ಮಾಜಿ ಶಾಸಕ ಶಂಕರಲಿಂಗೇಗೌಡ, ದೊಡ್ಡಸ್ವಾಮೇಗೌಡ ಇತರರು ಭಾಗವಹಿಸುವರು.
ಡೇರಿ ಲೆಕ್ಕ ನೀಡದ ಆರೋಪ
ಕೆ.ಆರ್. ನಗರ: ತಾಲೂಕಿನ ಮಾವನೂರು ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ಕಾರ್ಯದರ್ಶಿ ಪುಷ್ಪಾಮಣಿ ಸಮರ್ಪಕವಾಗಿ ಲೆಕ್ಕ ನೀಡದೆ ಆರು ತಿಂಗಳಿಂದ ಸಭೆ ಕರೆದಿಲ್ಲ ಎಂದು ಗ್ರಾಮದ ಸ್ತ್ರೀಶಕ್ತಿ ಮಹಿಳಾ ಸ್ವ-ಸಹಾಯ ಸಂಘದವರು ಆರೋಪಿಸಿದ್ದಾರೆ.
ಕಾರ್ಯದರ್ಶಿ ವರ್ತನೆಯ ವಿರುದ್ಧ ಸಂಘದ ಅಧ್ಯಕ್ಷೆ ಕನ್ಯಾಮಣಿಯವರಿಗೆ ದೂರು ಸಲ್ಲಿಸಿದಾಗ, ಅವರು ಕಾರ್ಯದರ್ಶಿಯ ಪತಿ ಚಾಮರಾಜೇ ಅರಸ್ ಅವರನ್ನು ಕರೆಸಿ, ವಿಚಾರಿಸಿದಾಗ ಸಮರ್ಪಕವಾಗಿ ಸ್ಪಂದಿಸಿದ ಇವರ ವರ್ತನೆಯಿಂದ ಅಧ್ಯಕ್ಷರು ರಾಜೀನಾಮೆ ನೀಡಿದ್ದಾರೆ. ಈಗ ಸಂಘದಲ್ಲಿ ಹೇಳುವವರು ಕೇಳುವವರು ಇಲ್ಲದಂತಾಗಿದೆ ಎಂದು ಚಾಮುಂಡೇಶ್ವರಿ ಮತ್ತು ಧನಲಕ್ಷ್ಮೀ ಸ್ವಸಹಾಯ ಸಂಘದ ಪ್ರತಿನಿಧಿಗಳು ದೂರಿದ್ದಾರೆ.
ನಂತರ ಕಾರ್ಯದರ್ಶಿ ಸಂಘದ ಬಾಗಿಲು ತೆರೆದು, ಹಾಲು ಸಂಗ್ರಹಿಸಲು ಮುಂದಾದಾಗ ಗ್ರಾಮದ ಮಹಿಳಾ ಸ್ವಸಹಾಯ ಸಂಘದವರು ತಡೆಯೊಡ್ಡಿ ಲೆಕ್ಕ ಕೇಳಿದಾಗ ಸಾಲಿಗ್ರಾಮ ಪೊಲೀಸ್ ಠಾಣೆಗೆ ಲೆಕ್ಕ ಕೇಳಿದವರ ಮೇಲೆ ದೂರು ನೀಡಿದ್ದು, ಅಲ್ಲಿಯೂ ನಮಗೆ ಸರಿಯಾದ ಮಾಹಿತಿ ದೊರೆತಿಲ್ಲ ಎಂದು ಪ್ರತಿನಿಧಿಗಳು ತಿಳಿಸಿದ್ದಾರೆ.
ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಡೇರಿಗೆ ಭೇಟಿ ನೀಡಿ ಅಕ್ರಮವೆಸಗಿರುವ ಕಾರ್ಯದರ್ಶಿಯನ್ನು ವಜಾ ಮಾಡಿ, ಮತ್ತೆ ಹಾಲು ಉತ್ಪಾದಕರ ಸಂಘ ಆರಂಭಿಸಲು ಅನುಕೂಲ ಕಲ್ಪಿಸಬೇಕೆಂದು ಮಹಿಳಾ ಸಂಘದ ಮಂಜುಳಾ, ವಿಶಾಲಿ, ನಾಗಮ್ಮ, ನಾಗಲಕ್ಷ್ಮೀ, ಪುಟ್ಟಗೌರಮ್ಮ, ಸಾವಿತ್ರಮ್ಮ ಆಗ್ರಹಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

