ಮರಳು ಸರಬರಾಜು ವ್ಯತ್ಯಯ
ಎಚ್.ಡಿ. ಕೋಟೆ: ತಾಲೂಕಿನಲ್ಲಿ ಮರಳು ಸಾಗಾಣಿಕೆ ಗುತ್ತಿಗೆ ಪಡೆದಿರುವ ಗುತ್ತಿಗೆದಾರರು ಸಕಾಲದಲ್ಲಿ ಮರಳನ್ನು ಸರಬರಾಜು ಮಡದಿರುವುದನ್ನು ಖಂಡಿಸಿ ಮರಳು ಸಾಗಿಸುವ ಲಾರಿ ಮಾಲೀಕರು ಬುಧವಾರ ಪ್ರತಿಭಟನೆ ನಡೆಸಿದರು.
ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಹಾಗೂ ಗುತ್ತಿಗೆದಾರರು ತಮ್ಮ ಕರ್ತವ್ಯವನ್ನು ನಿರ್ವಹಿಸದೆ ಇರುವ ಕಾರಣ ಲಾರಿ ಮಾಲೀಕರು ಹಾಗೂ ತಾಲೂಕಿನ ಸಾರ್ವಜನಿಕರಿಗೆ ತೊಂದರೆಯಾಗಿದೆ. ಇದರಿಂದ ನೂರಾರು ದುಡಿಯುವ ಕೈಗೆ ಕೆಲಸವಿಲ್ಲದೇ ಪರದಾಡುವಂತಾಗಿದೆ ಎಂದು ಪ್ರತಿಭನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಗುತ್ತಿಗೆದಾರ ಟೆಂಡರ್ ಪಡೆದಾಗಿನಿಂದ ಈವರೆಗೆ 11,500 ಲೋಡ್ ಮರಳಿಗೆ ಬದಲಾಗಿ ಕೇವಲ 1500 ಲೋಡ್ ಮರಳನ್ನು ಒದಗಿಸಿದ್ದಾರೆ. ಮರಳನ್ನು ಬೇರೆ ಕಡೆಗೆ ಸಾಗಿಸುತ್ತಿರುವುದು ಕಡಿಮೆ ಸರಬರಾಜಿಗೆ ಪ್ರಮುಖ ಕಾರಣ. 10 ಸಾವಿರ ಲೋಡ್ ಮರಳನ್ನು ಬೇರೆಡೆಗೆ ಸಾಗಿಸಿದ್ದು ಈ ಬಗ್ಗೆ ಹಿರಿಯ ಅಧಿಕಾರಿಗಳಿಗೂ ದೂರು ನೀಡಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಕಬಿನಿ ಜಲಾಶಯದಲ್ಲಿ ನೀರು ಸಮತಟ್ಟಲ್ಲಿದ್ದರೂ ಮರಳು ಲಭ್ಯವಾಗುತ್ತಿಲ್ಲ. ಆದ್ದರಿಂದ ಕೂಡಲೇ ಗುತ್ತಿಗೆದಾರರು ತಮ್ಮ ತಪ್ಪನ್ನು ಸರಿಪಡಿಸಿಕೊಂಡು ಸಮರ್ಪಕವಾಗಿ ಮರಳನ್ನು ಒದಗಿಸುವಂತೆ ಲಾರಿ ಮಾಲೀಕರು ಆಗ್ರಹಿಸಿದರು. ಲಾರಿ ಮಾಲೀಕರ ಸಂಘದ ಅಧ್ಯಕ್ಷ ವತ್ಸಲಂ, ಮಧು, ರಾಜಪ್ಪ, ಇಟ್ಟಿಗೆ ನಾಗರಾಜು, ಮಹದೇವನಾಯಕ, ವಿನಯ್, ಚನ್ನನಾಯಕ, ಪದ್ಮ ಪ್ರಸಾದ್, ಚನ್ನನಾಯಕ, ಪ್ರಕಾಶ್, ಶಿವಣ್ಣ, ಕೆ.ಕೆ. ಯೂಸಫ್, ತಂಗವೇಲು, ಮುನೀರ್, ಕುಮಾರ್ ಇದ್ದರು.
ಮರಳುದಂಧೆ ವಿರುದ್ಧ ಕಟ್ಟುನಿಟ್ಟಿನ ಕ್ರಮ: ಎಚ್ಚರಿಕೆ
ಹುಣಸೂರು: ರಾಜ್ಯ ಸರ್ಕಾರ ಜಾರಿಗೆ ತಂದಿರುವ ನೂತನ ಮರಳು ನೀತಿ- 2013ರ ಪ್ರಕಾರ ಅಕ್ರಮ ಮರಳುಗಾರಿಕೆ ನಡೆಸುವವರ ವಿರುದ್ಧ ಶಿಸ್ತು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಉಪವಿಭಾಗಾಧಿಕಾರಿ ಜಗದೀಶ್ ಎಚ್ಚರಿಸಿದ್ದಾರೆ. ಅವರು ಅಂಬೇಡ್ಕರ್ ಭವನದಲ್ಲಿ ಬುಧವಾರ ನಡೆದ ಉಪವಿಭಾಗ ಮಟ್ಟದ ತಾಲೂಕು ಮರಳು ಉಸ್ತುವಾರಿ ಸಮಿತಿ ಸಭೆಯಲ್ಲಿ ಮಾತನಾಡಿ, ಮರಳು ನೀತಿಯಲ್ಲಿ ಸುಪ್ರೀಂ ಕೋರ್ಟ್ ಹಾಗೂ ರಾಷ್ಟ್ರೀಯ ಹಸಿರು ಪೀಠದ ಆದೇಶಗಳನ್ನು ಪಾಲಿಸುವ ಸಲುವಾಗಿ ರಾಜ್ಯ ವೈಜ್ಞಾನಿಕ ಗಣಿಗಾರಿಕೆ ಹಾಗೂ ಪರಿಸರ ಸಂರಕ್ಷಣೆ ತಿದ್ದುಪಡಿ ನಿಯಮದಲ್ಲಿ ಒತ್ತು ನೀಡಿದೆ. ಇದಕ್ಕಾಗಿ ಜಿಲ್ಲೆ ಮತ್ತು ತಾಲೂಕು ಮಟ್ಟದ ಸಮಿತಿ ರಚಿಸಲಾಗಿದೆ ಎಂದರು. ನೂತನ ನೀತಿಯಂತೆ ನಿಷೇಧಿತ ಪ್ರದೇಶ ಹೊರತುಪಡಿಸಿ ನದಿ ಪ್ರದೇಶಗಳಲ್ಲಿ ಬ್ಲಾಕ್ ಗುರುತಿಸುವುದು, ನದಿ ದಂಡೆಗೆ ಧಕ್ಕೆಯಾಗದಂತೆ ಯಾವುದೇ ಯಂತ್ರ ಬಳಸದೆ ಮರಳು ಸಂಗ್ರಹಿಸಬೇಕು. ಆದರೆ ಲಾರಿಗಳಿಗೆ ತುಂಬಲು ಡಂಪರ್ಸ್, ಲೋಡರ್ಸ್ ಬಳಸಲು ಅವಕಾಶ ಕಲ್ಪಿಸಲಾಗಿದೆ. ಬೆಳಗ್ಗೆ 6ರಿಂದ ಸಂಜೆ 6ರವರೆಗೆ ಸಮಯ ನಿಗದಿ ಪಡಿಸಸಲಾಗಿದೆ ಎಂದು ತಿಳಿಸಿದರು. ಮನೆ ಕಟ್ಟುವವರಿಗೆ, ಸರ್ಕಾರಿ ಕೆಲಸಕ್ಕೆ ಸಕಾಲದಲ್ಲಿ ನಿಯಮಾವಳಿಯಂತೆ ಸಮರ್ಪಕವಾಗಿ ದೊರಕಿಸಿಕೊಡುವ ಜವಾಬ್ದಾರಿ ತಾಲೂಕು ಸಮಿತಿಯ ವ್ಯಾಪ್ತಿಗೆ ಬರಲಿದ್ದು ಎಲ್ಲ ಅಧಿಕಾರಿಗಳು ನೌಕರರು ಬದ್ಧತೆಯಿಂದ ಕೆಲಸ ಮಾಡಬೇಕು ಎಂದು ಸೂಚಿಸಿದರು. ತಾಪಂ ಇಒ ಡಾ. ಪ್ರೇಮಕುಮಾರ್, ಕಂದಾಯ ನಿರೀಕ್ಷಕರು, ಗ್ರಾಮ ಲೆಕ್ಕಿಗರು, ಪಿಡಿಒಗಳು, ಪಿಡ್ಲ್ಯೂಡಿ, ಪೊಲೀಸ್ ಅಧಿಕಾರಿಗಳು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

