ಒಲವೆ ಜೀವನ ಸಾಕ್ಷಾತ್ಕಾರ...
ಮೈಸೂರು: ಮೊಬೈಲ್ನಲ್ಲಿ ಎಸ್ಎಂಎಸ್ ಪ್ರೇಮ ಸಂದೇಶ, ನಂತರ ಇಂಟರ್ನೆಟ್ನಲ್ಲಿ ಪರಸ್ಪರ ಚಾಟಿಂಗ್, ಆದಾದ ಕೆಲವೇ ದಿನಗಳಲ್ಲಿ ಇಬ್ಬರಿಗೂ ಮದುವೆ, ತಿಂಗಳು ಕಳೆವಷ್ಟರಲ್ಲಿ ಡಿವೋರ್ಸ್. ಇದುವೇ ಇಂದಿನ ಹೆಚ್ಚಿನ ಪ್ರೇಮಿಗಳ ಬದುಕಿನ ಗತಿ.
ಆಧುನಿಕ ಬದುಕಿನಲ್ಲಿ ಮನುಷ್ಯ ಎಷ್ಟು ವೇಗವಾಗಿ ಓಡುತ್ತಿದ್ದಾನೋ, ಅಷ್ಟೇ ವೇಗವಾಗಿ ಆತನ ಬದುಕು ಕುಬ್ಜವಾಗುತ್ತಿದೆ ಹಾಗೂ ಆಯಸ್ಸು ಕ್ಷೀಣಿಸುತ್ತಿದೆ. ಮದುವೆಯಾಗಿ ಸುಖ ಜೀವನ ನಡೆಸಬೇಕಾದ ಇಂದಿನ ಯುವಜನಾಂಗ ಪ್ರೇಮದ ಬಲೆಯಲ್ಲಿ ಬಿದ್ದು, ಯಾವುದೋ ಕ್ಷಣಿಕ ಕನಸುಗಳಿಗೆ, ತೃಣ ಅಮಿಷಗಳಿಗೆ ಒಳಗಾಗುತ್ತಿದ್ದಾರೆ. ಕನಸು ನನಸಾಗದಿದ್ದಾಗ ಹತಾಶರಾಗಿ ಅಮೂಲ್ಯ ಜೀವನವನ್ನೂ ಹಾಗೂ ಜೀವವನ್ನೂ ಕಳೆದುಕೊಳ್ಳುತ್ತಿದ್ದಾರೆ.
ಇಂದು ವಿದ್ಯಾವಂತರು ಹಾಗೂ ಬುದ್ಧಿವಂತರ ಸಂಖ್ಯೆ ಹೆಚ್ಚಾಗುತ್ತಿದ್ದು, ತಿಂಗಳಿಗೆ ಲಕ್ಷಾಂತರ ರು. ವೇತನ ಪಡೆಯುವ ಯುವಕ ಯುವತಿಯರಿದ್ದಾರೆ. ಕೆಲವರಿಗೆ ಆ ಹಣ ಹೇಗೆ ಖರ್ಚು ಮಾಡಬೇಕೆಂಬ ಚಿಂತೆ ಮನೆ ಮಾಡಿದ್ದರೂ ಅಶ್ಚರ್ಯವಿಲ್ಲ. ಆದರೆ ಇಂಥ ವರ್ಗಗಳಲ್ಲಿ ದಾಂಪತ್ಯ ಬಿರುಕುಗಳು ಹೆಚ್ಚುತ್ತಿವೆ. ಪರಸ್ಪರ ಹೊಂದಾಣಿಕೆಯಿಲ್ಲದೆ ವಿವಾಹ ವಿಚ್ಛೇದನಕ್ಕೆ ಮುಂದಾಗುತ್ತಿದ್ದಾರೆ. ನಗರಗಳಲ್ಲಿನ ಜನಜೀವನದಲ್ಲಿ ವಿವಾಹ ವಿಚ್ಛೇದನವೂ ಒಂದು ಸಾಮಾಜಿಕ ಸಮಸ್ಯೆಯಾಗಿ ಪರಿಣಮಿಸಿದೆ.
ಇಂಥ ಸಂದರ್ಭದಲ್ಲಿ ನಮ್ಮ ಹಿರಿಯರು ಮದುವೆಯಾಗಿ ಸುದೀರ್ಘ ಕಾಲ ಹೇಗೆ ಅನೋನ್ಯವಾಗಿ ಬದುಕು ನಡೆಸುತ್ತಿದ್ದಾರೆ ಎಂಬುದನ್ನು ಯುವಪೀಳಿಗೆ ಅರಿಯಬೇಕಿದೆ. ಅವರ ದಾಂಪತ್ಯ ಬದುಕಿನ ಸಾಮರಸ್ಯಕ್ಕೆ ಇರುವ ಸೂತ್ರಗಳೇನು ಎಂಬುದನ್ನು ಅರಿತು ಅನುಸರಿಸಬೇಕಿದೆ. ಅದುವೇ ಇಂದಿನ ಯುವ ಸಂಗಾತಿಗಳಿಗೆ ಆದರ್ಶವಾಗಬೇಕು.
ಇವರ ಹೆಸರು ಎಲ್. ವಿಶ್ವನಾಥ್. ವಯಸ್ಸು 80. ಇವರ ಪತ್ನಿಯ ಹೆಸರು ನಾಗಲಕ್ಷ್ಮೀ. ವಯಸ್ಸು 65. ಇವರು ಮದುವೆಯಾಗಿ ಸುಮಾರು ಐವತ್ತು ವಸಂತಗಳು ಸಮೀಪಿಸುತ್ತಿದೆ. ಸುಖಮಯ ಬದುಕಿಗೆ ಕೇವಲ ಹಣವಾಗಲಿ ಅಥವಾ ಶ್ರೀಮಂತಿಕೆಯಾಗಲಿ ಮುಖ್ಯವಲ್ಲ ಎಂದು ಭಾವಿಸಿರುವ ವಿಶ್ವನಾಥ್, ಮೈಸೂರು ನಗರ ಪಾಲಿಕೆಯಲ್ಲಿ ಎರಡನೇ ದರ್ಜೆ ಗುಮಾಸ್ತರಾಗಿದ್ದವರು. ಅವರು ಮದುವೆಯಾದಾಗ ಕೇವಲ 90 ಸಂಬಳ. ಅದರಲ್ಲಿಯೇ ಕುಟುಂಬವನ್ನು ನಿರ್ವಹಿಸಿದವರು. ಇದೀಗ ನಿವೃತ್ತಿಯಾಗಿ 21 ವರ್ಷಗಳು ಕಳೆದಿವೆ. ಇಬ್ಬರು ಪುತ್ರರು, ಒಬ್ಬ ಪುತ್ರಿ ಹಾಗೂ ಮೊಮ್ಮಕ್ಕಳಿದ್ದಾರೆ.
ಸಮಾಜದಲ್ಲಿ ಇಂಥ ಆದರ್ಶ ದಂಪತಿಗಳ ಸಂಖ್ಯೆ ಹಲವಿರಬಹುದು. ನಮ್ಮ ಸುತ್ತಮುತ್ತ ಗೌರವಯುತವಾಗಿ ಹಾಗೂ ಅನೋನ್ಯವಾಗಿ ಬದುಕುತ್ತಿರುವ ಹಿರಿಯ ದಂಪತಿಗಳ ಒಲುಮೆಯ ಜೀವನ ಯುವಜನತೆಗೆ ಆದರ್ಶವಾಗಲಿ.
ಪ್ರೇಮಿಸಿ ಮದುವೆಯಾಗಲಿ ಅಥವಾ ಹಿರಿಯರ ಅನುಮತಿ ಪಡೆದು ಮದುವೆಯಾಗಲಿ, ಇಂಥ ಯಾವುದೇ ದಂಪತಿಗಳ ನಡುವೆ ಪ್ರೀತಿ ವಿಶ್ವಾಸವೇ ಬಹುಮುಖ್ಯ. ಕಷ್ಟ ಸುಖಗಳಲ್ಲಿ ಭಾಗಿಯಾಗಬೇಕು ಹಾಗೂ ಎಂಥಾ ತೊಂದರೆ ಬಂದರೂ ಇಬ್ಬರು ಸೇರಿ ನಿಭಾಯಿಸಬೇಕು. ಆಗ ಕೌಟುಂಬಿಕ ಬದುಕು ಯಶಸ್ವಿಯಾಗಲಿದೆ.
ನಾಗಲಕ್ಷ್ಮಿ, ವಿಶ್ವನಾಥ್ ಪತ್ನಿ.
ಬಾಳ ಸಂಗಾತಿಗಳಲ್ಲಿ ಹೊಂದಾಣಿಕೆಯೇ ಸುಖ ದಾಂಪತ್ಯದ ಗುಟ್ಟು. ಏನೇ ಕಷ್ಟ ಬಂದರೂ ವಿವಾಹ ವಿಚ್ಛೇದನಕ್ಕೆ ಮುಂದಾಗಬಾರದು. ಹಣವೊಂದರಿಂದಲೇ ಎಲ್ಲವನ್ನು ಕೊಳ್ಳಲು ಸಾಧ್ಯವಿಲ್ಲ. ಒಟ್ಟಾಗಿ ಸಂಸಾರ ನಡೆಸುವ ಗುಣ ಇರಬೇಕು. ಹಿರಿಯರ ಮಾರ್ಗದರ್ಶನದಂತೆ ನಡೆಯಬೇಕು. ತಂದೆ ತಾಯಿಯನ್ನು ಗೌರವಿಸಬೇಕು.
ಎಲ್. ವಿಶ್ವನಾಥ್, 80 ವರ್ಷದ ಹಿರಿಯರು.
-ಮಾ. ವೆಂಕಟೇಶ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

