ಶೀಲ ಶಂಕಿಸಿ ಪತ್ನಿ ಕೊಲೆ
ಮೈಸೂರು: ಪತ್ನಿಯ ಶೀಲ ಶಂಕಿಸಿದ ಪತಿ ಚಾಕುವಿನಿಂದ ಇರಿದು ಹತ್ಯೆಗೈದಿರುವ ಘಟನೆ ನಗರದ ಮೇದರ ಬ್ಲಾಕ್ನಲ್ಲಿ ನಡೆದಿದೆ.
ಮೇದರ ಬ್ಲಾಕ್ ನಿವಾಸಿ ಸೌಮ್ಯಾ (22) ಕೊಲೆಯಾದವರು. ಹತ್ಯೆಗೈದ ಪತಿ ನವೀನ್ನನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಹೇರ್ ಸಲೂನ್ ನಡೆಸುತ್ತಿದ್ದ ನವೀನ್ ಪತ್ನಿಯೊಂದಿಗೆ ಅನೋನ್ಯವಾಗಿದ್ದ. ಆದರೆ ಕಳೆದ ಕೆಲ ತಿಂಗಳಿಂದ ಸೌಮ್ಯ ಹೊಟೇಲೊಂದರಲ್ಲಿ ಸಪ್ಲೆಯರ್ ಆಗಿ ಕೆಲಸಕ್ಕೆ ಸೇರಿದ್ದರು. ಇತ್ತೀಚೆಗೆ ಆಕೆಯ ಬಳಿ ಸದಾ ಹಣ ಇರುವುದನ್ನು ಕಂಡ ನವೀನ್ ಅನುಮಾನದಿಂದ ಆಕೆಯೊಂದಿಗೆ ಹಲವು ಬಾರಿ ಜಗಳವಾಡಿದ್ದ. ಮಂಗಳವಾರ ರಾತ್ರಿ ಇದೇ ವಿಷಯಕ್ಕೆ ದಂಪತಿ ನಡುವೆ ಜಗಳವಾಗಿದೆ. ಈ ವೇಳೆ ನವೀನ್ ಅಡುಗೆ ಮನೆಯಿಂದ ಚಾಕು ತಂದು ಏಕಾಏಕಿ ಸೌಮ್ಯಾ ಎದೆಗೆ ಚುಚ್ಚಿದ್ದಾನೆ. ತೀವ್ರ ರಕ್ತಸ್ರಾವದಿಂದ ಪ್ರಜ್ಞೆ ತಪ್ಪಿದ್ದ ಸೌಮ್ಯ ಅವರನ್ನು ಕೆ.ಆರ್. ಆಸ್ಪತ್ರೆಗೆ ಕರೆ ತರುವಷ್ಟರಲ್ಲಿ ಮೃತಪಟ್ಟಿದ್ದಾರೆ.
ಈ ಸಂಬಂಧ ಮಂಡಿ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ರಾಜಣ್ಣ ಹಾಗೂ ಪಿಎಸ್ಐ ಶಬ್ಬೀರ್ ಹುಸೇನ್ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಹಿರಿಯರಿಗೆ ಗುರುತಿನ ಚೀಟಿ ವಿತರಣೆ
ಮೈಸೂರು: ಜೆಎಸ್ಎಸ್ ಮೆಡಿಕಲ್ ಸರ್ವಿಸ್ ಟ್ರಸ್ಟ್, ನಗರ ಪೊಲೀಸ್ ಇಲಾಖೆ ಮತ್ತು ವಿಕಲಚೇತನ, ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಆಶ್ರಯದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಜೆಎಸ್ಎಸ್ ಹಿರಿಯ ನಾಗರಿಕರ ಸಹಾಯವಾಣಿ ವತಿಯಿಂದ 60 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಗುರುತಿನ ಚೀಟಿ ವಿತರಿಸಲಾಗುತ್ತಿದೆ. ಈ ಗುರುತಿನ ಚೀಟಿಯನ್ನು ಸರ್ಕಾರದ ವಿವಿಧ ಯೋಜನೆಗಳು, ರಿಯಾಯಿತಿಗೆ ಬಳಸಬಹುದು. 60 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರು ಇದರ ಸದುಪಯೋಗಪಡಿಸಿಕೊಳ್ಳಬೇಕು. ಮಾಹಿತಿಗೆ ದೂ. 0821- 2548253, 2448138 ಅಥವಾ ಸುಂಕರಹಿತ ದೂ. 1090ಕ್ಕೆ ಬೆಳಗ್ಗೆ 8ರಿಂದ ರಾತ್ರಿ 7 ರವರೆಗೆ ಸಂಪರ್ಕಿಸಬಹುದು ಎಂದು ಯೋಜನಾ ಸಂಯೋಜನಾಧಿಕಾರಿ ಎಸ್. ಬಸವರಾಜು ತಿಳಿಸಿದ್ದಾರೆ.
ಕಿನ್ನಾಳೆ ಕಲೆ ಶಿಬಿರ ಆರಂಭ
ಮೈಸೂರು: ನಗರದ ಇಂದಿರಾ ಗಾಂಧಿ ರಾಷ್ಟ್ರೀಯ ಮಾನವ ಸಂಗ್ರಹಾಲಯದಲ್ಲಿ ಕಿನ್ನಾಳೆ ಕಲೆ ತರಬೇತಿ ಶಿಬಿರ ಆರಂಭವಾಯಿತು.
ಇರ್ವಿನ್ ರಸ್ತೆಯ ವೆಲ್ಲಿಂಗ್ಟನ್ ಮನೆಯ ಸಂಗ್ರಹಾಲಯದಲ್ಲಿ ಈ ಶಿಬಿರ ಆರಂಭಗೊಂಡಿದ್ದು, 15 ದಿನಗಳ ಕಾಲ ನಡೆಯಲಿದೆ. ವಿಜಯನಗರ ಸಾಮ್ರಾಜ್ಯ ಕಾಲದಿಂದ ಇಂದಿನವರೆಗೂ ಕಿನ್ನಾಳೆ ಕಲೆ ಬೆಳೆದುಬಂದಿದೆ. ಅದರ ಉಳಿವಿಗಾಗಿ ಈಗ ಈ ತರಬೇತಿ ನಡೆಸಲಾಗುತ್ತಿದೆ. ಕೊಪ್ಪಳದ ಕಲಾವಿದ ಗೋಪಾಲ್ ಮತ್ತು ಅವರ ಸಹಾಯಕ ತರಬೇತಿ ನೀಡುತ್ತಿದ್ದು, ಫೆ. 27ಕ್ಕೆ ಶಿಬಿರ ಅಂತ್ಯಗೊಳ್ಳಲಿದೆ. ಹೆಚ್ಚಿನ ಮಾಹಿತಿಗೆ ದೂ. 2448231 ಸಂಪರ್ಕಿಸಬಹುದು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

