ಮೈಸೂರು

ಮಹಿಳೆ ಕೊಲೆಗೆ ಯತ್ನ, ಆತ್ಮಹತ್ಯೆ

Published On :

ಮೈಸೂರು: ತನ್ನ ವಿರುದ್ಧ ದೂರು ನೀಡಿದ್ದ ಮಹಿಳೆಯ ಮೇಲೆ ವ್ಯಕ್ತಿಯೊಬ್ಬ ಮಚ್ಚಿನಿಂದ ಹಲ್ಲೆ ನಡೆಸಿ ಕೊಲೆ ಮಾಡಲು ಪ್ರಯತ್ನಿಸಿದ್ದಾನೆ. ಮಹಿಳೆ ತೀವ್ರವಾಗಿ ಗಾಯಗೊಂಡಿದ್ದರಿಂದ ಭಯಭೀತನಾದ ಆತ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಮೈಸೂರು ತಾಲೂಕು ವರುಣ ಹೋಬಳಿಯ ಮಾಧವಗೆರೆ ಗ್ರಾಮದಲ್ಲಿ ಶುಕ್ರವಾರ ಈ ಘಟನೆ ನಡೆದಿದೆ. ಮಾಧವಗೆರೆ ನಿವಾಸಿ ಲೇ. ನಂಜಪ್ಪ ಎಂಬವರ ಪುತ್ರ ಮಂಜುನಾಥ (35) ಆತ್ಮಹತ್ಯೆ ಮಾಡಿಕೊಂಡುವರು. ಈತ ಸಾಯುವ ಮುನ್ನ ಮಾಧವಗೆರೆಯ ಲೇ. ಸಿದ್ದಲಿಂಗಪ್ಪ ಎಂಬವರ ಪತ್ನಿ ಶಿವಮ್ಮನ(38) ಮೇಲೆ ಮಚ್ಚಿನಿಂದ ಹಲ್ಲೆ ನಡೆಸಿ ಕೊಲೆ ಮಾಡಲು ಪ್ರಯತ್ನಿಸಿದ್ದ.
ಪ್ರಕರಣದ ವಿವರ: ಶಿವಮ್ಮ ಮತ್ತು ಮಂಜುನಾಥ ಒಂದೇ ಊರಿನವರು. ಶಿವಮ್ಮನ ಪತಿ ಮೃತಪಟ್ಟಿದ್ದು, ಇವರಿಗೆ ಧನಂಜಯ ಎಂಬ ಮಗ ಇದ್ದಾನೆ. ಅವಿವಾಹಿತ ಮಂಜುನಾಥ ಆಗಾಗ ಶಿವಮ್ಮಳೊಂದಿಗೆ ಅನುಚಿತವಾಗಿ ವರ್ತಿಸುತ್ತಿದ್ದ. ಕೆಲವು ಸಲ ಆತನೊಂದಿಗೆ ಜಗಳ ಸಹ ಆಡಿದ್ದರು. ಮಂಜುನಾಥ ತನ್ನ ವರ್ತನೆಯನ್ನು ಮುಂದುವರೆಸಿದ ಹಿನ್ನೆಲೆಯಲ್ಲಿ ಇತ್ತೀಚೆಗೆ ಆತನ ವಿರುದ್ಧ ಶಿವಮ್ಮ ಪೊಲೀಸರಿಗೆ ದೂರು ನೀಡಿದ್ದರು.
   ಈ ವಿಚಾರ ಗೊತ್ತಾಗಿ ಮಂಜುನಾಥ ತಲೆ ಮರೆಸಿಕೊಂಡಿದ್ದ. ಶುಕ್ರವಾರ ಶಿವಮ್ಮ ಮನೆಯಲ್ಲಿದ್ದಾಗ ದೂರು ಕೊಟ್ಟ ವಿಚಾರದಲ್ಲಿ ಜಗಳ ತೆಗೆದು, ಮಚ್ಚಿನಿಂದ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾನೆ. ಶಿವಮ್ಮ ಅಸ್ವಸ್ಥಗೊಂಡಿದ್ದು, ಸ್ಥಳೀಯರು ಮೈಸೂರಿನ ಕೆ.ಆರ್.ಆಸ್ಪತ್ರೆಗೆ ಶಿವಮ್ಮ ಅವರನ್ನು ದಾಖಲಿಸಿದ್ದಾರೆ.
 ಇದರಿಂದ ಗಾಬರಿಗೊಂಡಿದ್ದ ಮಂಜುನಾಥ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾನೆ. ಕೆ.ಆರ್. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಶಿವಮ್ಮ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
 ಈ ಸಂಬಂಧ ಮೈಸೂರು ದಕ್ಷಿಣ ಠಾಣೆ ಎಸ್‌ಐ ಜಗದೀಶ್ ಮತ್ತು ಸಿಬ್ಬಂದಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.