ಜನಮನ ಸೆಳೆದ ಸುಗ್ಗಿ- ಹುಗ್ಗಿ
ನಂಜನಗೂಡು: ತಾಲೂಕಿನ ಹುಲ್ಲಳ್ಳಿ ಬಸ್ ನಿಲ್ದಾಣ ಎದುರಿನ ಪ್ರದೇಶ ಶನಿವಾರ ಗ್ರಾಮೀಣ ಸಂಸ್ಕೃತಿಯ ಕಣವಾಗಿ ಮಾರ್ಪಟ್ಟಿತ್ತು. ಬತ್ತದ ರಾಶಿ, ಹಸುಗಳನ್ನು ಕಿಚ್ಚು ಹಾಯಿಸುವುದು, ಕೃಷಿ ಸಲಕರಣೆಗಳು, ರಾಗಿ ಬೀಸುವ, ಬತ್ತ ಕುಟ್ಟುವ, ಸೋಬಾನೆ ಪದ ಹಾಡುವ ಹೆಂಗಳೆಯರು ಎಲ್ಲರೂ ಅಲ್ಲಿದ್ದರು. ಜೊತೆಗೆ ವೈವಿಧ್ಯಮಯ ಗ್ರಾಮೀಣ ಕಲೆಗಳ ಪ್ರದರ್ಶನ ಗ್ರಾಮೀಣ ಆಟಗಳು ಇದ್ದವು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಯೋಜಿಸಿದ್ದ ಸುಗ್ಗಿ-ಹುಗ್ಗಿ ಗ್ರಾಮೀಣ ಸಂಸ್ಕೃತಿ ಸಂಭ್ರಮ ಕಾರ್ಯಕ್ರಮದಿಂದಾಗಿ ಇಡಿ ಹುಲ್ಲಳ್ಳಿಯಲ್ಲಿ ಹಬ್ಬದ ವಾತಾವರಣ ಮನೆ ಮಾಡಿತ್ತು. ದಸರಾ ಮೆರವಣಿಗೆ ನೆನಪಿಸುವ ವೈವಿಧ್ಯಮಯ ಕಲಾತಂಡಗಳ ಮೆರವಣಿಗೆಯನ್ನು ದಾರಿಯುದ್ದಕ್ಕೂ ರಸ್ತೆಯ ಇಕ್ಕೆಲಗಳಲ್ಲಿ ಸೇರಿದ್ದವರು, ಮಹಡಿಯ ಮೇಲೆ ನಿಂತಿದ್ದವರು ಕಣ್ತುಂಬಿಕೊಂಡರು. ಜಿಪಂ ಸದಸ್ಯ ಸಿ. ಚಿಕ್ಕರಂಗನಾಯಕ ಮೆರವಣಿಗೆಗೆ ಚಾಲನೆ ನೀಡಿದರು. ಕಂಸಾಳೆ, ವೀರಗಾಸೆ, ವೀರಭದ್ರನ ಕುಣಿತದವರು, ಡೊಳ್ಳು, ಸೋಬಾನೆ ಕುಣಿತ, ವೀರಮಕ್ಕಳ ಕುಣಿತ, ದೊಣ್ಣೆ ವರಸೆ, ನಗಾರಿ ತಂಡ, ಕೋಲಾಟ, ಗೊರವರ ಕುಣಿತ, ಮರಗಾಲು ಕುಣಿತ ಹೀಗೆ ವಿವಿಧ ಕಲಾ ತಂಡಗಳು ನೋಡುಗರ ಕಣ್ಮನ ಸೆಳೆದವು. ಸಭಾ ಕಾರ್ಯಕ್ರಮದಲ್ಲಿ ಜಾನಪದ ವಿದ್ವಾಂಸ ಪ್ರೊ.ಪಿ.ಕೆ. ರಾಜಶೇಖರ್ ಮಾತನಾಡಿ, ಜಾನಪದ ಸಂಸ್ಕೃತಿ ತಾಯಿಯನ್ನು ಗೌರವಿಸುವ ಸಂಸ್ಕೃತಿ. ಭೂಮಿಯನ್ನು ತಾಯಿಗೆ ಸಮಾನವಾಗಿ ಕಾಣುವ ಜನಪದರು ತಮ್ಮ ದುಡಿಮೆಯ ಕ್ರಮವನ್ನು ಹಗುರ ಮಾಡಿಕೊಳ್ಳಲು ಪದ ಕಟ್ಟಿ ಹಾಡಿದ್ದಾರೆ ಎಂದರು.
ಕನ್ನಡ ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ನಿರ್ಮಲಾ ಮಠಪತಿ ಮಾತನಾಡಿ, ಇಲಾಖೆಯ ಸಚಿವರಾದ ಉಮಾಶ್ರೀ ಅವರ ಪರಿಕಲ್ಪನೆಯ ಸುಗ್ಗಿ-ಹುಗ್ಗಿ ಕಾರ್ಯಕ್ರಮ ಗ್ರಾಮೀಣ ಜನಪದ ಕಲೆಗಳನ್ನು ಇಂದಿನ ಪೀಳಿಗೆಗೆ ಪರಿಚಯಿಸುವ ಉದ್ದೇಶ ಹೊಂದಿದೆ ಎಂದರು.
ನೆಹರೂ ಯುವ ಕೇಂದ್ರದ ಸಮನ್ವಯಾಧಿಕಾರಿ ಎಂ.ಎನ್. ನಟರಾಜ್, ಹುಲ್ಲಳ್ಳಿ ಗ್ರಾಪಂ ಅಧ್ಯಕ್ಷ ವರದರಾಜ್, ಉಪಾಧ್ಯಕ್ಷೆ ಸರೋಜಮ್ಮ, ಗ್ರಾಪಂ ಸದಸ್ಯರು ಭಾಗವಹಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

