ಆತ್ಮಹತ್ಯೆ ಪ್ರಕರಣ; ಧರಣಿ
ಕ.ಪ್ರ.ವಾರ್ತೆ ಎಚ್.ಡಿ.ಕೋಟೆ ಜ. 5
ಹಿರಿಯ ಅಧಿಕಾರಿಗಳ ಕಿರುಕುಳ ತಾಳಲಾರದೆ ನಿರ್ವಾಹಕ ಜಿ.ಎಂ. ಮಂಜಪ್ಪ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಹಿನ್ನೆಲೆಯಲ್ಲಿ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಎಚ್.ಡಿ. ಕೋಟೆ ಘಟಕದ ನಿರ್ವಾಹಕರು- ಚಾಲಕರು ಅಹೋರಾತ್ರಿ ಧರಣಿ ನಡೆಸಿದರು.
ಮಂಜಪ್ಪ ಶವವನ್ನು ಪಟ್ಟಣಕ್ಕೆ ತರಬೇಕು. ಘಟನೆಗೆ ಕಾರಣವಾಗಿರುವ ತಪಾಸಣೆ ಅಧಿಕಾರಿ ಮಾಯೀಗೌಡ ಹಾಗು ಇತರ ಇಬ್ಬರನ್ನು ಅಮಾನತುಗೊಳಿಸಬೇಕು ಹಾಗೂ ಕಳೆದ 24 ಗಂಟೆಯಿಂದ ಬಸ್ಸುಗಳನ್ನು ಸ್ಥಗಿತಗೊಳಿಸಿ ಪ್ರತಿಭಟನೆಗಳಿದಿರುವ ತಮ್ಮ ಮೇಲೆ ಯಾವುದೇ ಕ್ರಮ ಕೈಗೊಳ್ಳಬಾರದು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು. ಭಾನುವಾರ ಬೆಳಗ್ಗೆ ಘಟಕಕ್ಕೆ ಬಂದಿದ್ದ ವಿಭಾಗೀಯ ತಾಂತ್ರಿಕ ಶಿಲ್ಪಿ ಜಗದೀಶ್, ವಿಭಾಗೀಯ ಭದ್ರತಾ ನಿರೀಕ್ಷಕ ರಮೇಶ್ ಬಾಬು, ಕಾರ್ಮಿಕ ಮುಖಂಡರು ಧರಣಿ ಕುಳಿತಿದ್ದ ಸಿಬ್ಬಂದಿ ಮನವಿ ಆಲಿಸಿ, ಈ ಘಟನೆಯನ್ನು ವಿಚಾರಣೆಗೆ ಒಳಪಡಿಸುವುದಾಗಿ ಭರವಸೆ ನೀಡಿದರು. ಆದರೂ ಪ್ರತಿಭಟನಾಕಾರರು ಬಗ್ಗಲಿಲ್ಲ.
ಡಿಸಿ ಶ್ರೀನಿವಾಸ್ ಮಾತುಕತೆ: ಸಂಜೆ ವೇಳೆಗೆ ಘಟಕಕ್ಕೆ ಆಗಮಿಸಿದ ಗ್ರಾಮೀಣ ಡಿಸಿ ಬಿ.ವಿ. ಶ್ರೀನಿವಾಸ್ ಕಾರ್ಮಿಕ ಮುಖಂಡರ ಜತೆಯಲ್ಲಿ ಮಾತುಕತೆ ನಡೆಸಿದರು. ಇದಕ್ಕೆ ಮುನ್ನ ಮೈಸೂರು ಎಐಟಿಸಿಯು ಗ್ರಾಮಾಂತರ ಅಧ್ಯಕ್ಷ ವೆಂಕಣ್ಣಗೌಡ, ಮೈಸೂರು ನಗರ ಅಧ್ಯಕ್ಷ ವಿಜಯ ಕುಮಾರ, ಕಾರ್ಯದರ್ಶಿ ಪೊನ್ನಪ್ಪ ಅಧಿಕಾರಿಗಳ ಜತೆ ಚರ್ಚಿಸಿ ತೆಗೆದುಕೊಂಡ ತೀರ್ಮಾನವನ್ನು ಪ್ರತಿಭಟನಾಕಾರರಿಗೆ ತಿಳಿಸಿದರು.
ಡಿಸಿ ಶ್ರೀನಿವಾಸ್ ಮಾತನಾಡಿ, ನಿಮ್ಮ ಬೇಡಿಕೆಗಳನ್ನು ನಾವು ಈಡೇರಿಸುತ್ತೇವೆ. ಘಟನೆಗೆ ಕಾರಣವಾಗಿರುವ ಮೂವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಮೃತ ಮಂಜಪ್ಪ ಕುಟುಂಬಕ್ಕೆ ಸದ್ಯಕ್ಕೆ ರು. 50 ಸಾವಿರ ಪರಿಹಾರ ನೀಡಲಾಗುವುದು. ಮೃತರ ಕುಟುಂಬ ವರ್ಗದವರೊಬ್ಬರಿಗೆ ಕೆಲಸ ನೀಡುವ ಭರವಸೆ ನೀಡಿದರು.
ಹುಣಸೂರಲ್ಲಿ ನೌಕರರ ಪ್ರತಿಭಟನೆ
ಹುಣಸೂರು: ಎಚ್.ಡಿ. ಕೋಟೆ ಬಸ್ ಡಿಪೋ ನಿರ್ವಾಹಕ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಳ್ಳಲು ತನಿಖಾಧಿಕಾರಿಗಳೆ ಕಾರಣರೆಂದು ಆರೋಪಿಸಿ ಹಾಗೂ ಮೃತನ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕೆಂದು ಒತ್ತಾಯಿಸಿ ಹುಣಸೂರು ಬಸ್ ಡಿಪೋದ ಚಾಲಕ-ನಿರ್ವಾಹಕರು ಬಸ್ ಸಂಚಾರ ಸ್ಥಗಿತಗೊಳಿಸಿ ಡಿಪೋ ಎದುರು ಭಾನುವಾರ ಪ್ರತಿಭಟಿಸಿದರು. ಡಿಪೋ ಮುಂದೆ ಜಮಾವಣೆಗೊಂಡ ನೂರಾರು ಸಿಬ್ಬಂದಿ ಡಿಪೋದಿಂದ ಬಸ್ಗಳನ್ನು ಹೊರಗೆ ತರಲಿಲ್ಲ. ರಾತ್ರಿ ತಂಗಿ ಬೆಳಗ್ಗೆ ನಿಲ್ದಾಣಕ್ಕೆ ಬಂದ ಬಸ್ಸುಗಳನ್ನು ಡಿಪೋಗೆ ವಾಪಸ್ ತಂದು ನಿಲ್ಲಿಸಿ ಪ್ರತಿಭಟಿಸಿದರು. ರಜೆ ಕೊಡಲು, ಮಾರ್ಗ ನೀಡಲು ಅಧಿಕಾರಿಗಳು ಕಿರುಕುಳ ನೀಡುತ್ತಾರೆ. ಮೃತ ವ್ಯಕ್ತಿ ಕುಟುಂಬಕ್ಕೆ ಪರಿಹಾರ ನೀಡಬೇಕು, ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಘೋಷಣೆ ಕೂಗಿದರು. ಸ್ಥಳಕ್ಕಾಗಮಿಸಿದ ಕಾರ್ಮಿಕ ಅಧಿಕಾರಿ ಸೋಮಶೇಖರ್ ಆಡಳಿತಾಧಿಕಾರಿ ಅಶೋಕ್ಕುಮಾರ್, ಕಾನೂನು ಸಲಹೆಗಾರ ವೀರಭದ್ರಯ್ಯ ನೌಕರರೊಂದಿಗೆ ಚರ್ಚಿಸಿ ಮೃತರ ಕುಟುಂಬಕ್ಕೆ ನ್ಯಾಯ ಒದಗಿಸುವ ಹಾಗೂ ಕಿರುಕುಳ ನೀಡುವವರ ವಿರುದ್ಧ ಕ್ರಮ ಕೈಗೊಳ್ಳುವ ಭರವಸೆ ಮೇರೆಗೆ ಪ್ರತಿಭಟನೆ ಹಿಂಪಡೆದರು.
ಹೋರಾಟದಲ್ಲೂ ರಾಜಕೀಯ...
ಇದಕ್ಕೂ ಮುನ್ನ ಘಟಕಕ್ಕೆ ಬರುತ್ತಿದ್ದ ಬೆಂಗಳೂರಿನ ಸಿಐಟಿಯು ಮುಖಂಡರು ಹಾಗೂ ಎಐಟಿಸಿಯು ಗುಂಪಿನವರ ನಡುವೆ ವಾಗ್ವಾದ ನಡೆಯಿತು. ಬೆಂಗಳೂರಿನ ಮಲ್ಲೇಶ್, ದೇವಪ್ಪ, ಮಂಜುನಾಥ್, ಆನಂದ್ ಘಟಕಕ್ಕೆ ಬರುತ್ತಿರುವ ವಿಷಯ ತಿಳಿಯುತ್ತಿದ್ದಂತೆ ಇತರರು ಪಟ್ಟಣದ ಹನುಮಂತ ನಗರ ಭಡಾವಣೆಯ ವಾಲ್ಮೀಕಿ ಪ್ರತಿಮೆ ಬಳಿ ತಡೆದರು. ಈ ವೇಳೆ ಇಬ್ಬರ ನಡುವೆ ಮಾತಿನ ಚಕಮಕಿ ನಡೆಯಿತು. ಇದೇ ವೇಳೆ ಬೆಂಗಳೂರಿಗೆ ಮೃತ ದೇಹ ತೆಗೆದುಕೊಂಡು ಹೋಗಲು ಬಂದಿದ್ದೇವೆ ಎಂದು ಸಮಜಾಯಿಷಿ ನೀಡಿದರು. ವೃತ್ತ ನಿರೀಕ್ಷಕ ಶಿವಸ್ವಾಮಿ ಮತ್ತು ಸಿಬ್ಬಂದಿ ಪೊಲೀಸ್ ಬಂದೋ-ಬಸ್ತ್ ಏರ್ಪಡಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

