ಮೈಸೂರು

ಕೃಷಿ ಇಲಾಖೆ ಅಕ್ರಮ ತನಿಖೆ

Published On :

ಕ.ಪ್ರ.ವಾರ್ತೆ  ಟಿ.ನರಸೀಪುರ  ಜ. 6
ಕೃಷಿ ಇಲಾಖೆಯಲ್ಲಿನ ಅಕ್ರಮ, ಅವ್ಯವಹಾರಗಳನ್ನು ತನಿಖೆ ಮಾಡಿ, ಸಹಾಯಕ ಕೃಷಿ ನಿರ್ದೇಶಕರ ವಿರುದ್ಧ ಕ್ರಮ ಜರುಗಿಸುವಂತೆ ಜಿಪಂ ಅಧ್ಯಕ್ಷ ಕೂರ್ಗಳ್ಳಿ ಎಂ. ಮಹದೇವ ಸೂಚನೆ ನೀಡಿದರು.
ತಾಪಂ ಸಭಾಂಗಣದಲ್ಲಿ ಸೋಮವಾರ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಪ್ರಗತಿ ಪರಿಶೀಲನಾ ಸಭೆಗೆ ಸ್ಪಷ್ಟವಾದ ಮಾಹಿತಿ ನೀಡಿಲ್ಲ, ಚುನಾಯಿತ ಪ್ರತಿನಿಧಿಗಳನ್ನು ನಿರ್ಲಕ್ಷಿಸಿ, ಫಲಾನುಭವಿಗಳ ಆಯ್ಕೆಯನ್ನು ಗಮನಕ್ಕೆ ತಾರದೆ ಸರ್ಕಾರದ ಸವಲತ್ತುಗಳನ್ನು ತಮಗಿಷ್ಟ ಬಂದಂತೆ ವಿತರಣೆ ಮಾಡಿರುವುದರಿಂದ ಕೃಷಿ ಇಲಾಖೆ ಅಕ್ರಮಗಳ ಬಗ್ಗೆ ತನಿಖೆ ನಡೆಸುವಂತೆ ತಾಪಂ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ತಾಕೀತು ಮಾಡಿದರು. ಸಭೆಯ ಆರಂಭದಲ್ಲಿಯೇ ಮೂಗೂರು ಜಿಪಂ ಕ್ಷೇತ್ರದ ಸದಸ್ಯೆ ಎಂ.ಸುಧಾ ಮಹದೇವಯ್ಯ ಅವರು ಸಹಾಯಕ ಕೃಷಿ ನಿರ್ದೇಶಕ ಕೃಷ್ಣಮೂರ್ತಿ ಅವರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು. ನಾವೆಲ್ಲ ಚುನಾಯಿತ ಪ್ರತಿನಿಧಿಗಳಾಗಿ ಮೂರು ವರ್ಷ ಕಳೆದಿದೆ. ಕೃಷಿ ಇಲಾಖೆಯಲ್ಲಿ ದೊರೆಯುವ ಸೌಲಭ್ಯಗಳ ಬಗ್ಗೆ ತಮಗೆ ಇದುವರೆಗೂ ಮಾಹಿತಿ ಇಲ್ಲ. ರೈತರಿಗೆ ಕೊಟ್ಟಿರುವ ಸೌಲಭ್ಯಗಳ ಮಾಹಿತಿ ಇಲ್ಲ. ಇನ್ನೆರಡು ವರ್ಷವಾದರೆ ಅಧಿಕಾರವಧಿ ಮುಗಿಯುತ್ತೆ, ಜನ ನಮ್ಮನ್ನು ಏನನ್ನಬೇಕು ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಜಡತ್ವ ಬಿಡಿ, ಕೆಲಸ ಮಾಡಿ: ಚುನಾಯಿತ ಪ್ರತಿನಿಧಿಗಳನ್ನು ನಿರ್ಲಕ್ಷ್ಯ ಭಾವನೆಯಿಂದ ನೋಡಬಾರದು ಎಂದು ಅಧಿಕಾರಿಗಳಿಗೆ ಎಚ್ಚರಿಸಿದ ಜಿಪಂ ಅಧ್ಯಕ್ಷರು, ಜಡತ್ವ ಬಿಟ್ಟು ಕೆಲಸ ಮಾಡಬೇಕು. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಆರೇಳು ತಿಂಗಳು ಕಳೆದಿದೆ. ತಾಲೂಕಿನವರೇ ಸಿಎಂ, ಲೋಕೋಪಯೋಗಿ ಸಚಿವರಾಗಿದ್ದಾರೆ. ಆಗಬೇಕಿರುವ ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ಮಾಹಿತಿ ನೀಡಿದರೆ, ಶೀಘ್ರದಲ್ಲಿ ಮಂಜೂರಾತಿ ಸಿಗಲಿದೆ. ಆದ್ದರಿಂದ ಅಧಿಕಾರಿಗಳೆಲ್ಲರೂ ಅಭಿವೃದ್ಧಿಗೆ ಒತ್ತು ನೀಡಬೇಕು ಎಂದು ಹೇಳಿದರು.
ತಾಲೂಕು ಆರೋಗ್ಯಾಧಿಕಾರಿ ಡಾ.ಬಿ.ಎಲ್. ಶ್ರೀನಿವಾಸ್ ಮಾತನಾಡಿ, ತಾಲೂಕಿನಲ್ಲಿ ಡೆಂಘೀ ಜ್ವರದ ಸಮೀಕ್ಷೆ ನಡೆಸಲಾಗುತ್ತಿದೆ. ಗ್ರಾಮೀಣ ಆರೋಗ್ಯ ಅಭಿಯಾನದ ಸೌಲಭ್ಯವನ್ನು ಅರ್ಹರಿಗೆ ತಲುಪಿಸಲಾಗುತ್ತಿದೆ ಎಂದು ತಿಳಿಸಿದರು. ಸಭೆಯಲ್ಲಿ ಜಿಪಂ ಉಪಾಧ್ಯಕ್ಷೆ ಎಸ್.ಭ್ರಮರಾಂಭ ಮಲ್ಲಿಕಾರ್ಜುನಸ್ವಾಮಿ, ಸದಸ್ಯೆ ರೇಣುಕಾ ನಾಗರಾಜು, ತಾಪಂ ಅಧ್ಯಕ್ಷ ನಟರಾಜು, ಕಾರ್ಯನಿರ್ವಾಹಕ ಅಧಿಕಾರಿ ಜೈಕೃಷ್ಣ, ಜಿಪಂ ತಾಂತ್ರಿಕ ಉಪ ವಿಭಾಗದ ಎಇಇ ಪಿ. ಲಕ್ಷ್ಮಣ್‌ರಾವ್, ಲೋಕೋಪಯೋಗಿ ಎಇಇ ನಟರಾಜು, ಸಿಡಿಪಿಒ ಬಸವರಾಜು ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.