ಆಟೋ ಪ್ರಯಾಣ ದರ ಕನಿಷ್ಠ 25
ಕ.ಪ್ರ.ವಾರ್ತೆ , ಮೈಸೂರು , ಜ. 7
ಆಟೋ ಚಾಲಕರ ಬೇಡಿಕೆಗೆ ಸ್ಪಂದಿಸಿರುವ ಜಿಲ್ಲಾಡಳಿತವು ಆಟೋ ಪ್ರಯಾಣ ದರ ಪರಿಷ್ಕರಿಸಿ, ಶೇ.25 ರಷ್ಟು ಆಟೋ ಪ್ರಯಾಣ ದರವನ್ನು ಹೆಚ್ಚಿಸುವ ನಿರ್ಧಾರ ಪ್ರಕಟಿಸಿದೆ.
ಮಂಗಳವಾರ ನಡೆದ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ತುರ್ತು ಸಭೆಯಲ್ಲಿ ಜಿಲ್ಲಾಧಿಕಾರಿ ಸಿ.ಶಿಖಾ ಅವರು ಪರಿಷ್ಕೃತ ದರ ಪ್ರಕಟಿಸಿದರು.
ಮೊದಲ 1.9 ಕಿ.ಮೀ. ವರೆಗೆ ಆಟೋ ಪ್ರಯಾಣ ಕನಿಷ್ಠ ದರ 20 ರಿಂದ 25, ನಂತರದ ಪ್ರತಿ ಕಿ.ಮೀ.ಗೆ 11 ರಿಂದ 13 ನಿಗದಿಪಡಿಸಲಾಗಿದೆ.
ಆಟೋ ಕಾಯುವ ದರ ಮೊದಲ 5 ನಿಮಿಷ ಉಚಿತ, ನಂತರ ಪ್ರತಿ 15 ನಿಮಿಷಕ್ಕೆ 1 ರಿಂದ 5 ಹೆಚ್ಚಿಸಲಾಗಿದೆ. 20 ಕೆ.ಜಿ. ಲಗೇಜಿಗೆ ಉಚಿತ, 20 ಕೆ.ಜಿ.ಗಿಂತ ಹೆಚ್ಚಿನ ಲಗೇಜಿಗೆ 2 ನಿಗದಿಪಡಿಸಲಾಗಿದೆ. ರಾತ್ರಿ 10 ರಿಂದ ಬೆಳಗಿನ ಜಾವ 5 ರವರೆಗೆ ಸಾಮಾನ್ಯ ದರದ ಜೊತೆಗೆ ಅರ್ಧಪಟ್ಟು ಹೆಚ್ಚು ನಿಗದಿಪಡಿಸಲಾಗಿದೆ. ಹೊಸ ದರವು ಮಂಗಳವಾರ ಮಧ್ಯರಾತ್ರಿಯಿಂದಲೇ ಜಾರಿಯಾಗಲಿದೆ ಎಂದು ಜಿಲ್ಲಾಧಿಕಾರಿ ಸಿ.ಶಿಖಾ ಹೇಳಿದರು.
ಆಟೋ ಚಾಲಕರು ಮತ್ತು ಮುಖಂಡರೊಂದಿಗೆ ಚರ್ಚೆಯ ಬಳಿಕ ಅವರು ಪರಿಷ್ಕೃತ ದರ ಪ್ರಕಟಿಸಿದರು. ಅಲ್ಲದೆ, ಇಂಧನ (ಗ್ಯಾಸ್ ಸೇರಿ) ಬೆಲೆ ಶೇ.15, ಇತರೆ ವೆಚ್ಚ ಶೇ.10 ಸೇರಿದಂತೆ ಶೇ.25 ಪ್ರಯಾಣ ದರ ಹೆಚ್ಚಿಸಲಾಗಿದೆ. ಸಾರ್ವಜನಿಕರು ಹಾಗೂ ಆಟೋ ಪ್ರಯಾಣಿಕರ ಹಿತಕಾಪಾಡುವ ದೃಷ್ಟಿಯಿಂದ ದರ ಪರಿಷ್ಕರಿಸಲಾಗಿದೆ ಎಂದು ಅವರು ಸ್ಪಷ್ಟಪಡಿಸಿದರು.
ಆದರೆ, ಪರಿಷ್ಕೃತ ದರಕ್ಕೆ ಆಟೋ ಚಾಲಕರು ಒಪ್ಪಿಗೆ ಸೂಚಿಸಿಲ್ಲ. ಬದಲಿಗೆ ಕನಿಷ್ಠ ದರ 30, ನಂತರದ ಪ್ರತಿ ಕಿ.ಮೀ.ಗೆ 15 ನಿಗದಿಪಡಿಸುವಂತೆ ಪಟ್ಟು ಹಿಡಿದರು. ಆದರೆ, ಜಿಲ್ಲಾಧಿಕಾರಿಯವರು ಒಪ್ಪಲಿಲ್ಲ. ಹೀಗಾಗಿ ಆಟೋ ಚಾಲಕರು ಸಭೆಯಿಂದ ಹೊರನಡೆದರು.
ನಮ್ಮ ಬೇಡಿಕೆಯಂತೆ ಕನಿಷ್ಠ ದರ 30, ನಂತರ ಪ್ರತಿ ಕಿ.ಮೀ.ಗೆ 15 ಹೆಚ್ಚಿಸಬೇಕು. ಇಲ್ಲದಿದ್ದರೆ ಹೋರಾಟ ಹಮ್ಮಿಕೊಳ್ಳುವುದಾಗಿ ಆಟೋ ಚಾಲಕರು ಇದೇ ವೇಳೆ ಎಚ್ಚರಿಸಿದರು.
ಆಟೋ ಚಾಲಕರೊಂದಿಗೆ ಮಾತುಕತೆ: ಪರಿಷ್ಕೃತ ದರವು ಮಧ್ಯರಾತ್ರಿಯಿಂದಲೇ ಜಾರಿಯಾಗಲಿದೆ. ಮತ್ತೆ ಇಂಧನ ಬೆಲೆ ಹೆಚ್ಚಾದರೆ ಏನು ಮಾಡುವುದೆಂಬ ಕಾರಣಕ್ಕೆ ಆಟೋ ಚಾಲಕರು ಹೊಸ ದರಕ್ಕೆ ಒಪ್ಪಿಲ್ಲ. ಸಾರ್ವಜನಿಕರು ಮತ್ತು ಆಟೋ ಚಾಲಕರ ಹಿತ ಕಾಪಾಡುವ ನಿಟ್ಟಿನಲ್ಲಿ ದರ ಪರಿಷ್ಕರಿಸಲಾಗಿದೆ. ಒಂದು ವೇಳೆ ಇಂಧನ ಬೆಲೆ ಹೆಚ್ಚಾದರೇ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ತುರ್ತು ಸಭೆ ಕರೆದು ಮುಂದಿನ ಕ್ರಮ ಕೈಗೊಳ್ಳಲಾಗುವುದು. ಆಟೋ ಚಾಲಕರು ಪರಿಷ್ಕೃತ ದರಕ್ಕೆ ಒಪ್ಪದೆ ಪ್ರತಿಭಟನೆಗೆ ಇಳಿದರೆ ಅವರೊಂದಿಗೆ ಮಾತುಕತೆ ನಡೆಸುವುದಾಗಿ ಜಿಲ್ಲಾಧಿಕಾರಿ ಸಿ. ಶಿಖಾ ಸುದ್ದಿಗಾರರಿಗೆ ತಿಳಿಸಿದರು.
ಎಸ್ಪಿ ಅಭಿನವ್ ಅಶೋಕ್ ಖರೆ, ಡಿಸಿಪಿ ಎಂ.ಎಂ. ಮಹದೇವಯ್ಯ, ಆರ್ಟಿಒಗಳಾದ ರಮೇಶ್ ದುಬೆ, ಸಿದ್ದಶೆಟ್ಟಿ, ಎಸಿಐಸಿಎಂ ಸಂಚಾಲಕ ಎಂ. ಲಕ್ಷ್ಮಣ, ವಿವಿಧ ಆಟೋ ಚಾಲಕರ ಸಂಘದ ಮುಖಂಡರಾದ ಪ್ರೇಂಮೋಹನ್ ಜೆಟ್ಟಿ, ಬಿ.ಟಿ. ರಾಜು, ಎಡ್ವಿನ್ ವಿಲ್ಸನ್, ಶ್ರೀನಿವಾಸ ಮಿತ್ರ, ಸಿದ್ದರಾಜು, ಲಕ್ಷ್ಮಣ್ ಇದ್ದರು.
ಸಭೆಯಲ್ಲಿ ಆಟೋ ಚಾಲಕರ ಭಿನ್ನಾಭಿಪ್ರಾಯ ಸ್ಫೋಟ
ಮೈಸೂರು: ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ನಡೆದ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ (ಆರ್ಟಿಎ) ತುರ್ತು ಸಭೆಯಲ್ಲಿ ಆಟೋ ಚಾಲಕರ ನಡುವಿನ ಭಿನ್ನಾಭಿಪ್ರಾಯ ಸ್ಫೋಟಗೊಂಡಿತು.
ಆಟೋ ಚಾಲಕರ ಮುಖಂಡರೆನಿಸಿಕೊಂಡಿರುವ ಕೆಲವರು ಅಧಿಕಾರಿಗಳ ಎದುರಲ್ಲೇ ವಾಗ್ವಾದಕ್ಕೆ ಇಳಿದರು. ಈ ವೇಳೆ ಪೊಲೀಸರು ಮಧ್ಯಪ್ರವೇಶಿಸಿ ಅವರನ್ನು ಸಮಾಧಾನಪಡಿಸಿದರು. ಕೆಲವು ಮುಖಂಡರು ಸಭೆಗೆ ಬಂದಿದ್ದ ಆಟೋ ಚಾಲಕರಿಗೆ ಮಾತನಾಡಲು ಸಹ ಅವಕಾಶ ನೀಡದೆ ಅಡ್ಡಿಪಡಿಸುತ್ತಿದ್ದರು. ಇದರಿಂದ ಆಕ್ರೋಶಗೊಂಡ ಆಟೋ ಚಾಲಕರು ಮುಖಂಡರು ಮತ್ತು ಅಧಿಕಾರಿಗಳ ವಿರುದ್ಧ ಹರಿಹಾಯ್ದರು. ಚಾಲಕರಲ್ಲದವರು ಆಟೋ ಚಾಲಕರ ಸಮಸ್ಯೆ ಬಗ್ಗೆ ಮಾತನಾಡುತ್ತಿದ್ದಾರೆ. ನಿಜವಾದ ಆಟೋ ಚಾಲಕರಿಗೆ ಮಾತನಾಡಲು ಅವಕಾಶ ನೀಡುತ್ತಿಲ್ಲ ಎಂದು ಕಿಡಿಕಾರಿದರು. ಇದರ ಪರಿಣಾಮವಾಗಿ ಉಳಿದ ಆಟೋ ಚಾಲಕರಿಗೂ ಮಾತನಾಡುವ ಅವಕಾಶ ಸಿಕ್ಕಿತು.
ಪರಿಷ್ಕೃತ ದರವನ್ನು ಜಿಲ್ಲಾಧಿಕಾರಿ ಸಿ. ಶಿಖಾ ಅವರು ಪ್ರಕಟಿಸಿದ ಬಳಿಕ ಕೆಲವರು ಮಾತ್ರ ಸಭೆ ಬಹಿಷ್ಕರಿಸಲು ಮುಂದಾದರು. ನಂತರ ಕೆಲಹೊತ್ತು ಚರ್ಚೆಯ ಬಳಿಕ ಎಲ್ಲ ಆಟೋ ಚಾಲಕರು ಸಭೆಯಿಂದ ಹೊರ ನಡೆದರು.
ಪರಿಷ್ಕೃತ ದರ ಹೀಗಿದೆ...
ಕನಿಷ್ಠ ದರ ಮೊದಲ 1.9 ಕಿ.ಮೀ.ಗೆ ರು.25
ನಂತರ ಪ್ರತಿ ಕಿ.ಮೀ.ಗೆ ರು.13
ಕಾಯುವಿಕೆ ದರ- ಮೊದಲ 5 ನಿಮಿಷ ಉಚಿತ, ನಂತರ ಪ್ರತಿ 15 ನಿಮಿಷಕ್ಕೆ ರು.5
ಲಗೇಜು ದರ 20 ಕೆ.ಜಿ. ವರೆಗೆ ಉಚಿತ, 20 ಕೆ.ಜಿ.ಗಿಂತ ಹೆಚ್ಚಿನ ಲಗೇಜ್ಗೆ ರು.2
ರಾತ್ರಿ 10 ರಿಂದ ಬೆಳಗ್ಗೆ 5 ರವರೆಗೆ ಸಾಮಾನ್ಯ ದರದ ಜೊತೆಗೆ ಅರ್ಧಪಟ್ಟು ಹೆಚ್ಚು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

