ಮೈಸೂರು

ಕರ ಕಟ್ಟದಿದ್ದರೆ ಸವಲತ್ತು ಕಟ್

Published On :

ಮೈಸೂರು: ಮೈಸೂರು ನಗರದ ಸರ್ವತೋಮುಖ ಅಭಿವೃದ್ಧಿ ಹಾಗೂ ಸಾರ್ವಜನಿಕರಿಗೆ ಹೆಚ್ಚಿನ ಅನುಕೂಲ ಕಲ್ಪಿಸುವ ದಿಸೆಯಲ್ಲಿ ಪಾಲಿಕೆಯ ವಲಯ 7ರ ವ್ಯಾಪ್ತಿಯಲ್ಲಿ ಮನೆ ಕಂದಾಯ ವಸೂಲಿ ಅಭಿಯಾನಕ್ಕೆ ಉತ್ತಮ ಪ್ರತಿಕ್ರಿಯೆ ಕಂಡುಬಂದಿದೆ.
ವಲಯದ ಸಹಾಯಕ ಕಂದಾಯಾಧಿಕಾರಿ ಹಾಗೂ ಸಹಾಯಕ ಆಯುಕ್ತರ ನೇತೃತ್ವದಲ್ಲಿ ಸಿಬ್ಬಂದಿ ವರ್ಗ ಈ ಭಾಗದ ಬಡಾವಣೆಗಳಿಗೆ ಪ್ರತಿ ಬುಧವಾರ ಮತ್ತು ಗುರುವಾರ ತೆರಳಿ ಈ ಅಭಿಯಾನ ನಡೆಸುತ್ತಿದ್ದು, ಕರ ವಸೂಲಿ ಜತೆಗೆ, ಕರಪಾವತಿ ಹೊಣೆಗಾರಿಕೆ ನೋಂದಣಿ, ಖಾತಾ ವರ್ಗಾವಣೆ, ನೀರಿನ ತೆರಿಗೆ ಪಾವತಿ, ಹಿಂದಿನ ತೆರಿಗೆ ಬಾಕಿ ವಸೂಲಿ, ಉದ್ದಿಮೆ ರಹದಾರಿ ನವೀಕರಣ ಹಾಗೂ ನೋಂದಣಿ ಕಂದಾಯ ವಸೂಲಿಯನ್ನು ಸಹ ನಡೆಸಲಾಗುತ್ತಿದೆ.
ಈ ವಲಯ ಕಚೇರಿಯ ನಾಗರಿಕ ಸೇವಾ ಕೇಂದ್ರದ ವ್ಯಾಪ್ತಿಗೆ ವಾರ್ಡ್ ಸಂಖ್ಯೆ 39, 40, 41, 42, 43, 44, 45 ಹಾಗೂ 64 ಸೇರಿದ್ದು, ಮನೆಗಳಲ್ಲದೆ ವಿವಿಧ ವಾಣಿಜ್ಯ ಮತ್ತು ಸರ್ಕಾರಿ ಇಲಾಖೆಗಳ ಕಟ್ಟಡಗಳು ಇದರ ವ್ಯಾಪ್ತಿಗೆ ಸೇರಿವೆ. ಇಲ್ಲಿನ ಬಿಎಸ್‌ಎನ್‌ಎಲ್ ಕಚೇರಿಯು ಕಳೆದ 3 ವರ್ಷಗಳಿಂದ ಕಂದಾಯ ಕಟ್ಟಿರಲಿಲ್ಲ. ಈ ಅಭಿಯಾನದ ಹಿನ್ನೆಲೆಯಲ್ಲಿ ಬಾಕಿ ಉಳಿಸಿಕೊಂಡಿದ್ದ 20,93 ಲಕ್ಷ ಅನ್ನು ವಾರದೊಳಗೆ ಪಾವತಿಸಲು ಮುಂದಾಗಿದೆ.
2 ಕೋಟಿಗೂ ಅಧಿಕ ಕರ ಸಂಗ್ರಹ: ಕಳೆದ ಏಪ್ರಿಲ್‌ನಿಂದ 4.73 ಲಕ್ಷ ಕಂದಾಯ ವಸೂಲಿ ಮಾಡಿದ್ದು, ಕಳೆದ ನಾಲ್ಕು ತಿಂಗಳಲ್ಲಿ 2 ಕೋಟಿಗೂ ಅಧಿಕ ಕರ ಸಂಗ್ರಹಿಸಿದೆ. ಡಿಸೆಂಬರ್‌ನಲ್ಲಿ 72 ಲಕ್ಷ ವಸೂಲಿ ಮಾಡಲಾಗಿದೆ. ಬಾಕಿ 5 ಸಾವಿರಕ್ಕೂ ಹೆಚ್ಚಿನ ಪ್ರಕರಣಗಳಿಂದ ಕಂದಾಯ ವಸೂಲಿಯಾಗಬೇಕು. ಬಿ.ಬಿ. ಕೇರಿ, ಪುಲಿಕೇಶಿ ರಸ್ತೆ ಹಾಗೂ ಕೈಲಾಸಪುರಂ ಈ ಭಾಗಗಳಲ್ಲಿ 1 ಕೋಟಿಗೂ ಅಧಿಕ ಕಂದಾಯ ಬಾಕಿ ಬರಬೇಕಿದೆ ಎನ್ನುತ್ತಾರೆ ಸಹಾಯಕ ಕಂದಾಯಾಧಿಕಾರಿ ಟಿ. ರಾಜು.
ಬಾಕಿ ಕಂದಾಯವನ್ನು ಜನವರಿ ಒಳಗೆ ಪಾವತಿಸದಿದ್ದರೆ, ಯಾವುದೇ ಮುನ್ಸೂಚನೆ ಇಲ್ಲದೆ ನೀರು ಹಾಗೂ ಒಳಚರಂಡಿ ವ್ಯವಸ್ಥೆ ಕಡಿತಗೊಳಿಸಲಾಗುವುದು. ಈ ಬಗ್ಗೆ ಈಗಾಗಲೇ ಪ್ರಚಾರ ನಡೆಸಿ ನಿವಾಸಿಗಳಿಗೆ ಮಾಹಿತಿ ನೀಡಲಾಗಿದೆ. ಇದರ ಜತೆಗೆ ನಿಗದಿತ ಅವಧಿಯೊಳಗೆ ಕಂದಾಯ ಪಾವತಿಸದಿದ್ದರೆ ಶೇ.2 ದಂಡ ವಿಧಿಸಲಾಗುವುದು. ಅದು ಮುಂದಿನ ವರ್ಷಕ್ಕೆ ಎರಡು ಪಟ್ಟಾಗಲಿದೆ. ಇದನ್ನು ತಪ್ಪಿಸಿಕೊಳ್ಳಲು ತಪ್ಪದೆ ಕಂದಾಯ ಪಾವತಿಸುವಲ್ಲಿ ನಾಗರಿಕರು ಮುಂದಾಗಬೇಕು. ನಗರದ ಅಭಿವೃದ್ಧಿಗೆ ನೆರವಾಗಲು ಕಂದಾಯ ಕಟ್ಟುವ ಮೂಲಕ ಪಾಲಿಕೆಯೊಂದಿಗೆ ಸಹಕರಿಸುವಂತೆ ಅವರು ಮನವಿ ಮಾಡಿದ್ದಾರೆ.


-ಮಾ. ವೆಂಕಟೇಶ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.