ಮೈಸೂರು

ಹುದ್ದೆ ಪಡೆಯಲು ಅಂಕ ಪೂರಕ

Published On :

ಕ.ಪ್ರ.ವಾರ್ತೆ , ಮೈಸೂರು , ಜ. 10
ಯಾವುದೇ ಹುದ್ದೆ ಗಳಿಕೆಗೆ ಅಂಕ ಪೂರಕ ಎಂದು ಕೃಷ್ಣರಾಜ ಶಾಸಕ ಎಂ.ಕೆ. ಸೋಮಶೇಖರ್ ಹೇಳಿದರು.
ಜಿಲ್ಲಾ ಪಂಚಾಯತ್ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ಸಂಯುಕ್ತಾಶ್ರಯದಲ್ಲಿ ಶಾರದಾ ವಿಲಾಸ ಶತಮಾನೋತ್ಸವ ಭವನದಲ್ಲಿ ಆಯೋಜಿಸಿರುವ ಎರಡು ದಿನಗಳ ಜಿಲ್ಲಾಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮದಲ್ಲಿ ಶುಕ್ರವಾರ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಲಂಚ ಕೊಟ್ಟರೆ ಹಾಗೂ ಪ್ರಭಾವಿ ವ್ಯಕ್ತಿಗಳಿಂದ ಒತ್ತಾಸೆ ತಂದರೆ ಸರ್ಕಾರಿ ಕೆಲಸಗಳು ಲಭಿಸಲಿವೆ ಎಂಬ ಮಾತು ಸರಿಯಲ್ಲ. ಇಂದು ಉದ್ಯೋಗ ನೇಮಕಾತಿ ಪಾರದರ್ಶಕತೆಯಿಂದ ನಡೆಯಲಿದೆ. ಯಾರು ಹೆಚ್ಚು ಅಂಕ ಗಳಿಸುತ್ತಾರೋ ಅವರಿಗೆ ಹುದ್ದೆಗಳು ಸುಲಭವಾಗಿ ದೊರಕಲಿವೆ. ಆದ್ದರಿಂದ ಹೆಚ್ಚು ಅಂಕ ಗಳಿಸುವಲ್ಲಿ ವಿದ್ಯಾರ್ಥಿಗಳು ಶ್ರಮ ವಹಿಸಬೇಕು ಎಂದರು.
ಯಾವ ವಿದ್ಯಾರ್ಥಿಗಳು ಯಾವ ವಿಷಯದಲ್ಲಿ ಹಿಂದುಳಿದಿದ್ದಾರೆ ಎಂಬುದನ್ನು ಮನಗಂಡು ಅವರಿಗೆ ತರಗತಿಯ ಪಾಠದ ಜತೆಗೆ ವಿಶೇಷ ತರಗತಿ ತೆಗೆದುಕೊಂಡು ಬೋಧನೆ ನಡೆಸಿ, ಹೆಚ್ಚು ಅಂಕ ಗಳಿಸುವಂತೆ ಮಾಡುವಲ್ಲಿ ಶಿಕ್ಷಕರು ಹೆಚ್ಚಿನ ಪರಿಶ್ರಮಕ್ಕೆ ಮುಂದಾಗಬೇಕು ಎಂದರು.
ಸರ್ಕಾರಿ ಶಾಲೆ ಆಧಾರ: ಇಂದು ಗ್ರಾಮೀಣ ಭಾಗದಲ್ಲಿಯೂ ಸಹ ಖಾಸಗಿ ಶಾಲೆಗೆ ಮಕ್ಕಳನ್ನು ಸೇರಿಸುವ ಪ್ರವೃತ್ತಿ ಹೆಚ್ಚಾಗಿದೆ. ಆರ್ಥಿಕವಾಗಿ ಹಿಂದುಳಿದವರಿಗೆ ಸರ್ಕಾರಿ ಶಾಲೆಯೇ ಆಧಾರ. ಯಾರು ಬಡತನದಿಂದ ಹಾಗೂ ಸರ್ಕಾರಿ ಶಾಲೆಯಲ್ಲಿ ಕಲಿತ್ತಿದ್ದಾರೋ ಅಂಥವರು ಸಮಾಜದ ಪ್ರತಿಷ್ಠಿತ ವ್ಯಕ್ತಿಗಳಾಗಿರುವುದನ್ನು ಕಾಣಬಹುದು ಎಂದು ಅವರು ತಿಳಿಸಿದರು.
ಶಿಕ್ಷಕರು ಸರಿಯಾದ ವಿಚಾರಧಾರೆಗಳನ್ನು ತಿಳಿಸಿದರೆ ಮಕ್ಕಳ ಬದುಕು ಬದಲಾಗಲಿದೆ. ಈ ದಿಸೆಯಲ್ಲಿ ಇಂದು ಶಿಕ್ಷಕರಿಗೆ ಸವಾಲು ಎದುರಾಗಿದೆ. ಮಕ್ಕಳ ಭವಿಷ್ಯ ರೂಪಿಸುವಲ್ಲಿ ತಂದೆ, ತಾಯಿ ಮತ್ತು ಗುರುಗಳ ಪಾತ್ರ ಮಹತ್ವವಾದುದು. ಇತ್ತೀಚಿಗೆ ಅನೇಕ ಸರ್ಕಾರಿ ಶಾಲಾ ಕಾಲೇಜುಗಳು ಉತ್ತಮ ಸವಲತ್ತು ಹೊಂದಿರುವುದರ ಜತೆಗೆ ಅತ್ಯುತ್ತಮ ಫಲಿತಾಂಶ ತಂದಿವೆ ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ಜಿಪಂ ಅಧ್ಯಕ್ಷ ಎಂ.ಮಹದೇವು, ಜಿಲ್ಲಾ ಮಟ್ಟದ ಈ ಪ್ರತಿಭಾ ಕಾರಂಜಿಯಲ್ಲಿ ಸ್ಪರ್ಧಿಸಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗುವ ವಿದ್ಯಾರ್ಥಿಗಳಿಗೆ ಜಿ.ಪಂ. ವತಿಯಿಂದ ಗೌರವಿಸಲಾಗುವುದು ಎಂದರು.   
ಜಿ.ಪಂ. ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷೆ ಕೆ. ಲಲಿತಾ ದೇವೇಗೌಡ, ಸದಸ್ಯ ಪಟೇಲ್ ಜವರೇಗೌಡ, ತಾ.ಪಂ. ಅಧ್ಯಕ್ಷೆ ನಿರ್ಮಲಾ ಹೊನ್ನಪ್ಪ ಮುಖ್ಯ ಅತಿಥಿಗಳಾಗಿದ್ದರು.
ಸಿಟಿಇ ಸಹ ನಿರ್ದೇಶಕಿ ಎನ್. ಜ್ಹೋಹರ ಜಬೀನ್, ಡಯಟ್ ಉಪನಿರ್ದೇಶಕ ಬಿ.ಕೆ. ಬಸವರಾಜು, ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಎಚ್.ಬಿ. ಬಸವರಾಜು, ಪ್ರೌಢಶಾಲಾ ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷ ಬೋರೇಗೌಡ, ಸಹ ಶಿಕ್ಷಕರ ಸಂಘದ ಅಧ್ಯಕ್ಷ ಅರುಣ್‌ಕುಮಾರ್ ಇದ್ದರು. ಡಿಡಿಪಿಐ ಎಚ್.ಆರ್. ಬಸಪ್ಪ ಸ್ವಾಗತಿಸಿದರು. ಸಿಆರ್‌ಪಿ ಜಯಂತಿ ನಿರೂಪಿಸಿದರು. ಬಿಇಒ ಡಾ. ಆರ್. ಕಾಂತಾ ವಂದಿಸಿದರು.   
ನಂತರ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿಭಾಗದಲ್ಲಿನ ವಿದ್ಯಾರ್ಥಿಗಳಿಗೆ ಪ್ರತ್ಯೇಕವಾಗಿ ನಾಟಕ, ಏಕಪಾತ್ರಾಭಿನಯ, ಸಮೂಹ ನೃತ್ಯ, ಸಮೂಹ ಗಾಯನ, ಜನಪದ ಗೀತೆ. ಭಕ್ತಿಗೀತೆ, ಭಾವಗೀತೆ, ರಸಪ್ರಶ್ನೆ ಮುಂತಾದ ಸ್ಪರ್ಧೆ ನಡೆಯಿತು. ಮೈಸೂರು ನಗರದ ಉತ್ತರ ಮತ್ತು ದಕ್ಷಿಣ ವಲಯ ಹಾಗೂ 7 ತಾಲೂಕುಗಳು ಸೇರಿದಂತೆ 9 ವಲಯಗಳಿಂದ ಸುಮಾರು 2 ಸಾವಿರ ವಿದ್ಯಾರ್ಥಿಗಳು ಭಾಗವಹಿಸಿದ್ದಾರೆ.
ಸರ್ಕಾರಿ ಶಾಲೆಗಳಲ್ಲಿ ಸ್ವಚ್ಛತೆ ಹಾಗೂ ಗುಣಮಟ್ಟದ ಶಿಕ್ಷಣಕ್ಕೆ ಕೊರತೆ ಇರುವುದರಿಂದ ಪೋಷಕರು ಖಾಸಗಿ ಶಾಲೆಗಲ್ಲಿ ಆಕರ್ಷಿತರಾಗಿದ್ದಾರೆ. ಆದ್ದರಿಂದ ಎಲ್ಲಾ ರೀತಿಯಲ್ಲೂ ಸರ್ಕಾರಿ ಶಾಲೆಗಳು ಸುಧಾರಣೆಯಾಗಬೇಕು.  
 ಕೆ. ಲಲಿತಾ ದೇವೇಗೌಡ, ಅಧ್ಯಕ್ಷೆ, ಜಿ.ಪಂ. ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.