ಮೈಸೂರು

ರೈತರಿಗೆ ಸಲಹೆ

Published On :

ಮೈಸೂರು: ಜಿಲ್ಲೆಯಲ್ಲಿ ಜ.11 ರಿಂದ 14 ರವರೆಗೆ ಮಳೆ ಬರುವ ಸಾಧ್ಯತೆ ಇಲ್ಲದಿರುವುದರಿಂದ ರೈತರು ಬತ್ತವನ್ನು ಕಟಾವು ಮಾಡಬಹುದು ಎಂದು ನಾಗನಹಳ್ಳಿ ಸಾವಯವ ಕೃಷಿ ಸಂಶೋಧನಾ ಕೇಂದ್ರದ ಕ್ಷೇತ್ರಾಧೀಕ್ಷಕ ಡಾ.ಸಿ.ಯ ಗೋವಿಂದರಾಜು, ಸಹ ಸಂಶೋಧಕ ಎನ್. ನರೇಂದ್ರಸ್ವಾಮಿ ಹೇಳಿದ್ದಾರೆ. ಮಾವಿನಲ್ಲಿ ಹೂವು ಬಿಡುವ ಸಂದರ್ಭದಲ್ಲಿ ಕಂಡುಬರುವ ಜಿಗಿಹುಳು ಮತ್ತು ಬೂದಿ ರೋಗ ನಿಯಂತ್ರಣಕ್ಕೆ 1.5 ಮಿ. ಲೀ ರೋಗರ್ ಜತೆಗೆ 3 ಗ್ರಾಂ ನೀರಿನಲ್ಲಿ ಕರಗುವ ಗಂಧಕವನ್ನು ಪ್ರತಿ ಲೀಟರ್ ನೀರಿನಲ್ಲಿ ಮಿಶ್ರಣ ಮಾಡಿ ಸಂಪಡಿಸಿ. ದೂ.0821 2591267 ಅಥವಾ 8095227713 ಸಂಪರ್ಕಿಸಿ.
ಇಂದು ಮೈಗ್ರಾಪ ಸಭೆ
ಮೈಸೂರು: ಮೈಸೂರು ಗ್ರಾಹಕರ ಪರಿಷತ್ತಿನ ಜನವರಿ ಮಾಸಿಕ ಸಭೆಯು ಜ.12ರ ಸಂಜೆ 4ಕ್ಕೆ ಯಾದವಗಿರಿಯಲ್ಲಿರುವ ಪರಿಷತ್ತಿನ ಕಚೇರಿಯಲ್ಲಿ ನಡೆಯಲಿದ್ದು, ಸಂಚಾರ ಸಮಸ್ಯೆಗಳ ಬಗ್ಗೆ ಚರ್ಚಿಸಲಾಗುವುದು. ನಗರ ಪೊಲೀಸ್ ಆಯುಕ್ತ ಡಾ.ಎಂ.ಎ. ಸಲೀಂ, ವಿಭಾಗೀಯ ಸಾರಿಗೆ ನಿಯಂತ್ರಕ ಮಕ್ಸೂದ್ ಅಹ್ಮದ್, ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿ ರಾಮಕೃಷ್ಣ ಅಯ್ಯಂಗಾರ್, ನಗರ ಯೋಜನೆ ಸಹಾಯಕ ನಿರ್ದೇಶಕಿ ಆಶಾ ಭರತ್ ಭಾಗವಹಿಸುವರು.
18 ರಂದು ಪ್ರಗತಿ ಪರಿಶೀಲನಾ ಸಭೆ
ಜಿಲ್ಲೆಯ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ (20 ಅಂಶಗಳ ಕಾರ್ಯಕ್ರಮಗಳು ಸೇರಿದಂತೆ) 2013ನೇ ಡಿಸೆಂಬರ್ ತಿಂಗಳ ಅಂತ್ಯಕ್ಕೆ ಸಾಧಿಸಿದ ಪ್ರಗತಿ ಪರಿಶೀಲನಾ ಸಭೆಯು ಜಿಪಂ ಅಧ್ಯಕ್ಷರ ಅಧ್ಯಕ್ಷತೆಯಲ್ಲಿ ಜ.18 ರಂದು ಬೆಳಗ್ಗೆ 11ಕ್ಕೆ ಜಿಪಂ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಜಿಪಂ ಸಿಇಒ ಪಿ.ಎ. ಗೋಪಾಲ್ ತಿಳಿಸಿದ್ದಾರೆ.
ಶುದ್ಧ ಕುಡಿವ ನೀರಿಗೆ ಅನುದಾನ
ಜಿಲ್ಲೆಯ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ ಕುಡಿಯುವ ನೀರು ಮತ್ತು ಶೌಚಾಲಯ ನಿರ್ವಹಣೆಗಾಗಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಮೂಲಕ 2013-14ನೇ ಸಾಲಿನ ಮೊದಲ ಕಂತಿನ ಅನುದಾನವನ್ನು ಶಾಲಾಭಿವೃದ್ಧಿ ಸಮಿತಿಗಳಿಗೆ ಬಿಡುಗಡೆಗೊಳಿಸಿದೆ. ನಿಯಮಾನುಸಾರ ಅನುದಾನ ಬಳಕೆ ಮಾಡಿ, ಶಾಲಾ ಮಕ್ಕಳಿಗೆ ಶುದ್ಧ ಕುಡಿಯವ ನೀರು ಮತ್ತು ಶುದ್ಧ ಶೌಚಾಲಯ ವ್ಯವಸ್ಥೆ ಒದಗಿಸಲು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎಚ್.ಆರ್. ಬಸಪ್ಪ ತಿಳಿಸಿದ್ದಾರೆ.
ವ್ಯಕ್ತಿ ಆತ್ಮಹತ್ಯೆ
ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಶನಿವಾರ ಸಂಜೆ ನಡೆದಿದೆ. ನಗರದ ಹೊರವಲಯದಲ್ಲಿರುವ ರಮಾಬಾಯಿ ನಗರ ನಿವಾಸಿ ರತ್ನಸ್ವಾಮಿ ಎಂಬವರ ಪುತ್ರ ಗುರುರಾಮ್ (32) ಆತ್ಮಹತ್ಯೆ ಮಾಡಿಕೊಂಡವರು. ಇವರಿಗೆ ಪತ್ನಿ ಪುಷ್ಪ, 9 ತಿಂಗಳ ಮಗುವಿದೆ. ತಮಿಳುನಾಡು ಮೂಲದ ಈ ದಂಪತಿ ಕಳೆದ 15 ದಿನಗಳ ಹಿಂದೆಯಷ್ಟೇ ರಮಾಬಾಯಿನಗರದ ಬಾಡಿಗೆಗೆ ಮನೆಗೆ ಬಂದಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಗಕಪ ಸಭೆ
ಅಖಿಲ ಕರ್ನಾಟಕ ಗಮಕ ಕಲಾ ಪರಿಷತ್ತಿನ ಆಶ್ರಯದಲ್ಲಿ ಜಿಲ್ಲಾ ಗಮಕ ಕಲಾ ಪರಿಷತ್ತು ರಚಿಸುವ ಸಂಬಂಧ ಪೂರ್ವಭಾವಿ ಸಭೆಯು ಜ.12ರ ಬೆಳಗ್ಗೆ 10ಕ್ಕೆ ಕೃಷ್ಣಮೂರ್ತಿಪುರಂನಲ್ಲಿರುವ ನಮನ ಕಲಾಮಂಟಪದಲ್ಲಿ ನಡೆಯಲಿದ್ದು, ಜಿಲ್ಲಾ ಪ್ರತಿನಿಧಿಗಳು ಆಗಮಿಸುವಂತೆ ಕೃ.ಪಾ. ಮಂಜುನಾಥ್ ಕೋರಿದ್ದಾರೆ. ಮೊ. 93413 92624 ಸಂಪರ್ಕಿಸಿ.
ಪತ್ನಿಯನ್ನೇ ಬಿಟ್ಟು ಹೋದ ವಂಚಕ
ಮೈಸೂರು: ಕಾಲ್ ಸೆಂಟರ್ ಆರಂಭಿಸುವುದಾಗಿ ಹೇಳಿಕೊಂಡು ವ್ಯಕ್ತಿಯೊಬ್ಬ ಹಲವರಿಗೆ ಪಂಗನಾಮ ಹಾಕಿ ಪರಾರಿಯಾಗಿರುವ ಘಟನೆ ನಗರದ ಬನ್ನಿಮಂಟಪದಲ್ಲಿ ನಡೆದಿದೆ. ಉತ್ತರ ಪ್ರದೇಶ ಮೂಲತ ಲಕ್ನೋ ನಿವಾಸಿ ಅರ್ಜುನ್ ಗಿಲ್ (36) ಪಂಗನಾಮ ಹಾಕಿ ಪರಾರಿಯಾದಾತ. ಈತ ಬನ್ನಿಮಂಟಪದ ಭುವನೇಶ್ವರಿ ಕಲ್ಯಾಣಮಂಟಪದ ಬಳಿ 4 ತಿಂಗಳ ಹಿಂದೆ ಬ್ರೈಟ್ ಐಡಿಯಾಸ್ ಕಾಟೇಜ್ ಎಂಬ ಹೆಸರಿನ ಕಚೇರಿ ತೆರೆದಿದ್ದ. ಕಚೇರಿ ಕೆಲಸಕ್ಕೆಂದು ಲ್ಯಾಪ್‌ಟಾಪ್‌ಗಳು ಬೇಕಾಗಿವೆ ಎಂದು ಆರ್ಡರ್ ಮಾಡಿ ತರಿಸಿಕೊಂಡು, ಚೆಕ್ ನೀಡಿದ್ದ. ಆದರೆ, ಬ್ಯಾಂಕಿನಲ್ಲಿ ಹಣವಿಲ್ಲದೆ ಚೆಕ್ ಬೌನ್ಸ್ ಆಗಿದೆ  ಎಂದು ಅಮಿರ್ ಪಾಷ ಎಂಬವರ ಪುತ್ರ ಆರೀಫ್ ಪಾಷ ನೀಡಿರುವ ದೂರಿನ್ವಯ, ಎನ್.ಆರ್. ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತನಿಖೆಯಿಂದ ಅರ್ಜುನ್ ಗಿಲ್ ಇದೇ ರೀತಿ ಇನ್ನೂ ಹಲವರಿಗೆ ಮೋಸ ಮಾಡಿ ತಲೆಮರೆಸಿಕೊಂಡಿರುವುದು ತಿಳಿದು ಬಂದಿದೆ. ಕಚೇರಿಯ ಆರಂಭಿಸಿದ್ದ ಕಟ್ಟಡ ಮಾಲೀಕರಿಗೂ ಬಾಡಿಗೆ ನೀಡದಿರುವುದು ಹಾಗೂ ಕಚೇರಿಗೆ ಫರ್ನಿಚರ್ ಪಡೆದ ಅಂಗಡಿ ಮಾಲೀಕರಿಗೂ ಹಣ ನೀಡದೆ ಪರಾರಿಯಾಗಿರುವುದು ಗೊತ್ತಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಡಾ.ಎಂ.ಎ. ಸಲೀಂ ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ವಿಪರ್ಯಾಸವೆಂದರೆ ಮೈಸೂರಿಗೆ ಬಂದ ಅರ್ಜುನ್ ಗಿಲ್, ರಾಜೀವ್‌ನಗರದ ನಿವಾಸಿ ಸಬಿನಾ ಎಂಬವರನ್ನು ಮದುವೆಯಾಗಿದ್ದಾನೆ. ಆದರೆ, ಪತ್ನಿ ಸಬಿನಾಗೂ ಈ ವಿಚಾರ ತಿಳಿಸದೆ, 5 ಲಕ್ಷ ಮೋಸ ಮಾಡಿ ಪರಾರಿಯಾಗಿದ್ದಾನೆ.
ಮೂವರು ನಾಪತ್ತೆ
ಮೈಸೂರು: ನಗರದ ಉದಯಗಿರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರತ್ಯೇಕ ಪ್ರಕರಣಗಳಲ್ಲಿ ಇಬ್ಬರು ಬಾಲಕಿಯರು ಸೇರಿದಂತೆ ಮೂವರು ನಾಪತ್ತೆಯಾಗಿದ್ದಾರೆ. ನಸೀರ್ ಖಾನ್ ಎಂಬವರ ಪುತ್ರಿ ಜೈಬಾ ಸುಲ್ತಾನಾ (14) ಶಾಲೆಗೆ ಹೋದವರು ನಾಪತ್ತೆಯಾಗಿದ್ದಾರೆ. ಚಹರೆ- 5 ಅಡಿ ಎತ್ತರ, ಎಣ್ಣೆಗೆಂಪು ಮೈಬಣ್ಣ, ಕೋಲು ಮುಖ, ಸಾಧಾರಣ ಮೈಕಟ್ಟು, ಉರ್ದು ಮತ್ತು ಇಂಗ್ಲಿಷ್ ಮಾತನಾಡುತ್ತಾರೆ. ಇಕ್ಬಾಲ್ ಅಹಮ್ಮದ್ ಎಂಬವರ ಪುತ್ರಿ ಶಬ್ರೀನ್ ತಾಜ್ (17) ಶುಕ್ರವಾರ ಸ್ನೇಹಿತೆಯ ಮನೆಗೆ ಹೋದವರು ನಾಪತ್ತೆಯಾಗಿದ್ದಾರೆ. ಚಹರೆ- 5.2 ಅಡಿ ಎತ್ತರ, ಎಣ್ಣೆಗೆಂಪು ಮೈಬಣ್ಣ, ದುಂಡು ಮುಖ, ಸಾಧಾರಣ ಮೈಕಟ್ಟು, ಕನ್ನಡ ಮತ್ತು ಹಿಂದಿ ಮಾತನಾಡುತ್ತಾರೆ. ಸಲ್ಮಾನ್ ಖಾನ್ ಎಂಬವರ ಪತ್ನಿ ಆಯಿಷಾ ಖಾನಂ (20) ನಾಪತ್ತೆಯಾಗಿದ್ದಾರೆ. ಆಕೆಯನ್ನು ಪತ್ತೆ ಮಾಡಿಕೊಡುವಂತೆ ಆಯಿಷಾ ಪೋಷಕರು ಜ.8 ರಂದು ದೂರು ದಾಖಲಿಸಿದ್ದಾರೆ. ಚಹರೆ- 5.2 ಅಡಿ ಎತ್ತರ, ಬಿಳಿ ಮೈಬಣ್ಣ, ಕೋಲು ಮುಖ, ಸಾಧಾರಣ ಮೈಕಟ್ಟು ಇದೆ. ಇವರ ಮಾಹಿತಿ ಸಿಕ್ಕಲ್ಲಲ್ಲಿ ದೂ.0821- 2418309, 509 ಸಂಪರ್ಕಿಸಿ.
ವಿದ್ಯಾರ್ಥಿಗಳಿಗೆ ಸೈಕಲ್ ವಿತರಣೆ
ಸಾಲಿಗ್ರಾಮ: ಮಕ್ಕಳ ವಿದ್ಯಾಭ್ಯಾಸಕ್ಕೆ ಅನುಕೂಲವಾಗುವ ಹತ್ತಾರು ಯೋಜನೆಗಳ ಮೂಲಕ ಹಲವು ಸೇವಾ ಸೌಲಭ್ಯಗಳನ್ನು ಸರ್ಕಾರವು ನೀಡುತ್ತಿದೆ. ಇವುಗಳನ್ನು ವಿದ್ಯಾರ್ಥಿಗಳು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಗ್ರಾಪಂ ಅಧ್ಯಕ್ಷೆ ರಾಣಿ ರಾಜಣ್ಣ ಹೇಳಿದರು. ಪಟ್ಟಣದ ಶ್ರೀ ಚನ್ನಕೇಶವ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಉಚಿತ ಸೈಕಲ್‌ಗಳನ್ನು ವಿತರಿಸಿ ಅವರು ಮಾತನಾಡಿದರು. ವಿದ್ಯಾರ್ಥಿಗಳು ಉತ್ತಮ ರೀತಿಯಲ್ಲಿ ಶಿಕ್ಷಣ ಪಡೆದು ಉನ್ನತ ಸ್ಥಾನಕ್ಕೆ ಹೋಗುವ ಮೂಲಕ ತಾವು ಓದಿದ ಶಾಲೆಗೆ, ತಮ್ಮ ಗ್ರಾಮಕ್ಕೆ, ಹೆತ್ತವರಿಗೆ  ಹಾಗೂ ಕಲಿಸಿಕೊಟ್ಟ ಗುರುಗಳಿಗೆ ಕೀರ್ತಿ ತರಬೇಕು ಎಂದು ತಿಳಿಸಿದರು. ಮುಖಂಡ ವೀರಭದ್ರಯ್ಯ ಇದ್ದರು.
ನಂಜನಗೂಡಿನಲ್ಲಿ ಶ್ರೀನಿವಾಸ ದರ್ಶನ
ನಂಜನಗೂಡು: ವೈಕುಂಠ ಏಕಾದಶಿ ಪವಿತ್ರ ದಿನವಾದ ಶನಿವಾರ ಇಲ್ಲಿನ ಕನ್ನಿಕಾ ಪರಮೇಶ್ವರಿ ಅಮ್ಮನವರ ದೇವಾಲಯಕ್ಕೆ ಸಾವಿರಾರು ಮಂದಿ ಭಕ್ತರು ಭೇಟಿ ನೀಡಿ ಶ್ರೀ ಶ್ರೀನಿವಾಸನ ದರ್ಶನ ಪಡೆದು ಪ್ರಾರ್ಥನೆ ಸಲ್ಲಿಸಿದರು. ವೈಭವದ ರಾಜಗೋಪುರ ಪ್ರವೇಶದ್ವಾರ ಸೇರಿದಂತೆ ಪುಷ್ಪಾಲಂಕೃತ ಸಪ್ತ ದ್ವಾರಗಳ ನಡುವೆ ಸರತಿಯಲ್ಲಿ ಸಾಗಿದ ಭಕ್ತಗಣ ಸ್ವಾಮಿಯನ್ನು ಕಣ್ತುಂಬಿಕೊಂಡು ಮೋಕ್ಷದ ಹಾದಿಯಲ್ಲಿ ಸಾಗಿದೆ ಎಂಬ ಧನ್ಯತೆಯ ಭಾವ ತಳೆದರು. ನಸುಕಿನಲ್ಲೇ ವೈಭವದ ಪೂಜೆ ನಡೆದಿತ್ತು. ಗಾಯತ್ರಿ ಅವರ ನೇತೃತ್ವದಲ್ಲಿ ರಾಜರಾಜೇಶ್ವರಿ ಗಾನ ಸೌರಭ ಸಂಘದ ಮಹಿಳೆಯರು ಭಜನೆ ಮತ್ತು ವಿಷ್ಣು ಸಹಸ್ರನಾಮ ಪಾರಾಯಣ ಸೇವೆ ನಡೆಸಿಕೊಟ್ಟರು.
ಭಕ್ತರಿಗೆ ಅಚ್ಚುಕಟ್ಟಾದ ದರ್ಶನ ವ್ಯವಸ್ಥೆ ಮಾಡಲಾಗಿತ್ತು. ಹುಳಿಯವಲಕ್ಕಿ ಪ್ರಸಾದ ವಿತರಿಸಲಾಯಿತು. ಆರ್ಯವೈಶ್ಯ ಮಂಡಳಿಯ ಅಧ್ಯಕ್ಷ ಜಿ.ಉಮೇಶ್, ಮುಖಂಡರಾದ ಎಚ್.ವಿ. ಸುರೇಶ್, ಕೆ.ಜಿ. ರಮೇಶ್‌ಬಾಬು, ಕೆ.ವಿ. ಸತೀಶ್, ಕೆ.ಎಲ್. ಗೋಪಾಲಕೃಷ್ಣ, ಜಿ. ನಂದಕುಮಾರ್, ಯುವ ಸಂಘಟನೆಯ ಎಸ್.ಪ್ರಮುಖ್ ನೇತೃತ್ವ ವಹಿಸಿದ್ದರು.
ಸಾಲಿಗ್ರಾಮ: ವೈಕುಂಠ ಏಕಾದಶಿ
ಸಾಲಿಗ್ರಾಮ: ವೈಕುಂಠ ಏಕಾದಶಿಯ ನಿಮಿತ್ತ ಪಟ್ಟಣದ ಶ್ರೀ ಯೋಗಾನರಸಿಂಹ ಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆ ಪುನಸ್ಕಾರಗಳು ದಿನವಿಡಿ ನಡೆದವು. ದೇವರಿಗೆ ಹೂವಿನಿಂದ ವಿಶೇಷ ಅಲಂಕಾರ ಮಾಡಲಾಗಿತ್ತು. ಸ್ಥಳೀಯ ಗ್ರಾಪಂ ಅಧ್ಯಕ್ಷೆ ರಾಣಿ ರಾಜಣ್ಣ ಸೇರಿದಂತೆ ಜನಪ್ರತಿನಿಧಿಗಳು, ವಿವಿಧ ಸಂಘಟನೆಗಳ ಕಾರ್ಯಕರ್ತರು, ಮಹಿಳೆಯರು ಸೇರಿದಂತೆ ಅಪಾರ ಭಕ್ತರು ದೇವಸ್ಥಾನಕ್ಕೆ ಆಗಮಿಸಿ ಭಕ್ತಿಭಾವದಿಂದ ನಮಿಸಿ, ತಮ್ಮ ಇಷ್ಟಾರ್ಥಗಳನ್ನು ಕರುಣಿಸಲೆಂದು ಕೋರಿದರು.
ನಾಳೆ ಕಲಿಕೋತ್ಸವ ಕಾರ್ಯಕ್ರಮ
ನಂಜನಗೂಡು: ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ, ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ 2013-14 ನೇ ಸಾಲಿನ ಬ್ಲಾಕ್ ಹಂತದ ಕಲಿಕೋತ್ಸವ ಕಾರ್ಯಕ್ರಮವನ್ನು ನಾಗಮ್ಮ ಶಾಲಾ ಆವರಣದಲ್ಲಿ ಜ.13 ರಂದು ಆಯೋಜಿಸಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಪುರುಷೋತ್ತಮ್ ತಿಳಿಸಿದ್ದಾರೆ. ಕಲಿಕೋತ್ಸವದಲ್ಲಿ ಒಂದರಿಂದ ಐದನೇ ತರಗತಿ ಮತ್ತು ಆರರಿಂದ ಎಂಟನೇ ತರಗತಿ ಮಕ್ಕಳಿಗೆ ಪ್ರತ್ಯೇಕವಾಗಿ ಸ್ಪರ್ಧೆಗಳನ್ನು ನಡೆಸಲಾಗುವುದು. ಪರಿಣಾಮಕಾರಿ ಬೋಧನಾ ಕಲಿಕಾ ಪ್ರಕ್ರಿಯೆ. ಸ್ಪಷ್ಟ ಓದು, ಶುದ್ಧ ಬರಹ, ಸರಳಗಣಿತ, ಸಾಮರ್ಥ್ಯ ವಿಕಾಸ, ಸಾಧನಾ ಮನೋಸ್ಥಿತಿಯ ಸಮಾಜ ಸೃಷ್ಠಿ ಕುರಿತಂತೆ ರಸಪ್ರಶ್ನೆ, ಉಕ್ತಲೇಖನ, ನಾಟಕ ಸ್ಪರ್ಧೆಗಳನ್ನು ಹಬ್ಬದ ರೀತಿಯಲ್ಲಿ ಆಚರಿಸಲಾಗುವುದು.
ನಾಳೆ ಯುವ ಜಾಗೃತಿ ಕಾರ್ಯಕ್ರಮ
ಕೆ.ಆರ್. ನಗರ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ನೆಹರು ಯುವಕೇಂದ್ರದ ಸಂಯುಕ್ತಾಶ್ರಯದಲ್ಲಿ ರಸಗ್ರಹಣ, ಹಾಡೀರೆ ರಾಗಗಳ ತೂಗೀರೆ ದೀಪಗಳ ಹಾಗೂ ಯುವ ಜಾಗೃತಿ ಕಾರ್ಯಕ್ರಮ ಜ.13ರ ಬೆಳಗ್ಗೆ 11ಕ್ಕೆ ತಾಲೂಕಿನ ಹೆಬ್ಬಾಳಿನಲ್ಲಿರುವ ಸರ್ಕಾರಿ ಪದವಿಪೂರ್ವ ಕಾಲೇಜು ಆವರಣದಲ್ಲಿ ಹಮ್ಮಿಕೊಂಡಿದೆ. ಜಿಪಂ ಸದಸ್ಯರಾದ ನಳಿನಾಕ್ಷಿ ವೆಂಕಟೇಶ್ ಉದ್ಘಾಟಿಸುವರು. ಹೆಬ್ಬಾಳು ಗ್ರಾಪಂ ಅಧ್ಯಕ್ಷ ಅನಸೂಯ ಅಧ್ಯಕ್ಷತೆ ವಹಿಸುವರು. ಚಿತ್ರಕಲೆ, ಪ್ರಾತ್ಯಕ್ಷಿಕೆ ಹಾಗೂ ಸಂವಾದ ಬಗ್ಗೆ ಲೆಸ್ಲಿ ತ್ಯಾಗರಾಜನ್ ಉಪನ್ಯಾಸ ನೀಡುವರು ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ನಿರ್ಮಲಾ ಮಠಪತಿ ತಿಳಿಸಿದ್ದಾರೆ.
ಮಹಿಳೆ ಆತ್ಮಹತ್ಯೆ
ನಂಜನಗೂಡು: ಮಹಿಳೆಯೊಬ್ಬರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಪಟ್ಟಣದ ಎನ್‌ಜಿಒ ಕಾಲೋನಿಯಲ್ಲಿ ಶುಕ್ರವಾರ ರಾತ್ರಿ ಜರುಗಿದೆ.ಕಾಲೋನಿ ನಿವಾಸಿ ಕೆಎಸ್‌ಆರ್‌ಟಿಸಿ ಬಸ್ ಚಾಲಕ ಯಲ್ಲಪ್ಪನಗೌಡ ಹೊನ್ನಪ್ಪ  ಎಂಬವರ ಪತ್ನಿ ಸ್ವಪ್ನ (23)  ಆತ್ಮಹತ್ಯೆ ಮಾಡಿಕೊಂಡವರು. ಈಕೆ ಯಲ್ಲಪ್ಪನಗೌಡ ಅವರನ್ನು ಪ್ರೀತಿಸಿ ಮದುವೆ ಆಗಿದ್ದು, ಶುಕ್ರವಾರ ಬೆಳಗ್ಗೆ ಪತಿ ಎಂದಿನಂತೆ ಕೆಲಸಕ್ಕೆ ಹೋಗಿದ್ದ ವೇಳೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೆಲಸ ಮುಗಿಸಿ ರಾತ್ರಿ ಮನೆಗೆ ವಾಪಸಾದ ಪತಿ ವಿಷಯ ತಿಳಿದು ಗ್ರಾಮಾಂತರ ಠಾಣೆ ದೂರು ನೀಡಿದ್ದಾರೆ. ಎಸ್‌ಐ ನಟರಾಜ್ ಪ್ರಕರಣ ದಾಖಲಿಸಿದ್ದಾರೆ. ಡಿವೈಎಸ್ಪಿ ಡಾ. ಪಿ. ರಾಜಾ, ಸರ್ಕಲ್ ಇನ್‌ಸ್ಪೆಕ್ಟರ್ ಜಿ.ಎಸ್. ರಘು  ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲಿಸಿದರು.



Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.