ಜಯರಾಂಗೆ ಡಾಕ್ಟರೇಟ್
ಮೈಸೂರು: ಶ್ರೀ ಜಯಚಾಮರಾಜೇಂದ್ರ ಎಂಜಿನಿಯರಿಂಗ್ ಕಾಲೇಜು ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಶನ್ ವಿಭಾಗದ ಪ್ರಾಧ್ಯಾಪಕ ಹಾಗೂ ಮುಖ್ಯಸ್ಥ ಡಾ.ಸಿ.ಆರ್. ವೇಣುಗೋಪಾಲ್ ಅವರ ಮಾರ್ಗದರ್ಶನದಲ್ಲಿ ಸಂಶೋಧನೆ ನಡೆಸಿದ ವಿಭಾಗದ ಸಹ ಪ್ರಾಧ್ಯಾಪಕ ಎನ್.ಎಂ. ಜಯರಾಂ ಅವರು ಸಾದರಪಡಿಸಿದ ಮಹಾಪ್ರಬಂಧವನ್ನು ಮೈಸೂರು ವಿವಿ, ಅಂಗೀಕರಿಸಿ ಎಲೆಕ್ಟ್ರಾನಿಕ್ಸ್ ವಿಷಯಕ್ಕೆ ಪಿಎಚ್.ಡಿ ಪದವಿ ನೀಡಿದೆ.
ಹಲವು ಪ್ರಾಣಿಗಳ ದತ್ತು ಸ್ವೀಕಾರ
ಮೈಸೂರು: ಶ್ರೀ ಚಾಮರಾಜೇಂದ್ರ ಮೃಗಾಲಯದ ಪ್ರಾಣಿಗಳ ದತ್ತು ಸ್ವೀಕಾರ ಯೋಜನೆಯಡಿ ಹಲವು ಪ್ರಾಣಿಗಳನ್ನು ಪ್ರವಾಸಿಗರು ದತ್ತು ಸ್ವೀಕರಿಸಿದ್ದಾರೆ.
ಬೆಂಗಳೂರಿನ ಸ್ಪಟಿಕಾ ಮತ್ತು ಅನಹಿತಾ ಅವರು ಹಾರ್ನ್ಬಿಲ್, ನಾಲ್ಕು ಕೊಂಬಿನ ಹುಲ್ಲೇಕರ ಹಾಗೂ ನೀರಾನೆ ದತ್ತು ಪಡೆದರೆ, ಮೈಸೂರಿನ ಮರಿಮಲ್ಲಪ್ಪ ಪ್ರೌಢಶಾಲೆಯ ಲ್ಯಾಂಗ್ವೇಜ್ ಕ್ಲಬ್ ಚಿರತೆ ಬೆಕ್ಕನ್ನು ದತ್ತು ಪಡೆದಿದೆ. ಮೈಸೂರಿನ ಸಿ.ಟಿ.ಸುಧಾ ಕಾಳಿಂಗ ಸರ್ಪವನ್ನು, ವಿವೇಕ್ ಬಗಯ್ ಮತ್ತು ಶೌನಕ್ ಬಗಯ್ ಅವರು ನೀಲ್ಗಿರಿ ಲಂಗೂರ್ ಮತ್ತು ತೋಳವನ್ನು, ಎಚ್.ಚಂದ್ರಕುಮಾರ್ ನಾರ್ತ್ ಅಮೆರಿಕನ್ ವುಡ್ ಡಕ್ನ್ನು ದತ್ತು ಸ್ವೀಕರಿಸಿದ್ದಾರೆ. ಅಂತೆಯೆ ಬೆಂಗಳೂರಿನ ಪ್ರಣವ್ ಎಂ. ಚಿಪ್ಲೊಕರ್ ಆಸ್ಟ್ರಿಚ್, ಪ್ರವಾಸೋದ್ಯಮ ಅಧ್ಯಯನಗಳ ಇಲಾಖೆ ವಿದ್ಯಾರ್ಥಿಗಳು ಇಂಡಿಯನ್ ಗಸೆಲ್ ಮತ್ತು ಆಸ್ಟ್ರೇಲಿಯಾದ ರಂಜನ್ ರಾಜಗೋಪಾಲ್ ಮತ್ತು ದಿವ್ಯ ಅವರು ಕಾಮನ್ ಮಾರ್ಮೊಸೆಟ್ ದತ್ತು ಪಡೆದಿದ್ದಾರೆ ಎಂದು ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕ ಬಿ.ಪಿ. ರವಿ ತಿಳಿಸಿದ್ದಾರೆ.
ಇಬ್ಬರಿಗೆ ಪಿಎಚ್.ಡಿ ಪದವಿ
ಮೈಸೂರು: ಡಾ. ಎಚ್.ಎಸ್.ಯತಿರಾಜನ್ ಮಾರ್ಗದರ್ಶನದಲ್ಲಿ ಸಂಶೋಧನೆ ನಡೆಸಿ ಸಾದರಪಡಿಸಿದ ಎ.ಎಸ್. ದಯಾನಂದ ಅವರ ಮಹಾಪ್ರಬಂಧವನ್ನು ಮೈಸೂರು ವಿವಿ ಅಂಗೀಕರಿಸಿ ಅವರಿಗೆ ರಾಸಾಯನಶಾಸ್ತ್ರ ವಿಷಯದಲ್ಲಿ ಪಿಎಚ್.ಡಿ ನೀಡಿದೆ. ಡಾ. ಸಿ.ಪಿ.ಸಿದ್ದಾಶ್ರಮ ಮಾರ್ಗದರ್ಶನದಲ್ಲಿ ಸಂಶೋಧನೆ ನಡೆಸಿ ಸಾದರಪಡಿಸಿದ ಡಿ.ಎಂ.ಮಹೇಂದ್ರಸ್ವಾಮಿ ಅವರ ಮಹಾಪ್ರಬಂಧವನ್ನು ಮೈಸೂರು ವಿವಿ ಅಂಗೀಕರಿಸಿ, ಅವರಿಗೆ ಕನ್ನಡ ವಿಷಯದಲ್ಲಿ ಪಿಎಚ್.ಡಿ ನೀಡಿದೆ. ಮಹೇಂದ್ರಸ್ವಾಮಿ ಅವರು ಊಟಿ ರಸ್ತೆಯ ಜೆಎಸ್ಎಸ್ ಕಾಲೇಜಿನಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಕಾರ್ಯದರ್ಶಿಯಾಗಿಇಂದಿರಾ ಆಯ್ಕೆ
ಮೈಸೂರು: ಮೈಸೂರು ವಿವಿ ಸಮಾಜಶಾಸ್ತ್ರ ವಿಭಾಗದ ಪ್ರಾಧ್ಯಾಪಕಿ ಡಾ. ಆರ್.ಇಂದಿರಾ ಅವರು ಭಾರತೀಯ ಸಮಾಜಶಾಸ್ತ್ರ ಸಂಘದ ಕಾರ್ಯದರ್ಶಿಯಾಗಿ ಚುನಾಯಿತರಾಗಿದ್ದಾರೆ. ಅವರು ಜನವರಿ 2014ರಿಂದ ಎರಡು ವರ್ಷಗಳ ಅವಧಿಗೆ ಆಯ್ಕೆಯಾಗಿದ್ದಾರೆ. ಸಂಘದ ಕಾರ್ಯದರ್ಶಿಯಾಗಿ ಆಯ್ಕೆಯಾದ ನಾಲ್ಕನೆ ಮಹಿಳೆ ಮತ್ತು ದಕ್ಷಿಣ ಭಾರತದ ಮೊದಲ ಮಹಿಳಾ ಕಾರ್ಯದರ್ಶಿ ಪ್ರೊ. ಆರ್. ಇಂದಿರಾ ಅವರು ಇದಕ್ಕೂ ಮುನ್ನ ಭಾರತೀಯ ಸಮಾಜಶಾಸ್ತ್ರ ಸಂಘದ ವ್ಯವಸ್ಥಾಪಕ ಮಂಡಳಿ ಸದಸ್ಯರಾಗಿ ಕರ್ನಾಟಕ ಸಮಾಜಶಾಸ್ತ್ರ ಸಂಘದ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ.
ವಿಭಾಗ ಮಟ್ಟದ ಸಮಾವೇಶ
ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಎಸ್ಸಿ, ಎಸ್ಟಿ ನೌಕರರ ಕಲ್ಯಾಣ ಸಂಘದ ಮೈಸೂರು ವಿಭಾಗ ಮಟ್ಟದ ಸಮಾವೇಶವು ಜ.14ರ ಬೆಳಗ್ಗೆ 10ಕ್ಕೆ ಮುಕ್ತ ಗಂಗೋತ್ರಿಯ ಕಾವೇರಿ ಸಭಾಂಗಣದಲ್ಲಿ ನಡೆಯಲಿದ್ದು, ಸಚಿವ ವಿ.ಶ್ರೀನಿವಾಸಪ್ರಸಾದ್ ಉದ್ಘಾಟಿಸುವರು. ಸಂಸದ ಆರ್.ಧ್ರುವನಾರಾಯಣ್ ಭಾಗವಹಿಸುವರು.
ನಾಳೆ ಕಾವ್ಯನಮನ
ಸಂವಹನ ಟ್ರಸ್ಟ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಜ.14ರ ಸಂಜೆ 5ಕ್ಕೆ ಜೆಎಸ್ಎಸ್ ಆಸ್ಪತ್ರೆ ಆವರಣದ ರಾಜೇಂದ್ರ ಭವನದಲ್ಲಿ ರಾಷ್ಟ್ರಕವಿ ಡಾ. ಜಿ.ಎಸ್.ಶಿವರುದ್ರಪ್ಪ ಅವರಿಗೆ ಕಾವ್ಯನಮನ ಹಮ್ಮಿಕೊಳ್ಳಲಾಗಿದ್ದು, ಸಾಹಿತಿ ಡಾ. ಪ್ರಭುಶಂಕರ ಉದ್ಘಾಟಿಸುವರು.
ಲಕ್ಷ ದೀಪೋತ್ಸವ
ಶಬರಿಮಲೆ ಅಯ್ಯಪ್ಪ ಪೂಜಾ ಸಮಿತಿಯು ಚಾಮುಂಡಿಬೆಟ್ಟದ ತಪ್ಪಲಿನಲ್ಲಿರುವ ಅಯ್ಯಪ್ಪಸ್ವಾಮಿ ದೇವಸ್ಥಾನದಲ್ಲಿ ಜ.14ರ ಸಂಜೆ 6ಕ್ಕೆ ಲಕ್ಷ ದೀಪೋತ್ಸವ ಏರ್ಪಡಿಸಿದ್ದು, ನಂತರ ಮೈಸೂರು ಆರ್.ರಂಗಸ್ವಾಮಿ ಮತ್ತು ತಂಡದವರು ಭಕ್ತಿಗೀತೆಗಳ ಗಾಯನ ಕಾರ್ಯಕ್ರ ನಡೆಸಿಕೊಡುವರು.
ಇಂದು ಸಚಿವರ ಸಭೆ
ನಂಜನಗೂಡು: ತಾಲೂಕಿನಲ್ಲಿ ಕೈಗೊಳ್ಳಲಾಗುತ್ತಿರುವ ಅಭಿವೃದ್ಧಿ ಕಾರ್ಯಕ್ರಮಗಳ ಬಗ್ಗೆ ಚರ್ಚಿಸಲು ಜಿಲ್ಲಾ ಉಸ್ತುವಾರಿ ಸಚಿವ ವಿ.ಶ್ರೀನಿವಾಸಪ್ರಸಾದ್ ಅವರು ಜ.13ರ ಬೆಳಗ್ಗೆ 10.30ಕ್ಕೆ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸಭೆ ಕರೆದಿದ್ದಾರೆ. ಜಿಲ್ಲಾಧಿಕಾರಿ, ಜಿಪಂ ಸಿಇಒ ಸೇರಿದಂತೆ ಜಿಲ್ಲಾ ಮಟ್ಟದ ವಿವಿಧ ಇಲಾಖೆ ಅಧಿಕಾರಿಗಳು ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಭಾಗವಹಿಸುವರು.
ಪೈಗಂಬರ್ ದಿನ
ಹುಣಸೂರು: ಪ್ರವಾದಿ ಮಹಮದ್ ಪೈಗಂಬರ್ ಜನ್ಮ ದಿನಾಚರಣೆಯನ್ನು ಜ.14ರಂದು ಆಯೋಜಿಸಲಾಗಿದೆ. ಅಂದು ಸಾರ್ವಜನಿಕ ಆಸ್ಪತ್ರೆ ಒಳರೋಗಿಗಳಿಗೆ ಹಣ್ಣುಹಂಪಲು ವಿತರಿಸಿ ಮಧ್ಯಾಹ್ನ 3ಕ್ಕೆ ಮೆರವಣಿಗೆ ನಡೆಸಲಾಗುವುದು. ಈದ್ಗಾ ಮೈದಾನದಲ್ಲಿ ರಾತ್ರಿ 9ಕ್ಕೆ ಗುರುಗಳಾದ ಅಬ್ದುಲ್ ರೆಹಮಾನ್ ಅವರಿಂದ ಪ್ರವಚನ ಏರ್ಪಡಿಸಲಾಗಿದೆ ಎಂದು ಹಜರತ್ ಕೈರುನ್ ಪಾಶಾ ಉರುಸ್ ಸಮಿತಿಯವರು ತಿಳಿಸಿದ್ದಾರೆ.
ಜೆಡಿಎಸ್ಗೆ ನೇಮಕ
ಟಿ. ನರಸೀಪುರ: ಕರ್ನಾಟಕ ಪ್ರದೇಶ ಜನತಾದಳ(ಜಾತ್ಯತೀತ) ಪಕ್ಷದ ಕಾರ್ಯದರ್ಶಿಯನ್ನಾಗಿ ಟಿ. ನರಸೀಪುರ ತಾಲೂಕಿನ ಹೊಸಕೆಂಪಯ್ಯನಹುಂಡಿ ಗ್ರಾಮದ ಬಸವರಾಜು ಅವರನ್ನು ರಾಜ್ಯಾಧ್ಯಕ್ಷ ಎ.ಕೃಷ್ಣಪ್ಪ ನೇಮಿಸಿದ್ದಾರೆ.
ಕ್ಯಾಲೆಂಡರ್ ಬಿಡುಗಡೆ
ನಂಜನಗೂಡು: ತಾಲೂಕಿನ ಹೊರಳವಾಡಿಯಲ್ಲಿರುವ ಶ್ರೀ ಗುರುಮಲ್ಲೇಶ್ವರ ದಾಸೋಹ ಮಠದಿಂದ ಹೊರ ತರಲಾದ ಶ್ರೀ ಮಹಾಂತ ಸ್ವಾಮೀಜಿ ಭಾವಚಿತ್ರವುಳ್ಳ 2014ರ ಕ್ಯಾಲೆಂಡರ್ ಅನ್ನು ಮಠದ ಭಿಕ್ಷದ ಶ್ರೀ ಅಭಿಕುಮಾರಸ್ವಾಮಿ ಹಾಗೂ ಗ್ರಾಮದ ಮುಖಂಡರು ಮತ್ತು ಬಸವೇಶ್ವರ ಭಜನಾ ಸಂಘದವರು ಬಿಡುಗಡೆಗೊಳಿಸಿದರು.
ಉಸ್ತುವಾರಿ ಸಚಿವರ ಮನೆ ಎದುರು ಇಂದು ಧರಣಿ
ಮೈಸೂರು: ಕಬ್ಬು ಬೆಳೆಗಾರರ ಸಮಸ್ಯೆ ಪರಿಹರಿಸಲು ಆಗ್ರಹಿಸಿ ಜ.13ರ ಬೆಳಗ್ಗೆ 11ಕ್ಕೆ ಜಿಲ್ಲಾ ಉಸ್ತುವಾರಿ ಮತ್ತು ಕಂದಾಯ ಸಚಿವ ವಿ.ಶ್ರೀನಿವಾಸಪ್ರಸಾದ್ ಅವರ ಮನೆ ಎದುರು ಧರಣಿ ಹಮ್ಮಿಕೊಂಡಿರುವುದಾಗಿ ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ತಿಳಿಸಿದ್ದಾರೆ. ಕಬ್ಬು ಬೆಳೆಗಾರರ ಸಭೆ ನಡೆಸಿದ ಜಿಲ್ಲಾ ಉಸ್ತುವಾರಿ ಸಚಿವ ವಿ.ಶ್ರೀನಿವಾಸಪ್ರಸಾದ್ ಅವರ ಇಳವರಿ ಆಧಾರ ಗಮನಿಸಿ ನ್ಯಾಯಯುತ ಬೆಲೆ ನಿಗದಿಪಡಿಸುವ ಭರವಸೆ ಹುಸಿಯಾಗಿದೆ. ಹೀಗಾಗಿ ಜಯಲಕ್ಷ್ಮಿಪುರಂ ಬಿಎಂ ಆಸ್ಪತ್ರೆ ಹಿಂಭಾಗದಲ್ಲಿರುವ ಸಚಿವರ ಮನೆ ಎದುರು ಪ್ರತಿಭಟನೆ ಹಮ್ಮಿಕೊಂಡಿರುವುದಾಗಿ ಅವರು ಹೇಳಿದ್ದಾರೆ. ರಾಜ್ಯ ಸರ್ಕಾರ ಟನ್ ಕಬ್ಬಿಗೆ 2,650 ನಿಗದಿ ಆದೇಶಿಸಿ ಎರಡು ತಿಂಗಳಾಗಿದೆ. ಆದರೆ, ಬಣ್ಣಾರಿ ಕಾರ್ಖಾನೆಯವರು ಸರ್ಕಾರದ ಆದೇಶವನ್ನು ಪಾಲಿಸದೆ ನಿರ್ಲಕ್ಷ್ಯ ವಹಿಸಿದ್ದಾರೆ. ಟನ್ ಕಬ್ಬಿಗೆ 2,400 ಮಾತ್ರ ಪಾವತಿಸುತ್ತಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

