ಜೂಜು: ಬಂಧನ
ಮೈಸೂರು: ಹೊಟೇಲ್ ಕೊಠಡಿಯೊಂದರಲ್ಲಿ ಜೂಜಾಡುತ್ತಿದ್ದ 7 ಮಂದಿಯನ್ನು ಸಿಸಿಬಿ ಮತ್ತು ನಜರ್ಬಾದ್ ಠಾಣೆ ಪೊಲೀಸರು ಶನಿವಾರ ರಾತ್ರಿ ಬಂಧಿಸಿ, 2.26 ಲಕ್ಷ ವಶಪಡಿಸಿಕೊಂಡಿದ್ದಾರೆ. ವಿದ್ಯಾರಣ್ಯಪುರಂ ನಿವಾಸಿಗಳಾದ ನಟರಾಜ್, ವಿನಯ್, ಸ್ವಾಮಿ, ಅಗ್ರಹಾರ ನಿವಾಸಿಗಳಾದ ರಘು, ನಾಗರಾಜ್ ಮತ್ತು ಮಹದೇವ್ ಬಂಧಿತರು. ಈ ಸಂಬಂಧ ನಜರ್ಬಾದ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಣ ದರೋಡೆ
ಇಬ್ಬರು ದುಷ್ಕರ್ಮಿಗಳು ರಸ್ತೆ ಬದಿ ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿಗೆ ಚಾಕು ತೋರಿಸಿ 7,200 ದೋಚಿರುವ ಘಟನೆ ನಗರದ ಹೃದಯ ಭಾಗದಲ್ಲಿರುವ ಆಲ್ಬರ್ಟ್ ವಿಕ್ಟರ್ ರಸ್ತೆಯಲ್ಲಿ ಭಾನುವಾರ ಬೆಳಗ್ಗೆ ನಡೆದಿದೆ. ಹೆಬ್ಬಾಳು ನಿವಾಸಿ ಪ್ರಭುಸ್ವಾಮಿ ಹಣ ಕಳೆದುಕೊಂಡವರು. ಇವರು ಕಾರ್ಯ ನಿಮಿತ್ತ ಚಾಮರಾಜನಗರಕ್ಕೆ ಹೋಗಲು, ಚಾಮರಾಜ ವೃತ್ತದಿಂದ ಹಾರ್ಡಿಂಜ್ ವೃತ್ತದ ಕಡೆಗೆ ಹೋಗುತ್ತಿದ್ದರು. ಈ ವೇಳೆ ಪ್ರಭುಸ್ವಾಮಿ ಅವರಿಗೆ ಇಬ್ಬರು ಚಾಕು ತೋರಿಸಿ, ಹಣ ದೋಚಿ ಪರಾರಿಯಾಗಿದ್ದಾರೆ. ಲಷ್ಕರ್ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.
ವ್ಯಕ್ತಿ ಸಾವು
ಅಸ್ವಸ್ಥಗೊಂಡು ಕೆ.ಆರ್.ಆಸ್ಪತ್ರೆಗೆ ದಾಖಲಾಗಿದ್ದ ಅಪರಿಚಿತ ವ್ಯಕ್ತಿಯೊಬ್ಬರು ಗುರುವಾರ ಮೃತಪಟ್ಟಿದ್ದಾರೆ. ಚಹರೆ- 60 ವರ್ಷ, 5.6 ಅಡಿ ಎತ್ತರ, ಗೋದಿ ಬಣ್ಣ, ಗುಂಡು ಮುಖ, ದೃಢ ಶರೀರ, ಬಲ ಎದೆಯ ಹತ್ತಿರ ಸಣ್ಣ ಕಪ್ಪು ಕಾರೆ ಹರಳಿದೆ. ಕ್ರೀಮ್ ಬಣ್ಣದ ತುಂಬು ತೋಳಿನ ಶರ್ಟ್ ಹಾಗೂ ಖಾಕಿ ಬಣ್ಣದ ನಿಕ್ಕರ್ ಧರಿಸಿದ್ದಾರೆ. ವಾರಸುದಾರರು ಇದ್ದಲ್ಲಿ ದೂ. 0821- 2418306 ಸಂಪರ್ಕಿಸಲು ದೇವರಾಜ ಠಾಣೆ ಪೊಲೀಸರು ಕೋರಿದ್ದಾರೆ.
ಗೃಹಿಣಿ ಆತ್ಮಹತ್ಯೆ
ಅನಾರೋಗ್ಯದಿಂದ ಮನನೊಂದ ಗೃಹಿಣಿ ತನ್ನ ಕತ್ತನ್ನು ತಾನೇ ಕೊಯ್ದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಜರ್ಬಾದ್ನಲ್ಲಿ ನಡೆದಿದೆ. ನಜರ್ಬಾದ್ ಠಾಣೆ ಹಿಂಭಾಗ ನಿವಾಸಿ ಹಾಗೂ ವ್ಯಾಪಾರಿ ಶ್ರೀನಿವಾಸ್ ಎಂಬವರ ಪತ್ನಿ ರೇಖಾ(26) ಆತ್ಮಹತ್ಯೆ ಮಾಡಿಕೊಂಡವರು. ವಿವಾಹವಾಗಿ ನಾಲ್ಕು ವರ್ಷಗಳಾಗಿದ್ದು, 3 ವರ್ಷದ ಮತ್ತು 2 ತಿಂಗಳ ಇಬ್ಬರು ಮಕ್ಕಳು ಇದ್ದಾರೆ. ಎರಡನೆ ಮಗು ಜನಿಸಿದ ಬಳಿಕ ರೇಖಾ ಅವರ ಆರೋಗ್ಯದಲ್ಲಿ ಏರುಪೇರಾಗಿತ್ತು. ಇದರಿಂದ ಮನ ನೊಂದಿದ್ದ ರೇಖಾ ಅವರು ಜ.7ರಂದು ಮನೆಯಲ್ಲಿ ಚಾಕುವಿನಿಂದ ಕತ್ತು ಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದರು. ಅಸ್ವಸ್ಥಗೊಂಡು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ರೇಖಾ ಅವರು ಭಾನುವಾರ ಬೆಳಗ್ಗೆ ಮೃತಪಟ್ಟಿದ್ದಾರೆ. ಈ ಸಂಬಂಧ ನಜರ್ಬಾದ್ ಠಾಣೆಯ ಇನ್ಸ್ಪೆಕ್ಟರ್ ಕೆ.ಸಿ. ಪೂವಯ್ಯ ಮತ್ತು ಸಿಬ್ಬಂದಿ ಅಸಹಜ ಸಾವು ಪ್ರಕರಣ ದಾಖಲಿಸಿದ್ದಾರೆ.
ವಿದ್ಯಾರ್ಥಿನಿ ನಾಪತ್ತೆ
ಮೈಸೂರು: ನಗರದ ಕೈಲಾಸಪುರಂ ನಿವಾಸಿ ನಾಗರಾಜು ಎಂಬವರ ಪುತ್ರಿ ಹಾಗೂ ಮರಿಮಲ್ಲಪ್ಪ ಕಾಲೇಜಿನ ವಿದ್ಯಾರ್ಥಿನಿ ಎನ್.ಮೇಘಾ (17) ಶನಿವಾರ ನಾಪತ್ತೆಯಾಗಿದ್ದಾರೆ. ಮನೆಯಿಂದ ಕಾಲೇಜಿಗೆ ಹೋದ ಮೇಘಾ ವಾಪಸ್ ಮನೆಗೆ ಬಂದಿಲ್ಲ ಎಂದು ನಾಗರಾಜು ಪೊಲೀಸರಿಗೆ ದೂರು ನೀಡಿದ್ದಾರೆ. ಚಹರೆ- 5 ಅಡಿ ಎತ್ತರ, ದುಂಡು ಮುಖ, ತೆಳು ಬಿಳಿ ಮೈಬಣ್ಣ, ಸಾಧಾರಣ ಶರೀರ, ಕನ್ನಡ ಮತ್ತು ಇಂಗ್ಲಿಷ್ ಮಾತನಾಡುತ್ತಾರೆ. ಇವರ ಬಗ್ಗೆ ಮಾಹಿತಿ ಸಿಕ್ಕಲ್ಲಿ ದೂ. 0821- 2418313, 513 ಸಂಪರ್ಕಿಸಲು ಕೋರಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

