ಬಹುವರ್ಣಗೊಂಡ ಬಹುರೂಪಿ
ಮೈಸೂರು: ಬಿ.ವಿ. ಕಾರಂತರ ಕನಸಿನ ಕೂಸಿಗೆ ಇಂದಿಗೆ 25ರ ಹರೆಯ. ಇಂತಹ ಸುದಿನದಲ್ಲಿಯೇ ವೈವಿಧ್ಯತೆಗಳನ್ನೊಳಗೊಂಡ ಬಹುರೂಪಿ ರಾಷ್ಟ್ರೀಯ ನಾಟಕೋತ್ಸವಕ್ಕೆ ಬಹುವರ್ಣರಂಜಿತವಾಗಿಯೇ ಮಂಗಳವಾರ ಚಾಲನೆ ನೀಡಲಾಯಿತು.
ಈ ಬಾರಿಯ ಬಹುರೂಪಿ ಪರಿಕಲ್ಪನೆಯಾದ ಸೂಫಿ- ಸಂತ- ಸಾಮರಸ್ಯ ಎಂಬ ಹೆಸರಿಗೆ ತಕ್ಕಂತೆ ರಂಗಾಯಣದ ಅಂಗಳ ಜಗಮಗಿಸುತ್ತಿದೆ. ರಂಗಾಯಣದ ದ್ವಾರದಲ್ಲಿ ಕುದುರೆ ಮೇಲೆ ಬಂದ 3ಡಿ ರೂಪದ ಸೂಫಿ ಮುಗುಳ್ನಗುತ್ತಿದ್ದರೆ ಆವರಣದೊಳಗೆ ಹೊಂಬೆಳುಕಗಳು ಮಿಣುಕುತ್ತಿದ್ದವು. ರಸ್ತೆಯ ತುಂಬೆಲ್ಲ ಬಣ್ಣದ ರಂಗೋಲಿ ಕಣ್ಣಿಗೆ ರಾಚಿಸುತ್ತಿದ್ದರೆ, ಇಕ್ಕೆಲಗಳಲ್ಲಿ ಮೈದಳೆದು ನಿಂತಿದ್ದ ಚಿತ್ರ ಕಮಾನುಗಳು. ಹೀಗೆ ಸಂಸ್ಕೃತಿಯ ವಿಶಾಲರ್ಥಕ್ಕೆ ಅನ್ವರ್ಥವಾದ ರಂಗಾಯಣಕ್ಕೆ ಜನಸಾಗರ ಹರಿದು ಬರುತ್ತಿತ್ತು.
ವನರಂಗದಲ್ಲಿ ಏರ್ಪಡಿಸಿದ್ದ ಉದ್ಘಾಟನಾ ಸಮಾರಂಭವದಲ್ಲಿ ಅತಿಥಿಗಳಾಗಿ ಭಾಗವಹಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ, ಕಂದಾಯ ಸಚಿವ ವಿ.ಶ್ರೀನಿವಾಸಪ್ರಸಾದ್, ಲೋಕೋಪಯೋಗಿ ಸಚಿವ ಡಾ.ಎಚ್.ಸಿ. ಮಹದೇವಪ್ಪ, ಸಹಕಾರ ಸಚಿವ ಎಚ್.ಎಸ್.ಮಹದೇವಪ್ರಸಾದ್, ಬಹುಭಾಷಾ ನಟ ಪ್ರಕಾಶ್ ರೈ, ಜಿಪಂ ಅಧ್ಯಕ್ಷ ಕೂರ್ಗಳ್ಳಿ ಎಂ.ಮಹದೇವು ಅವರ ಮುಂದೆ ರಂಗಾಯಣ ನಿರ್ದೇಶಕ ಎಚ್. ಜನಾರ್ದನ್ ಸಾಮರಸ್ಯವನ್ನು ಮೂಡಿಸುವ ಪರಿಕಲ್ಪನೆಯನ್ನು ಪ್ರತಿಮೆಗಳ ಮೂಲಕ ಸಾದರಪಡಿಸಿದರು. ಮೂರು ಸಾವಿರ ವರ್ಷಗಳಷ್ಟು ಇತಿಹಾಸ ಹೊಂದಿರುವ ಕನ್ನಡ ಸಾಹಿತ್ಯ ಪರಂಪರೆಯನ್ನು ಕಟ್ಟಿ ಬೆಳೆಸಿದ ಕನ್ನಡದ ಕಟ್ಟಾಳುಗಳನ್ನು ವೇದಿಕೆಗೆ ತರಲಾಯಿತು. ಶಾಸನವೊಂದರ ತುಣಕಾದ ಸಾಧುಗೆ ಸಾಧುಂ, ಮಾಧುರ್ಯಂಗೆ ಮಾಧುರ್ಯಂ.. ಎಂಬ ದೀಪ್ತಿಯೊಂದಿಗೆ ಆರಂಭವಾಗಿ ಪಂಪನ ಜಾತಿ ತಾನೊಂದೆ ವಲಂ ಎಂಬ ಮಾತನ್ನು ದಾಟಿ, ಬಸವೇಶ್ವರ, ಜೇಡರ ದಾಸಿಮಯ್ಯ, ಕನಕದಾಸರ ಉಕ್ತಿಗಳನ್ನು ಮೊದಲಗೊಂಡು ಸರ್ವಜ್ಞ, ಸಂಚಿ ಹೊನ್ನಮ್ಮ, ಅಕ್ಕ ಮಹಾದೇವಿಯರ ವಿವೇಕ ಚಿಂತನೆಯನ್ನು ಮೈಗೂಡಿಸಿಕೊಂಡು ಬಿಎಂಶ್ರೀ, ಲಂಕೇಶ್, ಗೋಪಾಲಕೃಷ್ಣ ಅಡಿಗರು, ದೇವನೂರು ಮಹಾದೇವ, ಕುವೆಂಪು ಅವರ ಪದಗಳನ್ನು ಉಸುರುವಷ್ಟರೊಳಗೆ ವೇದಿಕೆಗೆ ಬಂದ ಶಿಶುನಾಳ ಷರೀಫರು ವಿಶ್ವಮಾನವನ ಪ್ರತೀಕದಂತಿರುವ ಮಗುವನ್ನು ಸಾಮರಸ್ಯದ ಸಂಕೇತವಾಗಿ ಸಿಎಂ ಮಡಿಲಿಗೆ ಹಾಕಿದಾಕ್ಷಣ ಸಭೆಯಲ್ಲಿ ಜೋರಾಗಿ ಕರತಾಡನ ಕೇಳಿಬಂದಿತು.
ನಾನು ನಾಟಕಗಳನ್ನು ನೋಡಿಲ್ಲ: ಅವರ ಪ್ರತಿನಿಧಿಯಾಗಿ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ವಿ. ಶ್ರೀನಿವಾಸಪ್ರಸಾದ್ ಸಮಾಜಕ್ಕೆ ಸಂದೇಶ ನೀಡುವ, ಸಾಮರಸ್ಯದ ಬದುಕನ್ನು ರೂಪಿಸುವ ಶಕ್ತಿ ನಾಟಕಕ್ಕೆ ಇದೆ. ನಾನು ನಾಟಕಗಳನ್ನು ನೋಡಿರಲಿಲ್ಲ. ಸಿ. ಬಸವಲಿಂಗಯ್ಯ ಅವರು ನಿರ್ದೇಶಿಸಿದ ಮಲೆಗಳಲ್ಲಿ ಮದುಮಗಳನ್ನು ನೋಡಿ ಖುಷಿ ಪಟ್ಟಿದ್ದೆ. ಹಾಗೆ ಪತ್ರಿಕೆಗಳಲ್ಲಿ ಓದಿ ತಿಳಿದುಕೊಳ್ಳುತ್ತಿದ್ದೆ. ಇಂತಹ ಗಟ್ಟಿತನ ಹೊಂದಿರುವ ರಂಗಾಯಣದ ಸಮಸ್ಯೆಗೆ ತಿಲಾಂಜಲಿ ಇಡಲು ಒಳ್ಳೆಯ ನಿರ್ದೇಶಕರನ್ನು ನೇಮಿಸಬೇಕೆಂಬ ಯೋಚನೆಯಿಂದ ಜನ್ನಿ ಅವರನ್ನು ನೇಮಕ ಮಾಡಿದೆವು. ಈಗ ನಮಗೆಲ್ಲರಿಗೂ ಖುಷಿಯಾಗಿದೆ. ರಂಗಾಯಣ ಇಂದಿಗೂ ಅನುಭವಿಸುತ್ತಿರುವ ಸಮಸ್ಯೆಗಳನ್ನು ತೊಲಗಿಸಲು ನಮ್ಮ ಸರ್ಕಾರ ಬದ್ಧವಾಗಿದೆ. ಏನೇನು ಕೊರತೆ ಇದೆ ಎಂಬುದನ್ನು ಮನಗಂಡು ಪರಿಹರಿಸುತ್ತೇವೆ. ಸಾಮರಸ್ಯ ಪಸರಿಸಲು ಮುಂದಾಗಿರುವ ರಂಗಾಯಣಕ್ಕೆ ಒಳ್ಳೆಯದಾಗಲಿ ಎಂದರು. ಸಮಾಜದಲ್ಲಿ ಸಾಮರಸ್ಯ ಇಲ್ಲದಿದ್ದರಿಂದಲೇ ಇನ್ನೂ ಬಡತನ, ಅನಕ್ಷರತೆ ಹೋಗಲಾಡಿಸಲು ಸಾಧ್ಯವಾಗಿಲ್ಲ ಎಂದರು.
ವಿಚಾರಗಳನ್ನು ಆಲಿಸದ ಸಿಎಂ
ಹಲವು ಕಾರ್ಯಕ್ರಮಗಳ ನಿಮಿತ್ತವೇ ಮೈಸೂರಿಗೆ ಬಂದಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಂಗಾಯಣಕ್ಕೆ ಬಂದು ನಾಮ್ ಕೆ ವಾಸ್ತೆಗಾಗಿ ಬಹುರೂಪಿ ರಾಷ್ಟ್ರೀಯ ನಾಟಕೋತ್ಸವವನ್ನು ಉದ್ಘಾಟಿಸಿ ಹೊರ ನಡೆದದ್ದು ಪ್ರೇಕ್ಷಕರಲ್ಲಿ ಅಸಹನೆ ಹುಟ್ಟಿಸಿತು. ನಾಟಕೋತ್ಸವದ ಈ ಬಾರಿಯ ಪರಿಕಲ್ಪನೆಯಾದ ಸೂಫಿ- ಸಂತ- ಸಾಮರಸ್ಯವನ್ನು ಪ್ರತಿಮೆಗಳ ಮೂಲಕ ಪ್ರಾಸ್ತಾವಿಕವಾಗಿ ಕಲಾವಿದರು ವೇದಿಕೆಯಲ್ಲಿ ಸಾದರಪಡಿಸುತ್ತಿದ್ದರೆ ಒಂದೆರಡು ನಿಮಿಷ ನೋಡಿದ ಸಿಎಂ ನಂತರ ಪತ್ರಿಕೆ ಓದುವುದರಲ್ಲಿ ತಲ್ಲೀನರಾಗಿಬಿಟ್ಟರು. ಇನ್ನು ಅತಿಥಿಯಾಗಿ ಆಗಮಿಸಿದ್ದ ನಟ ಪ್ರಕಾಶ್ ರೈ ಚಿತ್ರರಂಗದ ದುಸ್ಥಿತಿ, ರಂಗಾಯಣ ಕಲಾವಿದರ ಕಷ್ಟಗಳನ್ನು ಜನಪ್ರತಿನಿಧಿಗಳ ಗಮನಕ್ಕೆ ತರಲು ಅಪೇಕ್ಷಿಸಿದ್ದರು. ಕಾರ್ಯಕ್ರಮ ಉದ್ಘಾಟಿಸಿ ಅರ್ಧಕ್ಕೆ ಹೊರನಡೆದ ಮುಖ್ಯಮಂತ್ರಿಯವರ ವರ್ತನೆಯಿಂದ ಅವರು ಮಾತಿನ ಮೂಲಕ ತಿವಿದರು.
ಎಲ್ಲ ಹೋದ ಮೇಲೆ ನಾವೇ ಉಳಿದಿದ್ದು....
ಎಲ್ಲರೂ ಹೋದ ಮೇಲೆ ನಾವೇ ಉಳಿದಿದ್ದು. ಆದರೂ ನಮಗೆ ಏನು ಕೊರತೆ ಹೇಳಿ. ಹಾಡು ಇದೆ, ನಗು ಇದೆ, ಸಮಾಜದಲ್ಲಿ ಚೆನ್ನಾಗಿದ್ದೇವೆ. ಹಾಗಾಗಿ ನಮಗೆ ಏನು ಕೊರತೆ ಆಗಿದೆ ಹೇಳಿ ಎಂದು ಬಹುಭಾಷಾ ನಟ ಪ್ರಕಾಶ್ ರೈ ಹೇಳಿದರು. ವೇದಿಕೆಯಿಂದ ಅರ್ಧದಲ್ಲಿಯೇ ನಿರ್ಗಮಿಸಿದ ಪ್ರತಿನಿಧಿಗಳನ್ನು ಕೇಂದ್ರೀಕರಿಸಿ ಮಾತನಾಡಿ ರೈ, ನಗುತ್ತಲೆ ಸನ್ನಿವೇಶನದ ಸ್ಥಿತಿಗತಿಯನ್ನು ಅಚ್ಚುಕಟ್ಟಾಗಿ ಕಟ್ಟುಕೊಟ್ಟರು. ಜನಪ್ರತಿನಿಧಿಗಳ ಗಮನಕ್ಕೆ ಕೆಲವು ವಿಷಯಗಳನ್ನು ತರಬೇಕೆಂದು ಅಂದುಕೊಂಡಿದ್ದೆ. ಅವರು ಹೋದ ಮೇಲೆ ಮಾಧ್ಯಮದ ಮೂಲಕವೇ ತಿಳಿಸುತ್ತೇನೆ. ಕಲಾವಿದರು ಕಡುಕಷ್ಟಗಳನ್ನು ಅನುಭವಿಸುತ್ತಿದ್ದಾರೆ. ಅವರ ನೆರವಿಗೆ ಧಾವಿಸಿ. ಇಲ್ಲದಿದ್ದರೆ ಹೋರಾಟವೊಂದೆ ಕೊನೆಯ ಅಸ್ತ್ರವಾಗಿದೆ ಎಂದು ನೇರವಾಗಿ ಹೇಳಿದರು. ನಾನು ಹೇಳಿದ್ದನ್ನು ಖಾರವಾಗಿಯೇ ಬರೆಯಿರಿ ಎನ್ನುತ್ತಲೆ, ರಾಜಕಾರಣಿಗಳ ಮಾತಿನ ಶೈಲಿಯನ್ನು ಅನುಕರಿಸಿ, ನಮಗೆ ರಂಗಾಯಣದ ಬಗ್ಗೆ ಗೊತ್ತಿದೆ. ಇಲ್ಲಿನ ಸಮಸ್ಯೆಗಳನ್ನು ಅರಿತುಕೊಂಡಿದ್ದೇವೆ. ಇನ್ನು ಏನಾದರೂ ಸಮಸ್ಯೆಯಿದ್ದರೆ ತನ್ನಿ. ಕುಳಿತು ಚರ್ಚೆ ಮಾಡೋಣ. ಸಾಧ್ಯವಾದರೆ ಬಗೆಹರಿಸೋಣ... ಎಂದು ಮಾತನಾಡಿ ಕೋಪವನ್ನೆಲ್ಲ ಹೊರ ಹಾಕಿದರು. ಇನ್ನು ಮಾತನ್ನು ರಂಗಾಯಣದತ್ತ ಹೊರಳಿಸಿ, ಒಗ್ಗರಣೆ ಚಿತ್ರೀಕರಣಕ್ಕೆ ಮೈಸೂರಿಗೆ ಬಂದಿದ್ದೇನೆ. ಯಾಕೋ ಬಿಟ್ಟು ಹೋಗಲು ಮನಸ್ಸಾಗುತ್ತಿಲ್ಲ. ರಂಗಾಯಣ ಬೆಳೆಯಬೇಕೆಂಬ ಆಸೆ ಇಟ್ಟುಕೊಂಡಿದ್ದೇನೆ. ಜನ್ನಿ ನಿರ್ದೇಶಕರಾದ ಮೇಲೆ ನೀನು ಹಾಡುವುದಕ್ಕಿಂತ ಕೆಲಸ ಮಾಡಪ್ಪ ಅಂದೆ. ಆಯಿತು ಅಂದ. ರಂಗಭೂಮಿ ಬೆಳೆಸು ಎಂದೆ, ಗೊತ್ತಿದೆ ಅಂದ... ಆದರೂ ಇಲ್ಲಿನ ಸಮಸ್ಯೆಗಳು ಬಗೆಹರಿಯದಿದ್ದರೆ ನಮಗಿನ್ನು ಚೈತನ್ಯವಿದೆ. ಕಲಾವಿದರು ಸುಮ್ಮನಿದ್ದರು ಸಮಸ್ಯೆ, ಸುಮ್ಮನಿರದೆ ಏನಾದರು ಮಾಡಿದರೆ ಸಮಸ್ಯೆ. ಆದ್ದರಿಂದ ಏನಾದರು ಮಾಡಿಯೇ ನಮ್ಮ ಕಷ್ಟಗಳನ್ನು ಪರಿಹರಿಸಿಕೊಳ್ಳೋಣ ಎಂದು ಅವರು ತಿಳಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

