ಮೈಸೂರು

ನಾಳೆ ಶ್ರೀರಾಮ ರಥೋತ್ಸವ

Published On :

ಕೆ.ಆರ್. ನಗರ: ತಾಲೂಕಿನ ಚುಂಚನಕಟ್ಟೆ ಶ್ರೀರಾಮ ದೇವರ ಇತಿಹಾಸ ಪ್ರಸಿದ್ಧ ಬ್ರಹ್ಮ ರಥೋತ್ಸವ ಜ.16 ರಂದು ನಡೆಯಲಿದೆ.
ಮಕರ ಸಂಕ್ರಮಣದ ಮಾರನೆಯ ದಿನ ನಡೆಯುವ ರಥೋತ್ಸವಕ್ಕೆ ಈಗಾಗಲೇ ತಾಲೂಕು ಆಡಳಿತ ದೇವಾಲಯದ ಸ್ವಚ್ಛತೆ, ರಥದ ದುರಸ್ತಿ ಮತ್ತು ಇತರೆ ಜಾತ್ರಾ ಪೂರ್ವ ಸಿದ್ಧತೆಗಳನ್ನು ಕೈಗೊಂಡಿದೆ.
ಗುರುವಾರ ಬೆಳಗ್ಗೆ 11 ರಿಂದ 11.50ರ ರಥೋತ್ಸವ ಜರುಗಲಿದ್ದು, ಇದಕ್ಕೆ ಪೂರ್ವಭಾವಿಯಾಗಿ ದೇವಾಲಯದಲ್ಲಿ ನಾಲ್ಕು ದಿನಗಳಿಂದ ವಿವಿಧ ಪೂಜಾ ವಿಧಿವಿಧಾನಗಳು ಬೆಂಗಳೂರಿನ ಆಗಮಿಕರ ನೇತೃತ್ವದಲ್ಲಿ ನಡೆಯುತ್ತಿದ್ದು, ಸೋಮವಾರ ರಾತ್ರಿ ಪುರಾಣ ಪ್ರಸಿದ್ಧ ಸೀತಾ-ಶ್ರೀರಾಮ ಕಲ್ಯಾಣ ಜರುಗಿತು.
ಅಂದಾಜು 50 ಸಾವಿರಕ್ಕೂ ಅಧಿಕ ಭಕ್ತರು ಬ್ರಹ್ಮ ರಥೋತ್ಸವದಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಇದ್ದು, ಪೊಲೀಸ್ ಇಲಾಖೆ ಈಗಾಗಲೇ ಅಗತ್ಯ ಭದ್ರತಾ ಕ್ರಮ ಕೈಗೊಂಡಿದೆ. ಡಿವೈಎಸ್ಪಿ ನೇತೃತ್ವದಲ್ಲಿ ಇನ್‌ಸ್ಪೆಕ್ಟರ್ ಹಾಗೂ 8 ಮಂದಿ ಎಸ್‌ಐ ಸೇರಿದಂತೆ 150ಕ್ಕೂ ಅಧಿಕ ಸಿಬ್ಬಂದಿಯನ್ನು ಭದ್ರತಾ ನಿಯೋಜನೆಗೆ ಕ್ರಮ ಕೈಗೊಳ್ಳಲಾಗಿದೆ. ಈಗಾಗಲೇ ತಾಲೂಕು ಖಜಾನೆಯಿಂದ ಉತ್ಸವ ಮೂರ್ತಿಯ ಚಿನ್ನದ ಆಭರಣಗಳನ್ನು ದೇವಾಲಯಕ್ಕೆ ತರಲಾಗಿದ್ದು, ರಥೋತ್ಸವಕ್ಕೆ ಅಣಿ ಮಾಡಲಾಗಿದೆ.
ಕಳೆಗಟ್ಟದ ಜಾತ್ರೆ: ಈ ಬಾರಿ ರಾಜ್ಯಾದ್ಯಂತ ರಾಸುಗಳಿಗೆ ಕಾಲು-ಬಾಯಿ ಜ್ವರ ಕಾಣಿಸಿಕೊಂಡ ಹಿನ್ನೆಲೆ, ಜಿಲ್ಲಾಡಳಿತ ಚುಂಚನಕಟ್ಟೆ ಜಾನುವಾರು ಜಾತ್ರೆಯನ್ನು ರದ್ದು ಪಡಿಸಿದ್ದರಿಂದ ರೈತರಿಗೆ ನಿರಾಸೆಯಾಗಿದ್ದು, ಹಿಂದಿನ ಸಾರಿಯಂತೆ ಜಾತ್ರೆ ಕಳೆಗಟ್ಟದೆ ರಥೋತ್ಸವಕ್ಕೆ ಸೀಮಿತವಾಗಿದೆ.
ಜ.16 ರಂದು ನಡೆಯಲಿರುವ ಚುಂಚನಕಟ್ಟೆ ಶ್ರೀರಾಮ ದೇವರ ಬ್ರಹ್ಮ ರಥೋತ್ಸವಕ್ಕೆ ಆದಿಚುಂಚನಗಿರಿ ಮಠದ ನಿರ್ಮಲಾನಂದ ಸ್ವಾಮೀಜಿ, ಗಾವಡಗೆರೆ ಗುರುಲಿಂಗ ಜಂಗಮ ಮಠದ ನಟರಾಜ ಸ್ವಾಮೀಜಿ, ಯಡತೊರೆ ಯೋಗಾನಂದೇಶ್ವರ ಸರಸ್ವತಿ ಮಠದ ಶಂಕರಭಾರತಿ ಸ್ವಾಮೀಜಿ, ಕಾಗಿನೆಲೆ ಕೆ.ಆರ್. ನಗರ ಶಾಖಾ ಮಠದ ಶಿವಾನಂದಪುರಿ ಸ್ವಾಮೀಜಿ, ಬೆಟ್ಟದಪುರ ವಿರಕ್ತ ಮಠದ ಚನ್ನಬಸವದೇಶಿಕೇಂದ್ರ ಸ್ವಾಮೀಜಿ, ಕರ್ಪೂರವಳ್ಳಿ ಜಂಗಮ ಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ಶಾಸಕ ಸಾ.ರಾ. ಮಹೇಶ್ ಚಾಲನೆ ನೀಡುವರು.
ಸಚಿವ ವಿ. ಶ್ರೀನಿವಾಸಪ್ರಸಾದ್, ಸಂಸದರಾದ ರಮ್ಯಾ, ಎಚ್. ವಿಶ್ವನಾಥ್, ಶಾಸಕರಾದ ಕೆ. ವೆಂಕಟೇಶ್, ಮರಿತಿಬ್ಬೇಗೌಡ, ಸಿದ್ದರಾಜು, ಸಂದೇಶ್ ನಾಗರಾಜು, ಆರ್. ಧರ್ಮಸೇನ ಭಾಗವಹಿಸುವರು.



- ಕುಪ್ಪೆ ಮಹದೇವಸ್ವಾಮಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.