ಮೈಸೂರು

ನಗರದಲ್ಲಿ ಸಂಕ್ರಾಂತಿ ಸಂಭ್ರಮ

Published On :

ಕ.ಪ್ರ.ವಾರ್ತೆ , ಮೈಸೂರು , ಜ. 15
ನಗರದೆಲ್ಲೆಡೆ ಬುಧವಾರ ಸಂಕ್ರಾಂತಿ ಸಡಗರ.
ಹೊಸ ಬಟ್ಟೆ ತೊಟ್ಟು, ಹೂ ಮುಡಿದು ಕೈಯಲ್ಲಿ ಎಳ್ಳುಬೆಲ್ಲದ ಬುಟ್ಟಿ ಹಿಡಿದು ಮನೆ ಮನೆಗೆ ತೆರಳಿದ ಮಕ್ಕಳು ಮತ್ತು ಯುವತಿಯರು ತಮ್ಮ ನೆರೆಮನೆಯವರಿಗೆ, ಬಂಧುಗಳಿಗೆ, ಸ್ನೇಹಿತರಿಗೆ ಎಳ್ಳುಬೆಲ್ಲ ನೀಡಿ ಸಂಭ್ರಮಿಸಿದರು.
ನಗರ ಪ್ರದೇಶದಲ್ಲಿ ಹಬ್ಬಗಳು ಕ್ಷೀಣಿಸುತ್ತಿವೆ ಎಂಬುದಕ್ಕೆ ಅಪವಾದ ಎಂಬಂತೆ ಅಗ್ರಹಾರ, ಕೆ.ಜಿ. ಕೊಪ್ಪಲು, ಕುಂಬಾರಕೊಪ್ಪಲು, ಪಡುವಾರಹಳ್ಳಿ, ಶಿವರಾಂಪೇಟೆ, ಕುವೆಂಪುನಗರ ಮುಂತಾದ ಬಡಾವಣೆಗಳಲ್ಲಿ ರಂಗು ರಂಗಿನ ಉಡುಗೆ ತೊಟ್ಟು ಸಂಭ್ರಮಿಸಿದ ಯುವತಿಯರು ಎಳ್ಳುಬೆಲ್ಲ ಬೀರಲು ತೆರಳುತ್ತಿದ್ದದ್ದು ವಿಶೇಷವಾಗಿತ್ತು.
ಸಂಕ್ರಾಂತಿ ಸಡಗರದ ಹಿನ್ನೆಲೆಯಲ್ಲಿ ಬುಧವಾರ ದೇವರಾಜ ಮಾರುಕಟ್ಟೆಯಲ್ಲಿ ವ್ಯಾಪಾರದ ಭರಾಟೆ ಹೆಚ್ಚಿತ್ತು. ಎಳ್ಳು, ಕೊಬ್ಬರಿ, ಬೆಲ್ಲ, ಕಬ್ಬು, ಕಡಲೆಸೊಪ್ಪು, ಎಲಚಿಹಣ್ಣು, ಬಾಳೆಹಣ್ಣು, ಹೂ ಮುಂತಾದ ವಸ್ತುಗಳ ಬೆಲೆ ಗಗನಕ್ಕೆ ಏರಿತ್ತು. ರಸ್ತೆ ಬದಿಯಲ್ಲಿ ಸುತ್ತಮುತ್ತಲ ಗ್ರಾಮಗಳಿಂದ ಕಬ್ಬಿನ ಜಲ್ಲೆ ಮತ್ತು ಎಲಚಿ ಹಣ್ಣನ್ನು ತಂದು ರೈತರು ಮಾರಾಟ ಮಾಡಿದರು. ಎಳ್ಳು ಬೆಲ್ಲ ಹಾಕುವ ಕವರ್‌ಗಳಿಗೂ ಬೇಡಿಕೆ ಹೆಚ್ಚಾಗಿತ್ತು. ಕೆಲವರು ಕವರ್‌ಗಳ ಮೇಲೆ ತಮ್ಮ ಮಕ್ಕಳ, ಮೊಮ್ಮಕ್ಕಳ ಹೆಸರು ಮುದ್ರಿಸಿದ್ದರು.
ನಗರದ ಹಳೆಯ ಬಡಾವಣೆಗಳಾದ ಕುಂಬಾರಕೊಪ್ಪಲು, ಪಡುವಾರಹಳ್ಳಿ, ಕೆ.ಜಿ. ಕೊಪ್ಪಲು, ಅಶೋಕಪುರಂ, ಗೊಲ್ಲಗೇರಿ, ಅಗ್ರಹಾರ ಮುಂತಾದ ಕಡೆಗಳಲ್ಲಿ ಸಾರ್ವಜನಿಕರು ಸಾಕಿರುವ ಹಸು ಮತ್ತು ಕರುವಿನ ಮೈಗೆ ಅರಿಶಿಣ ಮತ್ತು ಕುಂಕುಮ ಹಚ್ಚಿ ಪೂಜಿಸಿದರು. ಫಾತಿ ಫೌಂಡೇಷನ್ ವತಿಯಿಂದ ಸಂಕ್ರಾಂತಿ ಅಂಗವಾಗಿ ಸ್ತ್ರೀಯರಿಗೆ ಸೀರೆ, ಎಳ್ಳುಬೆಲ್ಲ ಮತ್ತು ಕಬ್ಬು ನೀಡಲಾಯಿತು. ಶ್ರೀ ಇಳೈ ಆಳ್ವಾರ್ ಸ್ವಾಮೀಜಿ, ಫೌಂಡೇಷನ್ ಅಧ್ಯಕ್ಷ ಪಾರ್ಥಸಾರಥಿ ಇದ್ದರು.
ತಾಲೂಕಿನ ಸಿದ್ಧಲಿಂಗಪುರದಲ್ಲಿ ಬುಧವಾರ ಸಂಜೆ ಸಂಕ್ರಾಂತಿ ಅಂಗವಾಗಿ ರೈತರು ತಮ್ಮ ಎತ್ತುಗಳಿಗೆ ಕಿಚ್ಚು ಹಾಯಿಸಿ ಸಂಭ್ರಮಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.