ಮೈಸೂರು

ನಾಲೆಗಳಿಗೆ ನೀರು ಹರಿಸಿ

Published On :

ಕ.ಪ್ರ.ವಾರ್ತೆ ,  ಟಿ.ನರಸೀಪುರ ,  ಜ. 17
ತುರಗನೂರು ಶಾಖೆಯ ಹಲವಾರ ಹಾಗೂ ಬೊಪ್ಪೇಗೌಡನ ಪುರ ನಾಲೆಗಳಿಗೆ ಸಕಾಲದಲ್ಲಿ ಸರ್ಕಾರ ನೀರು ಹರಿಸುವ ಮೂಲಕ ರೈತರನ್ನು ಸಂಕಷ್ಟದಿಂದ ಪಾರು ಮಾಡಬೇಕೆಂದು ಮುಡಕನಪುರ ಮಠದ ಷಡಕ್ಷರಿ ದೇಶಿಕೇಂದ್ರ ಸ್ವಾಮೀಜಿ ಹೇಳಿದರು.
ತಾಲೂಕಿನ ಮುಡುಕನಪುರ ಗ್ರಾಮದಲ್ಲಿ ಬೊಪ್ಪೇಗೌಡನ ಪುರ ಮತ್ತು ಹಲವಾರ ನಾಲಾ ಹಿತರಕ್ಷಣಾ ಸಮಿತಿ ಉದ್ಘಾಟಿಸಿ ಮಾತನಾಡಿದ ಅವರು, ಕೃಷಿ ಕ್ಷೇತ್ರದಲ್ಲಿ ಸುಧಾರಣೆ ಕಂಡುಬರುತ್ತಿದ್ದರೂ ರೈತರ ಕಷ್ಟದ ಬದುಕು ಸರಿದಾರಿಗೆ ಬರುತ್ತಿಲ್ಲ. ಸಾವಿರಾರು ರೈತರ ಕೃಷಿ ಭೂಮಿಗೆ ನೀರುಣಿಸಲು ಎರಡೂ ನಾಲೆಗಳಿಗೂ ನೀರು ಬಿಡಲು ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ನೀಡುವ ಸವಲತ್ತುಗಳು ಸಮರ್ಪಕವಾಗಿ ರೈತರಿಗೆ ತಲುಪುತ್ತಿಲ್ಲ. ಉತ್ಪಾದನಾ ವೆಚ್ಚ ಅಧಿಕವಾಗಿ, ಇಳುವರಿಯಿಂದ ಪಡೆಯುವ ಆದಾಯ ಕ್ಷೀಣಿಸಿದಾಗ ಕುಗ್ಗಿ ಹೋಗುವ ರೈತ ಆತ್ಮಹತ್ಯೆಯ ಹಾದಿಯನ್ನು ಹಿಡಿಯುತ್ತಾರೆ. ಕೃಷಿ ನಷ್ಟಕ್ಕೆ ಆತ್ಮಹತ್ಯೆ ಮಾಡಿಕೊಳ್ಳುವುದು ಸರಿಯಲ್ಲ. ವೈಜ್ಞಾನಿಕತೆಯನ್ನು ಅಳವಡಿಸಿಕೊಂಡು ಬೇಡಿಕೆಗನುಗುಣವಾಗಿ ಬೆಳೆ ಬೆಳೆದು ಅಧಿಕ ಲಾಭ ಗಳಿಸಬೇಕೆಂದು ಷಡಕ್ಷರಿ ಶ್ರೀಗಳು ಕರೆ ನೀಡಿದರು.
ಸಂಘಟನೆಯಲ್ಲಿ ಬಲ: ಇತಿಹಾಸ ತಜ್ಞ ಪ್ರೊ.ನಂಜರಾಜೇ ಅರಸು ಮಾತನಾಡಿ, ಸಂಘಟನೆಯಲ್ಲಿ ಬಲವಿದೆ ಎಂಬುದನ್ನು ರೈತರು ಅರಿತುಕೊಳ್ಳಬೇಕು. ಒಗ್ಗೂಡಿದರೆ ಸರ್ಕಾರವನ್ನು ತಾವಿರುವಲ್ಲಿಗೆ ಬರುವಂತೆ ಮಾಡಬಹುದು. ಹೋರಾಟದ ಮೂಲಕವೇ ಏನನ್ನಾದರೂ ಸಾಧಿಸಬಹುದು ಎಂಬ ಕಿವಿಮಾತು ಹೇಳಿದರು.
ಬಿ.ಜಿ ಪುರ ಮತ್ತು ಹಲವಾರ ನಾಲಾ ಹಿತರಕ್ಷಣಾ ಸಮಿತಿ ಗೌರವಾಧ್ಯಕ್ಷರಾದ ಬೊಪ್ಪೇಗೌಡನಪುರ ಶ್ರೀ ಮಂಟೇಸ್ವಾಮಿ ಮಠದ ಪ್ರಭುದೇವರಾಜೇ ಅರಸು ಮಾತನಾಡಿ, ರೈತರು ನಡೆಸುವ ಎಲ್ಲ ಹೋರಾಟಗಳಿಗೆ ಬೆಂಬಲ ನೀಡುವುದಾಗಿ ಘೋಷಿಸಿದರು. ರೈತ ನಾಯಕ ಪ್ರೊ.ಕೆ.ಸಿ. ಬಸವರಾಜು ಅವರು ರೈತ ಚಳುವಳಿಗಳ ಬಗ್ಗೆ ತಿಳಿಸಿಕೊಟ್ಟರು.
ಅಶ್ವಥ್‌ನಾರಾಯಣ ಅರಸು, ಹಿತರಕ್ಷಣಾ ಸಮಿತಿ ಅಧ್ಯಕ್ಷ ದೊಡ್ಡಬೂವಳ್ಳಿ ನಟರಾಜು, ಕಾರ್ಯದರ್ಶಿ ವಸಂತ, ರೈತ ಮುಖಂಡರಾದ ಬಸವರಾಜೇ ಅರಸು, ಕುಂದೂರುಮೂರ್ತಿ, ಪಾಪಣ್ಣ, ಸಾಲೂರು ಸ್ವಾಮಿ, ಚಿದರವಳ್ಳಿ ನಾಗೇಂದ್ರ, ಮಹದೇವು, ಶಿಕ್ಷಕ ನಾಗೇಶ, ತಾಪಂ ಮಾಜಿ ಅಧ್ಯಕ್ಷ ಎಂ.ಕುಮಾರಸ್ವಾಮಿ ಸೇರಿದಂತೆ ಬಿ.ಜಿ ಪುರ ಮತ್ತು ಹಲವಾರ ನಾಲಾ ವ್ಯಾಪ್ತಿಯ ಗ್ರಾಮಗಳ ರೈತರು ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.