ಬಿ.ಇಡಿ ಕಾಲೇಜಿಗೆ ಡಿಮ್ಯಾಂಡು
ಮೈಸೂರು: ರಾಜ್ಯ ಸರ್ಕಾರ 2009ರಲ್ಲಿ ಪದವಿಪೂರ್ವ ಕಾಲೇಜಿಗೆ ನೇಮಕವಾದ ಉಪನ್ಯಾಸಕರಿಗೆ ಬಿ.ಇಡಿ ಕೋರ್ಸ್ ಮಾಡಲು ವೇತನ ಸಹಿತ ರಜೆ ಘೋಷಿಸಿದ ಬೆನ್ನಲ್ಲೇ ರಾಜ್ಯಾದ್ಯಂತ ಬಿ.ಇಡಿ ಕಾಲೇಜುಗಳಿಗೆ ಬೇಡಿಕೆ ಹೆಚ್ಚಾಗಿದೆ. ಸರ್ಕಾರಿ ಕಾಲೇಜುಗಳನ್ನು ಹೊರತುಪಡಿಸಿ ಅನುದಾನಿತ ಹಾಗೂ ಅನುದಾನರಹಿತ ಕಾಲೇಜುಗಳಲ್ಲಿ ಲಭ್ಯವಿರುವ ಖಾಸಗಿ ಸೀಟುಗಳೂ ಈಗ ಬಹುತೇಕ ಭರ್ತಿಯಾಗುತ್ತಿವೆ.
ಸಾರ್ವಜನಿಕ ಶಿಕ್ಷಣ ಇಲಾಖೆ 2013-14ನೇ ಸಾಲಿಗೆ ಬಿ.ಇಡಿ ಕೋರ್ಸಿಗೆ ಪ್ರವೇಶಾತಿಗೆ ಸಂಬಂಧಿಸಿದಂತೆ ಕಳೆದ ವರ್ಷ ನ.22 ರಿಂದ ಡಿ.6ರವರೆಗೆ ಅರ್ಜಿ ಆಹ್ವಾನಿಸಿತ್ತು. ಜ್ಯೇಷ್ಠತೆ, ಮೀಸಲಾತಿ ಆಧಾರದ ಮೇಲೆ ಸರ್ಕಾರಿ ಸೀಟುಗಳಿಗೆ ಆಯ್ಕೆಯಾದ ಅಭ್ಯರ್ಥಿಗಳ ತಾತ್ಕಾಲಿಕ ಪಟ್ಟಿಯನ್ನು ಜ.2ರಂದು ಪ್ರಕಟಿಸಿದೆ. ಮೊದಲ ಹಂತದ ಪ್ರವೇಶಾತಿ ಪ್ರಕ್ರಿಯೆ ಜ.4 ರಿಂದ 10ರೊಳಗೆ ಪೂರ್ಣಗೊಂಡಿದೆ. ಈಗ ಎರಡನೇ ಹಂತದ ಪಟ್ಟಿ ಪ್ರಕಟಗೊಳ್ಳಬೇಕಾಗಿದೆ.
ಖಾಸಗಿ ಸೀಟುಗಳು ಭರ್ತಿ: ಸರ್ಕಾರಿ ಬಿ.ಇಡಿ ಕಾಲೇಜುಗಳಲ್ಲಿ ಶೇ.100ರಷ್ಟು ಸರ್ಕಾರಿ ಸೀಟುಗಳು, ಅನುದಾನಿತ ಬಿ.ಇಡಿ ಕಾಲೇಜುಗಳಲ್ಲಿ 75:25, ಅನುದಾನರಹಿತ ಬಿ.ಇಡಿ ಕಾಲೇಜುಗಳಲ್ಲಿ 50:50 ಅನುಪಾತದಂತೆ ಸರ್ಕಾರಿ, ಖಾಸಗಿ ಸೀಟುಗಳನ್ನು ಸರ್ಕಾರ ಕಾಯ್ದಿರಿಸಿದೆ. ಈಗ ಸರ್ಕಾರಿ ಸೀಟುಗಳ ಭರ್ತಿ ಪ್ರಕ್ರಿಯೆ ಪ್ರಗತಿಯಲ್ಲಿದೆ. ಈಗಾಗಲೇ ಖಾಸಗಿ ಸೀಟುಗಳು ಬಹುತೇಕ ಭರ್ತಿಯಾಗಿವೆ. ಇದರ ಪರಿವೇ ಇಲ್ಲದವರು, ಖಾಸಗಿ ಸೀಟುಗಳನ್ನು ಪಡೆಯಬೇಕೆಂದು ಕಾದು ಕುಳಿತು ಮಾಹಿತಿ ಕೊರತೆ ಇದ್ದವರಿಗೆ ಈಗ ಭ್ರಮನಿರಸನವಾಗಿದೆ. ಹೈದರಾಬಾದ್ ಕರ್ನಾಟಕ ಕಲಂ 371ಜೆ ಪ್ರಕಾರ ಅಲ್ಲಿನ ಅಭ್ಯರ್ಥಿಗಳಿಗೆ ಮೀಸಲಿದ್ದು, ಖಾಸಗಿ ಸೀಟುಗಳು ಸದ್ದಿಲ್ಲದಂತೆ ಭರ್ತಿಯಾಗಿವೆ.
ಈ ಹಿಂದಿನ ವರ್ಷಗಳಲ್ಲಿ ಬಿ.ಇಡಿ ಕೋರ್ಸ್ಗೆ ಪ್ರವೇಶ ಬಯಸುವವರಿಗೆ ಸರ್ಕಾರವೇ ಸಿಇಟಿ ನಡೆಸಿ ಜ್ಯೇಷ್ಠತಾ ಆಧಾರದ ಮೇಲೆ ಪ್ರವೇಶ ಅವಕಾಶ ನೀಡುತ್ತಿತ್ತು. ಈ ಕಾನೂನಿನಿಂದ ಹಲವು ಅಭ್ಯರ್ಥಿಗಳು ಬಿ.ಇಡಿ ಸೇರಲು ಹಿಂದೇಟು ಹಾಕುತ್ತಿದ್ದರು. ಹೀಗಾಗಿ ಕಾಲೇಜುಗಳಲ್ಲಿ ವಿದ್ಯಾರ್ಥಿಗಳೇ ಇರುತ್ತಿರಲಿಲ್ಲ. ಹಿಂದಿನ ಬಿಜೆಪಿ ಸರ್ಕಾರ ಕಾನೂನು ಸಡಿಲಗೊಳಿಸಿ ಸಿಇಟಿ ರದ್ದುಗೊಳಿಸಿ, ನೇರ ಪ್ರವೇಶಾತಿಗೆ ಅನುವು ಮಾಡಿಕೊಟ್ಟಿತು. ಈ ಹಿನ್ನೆಲೆಯಲ್ಲಿ ಕಾನೂನು ಸಡಿಲತೆಯಿಂದ ಹೊರಬಂದ ಕಾಲೇಜುಗಳು ಸೀಟುಗಳನ್ನು ಭಿಕರಿ ಮಾಡುತ್ತಿವೆ. ರಾಜ್ಯಾದ್ಯಂತ 37 ನೋಡಲ್ ಕೇಂದ್ರಗಳಲ್ಲಿ ಒಟ್ಟು 315 ಕಾಲೇಜುಗಳು ಕಾರ್ಯನಿರ್ವಹಿಸುತ್ತಿವೆ.
ಕೊಟ್ಟಷ್ಟು ಹಣಕ್ಕೆ ಬೇಕಾದಷ್ಟು ಸೀಟುಗಳು: ಇದ್ದಕ್ಕಿದ್ದಂತೆ ಬಿ.ಇಡಿ ಕೋರ್ಸಿಗೆ ಬೇಡಿಕೆ ಹೆಚ್ಚಿದ ಹಿನ್ನೆಲೆಯಲ್ಲಿ ಅನುದಾನಿತ ಹಾಗೂ ಅನುದಾನರಹಿತ ಬಿ.ಇಡಿ ಕಾಲೇಜುಗಳು ತಮ್ಮ ಬಳಿ ಇರುವ ಖಾಸಗಿ ಸೀಟುಗಳಿಗೆ (ಪೇಮೆಂಟ್ ಕೋಟಾ) ಸರ್ಕಾರ ನಿಗದಿ ಮಾಡಿರುವ ಹಣಕ್ಕಿಂತ ಹೆಚ್ಚಿಗೆ ಪಡೆಯುತ್ತಿದೆ. ಸೀಟು ಸಿಕ್ಕರೆ ಸಾಕಪ್ಪ ಅಂದುಕೊಂಡಿದ್ದವರು ಸಾವಿರಾರು ರುಪಾಯಿ ನೀಡಿ ಪ್ರವೇಶಾತಿ ಪಡೆದಿದ್ದಾರೆ. ಸರ್ಕಾರ ನಿಗದಿಪಡಿಸಿರುವಂತೆ ಅನುದಾನಿತ ಕಾಲೇಜುಗಳ ಖಾಸಗಿ ಸೀಟುಗಳಿಗೆ 13 ಸಾವಿರ (ಬೋಧನಾ ಶುಲ್ಕ- 8 ಸಾವಿರ, ಸಂಸ್ಥೆಯ ಅಭಿವೃದ್ಧಿಗೆ 5 ಸಾವಿರ), ಅನುದಾನರಹಿತ ಕಾಲೇಜುಗಳ ಖಾಸಗಿ ಸೀಟುಗಳಿಗೆ 35 ಸಾವಿರ (ಬೋಧನಾ ಶುಲ್ಕ- 30 ಸಾವಿರ, ಸಂಸ್ಥೆ ಅಭಿವೃದ್ಧಿಗೆ 5 ಸಾವಿರ) ನೀಡಬೇಕಾಗಿತ್ತು. ಈಗಿನ ಮಾಹಿತಿ ಪ್ರಕಾರ ಪ್ರತಿ ಸೀಟಿನ ಬೆಲೆ 45 ಸಾವಿರ ಮೀರಿದೆ.
ಎಲ್ಲ ಕಾಲೇಜುಗಳು ಕಾನೂನನ್ನು ಗಾಳಿಗೆ ತೂರಿ ಮೊದಲು ಬಂದವರಿಗೆ ಹೆಚ್ಚಿನ ಹಣ ನಿಗದಿಪಡಿಸಿ ಸೀಟು ನೀಡುತ್ತಿವೆ. ಕೆಲವು ಕಾಲೇಜುಗಳಲ್ಲಿ ಸೀಟುಗಳು ಲಭ್ಯವಿದ್ದರೂ ಇಲ್ಲವೆಂದು ಬೇಡಿಕೆ ಸೃಷ್ಟಿಸಿ ಹೆಚ್ಚಿನ ಹಣಕ್ಕೆ ನೀಡಲಾಗುತ್ತಿದೆ. ಕೆಲವೊಂದು ತಾಲೂಕುಗಳಲ್ಲಿ ಆಯಾ ಕ್ಷೇತ್ರದ ಶಾಸಕರ ಮೇಲೂ ಪ್ರಭಾವ ಬೀರಿರುವ ಪ್ರಕರಣ ಕಂಡು ಬಂದಿದೆ. ಈ ಎಲ್ಲ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಮತ್ತೆ ಸಿಇಟಿ ಜಾರಿಗೆ ತರುವ ಬಗ್ಗೆ ಸರ್ಕಾರ ಗಂಭೀರವಾಗಿ ಚಿಂತಿಸುತ್ತಿದೆ ಎನ್ನಲಾಗಿದೆ.
-ಜೆ. ಮಹದೇವ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

