ಮೈಸೂರು

ಕೆರೆಗಳಿಗೆ ಹರಿಯಲಿದೆ ನೀರು

Published On :

ಪಿರಿಯಾಪಟ್ಟಣ: ಎಲ್ಲವೂ ಅಂದುಕೊಂಡಂತೆ ನಡೆದಲ್ಲಿ ಪಿರಿಯಾಪಟ್ಟಣ ತಾಲೂಕಿನ 10ಕ್ಕೂ ಹೆಚ್ಚು ಕೆರೆಗಳು ಹಾಗೂ ಹುಣಸೂರು ತಾಲೂಕು ಹೈರಿಗೆ ಕೆರೆಗಳು ಮುಂದಿನ ಮಳೆಗಾಲದಿಂದ ನೀರು ತುಂಬುಲಿದ್ದು, ಕೃಷಿ ಚಟುವಟಿಕೆಗೆ ಸಹಕಾರಿಯಾಗಲಿದೆ.
ಮಾಜಿ ಮಂತ್ರಿ ದಿ. ಎಚ್.ಎಂ.ಚನ್ನಬಸಪ್ಪ ಅವರ ಅವಧಿಯಲ್ಲಿ ತಾಲೂಕಿನ ದೊಡ್ಡಹರವೆ ಅರಣ್ಯ ಪ್ರದೇಶದಲ್ಲಿ ಮಳೆಗಾಲದಲ್ಲಿ ಬರುವ ನೀರನ್ನು ಸಮರ್ಪಕವಾಗಿ ಬಳಸಿಕೊಳ್ಳುವ ನಿಟ್ಟಿನಲ್ಲಿ ಹಾಗೂ ವ್ಯವಸ್ಥಿತವಾಗಿ ಕಾಲುವೆಗಳ ಮೂಲಕ ತಾಲೂಕಿನ ಕೆರೆಗಳಿಗೆ ನೀರು ಹರಿಸುವ ನಿಟ್ಟಿನಲ್ಲಿ ಮಾಡಲಾಗಿದ್ದ ಕಾಲುವೆಗಳಿಗೆ ಕಾಯಕಲ್ಪ ದೊರೆಯಲಿದ್ದು, ತಾಲೂಕಿನ ನವಿಲೂರು, ಭೂತನಹಳ್ಳಿ, ನಂದಿನಾಥಪುರ, ಬೆಳತೂರು, ಚೌಡೇನಹಳ್ಳಿ, ಪಿರಿಯಾಪಟ್ಟಣದ ದೊಡ್ಡಕೆರೆ, ಚಿಕ್ಕಕೆರೆ ಸೇರಿದಂತೆ ಹುಣಸೂರು ತಾಲೂಕು ಹೈರಿಗೆ ಗ್ರಾಮದವರೆಗಿನ ಕೆರೆಗಳಿಗೆ ಹಾಗೂ ಕಾಲುವೆ ಮಾರ್ಗದಲ್ಲಿ ಸಿಗುವ ಬಹುತೇಕ ಸಣ್ಣಪುಟ್ಟ ಕೆರೆಗಳು ಮತ್ತು ಕಟ್ಟೆಗಳಿಗೆ ನೀರು ತುಂಬಲಿದೆ. ಅರಣ್ಯ ಪ್ರದೇಶದಿಂದ ಸುಮಾರು 25 ಕಿ.ಮೀವರೆಗೆ ಕಾಲುವೆ ಮೂಲಕ ನೀರು ಹರಿಯಲಿದೆ.
ಸಿಎಚ್ವಿ ಭೇಟಿ: ಕೆಲ ದಿನಗಳ ಹಿಂದೆ ಅರಣ್ಯ ಪ್ರದೇಶಕ್ಕೆ ವಿಧಾನ ಪರಿಷತ್ ಸದಸ್ಯ ಸಿ.ಎಚ್.ವಿಜಯ ಶಂಕರ್ ಎಸಿಎಫ್ ವಿಜಯ್‌ಕುಮಾರ್, ಆರ್‌ಎಫ್‌ಒ ಎಂ.ಎಸ್.ಚಿಣ್ಣಪ್ಪ, ಸಣ್ಣ ನೀರಾವರಿ ಇಲಾಖೆಯ ಎಂಜಿನಿಯರ್‌ಗಳಾದ ಕಾಂತರಾಜು, ಭಾಸ್ಕರ್ ಜತೆ ಭೇಟಿ ನೀಡಿ ಪರಿಶೀಲಿಸಿದ್ದರು. ಅಲ್ಲಿ ಆಗಬೇಕಿರುವ ಕಾಮಗಾರಿಗಳ ಬಗ್ಗೆ ಪರಿಶೀಲನೆ ನಡೆಸಿ ಅರಣ್ಯ ಪ್ರದೇಶಕ್ಕೆ ಯಾವುದೇ ರೀತಿಯಲ್ಲೂ ಧಕ್ಕೆಯಾಗದಂತೆ ಕಾಮಗಾರಿಯನ್ನು ಅರಣ್ಯ ಇಲಾಖೆಯ ಸಹಕಾರದೊಂದಿಗೆ ಮಾಡುವಂತೆ ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದ್ದರು. ಕಾಲುವೆ ದುರಸ್ತಿ ಕಾರ್ಯಕ್ಕಾಗಿ 5 ಕೋಟಿ ಮಂಜೂರಾಗಿದ್ದು 2 ಕೋಟಿ ಹಣ ಬಿಡುಗಡೆಯಾಗಿದೆ. ಅರಣ್ಯ ವ್ಯಾಪ್ತಿಯಲ್ಲಿ ಸಿದ್ದೇಶ್ವರ ಬೆಟ್ಟದಿಂದ ಸುಮಾರು 3 ಕಿ.ಮೀ ಕಾಲುವೆ ದುರಸ್ತಿ ಕಾರ್ಯ ನಡೆಯಬೇಕಿದೆ ಎಂದು ತಿಳಿಸಿದ್ದಾರೆ.
ಪ್ರಾಣಿ ಪಕ್ಷಿಗಳಿಗೆ ಅನುಕೂಲ
ಅರಣ್ಯ ವ್ಯಾಪ್ತಿಯಲ್ಲಿ ಕಾಲುವೆ ದುರಸ್ತಿ ಕಾರ್ಯ ನಡೆಯುವುದರಿಂದ ಅರಣ್ಯ ಪ್ರದೇಶದಲ್ಲಿರುವ ಚಿಕ್ಕಪುಟ್ಟ ಕೆರೆಗಳು, ಹಳ್ಳಗಳಿಗೂ ನೀರು ತುಂಬಲಿದ್ದು ಅದರಿಂದ ಪ್ರಾಣಿ ಪಕ್ಷಿಗಳಿಗೂ ಅನುಕೂಲವಾಗಲಿದೆ. ಅಲ್ಲದೆ ಹೆಚ್ಚಿನ ಕಾಲ ನೀರು ಕಟ್ಟೆಗಳಲ್ಲಿ ನಿಲ್ಲುವುದರಿಂದ ಅರಣ್ಯ ಪ್ರದೇಶದ ವ್ಯಾಪ್ತಿಯಲ್ಲಿ ಬರುವ ಸುಮಾರು 3.5 ಕಿ.ಮೀ ಕಾಲುವೆ ಮಾರ್ಗ ಸದಾ ಕಾಲ ಅಚ್ಚ ಹಸಿರಾಗಿರುತ್ತದೆ. ಕಾಲುವೆ ದುರಸ್ತಿ ಕಾರ್ಯವನ್ನು ಸಣ್ಣ ನೀರಾವರಿ ಇಲಾಖೆಯವರು ನಿರ್ವಹಿಸಲಿದ್ದು ಅರಣ್ಯ ಇಲಾಖೆಯ ಸಹಕಾರ ಅಗತ್ಯವಿದೆ. ಈ ಕಾರ್ಯವು ಸಮರ್ಪಕವಾಗಿ ಪೂರ್ಣಗೊಂಡಲ್ಲಿ ಸಾವಿರಾರು ಎಕರೆ ಪ್ರದೇಶದ ರೈತರ ಕೃಷಿ ಚಟುವಟಿಕೆಗಳಿಗೆ ನೀರು ಲಭ್ಯವಾಗುವುದಲ್ಲದೆ ಅಂತರ್ಜಲ ಮಟ್ಟವು ಹೆಚ್ಚಲಿದೆ.


-ಪಿ.ಎನ್. ಸುಬ್ರಮಣ್ಯ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.