ಮೈಸೂರು

ಇಂದು ಬಹುಮಾನ ವಿತರಣೆ

Published On :

ಎಚ್.ಡಿ. ಕೋಟೆ: ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಎಸ್ಸೆಸ್ಸೆಲ್ಸಿ, ಪಿಯುಸಿಯಲ್ಲಿ ತೇರ್ಗಡೆಯಾಗಿರುವ ಅಂಗವಿಕಲ ವಿದ್ಯಾರ್ಥಿಗಳಿಗೆ ಶಾಸಕ ಎಸ್. ಚಿಕ್ಕಮಾದು ಜ.25 ರಂದು  ಬಹುಮಾನ ವಿತರಿಸುವರು. ತಾಲೂಕು ವಿಕಲಚೇತನರ ಒಕ್ಕೂಟದ ಸಂಯೋಜಕ ಮಹದೇವಯ್ಯ ಭಾಗವಹಿಸುವರು.


ಶಾಸ್ತ್ರಿ ಶಾಲೆಯಲ್ಲಿ ಅದ್ಧೂರಿ ವಾರ್ಷಿಕೋತ್ಸವ


ಹುಣಸೂರು: ಗ್ರಾಮೀಣ ಪ್ರದೇಶದಲ್ಲಿ ಶಾಸ್ತ್ರಿ ವಿದ್ಯಾಸಂಸ್ಥೆಯು ವಿದ್ಯಾರ್ಥಿಗಳಿಗೆ ಗುಣಮಟ್ಟ ಮತ್ತು ಆಧುನಿಕ ಶಿಕ್ಷಣ ಸೌಲಭ್ಯ ವ್ಯವಸ್ಥೆಯನ್ನು ಕಲ್ಪಿಸಿ, ಉತ್ತಮ ಸಂಸ್ಕಾರ ಕಲಿಸುತ್ತಿರುವುದು ಶ್ಲಾಘನೀಯವಾಗಿದೆ ಎಂದು ಬೆಂಗಳೂರಿನ ರಾಮಕೃಷ್ಣಮಠದ ತ್ಯಾಗೀಶ್ವರಾನಂದ ಸ್ವಾಮೀಜಿ ಪ್ರಶಂಸಿದರು.
ಪಟ್ಟಣದ ಶಾಸ್ತ್ರಿ ಪಬ್ಲಿಕ್ ಶಾಲೆಯಲ್ಲಿ ನಡೆದ ಶಾಸ್ತ್ರಿ ಧಮಾಕ 2014ರ ಶಾಲಾ ವಾರ್ಷಿಕೋತ್ಸವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಶಿಕ್ಷಣ ಸಂಸ್ಥೆಗಳು ಜಾತ್ಯತೀತ ತತ್ವದಡಿಯಲ್ಲಿ ಜ್ಞಾನ ದಾಸೋಹ ನೀಡುತ್ತಿವೆ ಎಂದು ಹೇಳಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ರಾಜಶೇಖರ್, ಶಾಸ್ತ್ರಿ ವಿದ್ಯಾಸಂಸ್ಥೆ ಕಾರ್ಯದರ್ಶಿ ರಾಧಾಕೃಷ್ಣ, ಎಸ್ವಿಇಐ ಶಿಕ್ಷಣ ಸಂಸ್ಥೆ ಅಧ್ಯಕ್ಷ ಪೋತರಾಜ್, ಶಾಸ್ತ್ರಿ ವಿದ್ಯಾಸಂಸ್ಥೆಯ ಪ್ರಾಂಶುಪಾಲ ಎಂ.ಎಲ್. ರವಿಶಂಕರ್, ನಿರ್ದೇಶಕ ಎಚ್.ಎಸ್. ಸಚ್ಚಿತ್ ಮಾತನಾಡಿದರು. ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

ಅತಿಥಿ ಉಪನ್ಯಾಸಕರ ಪ್ರತಿಭಟನೆ

ಪಿರಿಯಾಪಟ್ಟಣ: ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಅತಿಥಿ ಉಪನ್ಯಾಸಕರು ತರಗತಿ ಬಹಿಷ್ಕರಿಸಿ ಪ್ರತಿಭಟಿಸಿದರು.
ಪ್ರತಿಭಟನಾ ನೇತೃತ್ವ ವಹಿಸಿದ್ದ ಮಹೇಶ್ ಮಾತನಾಡಿ, ಹಲವಾರು ವರ್ಷಗಳಿಂದ ಅತಿಥಿ ಉಪನ್ಯಾಸಕರಾಗಿ ಕರ್ತವ್ಯ ನಿರ್ವಹಿಸುತ್ತಿರುವ ತಮ್ಮನ್ನೇ ಮುಂದಿನ ಶೈಕ್ಷಣಿಕ ವರ್ಷದಿಂದ ಕಾಯಂಗೊಳಿಸಬೇಕು, ಪ್ರಸ್ತುತ ಅತಿಥಿ ಉಪನ್ಯಾಸಕರಿಗೆ ನೀಡುತ್ತಿರುವ 8-10 ಸಾವಿರ ಬದಲಿಗೆ 25 ಸಾವಿರ ನೀಡಬೇಕು. ವೇತನವನ್ನು ಪ್ರತಿ ತಿಂಗಳೂ ಪಾವತಿಸಲು ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ಮುಖ್ಯಮಂತ್ರಿಗಳ ನಿವಾಸದ ಮುಂಭಾಗ ಅನಿರ್ದಿಷ್ಟಾವಧಿ ಪ್ರತಿಭಟನಾ ಧರಣಿ ಹಮ್ಮಿಕೊಳ್ಳುವುದಾಗಿ ತಿಳಿಸಿದರು. ಅತಿಥಿ ಉಪನ್ಯಾಸಕರಾದ ಡಾ.ನಫೀಜುಲ್ಲಾ ಷರೀಫ್, ದಿವ್ಯ, ಮಧುಕುಮಾರಿ, ವಸಂತಕುಮಾರಿ, ರಶ್ಮಿ, ಅನಿತಾ, ಯಶಸ್ವಿನಿ, ಸೌಮ್ಯ, ಶಾರದಾ, ಪರಮೇಶ್, ಮಂಜುನಾಥ್, ಎಸ್.ಕೆ. ಮಂಜು, ನಾಗಪ್ರಶಾಂತ್, ರಾಜೇಶ್, ವಸಂತ್, ತಾಜ್ದಾರ್ಅಲಿ, ಇಲಿಯಾಸ್ಬಾನ್ ಇದ್ದರು

ಅಂಗಡಿಯ ಬೀಗ ಮುರಿದು ಕಳವು
ಪಿರಿಯಾಪಟ್ಟಣ: ಅಂಗಡಿಯ ಬೀಗ ಒಡೆದಿರುವ ಕಳ್ಳರು, ಸಾವಿರಾರು ರು. ಮೌಲ್ಯದ ಪದಾರ್ಥಗಳನ್ನು ದೋಚಿ ಪರಾರಿಯಾಗಿರುವ ಘಟನೆ ಗುರುವಾರ ರಾತ್ರಿ ಜರುಗಿದೆ. ಪಟ್ಟಣಕ್ಕೆ ಹೊಂದಿಕೊಂಡಂತಿರುವ ಅಬ್ಬೂರು ಬಳಿಯ ಬಿ.ಎಂ. ರಸ್ತೆಯ ಮಂಜುನಾಥ್ ಎಂಬವರಿಗೆ ಸೇರಿದ ಅಂಗಡಿಯ ಬೀಗ ಒಡೆದಿರುವ ಕಳ್ಳರು, 25 ಸಾವಿರ ಬೆಲೆ ಬಾಳುವ ಎಲ್ಸಿಡಿ ಟಿ.ವಿ, 3 ಮೊಬೈಲ್, 3 ಸಾವಿರ ಮೌಲ್ಯದ ಸಿಗರೇಟ್ ಹಾಗೂ ಸಾವಿರಕ್ಕೂ ಹೆಚ್ಚು ನಗದನ್ನು ದೋಚಿ ಪರಾರಿಯಾಗಿದ್ದಾರೆ. ಅಂಗಡಿಯ ಮಾಲೀಕ ಮಂಜುನಾಥ್ ಪಿರಿಯಾಪಟ್ಟಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ರಾಜೀವ್ ಗಾಂಧಿ ಕೇಂದ್ರಕ್ಕೆ ಶಂಕುಸ್ಥಾಪನೆ

ತಾಂಡವಪುರ: ರಾಷ್ಟ್ರೀಯ ಮಹಾತ್ಮಗಾಂಧಿ ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ನಂಜನಗೂಡು ತಾಲೂಕು ತಾಂಡವಪುರ ಗ್ರಾಮದಲ್ಲಿ ಸುಮಾರು 16.20 ಲಕ್ಷ ಅಂದಾಜು ವೆಚ್ಚದಲ್ಲಿ ರಾಜೀವ್ಗಾಂಧಿ ಸೇವಾ ಕೇಂದ್ರದ ಕಾಮಗಾರಿಗೆ ಸಂಸದ ಆರ್. ಧ್ರುವನಾರಾಯಣ್ ಭೂಮಿಪೂಜೆ ನೆರವೇರಿಸಿದರು.
ನಂತರ ಅವರು ಮಾತನಾಡಿ, ಈ ಯೋಜನೆಗೆ ಕೇಂದ್ರ ಸರ್ಕಾರ 4 ಸಾವಿರ ಕೋಟಿ ಹಣ ಬಿಡುಗಡೆ ಮಾಡಿದ್ದು, ನಂಜನಗೂಡು ತಾಲೂಕಿನ 45 ಗ್ರಾಪಂಗಳಲ್ಲೂ ರಾಜೀವ್ ಗಾಂಧಿ ಸೇವಾ ಕೇಂದ್ರ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. ಈ ಕಾಮಗಾರಿಗಳು ಉತ್ತಮ ಗುಣಮಟ್ಟದಿಂದ ಕೂಡಿದ್ದು, ಆದಷ್ಟು ಬೇಗನೆ ಕೆಲಸ ಮುಗಿದು ಸಾರ್ವಜನಿಕರ ಸೇವೆಗೆ ಲಭ್ಯವಾಗಬೇಕೆಂದು ಹೇಳಿದ ಅವರು, ಮೈಸೂರು ನಂಜನಗೂಡು ಊಟಿ ರಸ್ತೆಯ ಕಾಮಗಾರಿಯ ಟೆಂಡರ್ ಫೆ.17ಕ್ಕೆ ನಡೆಯಲಿದ್ದು, ಅಂದು ಟೆಂಡರ್ ಪೂರ್ಣಗೊಳ್ಳುವ ಭರವಸೆಯಿದ್ದು, ಕೆಲಸ ಬೇಗನೆ ಆರಂಭವಾಗಲಿದೆ ಎಂದು ತಿಳಿಸಿದರು.
ಜಿಪಂ ಸದಸ್ಯರಾದ ರೇವಮ್ಮ ಟಿ.ಕೆ. ಮಾಲೇಗೌಡ, ಗ್ರಾಪಂ ಅಧ್ಯಕ್ಷ ಪಿ.ಗಿರೀಶ್, ತಾ. ಕಾರ್ಯ ನಿರ್ವಾಹಕ ಅಧಿಕಾರಿ ಕೃಷ್ಣರಾಜು, ಗ್ರಾಪಂ ಸದಸ್ಯರಾದ ಬಿ. ಕೆಂಚೇಗೌಡ, ಕೆ. ಶ್ರೀಕಂಠಸ್ವಾಮಿ ಇದ್ದರು.  

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.