ಮೈಸೂರು

ಶಿಥಿಲ ಶಾಲಾ ಕಟ್ಟಡ ನೆಲಸಮ

Published On :

ಕ.ಪ್ರ.ವಾರ್ತೆ    ಮೈಸೂರು    ಜ. 29
ಜಿಲ್ಲೆಯಲ್ಲಿರುವ ಶಿಥಿಲ ಶಾಲಾ ಕಟ್ಟಡಗಳನ್ನು ಕೆಡವಲು ಮೈಸೂರು ಜಿಲ್ಲಾ ಪಂಚಾಯ್ತಿ ನಿರ್ಧರಿಸಿದೆ.
ಅಧ್ಯಕ್ಷ ಎಂ.ಮಹದೇವು ಅವರ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ಸಭೆಯಲ್ಲಿ ಈ ಸಂಬಂಧ ನಿರ್ಣಯ ಅಂಗೀಕರಿಸಿ, ಶೀಘ್ರ ಅನುಮತಿ ನೀಡುವಂತೆ ರಾಜ್ಯ ಸರ್ಕಾರ ಆಗ್ರಹಿಸಲಾಯಿತು.
ಸಭೆಯಲ್ಲಿ ಮೊದಲಿಗೆ ಅನುಪಾಲನಾ ವರದಿಯ ಮೇಲೆ ಚರ್ಚೆ ಆರಂಭಿಸಿದ ಕಾಂಗ್ರೆಸ್ನ ಎಂ.ಬಿ. ಸಿದ್ದೇಗೌಡ, ಶಿಥಿಲಗೊಂಡಿರುವ ಶಾಲಾ ಕಟ್ಟಡಗಳನ್ನು ಅನುಮತಿ ನೀಡದಿರುವುದು, ಪ್ರೌಢಶಾಲೆಗಳಲ್ಲಿ ಶಿಕ್ಷಕರ ಕೊರತೆ, ದೈಹಿಕ ಶಿಕ್ಷಕರ ನೇಮಕಾತಿ ಆಗದಿರುವುದನ್ನು ಪ್ರಸ್ತಾಪಿಸಿದರು.
ಅಧ್ಯಕ್ಷ ಎಂ.ಮಹದೇವು ಮಧ್ಯಪ್ರವೇಶಿಸಿ, ಉತ್ತರಿಸಲು ಮುಂದಾದಾಗ ಮಾಜಿ ಅಧ್ಯಕ್ಷೆಯಾದ ಜೆಡಿಎಸ್ನ ಜೆ. ಸುನೀತಾ ವೀರಪ್ಪಗೌಡ ತಡೆದರು. ಅಧ್ಯಕ್ಷರು ಮಧ್ಯೆ ಪ್ರವೇಶಿಸಬಾರದು. ಸದಸ್ಯರು ಹೇಳುವುದನ್ನು ತಾಳ್ಮೆಯಿಂದ ಕೇಳಿ, ನಂತರ ಉತ್ತರಿಸಬೇಕು ಎಂದರು. ಸುಧಾ ಮಹದೇವಯ್ಯ ಮೊದಲಾದವರು ಇದಕ್ಕೆ ಧ್ವನಿಗೂಡಿಸಿದರು.
ಕಾಂಗ್ರೆಸ್ನ ಕೆ.ಮಾರುತಿ ಮಾತನಾಡಿ, ನಂಜನಗೂಡು, ಮೈಸೂರು, ಕೆ.ಆರ್. ನಗರ ತಾಲೂಕುಗಳಲ್ಲಿ ಮಾತ್ರವಲ್ಲದೇ ಜಿಲ್ಲೆಯ ಬಹುತೇಕ ಕಡೆ ನೂರಾರು ಶಾಲಾ ಕಟ್ಟಡಗಳು ಶಿಥಿಲಗೊಂಡಿವೆ. ಅವುಗಳನ್ನು ಶೀಘ್ರ ಕೆಡವಿ. ಹೆಡಿಯಾಲ ಶಾಲೆಗೆ 58 ಲಕ್ಷ ಮಂಜೂರಾಗಿದ್ದರೂ ಹಳೆಯ ಕಟ್ಟಡ ಕೆಡವಿಲ್ಲ ಎಂದು ದೂರಿದರು.
ಮರದ ಕೆಳಗೆ ಪಾಠ: ಕಾಂಗ್ರೆಸ್ನ ನಂದಿನಿ ಚಂದ್ರಶೇಖರ್ ಮಾತನಾಡಿ, ಎಚ್.ಡಿ. ಕೋಟೆ ತಾಲೂಕಿನ ಮಲಾರ ಕಾಲೋನಿಯಲ್ಲಿ ಕೂಡ ಹೊಸ ಕಟ್ಟಡ ನಿರ್ಮಾಣವಾಗದೆ ಮಕ್ಕಳು ಮರದ ಕೆಳಗೆ ಕುಳಿತು ಪಾಠ ಕೇಳಬೇಕಾದ ಸ್ಥಿತಿ ಇದೆ ಎಂದರು.
ಜೆಡಿಎಸ್ ಸಿ.ಟಿ. ರಾಜಣ್ಣ ಮಾತನಾಡಿ, ಹುಣಸೂರು ತಾ. ಚಿಲ್ಕುಂದ ಶಾಲೆಯ ದುಸ್ಥಿತಿಯ ಬಗ್ಗೆ 7 ವರ್ಷಗಳಿಂದ ಪ್ರಸ್ತಾಪಿಸುತ್ತಿದ್ದೇನೆ. ಇನ್ನೂ ಪರಿಹಾರ ಸಿಕ್ಕಿಲ್ಲ. ಏನಾದರೂ ಅನಾಹುತ ಆದರೆ ಯಾರು ಹೊಣೆ ಎಂದು ಪ್ರಶ್ನಿಸಿದರು. ಸುಮ್ಮನಿರದ ಅಧ್ಯಕ್ಷರು, ಜಿಪಂ ಸದಸ್ಯರೆ ಹೊಣೆ ಎಂದಾಗ ಅದನ್ನು ದಾಖಲು ಮಾಡಿ ಎಂದು ಪಟ್ಟು ಹಿಡಿದರು. ಒಂದು ಹಂತದಲ್ಲಿ ಅವರಿಗೂ ಜಿಪಂ ಸಿಇಒ ಪಿ.ಎ. ಗೋಪಾಲ್ ಅವರಿಗೂ ಮಾತಿನ ಚಕಮಕಿ ನಡೆಯಿತು. ಜೆಡಿಎಸ್ನ ಹಿರಿಯ ಸದಸ್ಯೆ ಜೆ. ಸುನೀತಾ ವೀರಪ್ಪಗೌಡ ಮಾತನಾಡಿ, ನಾವು ಅಧಿಕಾರದಲ್ಲಿದ್ದಾಗ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇತ್ತು. ಈಗ ನೀವು (ಕಾಂಗ್ರೆಸ್ನ ಮಹದೇವು) ಅಧ್ಯಕ್ಷರಾಗಿದ್ದೀರಾ. ರಾಜ್ಯದಲ್ಲಿ ಜಿಲ್ಲೆಯವರೇ ಆದ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ನಿಮ್ಮದೇ ಸರ್ಕಾರವಿದೆ. ಸಿಎಂ ಬಳಿ ನಿಯೋಗ ಕರೆದುಕೊಂಡು ಹೋಗಿ, ಶಾಲೆಗಳಿಗೆ ಸರಿಯಾದ ಮೂಲ ಸೌಲಭ್ಯ ಕಲ್ಪಿಸಿ ಎಂದು ಆಗ್ರಹಿಸಿದರು.
ಶಿಥಿಲ ಕಟ್ಟಡಗಳು, ಸರಿಯಾದ ಸೌಲಭ್ಯಗಳು ಇಲ್ಲದಿರುವುದರಿಂದ ಸರ್ಕಾರಿ ಶಾಲೆಗಳಲ್ಲಿ ಹಾಜರಾತಿ ಕಡಿಮೆಯಾಗಿದೆ ಎಂದು ಕಾಂಗ್ರೆಸ್ನ ಎಂ.ಬಿ. ಸಿದ್ದೇಗೌಡ ಹೇಳಿದರು.
ಆಡಳಿತ ಪಕ್ಷದ ನಾಯಕ ಎಲ್.ಮಾದಪ್ಪ ಇದಕ್ಕೆ ಧ್ವನಿಗೂಡಿಸಿ, ರಾಜಣ್ಣ ಅವರು ಗಹನವಾದ ವಿಚಾರ ಪ್ರಸ್ತಾಪಿಸಿದ್ದಾರೆ. ಕಟ್ಟಡ ಕುಸಿದು ಮಕ್ಕಳು ಸತ್ತರೆ ಯಾರು ಜವಾಬ್ದಾರಿ ಎಂದು ಕೇಳಿದರು. ಕಾಂಗ್ರೆಸ್ನ ರಾಜಯ್ಯ, ಬಿಜೆಪಿಯ ಡಾ.ಶಿವರಾಂ, ಜೆಡಿಎಸ್ನ ಪದ್ಮ ಬಸವರಾಜು, ಸಿ.ಜೆ. ದ್ವಾರಕೀಶ್, ನಳಿನಾಕ್ಷಿ ವೆಂಕಟೇಶ್, ಕಲ್ಪನಾ ಧನಂಜಯ ಮೊದಲಾದವರು ಚರ್ಚೆಯಲ್ಲಿ ಭಾಗವಹಿಸಿದ್ದರು.
ಹಳೆಯ ಕಟ್ಟಡದಲ್ಲಿ ಪಾಠ ಮಾಡಬಾರದು. ಬಾಡಿಗೆ ಕಟ್ಟಡ ಒದಗಿಸಲು ಜಿಪಂ ಸಿದ್ಧವಿದೆ ಎಂದು ಅಧ್ಯಕ್ಷರು ಹೇಳಿದರಾದರೂ, ಸದಸ್ಯರು ನಿರ್ಣಯ ಮಾಡಿ, ಸರ್ಕಾರಕ್ಕೆ ಕಳುಹಿಸಬೇಕು. ಒಂದು ತಿಂಗಳಲ್ಲಿ ಅನುಮತಿ ಸಿಗದಿದ್ದಲ್ಲಿ ಎಸ್ಡಿಎಂಸಿ ವತಿಯಿಂದ ಕಟ್ಟಡ ನೆಲಸಮ ಮಾಡಿಸಬೇಕು ಎಂದು ಆಗ್ರಹಿಸಿದರು.
ಉಪಾಧ್ಯಕ್ಷೆ ಭ್ರಮರಾಂಭ ಮಲ್ಲಿಕಾರ್ಜುನಸ್ವಾಮಿ ಇದ್ದರು. ಸಭೆಯ ಆರಂಭದಲ್ಲಿ ಇತ್ತೀಚೆಗೆ ನಿಧನರಾದ ರಾಜವಂಶಸ್ಥ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್, ರಾಷ್ಟ್ರಕವಿ ಡಾ.ಜಿ.ಎಸ್. ಶಿವರುದ್ರಪ್ಪ, ಮಾಜಿ ಸಚಿವ ಎಸ್. ನಂಜಪ್ಪ ಅವರಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.