ಮೈಸೂರು

ಕಸಬು ಉಳಿಸಿ, ಕುಲ ಅಳಿಸಿ...

Published On :

ಮೈಸೂರು: ಕೈಮಗ್ಗ ಸತ್ಯಾಗ್ರಹಕ್ಕೆ ಮೈಸೂರು ಬೆಂಬಲ, ಕಸಬು ಉಳಿಸಿ ಕುಲ ಅಳಿಸಿ, ಸರ್ವೋದಯ ಎಲ್ಲರಿಗೂ ಒಳಿತು ಮಾಡಲಿ..ಈ ಮುಂತಾದ ಘೋಷಣಾ ಫಲಕವಿಡಿದು ಪ್ರಜ್ಞಾವಂತ ನಾಗರಿಕರು ಮಾನಸಗಂಗೋತ್ರಿಯ ಗಾಂಧಿ ಭವನದ ಮಹಾತ್ಮ ಗಾಂಧಿ ಪುತ್ಥಳಿ ಬಳಿ ಗುರುವಾರ ಧರಣಿ ಸತ್ಯಾಗ್ರಹ ನಡೆಸಿದರು.     
ದೇಸಿ ಬಳಗ ಟ್ರಸ್ಟ್ ನೇತೃತ್ವದಲ್ಲಿ ಏರ್ಪಡಿಸಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಸಾಹಿತಿ  ದೇವನೂರ ಮಹಾದೇವ ಮಾತನಾಡಿ, ಇದೊಂದು ಗಂಭೀರವಾದ ವಿಚಾರ. ಕೈಮಗ್ಗ ಒಂದು ಕಸಬು ಮಾತ್ರವಲ್ಲ, ದೇಸಿಯ ಸಾಂಸ್ಕೃತಿಕ ಹಾಗೂ ತಾಂತ್ರಿಕ ಪ್ರತಿರೂಪವೂ ಆಗಿರುವುದರಿಂದ ಆತ್ಮಾವಲೋಕನ ನಡೆಸಿ ಅದರ ಉಳಿವಿಗೆ ಪರಿಹಾರ ಕಲ್ಪಿಸುವುದು ಅವಶ್ಯಕ ಎಂದರು.  ವೇದಿಕೆ ಸಂಚಾಲಕ ಕೆ. ಮುದ್ದುಕೃಷ್ಣ ಮಾತನಾಡಿ, ಕೈಮಗ್ಗ ಉಳಿವಿಗೆ ಮೂರು ಹಂತದ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಮೊದಲ ಹಂತವಾಗಿ ಜ. 1 ರಿಂದ 14 ರವರೆಗೆ ಕಲಾವಿದರು ಹಾಗೂ ಸಾಹಿತಿ ಮುಂತಾದವರ ನೇತೃತ್ವದಲ್ಲಿ ಪ್ರತಿಭಟನೆ. ಜ. 15 ರಿಂದ 27 ರವರೆಗೆ ಪಾದಯಾತ್ರೆ ನಡೆಸಲಾಯಿತು. ಮೂರನೇ ಹಂತವಾಗಿ ಸರ್ವೋದಯ ಈ ದಿನದಂದು ಚಳವಳಿಗೆ ಬೆಂಬಲಿಸಿ ಈ ಧರಣಿ ಸತ್ಯಾಗ್ರಹ ನಡೆಸಲಾಗುತ್ತಿದೆ ಎಂದು ತಿಳಿಸಿದರು.  ಕೈಮಗ್ಗ ಉಳಿಸಲು ಒತ್ತಾಯಿಸಿ ರಂಗಕರ್ಮಿ ಪ್ರಸನ್ನ ಅವರು ಹೆಗ್ಗೋಡಿನಲ್ಲಿ ಇಂದಿನಿಂದ ಉಪವಾಸ ಆರಂಭಿಸಿರುವ ಕಾರಣ, ಅದಕ್ಕೆ ಬೆಂಬಲವಾಗಿ ಮೈಸೂರಿನ ನಾಗರಿಕರು ಈ ಪ್ರತಿಭಟನೆ ಹಮ್ಮಿಕೊಂಡಿದ್ದೇವೆ ಎಂದರು.
ಸ್ವಾತಂತ್ರ್ಯ ಹೋರಾಟಗಾರ ಸಂತೋಷ್ ಕೌಲಗಿ, ಕಸಾಪ ಅಧ್ಯಕ್ಷ ಎಂ. ಚಂದ್ರಶೇಖರ್, ನಿರಂತರ ವೇದಿಕೆಯ ಪ್ರಸಾದ್, ಶ್ರೀನಿವಾಸ್, ಮೋಹನ್, ಬದುಕು ಟ್ರಸ್ಟ್ನ ಈ. ಧನಂಜಯ, ಸಿಪಿಐ ಜಿಲ್ಲಾ ಸಂಚಾಲಕ ಶೇಷಾದ್ರಿ, ಕಾರ್ಟ್ನ ರವಿಕುಮಾರ್, ಪತ್ರಕರ್ತರಾದ ರವಿ ಕೋಟಿ, ರಶ್ಮಿ ಕೋಟಿ ಮುಂತಾದವರಿದ್ದರು.   

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.