ಮೈಸೂರು

ಪಾಲಿಕೆ ಮೇಲೆ ಲೋಕಾ ದಾಳಿ

Published On :

ಕ.ಪ್ರ. ವಾರ್ತೆ    ಮೈಸೂರು    ಜು.1
ಮೈಸೂರು ನಗರಪಾಲಿಕೆಯ 9ನೇ ವಲಯ ಕಚೇರಿಯ ಮೇಲೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ, ದಾಖಲೆ ಇಲ್ಲದ ಹಣ ಹಾಗೂ ಇದಕ್ಕೆ ಸಂಬಂಧಪಟ್ಟ 8 ಮಂದಿ ಅಧಿಕಾರಿಗಳು, ಸಿಬ್ಬಂದಿ ಹಾಗೂ ಖಾಸಗಿ ವ್ಯಕ್ತಿಯನ್ನು ಬಂಧಿಸಿದ್ದಾರೆ.
ನಗರದ ಗಾಯತ್ರಿಪುರಂನಲ್ಲಿರುವ ಪಾಲಿಕೆ 9ನೇ ವಲಯ ಕಚೇರಿಯಲ್ಲಿ ಸಾರ್ವಜನಿಕ ಕೆಲಸ ಕಾರ್ಯಗಳಿಗೆ ವಿಳಂಬ, ಕಡತ ವಿಲೇವಾರಿ ವಿಳಂಬ ಹಾಗೂ ಲಂಚಕ್ಕಾಗಿ ಬೇಡಿಕೆ ಹೆಚ್ಚಾಗಿರುವ ಸಂಬಂಧ ಸಾರ್ವಜನಿಕರು ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಿಕೊಂಡು, ನ್ಯಾಯಾಲಯದಿಂದ ಅನುಮತಿ ಪಡೆದುಕೊಂಡಿದ್ದ ಲೋಕಾಯುಕ್ತ ಪೊಲೀಸರು, ಗಾಯತ್ರಿಪುರಂನಲ್ಲಿರುವ ವಲಯ ಕಚೇರಿ ಮೇಲೆ ಸೋಮವಾರ ಸಂಜೆ ದಿಢೀರ್ ದಾಳಿ ನಡೆಸಿ ರಾತ್ರಿ 11 ರವರೆಗೆ ಶೋಧ ಮುಂದುವರಿಸಿದರು.
ಈ ವೇಳೆ ದಾಖಲೆ ಇಲ್ಲದ 85,870 ಪತ್ತೆಯಾಗಿದ್ದು, ಹಣವನ್ನು ಲೋಕಾಯುಕ್ತ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಸಂಬಂಧ ಪಾಲಿಕೆ ವಲಯ- 9ರ ಪ್ರಭಾರ ಸಹಾಯಕ ಆಯುಕ್ತ ರವಿಕುಮಾರ್, ಕಂದಾಯಾಧಿಕಾರಿ ಪಿ.ಸಿದ್ದಯ್ಯ, ಪ್ರಹ್ಲಾದ್, ಸಹಾಯಕ ಕಂದಾಯಾಧಿಕಾರಿ ಕಲ್ಲೇಶಯ್ಯ, ಕಂದಾಯ ನಿರೀಕ್ಷಕ ಗೋವಿಂದೇಗೌಡ, ಕಿರಿಯ ಎಂಜಿನಿಯರ್ ಶಿವ, ಲೆಕ್ಕಾಧಿಕಾರಿ ಆದರ್ಶಕುಮಾರ್ ಹಾಗೂ ಖಾಸಗಿ ವ್ಯಕ್ತಿ ಸಿದ್ದರಾಜು ಎಂಬವರನ್ನು ಬಂಧಿಸಿದ್ದಾರೆ.
183 ಕಡತಗಳು ಬಾಕಿ: ವಲಯ 9ರಲ್ಲಿ 183 ಕಡತ ಬಾಕಿ ಉಳಿದಿರುವುದು ಲೋಕಾಯುಕ್ತ ಪೊಲೀಸರ ದಾಳಿ ವೇಳೆ ಪತ್ತೆಯಾಗಿದೆ. ಅಗತ್ಯ ಕಡತಗಳ ನಿರ್ವಹಣೆ ಸರಿಯಾಗಿಲ್ಲದಿರುವುದು, ಪಡೆದ ಹಣವನ್ನು ದಾಖಲೆಯಲ್ಲಿ ನಮೂದಿಸದಿರುವುದು ಸೇರಿದಂತೆ ಹಲವಾರು ಲೋಪದೋಷಗಳನ್ನು ಪತ್ತೆಯಾಗಿದೆ.
ಮೈಸೂರಿನ 3ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯಕ್ಕೆ ಬಂಧಿತ 8 ಮಂದಿ ಆರೋಪಿಗಳನ್ನು ಲೋಕಾಯುಕ್ತ ಪೊಲೀಸರು ಮಂಗಳವಾರ ಹಾಜರುಪಡಿಸಿದ್ದು, ನ್ಯಾಯಾಲಯವು ಜು.14 ರವರೆಗೆ ನ್ಯಾಯಾಂಗ ಬಂಧನಕ್ಕೆ ಆದೇಶಿಸಿದೆ. ಮೈಸೂರು ವಿಭಾಗದ ಲೋಕಾಯುಕ್ತ ಎಸ್ಪಿ ಎಸ್.ಎಂ. ಜಗದೀಶ್ ಪ್ರಸಾದ್, ಡಿವೈಎಸ್ಪಿ ಸ್ವಾಮಿಕುಮಾರ್ ಮಾರ್ಗದರ್ಶನದಲ್ಲಿ ಇನ್ಸ್‌ಪೆಕ್ಟರ್‌ಗಳಾದ ಕೆ.ಟಿ.ಮ್ಯಾಥ್ಯೂ ಥಾಮಸ್, ಪ್ರಕಾಶ್‌ಗೌಡ, ಗೋಪಾಲಕೃಷ್ಣ, ಪರಶುರಾಮ್ ಮತ್ತು ಸಿಬ್ಬಂದಿ ರಮೇಶ್, ಕೃಷ್ಣಮೂರ್ತಿ, ಶಿವಶಂಕರ್, ಶಬೀರ್ ಅಹಮ್ಮದ್, ಪಾಂಡುರಂಗ, ಪ್ರದೀಪ್‌ಕುಮಾರ್, ನರಸೇಗೌಡ, ಸತೀಶ್, ದಿವ್ಯಾ, ರಮ್ಯಾ, ದ್ರಾಕ್ಷಾಯಿಣಿ, ಅನ್ನಪೂರ್ಣ ಅವರು ಈ ದಾಳಿ ನಡೆಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.