ಮೈಸೂರು

ಒಕ್ಕಲಿಗರ ಭವನಕ್ಕೆ ಅನುದಾನ

Published On :

ಕ.ಪ್ರ. ವಾರ್ತೆ    ಕೆ.ಆರ್. ನಗರ    ಜು.6
ಒಕ್ಕಲಿಗ ಸಮುದಾಯದವರು ಸಮಾಜದ ಸರ್ವ ಜನಾಂಗದವರನ್ನು ಪ್ರೀತಿ ವಿಶ್ವಾಸದಿಂದ ಕಾಣುತ್ತಾರೆ ಎಂದು ಸಂಸದ ಸಿ.ಎಸ್.ಪುಟ್ಟರಾಜು ಹೇಳಿದರು.
ಪಟ್ಟಣದ ಒಕ್ಕಲಿಗರ ಸಮುದಾಯ ಭವನದಲ್ಲಿ ತಾಲೂಕು ಒಕ್ಕಲಿಗ ನೌಕರರ ಸ್ನೇಹ ಬಳಗದ ವತಿಯಿಂದ ಭಾನುವಾರ ನಡೆದ ಪ್ರತಿಭಾ ಪುರಸ್ಕಾರ ಮತ್ತು ಸನ್ಮಾನ ಸಮಾರಂಭದಲ್ಲಿ ಮಾತನಾಡಿದ ಅವರು, ಒಂದು ಸಮುದಾಯ ಆರ್ಥಿಕವಾಗಿ, ಶೈಕ್ಷಣಿಕವಾಗಿ ಮತ್ತು ಸಾಮಾಜಿಕವಾಗಿ ಪ್ರಗತಿ ಸಾಧಿಸಬೇಕಾದರೆ ಇತರೆ ಎಲ್ಲಾ ಸಮುದಾಯದವರ ಸಹಕಾರ ಅಗತ್ಯ ಎಂದರು.
ಇಂದಿನ ರಾಜಕೀಯ ಸುನಾಮಿ ನಡುವೆ ನಾನು ಗೆಲವು ಸಾಧಿಸಿ ಸಂಸದನಾಗಿ ಆಯ್ಕೆಯಾಗಿ ನಿಮ್ಮ ಮುಂದೆ ನಿಲ್ಲಲು ಆದಿಚುಂಚನಗಿರಿ ಶ್ರೀಗಳಾದ ಡಾ.ಬಾಲಗಂಗಾಧರನಾಥ ಸ್ವಾಮೀಜಿಯವರ ಆಶೀರ್ವಾದ ಪ್ರಮುಖ ಕಾರಣ. ಪಟ್ಟಣದಲ್ಲಿ ಅಪೂರ್ಣಗೊಂಡಿರುವ ಒಕ್ಕಲಿಗರ ಸಮುದಾಯ ಭವನ ನಿರ್ಮಾಣದ ಕಾಮಗಾರಿಗೆ ಅಗತ್ಯ ಅನುದಾನ ಹಾಗೂ ವೈಯಕ್ತಿಕ ಆರ್ಥಿಕ ಸಹಕಾರ ನೀಡುವುದಾಗಿ ಭರವಸೆ ನೀಡಿದರು.
ಶಾಸಕ ಸಾ.ರಾ.ಮಹೇಶ್ ಮಾತನಾಡಿ, ಕ್ಷೇತ್ರದ ಮತದಾರರಿಂದ ಎರಡನೇ ಬಾರಿಗೆ ಆಯ್ಕೆಯಾಗಿರುವ ನನ್ನ ಗೌರವಕ್ಕೆ ಚ್ಯುತಿಯಾದರೆ ಅದು ಮತದಾರರಿಗೆ ಮಾಡಿದ ಅಪಮಾನ. ಆದ್ದರಿಂದ ನನ್ನನ್ನು ಕಾರ್ಯಕ್ರಮಕ್ಕೆ ಆಹ್ವಾನಿಸದೇ ಸರ್ಕಾರದ ಅನುದಾನದಿಂದ ನಿರ್ಮಾಣ ಮಾಡಿದ ಕಟ್ಟಡ ಉದ್ಘಾಟನೆ ಮಾಡಿಸಿದ್ದಕ್ಕಾಗಿ ಕ್ಷೇತ್ರ ಶಿಕ್ಷಣಾಧಿಕಾರಿಯನ್ನು ಅಮಾನತು ಮಾಡಿಸಲಾಯಿತು. ಇದಕ್ಕೆ ಬೇರೆ ಅರ್ಥ ಕಲ್ಪಿಸಿ ಜಾತಿ ಬಣ್ಣ ಬಳಿಯಲಾಗುತ್ತಿದೆ. ಆದರೆ ನನ್ನ ನಿರ್ಧಾರದ ಹಿಂದೆ ಯಾವುದೇ ದುರುದ್ದೇಶವಿಲ್ಲ. ಆದರೂ ಈ ವಿಚಾರದ ಬಗ್ಗೆ ಅನಗತ್ಯ ಅಪಪ್ರಚಾರ ಮಾಡುವವರ ವಿರುದ್ಧ ನಾನು ಯಾವುದೇ ಗಮನ ಹರಿಸುವುದಿಲ್ಲ ಎಂದು ತಿಳಿಸಿದರು.
ಆದಿ ಚುಂಚನಗಿರಿ ಮೈಸೂರು ಶಾಖಾ ಮಠದ ಸೋಮೇಶ್ವರನಾಥ ಸ್ವಾಮೀಜಿ, ಚುಂಚನಕಟ್ಟೆ ಶಾಖಾ ಮಠದ ಶಿವಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಜಿಪಂ ಸದಸ್ಯರಾದ ಸುಮಿತ್ರ ಗೋವಿಂದರಾಜು, ನಳಿನಾಕ್ಷಿ ವೆಂಕಟೇಶ್, ಮೈಮುಲ್ ಮಾಜಿ ಅಧ್ಯಕ್ಷ ಎ.ಟಿ.ಸೋಮಶೇಖರ್, ತಾಪಂ ಸದಸ್ಯರಾದ ಕೃಷ್ಣೇಗೌಡ, ಸೀತಾರಾಮು, ಪುಸರಭೆ ಸದಸ್ಯರಾದ ಎನ್.ಶಿವಕುಮಾರ್, ಎಚ್.ಸಿ. ರಾಜು, ಉಮೇಶ್, ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎಂ.ಎಸ್. ಯಧುಗಿರೀಶ್, ರಾಜ್ಯ ಪರಿಷತ್ ಸದಸ್ಯ ಶ್ರೀಕಾಂತ್, ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಎಂ. ನಾಗೇಶ್, ಎ.ಕುಚೇಲ, ಲೋಕನಾಥ್, ಡಾ.ಟಿ. ಶಿವಪ್ರಸಾದ್, ರಾ.ಸುರೇಶ್, ಪ್ರಸನ್ನ, ನಟೇಶ್, ದೇವೇಂದ್ರ, ಎಚ್.ಆರ್. ರಾಮೇಗೌಡ, ಜಿ.ಟಿ. ಸತೀಶ್, ಮಂಜೇಗೌಡ, ಕೆ.ಎಲ್. ರಮೇಶ್, ನಾಗೇಂದ್ರಪ್ಪ, ಮಿರ್ಲೆ ಧನಂಜಯ ಇದ್ದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.