ಹಸ್ತಪ್ರತಿ ಮುದ್ರಣ ಧನ ಸಹಾಯಕ್ಕೆ ಅರ್ಜಿ ಆಹ್ವಾನ
ಮೈಸೂರು: ಕನ್ನಡ ಮತ್ತು ಸಂಸ್ಕೃತಿ ಇಲಾಖೆ 2013-14ನೇ ಸಾಲಿನಲ್ಲಿ ವಿವಿಗಳಿಂದ ಯಾವುದೇ ವಿಷಯದ ಬಗ್ಗೆ ಕನ್ನಡದಲ್ಲಿ ಪಿಎಚ್.ಡಿ ಪದವಿ ಪಡೆದ ಮಹಾಪ್ರಬಂಧಗಳ ಹಸ್ತಪ್ರತಿ ಮುದ್ರಣಕ್ಕೆ ಧನ ಸಹಾಯ ನೀಡಲು ಅರ್ಜಿ ಆಹ್ವಾನಿಸಿದೆ. ಅರ್ಜಿ ಹಾಗೂ ನಿಯಮಾವಳಿ ಪ್ರತಿಯನ್ನು ಸಹಾಯಕ ನಿರ್ದೇಶಕರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕಲಾಮಂದಿರ, ಮೈಸೂರು ಇಲ್ಲಿ ಜು. 30ರೊಳಗಾಗಿ ಪಡೆದು ಭರ್ತಿ ಮಾಡಿದ ಅರ್ಜಿ ನೇರವಾಗಿ ನಿರ್ದೇಶಕರು, ಕನ್ನಡಮತ್ತು ಸಂಸ್ಕೃತಿ ನಿರ್ದೇಶನಾಲಯ, ಕನ್ನಡ ಭವನ, ಜೆ.ಸಿ. ರಸ್ತೆ, ಬೆಂಗಳೂರು ಇವರಿಗೆ ಜು. 31 ರೊಳಗೆ ಸಲ್ಲಿಸುವುದು.
ಲಘು ವಾಹನ ಮಾಲೀಕರು- ಚಾಲಕರ ಪ್ರತಿಭಟನೆ ಇಂದು
ಮೈಸೂರು: ನಗರಕ್ಕೆ ಲಘು ವಾಹನಗಳ ಪ್ರವೇಶ ನಿರ್ಬಂಧಿಸಿ ದಂಡ ವಿಧಿಸುತ್ತಿರುವ ಸಂಚಾರ ಪೊಲೀಸರು ಹಾಗೂ ಸಾರಿಗೆ ಇಲಾಖೆಯ ವಿರುದ್ಧ ಜು.10 ರಂದು ಕರ್ನಾಟಕ ರಾಜ್ಯ ದಲಿತ ವೇದಿಕೆ ಹಾಗೂ ಮಹೇಂದ್ರ ಮ್ಯಾಕ್ಸಿಕೋ, ಮ್ಯಾಕ್ಸಿಕ್ಯಾಬ್, ವಿಂಗರ್, 407, ತೂಫಾನ್, ಟಾಟಾ ಮ್ಯಾಜಿಕ್ ಮಾಲೀಕರು ಮತ್ತು ಚಾಲಕರ ಸಂಘದವರು ಪ್ರತಿಭಟನೆ ಮೆರವಣಿಗೆ ಹಮ್ಮಿಕೊಂಡಿದ್ದಾರೆ. ಬೆಳಗ್ಗೆ 8ಕ್ಕೆ ಅರಮನೆ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಸಂಘದವರು ಶಾಂತಿಯುತ ಪ್ರತಿಭಟನೆ ಮೆರವಣಿಗೆ ಹಮ್ಮಿಕೊಂಡಿದ್ದಾರೆ. ಸಂಚಾರಿ ಪೊಲೀಸರು ಮತ್ತು ಸಾರಿಗೆ ಇಲಾಖೆಯವರು ಲಘು ವಾಹನಗಳು ನಗರ ಪ್ರವೇಶ ಮಾಡದಂತೆ ನಿರ್ಬಂಧ ಹೇರುತ್ತಿರುವು ಜೀವನ ನಿರ್ವಹಣೆಗೆ ಕಷ್ಟವಾಗಿದೆ. ನಗರ ಪ್ರದೇಶವನ್ನು ಪ್ರವೇಶಿಸುವ ಲಘು ವಾಹನಗಳಿಗೆ 3 ರಿಂದ 5 ಸಾವಿರ ರು. ದಂಡ ವಿಧಿಸುತ್ತಿದ್ದಾರೆ ಎಂದು ಸಂಘದವರು ಆರೋಪಿಸಿದ್ದಾರೆ.
ಸುಬ್ಬರಾಯನಕೆರೆ ಅಭಿವೃದ್ಧಿಗೆ ಅನುದಾನ
ಮೈಸೂರು: ನಗರದ ಸುಬ್ಬರಾಯನಕೆರೆಯಲ್ಲಿರುವ ಸ್ವಾತಂತ್ರ್ಯ ಹೋರಾಟಗಾರರ ಉದ್ಯಾನವದ ಅಭಿವೃದ್ಧಿಗೆ ಮುಖ್ಯಮಂತ್ರಿಗಳ ವಿಶೇಷ ಅನುದಾನದಿಂದ 60 ಲಕ್ಷ ರು. ಬಿಡುಗಡೆಯಾಗಿದೆ ಎಂದು ವಾರ್ಡ್ ನಂ. 36ರ ಸದಸ್ಯ ಪಿ. ಪ್ರಶಾಂತ್ಗೌಡ ತಿಳಿಸಿದ್ದಾರೆ. ಸದರಿ ಉದ್ಯಾನವನದ ಅಭಿವೃದ್ಧಿ ಮಾಡುವ ಸಲುವಾಗಿ ಚಾಮರಾಜ ಕ್ಷೇತ್ರದ ಶಾಸಕ ವಾಸು ಅನೇಕ ಭಾರಿ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಅಂತೆಯೇ ಮೇಯರ್, ಪಾಲಿಕೆ ಆಯುಕ್ತರು ಸಹ ಮುತುವರ್ಜಿ ವಹಿಸಿದ್ದರು. ಸಿಎಂ ಅನುದಾನದ ಜತೆಗೆ ಪಾಲಿಕೆಯಿಂದಲೂ 25 ಲಕ್ಷ ರು. ಬಿಡುಗಡೆಯಾಗಿದೆ. ಎರಡೂ ಮೊತ್ತಗಳಿಂದ ಕೈಗೊಳ್ಳಬೇಕಾದ ಕಾಮಗಾರಿಗಳ ಬಗ್ಗೆ ಅಂದಾಜು ಪಟ್ಟಿ ತಯಾರಿಸಿ, ಟೆಂಡರ್ ಕರೆಯಲಾಗಿದೆ. ಟೆಂಡರ್ ಅವಧಿ ಮುಗಿದ ತಕ್ಷಣ, ಕಾಮಗಾರಿಗಳನ್ನು ತುರ್ತಾಗಿ ಕೈಗೊಳ್ಳಲು ಕ್ರಮವಹಿಸಲಾಗಿದೆ. ಮುಂದಿನ ದಿನಗಳಲ್ಲಿ ಸುಬ್ಬರಾಯನಕೆರೆಯನ್ನು ಇನ್ನೂ ಉತ್ತಮವಾಗಿ ಅಭಿವೃದ್ಧಿಪಡಿಸಿ, ಇದೊಂದು ಉತ್ತಮ ಹಾಗೂ ಸುಂದರವಾದ ಸ್ಥಳವನ್ನಾಗಿ ಮಾರ್ಪಡಿಸುವ ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗುವುದು. ಅಲ್ಲದ ಶಾಸಕ ವಾಸು ಇದನ್ನು ಪ್ರವಾಸೋದ್ಯಮ ಇಲಾಖೆಗೆ ಸೇರಿಸಲು ಸಹ ಸಚಿವರೊಡನೆ ಚರ್ಚಿಸಿದ್ದಾರೆ ಎಂದು ಅವರು ಹೇಳಿದ್ದಾರೆ.
ಗಮಕ, ವಚನ, ಹರಿದಾಸ ಕೀರ್ತನ ಶಿಬಿರ
ಮೈಸೂರು: ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ 2014ರ ಆ. 4 ಮತ್ತು 5 ರಂದು ಹರಿಹರದ ಶ್ರೀ ರಾಘವೇಂದ್ರಸ್ವಾಮಿ ವೃಂದಾವನ ಟ್ರಸ್ಟ್ನ ಸಹಯೋಗದೊಂದಿಗೆ ರಾಜ್ಯ ಸರ್ಕಾರಿ ಹಾಗೂ ಅನುದಾನಿತ ಪ್ರೌಢಶಾಲೆಗಳ ಕನ್ನಡ ಶಿಕ್ಷಕ ಶಿಕ್ಷಕಿಯರಿಗೆ ಗಮಕ ವಚನ ಹಾಗೂ ಹರಿದಾಸ ಕೀರ್ತನಾ ಶಿಬಿರ ಹರಿಹರದಲ್ಲಿ ಹಮ್ಮಿಕೊಂಡಿದೆ. ಈ ಶಿಬಿರದಲ್ಲಿ ಪ್ರಾಥಮಿಕ ಸಂಗೀತ ಜ್ಞಾನವುಳ್ಳ ಪ್ರೌಢಶಾಲೆಗಳಲ್ಲಿ ಪಾಠ ಮಾಡುತ್ತಿರುವ ಕನ್ನಡ ಶಿಕ್ಷಕ, ಶಿಕ್ಷಕಿಯರು ಭಾಗವಹಿಸಬಹುದು. ಪ್ರತಿ ಜಿಲ್ಲೆಗೆ ಇಬ್ಬರಂತೆ ರಾಜ್ಯದ ಎಲ್ಲ ಜಿಲ್ಲೆಗಳಿಂದ ಒಟ್ಟು 60 ಮಂದಿ ಈ ಶಿಬಿರದಲ್ಲಿ ಭಾಗವಹಿಸಬಹುದು. ಪ್ರಥಮ ಆದ್ಯತೆ ಮೇರೆಗೆ ಶಿಬಿರಾರ್ಥಿಗಳನ್ನು ಅಕಾಡೆಮಿ ಆಯ್ಕೆ ಮಾಡುವುದು. ಆಯ್ಕೆಯಲ್ಲಿ ಅಕಾಡೆಮಿಯ ತೀರ್ಮಾನವೇ ಅಂತಿಮ. ಶಿಬಿರ ಉಚಿತ.
ಅರಮನೆ ಮಂಡಳಿ ನಿರ್ದೇಶಕರಾಗಿ ಶಿವಾನಂದ ಕಾಪಶಿ ನೇಮಕ
ಮೈಸೂರು: ಮೈಸೂರು ಅರಮನೆ ಮಂಡಳಿ ನಿರ್ದೇಶಕರಾಗಿ ಹಿರಿಯ ಕೆಎಎಸ್ ಅಧಿಕಾರಿ ಶಿವಾನಂದ ಕಾಪಶಿ ಅವರನ್ನು ಸರ್ಕಾರ ನೇಮಿಸಿದೆ. ಧಾರವಾಡದ ಹೆಚ್ಚುವರಿ ಜಿಲ್ಲಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ಕಾಪಶಿ ಅವರನ್ನು ಸರ್ಕಾರ ಅರಮನೆ ಮಂಡಳಿ ನಿರ್ದೇಶಕರಾಗಿ ನೇಮಿಸಿ ಮಂಗಳವಾರ ಆದೇಶ ಹೊರಡಿಸಿದೆ. ಈ ಹಿನ್ನೆಲೆಯಲ್ಲಿ ಶುಕ್ರವಾರ ಅವರು ಅರಮನೆ ಮಂಡಳಿ ನಿರ್ದೇಶಕರಾಗಿ ಅಧಿಕಾರ ಸ್ವೀಕರಿಸುವ ಸಾಧ್ಯತೆ ಇದೆ. ಈ ಹಿಂದೆ ಕೆಎಎಸ್ ಅಧಿಕಾರಿ ಕೆ.ಎಂ. ಗಾಯತ್ರಿ ಅವರಿಗೆ ಹೆಚ್ಚುವರಿಯಾಗಿ ಮಂಡಳಿಯ ನಿರ್ದೇಶಕರ ಹೊಣೆ ಹೊರಿಸಲಾಗಿತ್ತು. ಲೋಕಸಭೆ ಚುನಾವಣೆ ವೇಳೆ ಮೈಸೂರು ಹೆಚ್ಚುವರಿ ಜಿಲ್ಲಾಧಿಕಾರಿಯಾಗಿ ಕಾಪಶಿ ಕರ್ತವ್ಯ ನಿರ್ವಹಿಸಿದ್ದರು.
ಅಪರಿಚಿತ ವ್ಯಕ್ತಿ ಸಾವು
ಮೈಸೂರು: ನಗರದ ಹೊರವಲಯ ನಂಜನಗೂಡು ರಸ್ತೆಯಲ್ಲಿರುವ ಬಂಡಿಪಾಳ್ಯ ಬಸ್ ತಂಗುದಾಣದ ಬಳಿ ಅಪರಿಚಿತ ವ್ಯಕ್ತಿ ಮೃತಪಟ್ಟಿರುವ ಘಟನೆ ಸೋಮವಾರ ನಡೆದಿದೆ. ಚಹರೆ- 40 ವರ್ಷ, 5.4 ಅಡಿ ಎತ್ತರ, ತೆಳ್ಳನೆ ಶರೀರ, ಕೋಲು ಮುಖ, ಕಪ್ಪು ಕೂದಲು, ಹೊಟ್ಟೆಯ ಮೇಲೆ ಕಪ್ಪುಕಾರೆ ಹರಳಿದೆ. ಸಿಮೆಂಟ್ ಬಣ್ಣದ ಶರ್ಟ್, ಮಾಸಲು ನೀಲಿ ಬಣ್ಣದ ಶರ್ಟ್, ನೀಲಿ ಬಣ್ಣದ ಜೀನ್ಸ್ ಪ್ಯಾಂಟ್ ಧರಿಸಿದ್ದಾರೆ. ಮೃತರ ವಾರಸುದಾರರು ಇದ್ದಲ್ಲಿ ದೂ. 0821- 2418322, 522 ಸಂಪರ್ಕಿಸಲು ವಿದ್ಯಾರಣ್ಯಪುರಂ ಠಾಣೆ ಪೊಲೀಸರು ಕೋರಿದ್ದಾರೆ.
ಜಾರಿಬಿದ್ದ ಮಹಿಳೆ ಸಾವು
ಮೈಸೂರು: ಬಟ್ಟೆ ಒಣಗಲು ಹಾಕುವಾಗ ಜಾರಿ ಬಿದ್ದು ತೀವ್ರವಾಗಿ ಗಾಯಗೊಂಡಿದ್ದ ಮಹಿಳೆಯೊಬ್ಬರು ಆಸ್ಪತ್ರೆಯಲ್ಲಿ ಮೃತಪಟ್ಟಿರುವ ಘಟನೆ ಮಂಗಳವಾರ ರಾತ್ರಿ ನಡೆದಿದೆ. ಜಯಲಕ್ಷ್ಮಿಪುರಂ ರಾಘವೇಂದ್ರಸ್ವಾಮಿ ಮಠದ ಬಳಿಯ ಲಕ್ಷ್ಮಿ ಅಪಾರ್ಟ್ಮೆಂಟ್ನಲ್ಲಿ ವಾಸವಿದ್ದ ನೀಲಾ(60) ಮೃತರು. ಇವರು ಮಂಗಳವಾರ ಮಹಡಿಯಲ್ಲಿ ಬಟ್ಟೆ ಒಣಗಲು ಹಾಕುವಾಗ ಜಾರಿ ಬಿದ್ದು ತೀವ್ರವಾಗಿ ಗಾಯಗೊಂಡಿದ್ದರು.ಈ ಸಂಬಂಧ ಜಯಲಕ್ಷ್ಮಿಪುರಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪುಸ್ತಕ ಬಿಡುಗಡೆ
ಮೈಸೂರು: ರಾಗಮಾಲ ಪ್ರಕಾಶನದಿಂದ ಹೊರತಂದಿರುವ ಎಂ.ಎಸ್. ಸುಬ್ಬುಲಕ್ಷ್ಮೀ ಕುರಿತ ಭುವನದ ಭಾಗ್ಯ ಎಂಎಸ್ ಕೃತಿ ಬಿಡುಗಡೆ ಸಮಾರಂಭವನ್ನು ಜು.15ರ ಸಂಜೆ 6ಕ್ಕೆ ಕುವೆಂಪುನಗರದ ಗಾನ ಭಾರತಿಯಲ್ಲಿ ಏರ್ಪಡಿಸಿದ್ದು, ಪತ್ರಕರ್ತ ವಿ. ರಾಮನಾರಾಯಣ್ ಬಿಡುಗಡೆಗೊಳಿಸುವರು. ಬರಹಗಾರ ಎಸ್. ದಿವಾಕರ್ ಕೃತಿ ಕುರಿತು ಮಾತನಾಡಲಿದ್ದು, ಉತ್ತರಾ ಸ್ವಾಮಿನಾಥನ್ ಸುಬ್ಬಲಕ್ಷ್ಮೀ ಅವರಿಗೆ ಪ್ರಿಯವಾಗಿದ್ದ ಗೀತೆಗಳನ್ನು ಹಾಡುವರು.
ಧನ ಸಹಾಯ: ಅರ್ಜಿ ಆಹ್ವಾನ
ಮೈಸೂರು: ಕನ್ನಡ ಮತ್ತು ಸಂಸ್ಕೃತಿ ಇಲಾಖೆ 2013ನೇ ಸಾಲಿನಲ್ಲಿ ಪ್ರಕಟವಾದ ಸೃಜನೇತರ ಕನ್ನಡ ಗ್ರಂಥಗಳಿಗೆ ಧನಸಹಾಯ ನೀಡಲು ಅರ್ಜಿ ಆಹ್ವಾನಿಸಿದೆ. ಅರ್ಜಿ ಹಾಗೂ ನಿಯಮಾವಳಿ ಪ್ರತಿಯನ್ನು ಸಹಾಯಕ ನಿರ್ದೇಶಕರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕಲಾಮಂದಿರ, ಮೈಸೂರು ಇಲ್ಲಿ ಜು. 21 ರೊಳಗಾಗಿ ಅರ್ಜಿ ಪಡೆದು ಭರ್ತಿ ಮಾಡಿದ ಅರ್ಜಿಯನ್ನು ನೇರವಾಗಿ ನಿರ್ದೇಶಕರು, ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ, ಕನ್ನಡ ಭವನ, ಜೆ.ಸಿ. ರಸ್ತೆ, ಬೆಂಗಳೂರು ಇವರಿಗೆ ಜು. 31ರೊಳಗಾಗಿ ಸಲ್ಲಿಸುವುದು. ದೂ. 2513225.
ಹಂಚೀಪುರ ಗ್ರಾಪಂ ಅಧ್ಯಕ್ಷರ ರಾಜಿನಾಮೆ
ಸರಗೂರು: ಸಮೀಪದ ಹಂಚೀಪುರ ಗ್ರಾಪಂ ಅಧ್ಯಕ್ಷ ಮಹದೇವಸ್ವಾಮಿ ತಮ್ಮ ಅಧ್ಯಕ್ಷ ಸ್ಥಾನಕ್ಕೆ ರಾಜಿನಾಮೆ ಸಲ್ಲಿಸಿದ್ದಾರೆ. ಮೊದಲ 20 ತಿಂಗಳ ಅವಧಿಯಲ್ಲಿ 10 ತಿಂಗಳ ಅಧ್ಯಕ್ಷ ಸ್ಥಾನಕ್ಕೆ ಮಹದೇವಸ್ವಾಮಿ ಅಧಿಕಾರ ಮಾಡಿ ನಂತರ ಮಸಹಳ್ಳಿ ಮಂಟಯ್ಯ ಅವರನ್ನು ಉಳಿದ 10 ತಿಂಗಳ ಅವಧಿಗೆ ಮುಂದುವರಿಯಲು ತೀರ್ಮಾನಿಸಿದ್ದು, ಅದರಂತೆ ಹುಣಸೂರು ಉಪ ವಿಭಾಗಾಧಿಕಾರಿ ಕಚೇರಿಗೆ ಅಧ್ಯಕ್ಷ ಮಹದೇವಸ್ವಾಮಿ ತಮ್ಮ ಅಧ್ಯಕ್ಷ ಸ್ಥಾನಕ್ಕೆ ರಾಜಿನಾಮೆ ನೀಡಿದ್ದಾರೆ. ಉಳಿದ 10 ತಿಂಗಳ ಅವಧಿಗೆ ಮಸಹಳ್ಳಿ ಮಂಟಯ್ಯ ಅವರು ಅಧ್ಯಕ್ಷ ಸ್ಥಾನಕ್ಕೆ ಬಿಟ್ಟುಕೊಡಲು ರಾಜಿನಾಮೆ ಸಲ್ಲಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

