ಮೈಸೂರು

ಸೌರ ಯೋಜನೆಗೆ ನಗರ ಸಿದ್ಧ

Published On :

ಮೈಸೂರು: ಮೈಸೂರನ್ನು ಸೌರಶಕ್ತಿ ನಗರವನ್ನಾಗಿ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ನಗರದ ಕೃಷ್ಣರಾಜ, ಚಾಮರಾಜ ಮತ್ತು ನರಸಿಂಹರಾಜ ಕ್ಷೇತ್ರಗಳ ಆಯ್ದಕಡೆ ಬೀದಿ ದೀಪ, ಉದ್ಯಾನಗಳ ದೀಪಗಳಿಗೆ ಸೌರಶಕ್ತಿ ಸಂಪರ್ಕ ಕಲ್ಪಿಸಲು ಯೋಜನೆ ತಯಾರಿಸಲಾಗಿದೆ ಎಂದು ನಗರ ಯೋಜನೆ ಮತ್ತು ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷ ಮ.ವಿ. ರಾಮಪ್ರಸಾದ್ ಹೇಳಿದರು.
ನಗರ ಪಾಲಿಕೆ ಹಳೆ ಕೌನ್ಸಿಲ್ ಸಭಾಂಗಣದಲ್ಲಿ ಶುಕ್ರವಾರ ನಡೆದ ಸ್ಥಾಯಿ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, ಕೌನ್ಸಿಲ್ ಸಭೆ ಮತ್ತು ಬೆಂಗಳೂರಿನ ಪೌರಾಡಳಿತ ನಿರ್ದೇಶನಾಲಯದ ಅನುಮೋದನೆಗೆ ಸಲ್ಲಿಸಲಾಗಿದೆ. ಕೆ.ಆರ್.ಕ್ಷೇತ್ರದಲ್ಲಿ 1.63 ಕೋಟಿ, ಚಾಮರಾಜ ಕ್ಷೇತ್ರದಲ್ಲಿ 1.72 ಕೋಟಿ, ನರಸಿಂಹರಾಜ ಕ್ಷೇತ್ರದಲ್ಲಿ ್ಝ1.90 ಕೋಟಿ ಸೇರಿದಂತೆ ಒಟ್ಟು 5.46 ಕೋಟಿ ವೆಚ್ಚದಲ್ಲಿ ಸೋಲಾರ್ ಮೂಲಕ ಬೀದಿ ದೀಪಗಳು ಮತ್ತು ಉದ್ಯಾನಗಳ ನಿರ್ವಹಣೆ ಮಾಡಲು ಯೋಜನೆ ರೂಪಿಸಲಾಗಿದೆ ಎಂದರು.
ಕೇಂದ್ರ ಸರ್ಕಾರದ ಜವಾಹರಲಾಲ್ ನೆಹರು ರಾಷ್ಟ್ರೀಯ ಸೌರಶಕ್ತಿ ಮಿಷನ್ ವತಿಯಿಂದ ಸೌರಶಕ್ತಿ ನಗರಗಳ ಅಭಿವೃದ್ಧಿ ಕಾರ್ಯಕ್ರಮದಡಿ ಮೈಸೂರು ನಗರವನ್ನು ಸೌರಶಕ್ತಿ ನಗರ ಎಂದು ಘೋಷಿಸಲಾಗಿದೆ. ನಗರಪಾಲಿಕೆ ಕಟ್ಟಡದ ಚಾವಣಿಯಲ್ಲಿ 99.50 ಲಕ್ಷ ವೆಚ್ಚದಲ್ಲಿ 60 ಕಿ.ವ್ಯಾ. ಸಾಮರ್ಥ್ಯದ ಸೋಲಾರ್ ಪವರ್ ಪ್ಲಾಂಟ್, ಪಾಲಿಕೆಯ 7 ವಲಯ ಕಚೇರಿ ಕಟ್ಟಡಗಳ ಚಾವಣಿಯಲ್ಲಿ 85.50 ಲಕ್ಷ ವೆಚ್ಚದಲ್ಲಿ 45 ಕಿ.ವ್ಯಾ. ಸಾಮರ್ಥ್ಯದ ಪ್ಲಾಂಟ್, ಚೆಲುವಾಂಬ ಉದ್ಯಾನದಲ್ಲಿ 15.20 ಲಕ್ಷ ವೆಚ್ಚದಲ್ಲಿ 8 ಕಿ.ವ್ಯಾ. ಸಾಮರ್ಥ್ಯದ ಸೋಲಾರ್ ಪವರ್ ಪ್ಲಾಂಟ್, ಕುಪ್ಪಣ್ಣ ಉದ್ಯಾನದಲ್ಲಿ 15.20 ಲಕ್ಷ ವೆಚ್ಚದಲ್ಲಿ 8 ಕಿ.ವ್ಯಾ. ಸಾಮರ್ಥ್ಯದ ಪ್ಲಾಂಟ್, ಎಂಡಿಎ ಚಾವಣಿಯಲ್ಲಿ 127.50 ಲಕ್ಷ ವೆಚ್ಚದಲ್ಲಿ 75 ಕಿ.ವ್ಯಾ. ಸಾಮರ್ಥ್ಯದ ಸೋಲಾರ್ ಪವರ್ ಪ್ಲಾಂಟ್ ಅಳವಡಿಸುವ ಉದ್ದೇಶ ಇದೆ. ಈ ಎಲ್ಲ ಯೋಜನೆಗೆ ಕೇಂದ್ರದ ನವೀಕರಿಸಬಹುದಾದ ಇಂಧನ ಸಚಿವಾಲವು 79.35 ಲಕ್ಷವನ್ನು ಪಾಲಿಕೆಗೆ ಬಿಡುಗಡೆ ಮಾಡಿದೆ ಎಂದು ವಿವರಿಸಿದರು.
2 ಕಾಮಗಾರಿ ಪೂರ್ಣ: ಚೆಲುವಾಂಬ ಮತ್ತು ಕುಪ್ಪಣ್ಣ ಉದ್ಯಾನಗಳಲ್ಲಿ ಪ್ರಾಯೋಗಿಕವಾಗಿ 2 ಸೌರಶಕ್ತಿ ಉತ್ಪಾದನಾ ಘಟಕ ಸ್ಥಾಪಿಸುವ ಕಾಮಗಾರಿ ಪೂರ್ಣವಾಗಿದೆ. ಕೊನೆ ಹಂತದ ಘಟಕ ಸ್ಥಾಪನೆ ಪರೀಕ್ಷಾ ಹಂತದಲ್ಲಿದ್ದು, ಸದ್ಯದಲ್ಲೆ ಕಾರ್ಯಾರಂಭ ಮಾಡಲಿದೆ. ಈ ಸೌರಶಕ್ತಿ ಘಟಕದಿಂದ ವಾರ್ಷಿಕ ಸುಮಾರು 14,600 ಯೂನಿಟ್ ವಿದ್ಯುತ್ ಉತ್ಪಾದನೆ ಆಗಲಿದೆ. ಇದನ್ನು ಇಲ್ಲಿನ ವಿದ್ಯುತ್ ದೀಪಗಳಿಗೆ ಉಪಯೋಗಿಸಬಹುದು. ಇದರಿಂದ ವಾರ್ಷಿಕ ಸುಮಾರು 1.02 ಕೋಟಿ ಉಳಿತಾಯ ಆಗಲಿದೆ ಎಂದರು.
ಪಾಲಿಕೆ ವ್ಯಾಪ್ತಿಯಲ್ಲಿ ಒಟ್ಟು 389 ಉದ್ಯಾನಗಳಿದ್ದು, ಇಲ್ಲಿ ಅಳವಡಿಸಿರುವ ವಿದ್ಯುತ್ ದೀಪಗಳಿಂದ ವಾರ್ಷಿಕ ಸುಮಾರು 1.50 ಕೋಟಿ ವಿದ್ಯುತ್ ಬಿಲ್ ಅನ್ನು ಪಾವತಿಸಲಾಗುತ್ತಿದೆ. ಈ ಉದ್ಯಾನಗಳಲ್ಲಿ ಹಂತ ಹಂತವಾಗಿ ಸೌರಶಕ್ತಿ ವಿದ್ಯುತ್ ಉತ್ಪಾದನಾ ಘಟಕ ಸ್ಥಾಪಿಸಲು ಕ್ರಮ ಕೈಗೊಳ್ಳಲಾಗುವುದು. ಅಲ್ಲದೆ, ನಗರದ ಪ್ರಮುಖ ರಸ್ತೆಗಳಲ್ಲಿ ಇಂಧನ ಉಳಿತಾಯದ ಎಲ್‌ಇಡಿ ದೀಪ ಮತ್ತು ಸೌರಶಕ್ತಿ ಬೀದಿ ದೀಪಗಳ ಅಳವಡಿಕೆಗೆ ಕ್ರಮ ವಹಿಸಲಾಗಿದೆ ಎಂದರು.
ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ನಗರ ಪ್ರದೇಶದ 17 ಸಾರ್ವಜನಿಕ ಕಚೇರಿ ಕಟ್ಟಡಗಳ ಚಾವಣಿಗಳಲ್ಲಿ ಸೌರಶಕ್ತಿ ವಿದ್ಯುತ್ ಉತ್ಪಾದನಾ ಘಟಕ ಅಳವಡಿಸಿಕೊಳ್ಳಲು ತೀರ್ಮಾನಿಸಲಾಗಿದೆ.
ಸೆಸ್ಕ್ ಸಿಇ ಕಚೇರಿ ಕಟ್ಟಡಕ್ಕೆ 10 ಕಿ.ವ್ಯಾ. ಸಾಮರ್ಥ್ಯದ ಘಟಕ, ಸೆಸ್ಕ್ ಮುಖ್ಯ ಕಚೇರಿಗೆ 60 ಕಿ.ವ್ಯಾ. ಸಾಮರ್ಥ್ಯದ ಘಟಕ, ಸೆಸ್ಕ್ ಎಸ್‌ಇ ಕಚೇರಿಗೆ 20 ಕಿ.ವ್ಯಾ. ಸಾಮರ್ಥ್ಯದ ಘಟಕ, ಎಂಜಿನಿಯರ್‌ಗಳ 10 ಕಿ.ವ್ಯಾ. ಘಟಕ, ಕೆಐಎಡಿಬಿ ಕಚೇರಿಗೆ 6 ಕಿ.ವ್ಯಾ. ಸಾಮರ್ಥ್ಯದ ಘಟಕ, ಪಿಡಬ್ಲ್ಯುಡಿ ಕಟ್ಟಡಕ್ಕೆ 15 ಕಿ.ವ್ಯಾ. ಘಟಕ ಸೇರಿದಂತೆ ಗ್ರಾಮೀಣಾಭಿವೃದ್ಧಿ ಸಂಸ್ಥೆ, ಜಿಪಂ, ಚಾಮುಂಡಿ ಬೆಟ್ಟದ ದೇವಸ್ಥಾನ, ದಾಸೋಹ ಭವನ, ಅತಿಥಿಗೃಹ, ಎನ್‌ಐಇ, ಜೆಸಿ ಕಾಲೇಜು, ಪೊಲೀಸ್ ಆಯುಕ್ತರ ಕಚೇರಿ, ಶಕ್ತಿಧಾಮ ಕೇಂದ್ರದ ಕಟ್ಟಡಗಳಲ್ಲಿ ಸೌರಶಕ್ತಿ ವಿದ್ಯುತ್ ಉತ್ಪಾದನಾ ಘಟಕಗಳನ್ನು ಅಳವಡಿಸುವ ಯೋಜನೆ ರೂಪಿಸಲಾಗಿದೆ. ಸೌರಶಕ್ತಿ ಜತೆಗೆ ಬಯೋಗ್ಯಾಸ್ ಅನ್ನು ಮನೆಗಳಲ್ಲೆ ತಯಾರಿಸಿ, ಎಕ್ಸೆಲ್ ಪ್ಲಾಂಟ್‌ನಲ್ಲಿ ವಿದ್ಯುತ್ ತಯಾರಿಸುವ ಯೋಜನೆ ರೂಪಿಸಲು ತೀರ್ಮಾನಿಸಲಾಗಿದೆ. ಸಾರ್ವಜನಿಕರು ಸೌರಶಕ್ತಿ ಮೂಲಕ ವಿದ್ಯುತ್ ಸಂಪರ್ಕ ಅಳವಡಿಸಿಕೊಳ್ಳಲು ಮುಂದಾಗಬೇಕು ಎಂದು ಕರೆ ನೀಡಿದರು.
ಶಿವಕುಮಾರ್ ತರಾಟೆ: ಸೌರಶಕ್ತಿ ನಗರ ಯೋಜನೆ ಅನುಮೋದನೆಯಾಗಿ ಐದು ವರ್ಷವಾದರೂ ಅನುಷ್ಠಾನಗೊಳಿಸುವಲ್ಲಿ ಅಧಿಕಾರಿಗಳು ವಿಫಲರಾಗಿದ್ದಾರೆ ಎಂದು ಪಾಲಿಕೆ ನಗರ ಯೋಜನೆ ಮತ್ತು ಅಭಿವೃದ್ಧಿ ಸ್ಥಾಯಿ ಸಮಿತಿ ಸದಸ್ಯ ಶಿವಕುಮಾರ್ ಕಿಡಿಕಾರಿದರು.
ಸೌರಶಕ್ತಿ ಯೋಜನೆ ರೂಪಿಸುವಲ್ಲಿ ನಿಮಗೆ ಕಾಳಜಿ ಇಲ್ಲ ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಅವರು, ನಗರದಲ್ಲಿನ 2,350 ಬೀದಿ ದೀಪಗಳನ್ನು ನಿರ್ವಹಿಸುವ ಟೆಂಡರ್‌ದಾರರು ಬೆಳಗ್ಗೆ 8 ಗಂಟೆ ಆದರೂ ದೀಪಗಳನ್ನು ಆರಿಸುತ್ತಿಲ್ಲ. ಇದರಿಂದ ವಿದ್ಯುತ್ ವ್ಯಯವಾಗುತ್ತಿದೆ. ಈ ಸಂಬಂಧ ಗುತ್ತಿಗೆದಾರರಿಗೆ ನೋಟಿಸ್ ನೀಡಿದ್ದೀರಾ ಎಂದು ಪ್ರಶ್ನಿಸಿದರು. ಪಾಲಿಕೆ ಆಯುಕ್ತ ಪಿ.ಜಿ.ರಮೇಶ್, ಸಮಿತಿ ಸದಸ್ಯರಾದ ಎಂ.ಡಿ. ನಾಗರಾಜ್, ಫೈರೋಜ್ ಖಾನ್, ಶಿವಕುಮಾರ್, ಅಯಾಜ್ ಪಾಷ, ಅನಸೂಯ, ಎಇಇ ಆರ್. ಮಹೇಶ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.