ಮೈಸೂರು

ಆಪರೇಷನ್ ಚಾಮುಂಡಿ ಆರಂಭ

Published On :

ಮೈಸೂರು: ಚಾಮುಂಡಿಬೆಟ್ಟಕ್ಕೆ ಬರುವ ಭಕ್ತರಿಗೆ ಕಿರಿಕಿರಿ ಉಂಟು ಮಾಡುತ್ತಿದ್ದ ಅನೈತಿಕ ಚಟುವಟಿಕೆಗೆ ಕಡಿವಾಣ ಹಾಕುವ ಉದ್ದೇಶದಿಂದ ಕೆ.ಆರ್. ಉಪ ವಿಭಾಗದ ಪೊಲೀಸರು ಕಾನೂನು ಬಾಹಿರ ಕೃತ್ಯಗಳ ತಡೆಗೆ 8 ತಂಡ ರಚಿಸಿ ಶುಕ್ರವಾರ ಸಂಜೆಯಿಂದ ಕಾರ್ಯಾಚರಣೆ ಆರಂಭಿಸಿದ್ದಾರೆ.
ಕಾರ್ಯಾಚರಣೆ ಆರಂಭಿಸಿದ ದಿನವೆ 15ಕ್ಕೂ ಹೆಚ್ಚು ಪ್ರಕರಣಗಳು ಬೆಳಕಿಗೆ ಬಂದಿವೆ. ಈ ಪೈಕಿ ಕಾಲೇಜು ವಿದ್ಯಾರ್ಥಿಗಳೆ ಹೆಚ್ಚು. ಎಲ್ಲರಿಗೂ ಎಚ್ಚರಿಕೆ ನೀಡಲಾಗಿದೆ. ದ್ವಿಚಕ್ರ ವಾಹನದಲ್ಲಿ ಬಂದು ಅಸಭ್ಯವಾಗಿ ವರ್ತಿಸುತ್ತಿದ್ದ ಯುವಕ ಮತ್ತು ಯುವತಿಯರಿಗೆ ಎಚ್ಚರಿಕೆ ನೀಡಲಾಗಿದೆ. ಅವರ ಪೋಷಕರಿಗೂ ಮಾಹಿತಿ ನೀಡಲಾಗಿದೆ.
ನಗರದ ಕೆ.ಆರ್.ಪೊಲೀಸ್ ಠಾಣೆಯಲ್ಲಿ ಶುಕ್ರವಾರ ನಡೆದ ಸಭೆಯಲ್ಲಿ ಈ ವಿಷಯ ತಿಳಿಸಿದ ಎಸಿಪಿ ಬಿ.ಟಿ. ಕವಿತಾ, ಬೆಟ್ಟದಲ್ಲಿ ಅನೈತಿಕ ಚಟುವಟಿಕೆ ಹೆಚ್ಚುತ್ತಿರುವ ಬಗ್ಗೆ ಸಾರ್ವಜನಿಕರಿಂದ ದೂರು ಬರುತ್ತಿದೆ. ಇದನ್ನು ಮನಗಂಡು ಮತ್ತೆ ಆಪರೇಷನ್ ಚಾಮುಂಡಿ ಆರಂಭಿಸಲಾಗಿದೆ. ತಮ್ಮ ವಿಭಾಗದ ಎಲ್ಲಾ ಠಾಣೆಗಳ ಪೊಲೀಸರು ಈ ಕಾರ್ಯಾಚರಣೆಯಲ್ಲಿ ಭಾಗವಹಿಸುವುದಾಗಿ ತಿಳಿಸಿದರು.
ಬೆಟ್ಟದ ವಿವಿಧೆಡೆ ವಾಹನ ತಪಾಸಣೆ ನಡೆಸಲು 5 ತಂಡ ರಚಿಸಲಾಗಿದೆ. ತಾವರೆಕಟ್ಟೆ, ದೈವಿವನ, ಲಲಿತಮಹಲ್ ರಸ್ತೆಯ ಜಂಕ್ಷನ್, ಉತ್ತನಹಳ್ಳಿ ಜಂಕ್ಷನ್ ಹಾಗೂ ಚಾಮುಂಡಿಬೆಟ್ಟದ ಪಾದದಲ್ಲಿ ತಂಡಗಳು ವಾಹನ ತಪಾಸಣೆ ಮಾಡಲಿವೆ. ಚಾಲನಾ ಪರವಾನಗಿ, ವಾಹನದ ದಾಖಲೆ ಇಲ್ಲದ ಸಂದರ್ಭದಲ್ಲಿ ಹಿರಿಯ ಅಧಿಕಾರಿಗಳಿಗೆ ತಂಡಗಳು ಮಾಹಿತಿ ನೀಡಲಿವೆ. ಪ್ರತಿ ತಂಡದಲ್ಲಿ ಒಬ್ಬ ಎಸ್‌ಐ, ಎಎಸ್‌ಐ, ಹೆಡ್ ಕಾನ್‌ಸ್ಟೆಬಲ್, ಇಬ್ಬರು ಕಾನ್‌ಸ್ಟೆಬಲ್ ಹಾಗೂ ಒಬ್ಬರು ಮಹಿಳಾ ಸಿಬ್ಬಂದಿ ತಂಡದಲ್ಲಿ ಇದ್ದಾರೆ ಎಂದು ವಿವರಿಸಿದರು.
ಅಸಭ್ಯವಾಗಿ ವರ್ತಿಸುವ, ಅನುಮಾನಾಸ್ಪದವಾಗಿ ಕಾಣುವ ಹಾಗೂ ಭಕ್ತರಿಗೆ ತೊಂದರೆ ನೀಡುವವರನ್ನು ಗುರುತಿಸಲು ಮೂರು ಸಂಚಾರ ಪಡೆ ರಚಿಸಲಾಗಿದೆ. ತಾವರೆಕಟ್ಟೆ ಗೇಟ್‌ನಿಂದ ಮಹಿಷಾಸುರ ವಿಗ್ರಹದವರೆಗೆ, ವೀಕ್ಷಣಾ ಸ್ಥಳದಿಂದ (ವೀವ್ ಪಾಯಿಂಟ್) ನಂದಿ ಮಾರ್ಗದ ಮೂಲಕ ದೈವಿವನದವರೆಗೆ ಹಾಗೂ ಉತ್ತನಹಳ್ಳಿಯ ಜಂಕ್ಷನ್‌ನಿಂದ ನಂದಿ ರಸ್ತೆಯವರೆಗೆ ಮೂರು ತಂಡಗಳು ಕಾರ್ಯಾಚರಣೆ ನಡೆಸಲಿವೆ. ವಾರದಲ್ಲಿ ಮೂರು ದಿನ ಇನ್‌ಸ್ಪೆಕ್ಟರ್ ನೇತೃತ್ವದ ತಂಡ ಸಂಚರಿಸಲಿದೆ ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.