ಮೈಸೂರು

ನಿರ್ವಹಣಾ ತಾಣ ನಿಷ್ಕ್ರಿಯ

Published On :

ಮೈಸೂರು: ಸರ್ಕಾರದ ಯಾವುದೇ ಯೋಜನೆಗಳು ಎಂದರೆ ಹೀಗೆ ಇರಬೇಕು. ಅಲ್ಲಿ ಅಧಿಕಾರಿಗಳ ಉದಾಸೀನತೆಯೋ, ಜನಪ್ರತಿನಿಧಿಗಳ ಅಸಡ್ಡೆಯೋ ಅಥವಾ ಜನಸಾಮಾನ್ಯರ ಭಾಗವಹಿಸುವಿಕೆಯ ನಿರಾಸಕ್ತಿಯೋ ಕಾಣುವುದು ಸಹಜ. ಇಂತಹ ಎಲ್ಲಾ ಕಾರಣಗಳಿಗೂ ನಿದರ್ಶನ ಇಲ್ಲಿದೆ.
ಕೇಂದ್ರ ಸರ್ಕಾರವು ನರ್ಮ್ ಯೋಜನೆಯಡಿ ಮೈಸೂರು ನಗರದ ಅಭಿವೃದ್ಧಿಗೆ ಕೋಟ್ಯಂತರ ರುಪಾಯಿ ಬಿಡುಗಡೆ ಮಾಡಿದೆ. ಇದರಲ್ಲಿ ಘನತ್ಯಾಜ್ಯ ನಿರ್ವಹಣೆಯ ಯೋಜನೆಗೂ ಹಣ ಮೀಸಲಿರಿಸಿದೆ. ಇಂತಹ ಹಣದಲ್ಲಿ ಮೈಸೂರಿನ 9 ವಲಯಗಳ ವ್ಯಾಪ್ತಿಯಲ್ಲಿ ನಗರ ಪಾಲಿಕೆಯು ಶೂನ್ಯ ಕಸ ನಿರ್ವಹಣಾ ಘಟಕಗಳನ್ನು ನಿರ್ಮಾಣ ಮಾಡಿದೆ. ಇವುಗಳಲ್ಲಿ ಒಂದೆರಡು ಮಾತ್ರ ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿದ್ದರೆ, ಕೆಲವು ಪ್ರಾರಂಭವಾಗಿ ನಂತರ ಸ್ಥಗಿತಗೊಂಡಿವೆ. ಇನ್ನೂ ಕೆಲವು ಯಾವುದೇ ಚಟುವಟಿಕೆ ಆರಂಭಿಸಿಲ್ಲ.
2011 ರಲ್ಲಿ ಈ ಘಟಕಗಳನ್ನು ನಿರ್ಮಿಸುವ ಯೋಜನೆಗೆ ಚಾಲನೆ ದೊರೆಯಿತು. ತಲಾ 35 ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಂಡ ಇಂತಹ ಘಟಕಗಳಲ್ಲಿ ಬನ್ನಿಮಂಟಪದ ಜೋಡಿ ತೆಂಗಿನ ಮರದ ಸ್ಮಶಾನದಲ್ಲಿರುವ ಕೇಂದ್ರವೂ ಒಂದು. ಇದು ಕಳೆದ ಎರಡು ವರ್ಷಗಳಿಂದ ಉದ್ದೇಶಿತ ಯೋಜನೆಗೆ ಬಳಕೆಯಾಗದೆ ನಿಷ್ಕ್ರಿಯವಾಗಿದೆ.
ಕಟ್ಟಡಗಳೇ ಹಾಳು: ವಿಶಾಲವಾದ ಶೆಡ್, ತ್ಯಾಜ್ಯ ಸಂಗ್ರಹಕ್ಕೆ ಅಗತ್ಯ ಸ್ಥಳಾವಕಾಶ, ಕಸ ಸಂಸ್ಕರಿಸಿ ಗೊಬ್ಬರ ಮಾಡಲು ಬೇಕಾದ ತೊಟ್ಟಿಗಳು, ಕಾರ್ಯಾಲಯ ಮತ್ತು ಸಿಬ್ಬಂದಿ ವರ್ಗಕ್ಕೆ ಬೇಕಾದ ಶೌಚಾಲಯದ ವ್ಯವಸ್ಥೆ ಮುಂತಾದ ಮೂಲ ಸೌಕರ್ಯಗಳಿವೆ. ಹೀಗಿದ್ದರೂ ಘಟಕ ಆರಂಭಿಸದ ಕಾರಣ, ಕಟ್ಟಡಗಳು ನಿರ್ವಹಣೆಯಿಲ್ಲದೆ ಹಾಳಾಗಿದ್ದು, ಆವರಣದ ಸುತ್ತಮುತ್ತ ಗಿಡಗಂಟೆಗಳು ಬೆಳೆದು ಕೊಂಪೆಯಂತಾಗಿದೆ. ಇದು ಜನರ ತೆರಿಗೆ ಹಣ ಅಪವ್ಯಯವಾಗಲು ಕಾರಣವಾಗಿದೆ.
ನರಸಿಂಹರಾಜ ಕ್ಷೇತ್ರದ ವ್ಯಾಪ್ತಿಗೆ ಸೇರಿರುವ ವಾರ್ಡ್ 39- ಕೈಲಾಸಪುರಂ, 40- ಮೀನಾ ಬಜಾರ್, 41- ಈರನಗೆರೆ, 42- ಬಿ.ಬಿ. ಕೇರಿ, 43- ತಿಲಕ್‌ನಗರ, 44- ಬನ್ನಿಮಂಟಪ, 45-ಬನ್ನಿಮಂಟಪ ಹುಡ್ಕೋ ಬಡಾವಣೆ ಹಾಗೂ 64- ನಜರಬಾದ್ ಈ ಎಂಟು ಪ್ರದೇಶಗಳು ಸೇರಿವೆ. ಸುಮಾರು 1.3 ಲಕ್ಷಕ್ಕೂ ಅಧಿಕ ಜನಸಂಖ್ಯೆ, 30 ಸಾವಿರಕ್ಕೂ ಅಧಿಕ ಮನೆಗಳು ಹಾಗೂ 2.5 ಸಾವಿರಕ್ಕೂ ಹೆಚ್ಚಿನ ಉದ್ದಿಮೆಗಳಿವೆ. ವಲಯ 7 ರ ವ್ಯಾಪ್ತಿಗೆ ಇದು ಸೇರಿದ್ದು, ಈ ಭಾಗದಲ್ಲಿ ಸಂಗ್ರಹವಾಗುವ ಕಸವನ್ನು ಸೂಯೇಜ್‌ಫಾರಂನಲ್ಲಿರುವ ಎಕ್ಸೆಲ್ ಪ್ಲಾಂಟ್‌ಗೆ ರವಾನಿಸುವ ಕೆಲಸ ನಡೆದಿದೆ.
ಈ ವಲಯದ ವ್ಯಾಪ್ತಿಗೆ ಸೇರಿರುವ ಬನ್ನಿಮಂಟಪದ ಜೋಡಿತೆಂಗಿನ ಮರ ಸ್ಮಶಾನದ ಆವರಣದಲ್ಲಿ 7 ರ ವಲಯದ ವ್ಯಾಪ್ತಿಗೆ ಸೇರಿರುವ ಶೂನ್ಯಕಸ ನಿರ್ವಹಣಾ ಘಟಕ ನಡೆಸಲು ಈಗಾಗಲೇ ಸ್ವಯಂ ಸೇವಾ ಸಂಸ್ಥೆಯೊಂದು ಮುಂದೆ ಬಂದಿದೆ. ಘಟಕಕ್ಕೆ ಅಗತ್ಯ ಯಂತ್ರಗಳು ಹಾಗೂ ಬೋರ್‌ವೆಲ್ ಮುಂತಾದ ಮೂಲಸೌಕರ್ಯವೂ ಅಗತ್ಯವಾಗಿದ್ದು, ಘಟಕದ ನಿರ್ವಹಣೆಯನ್ನು ಗುತ್ತಿಗೆಗೆ ವಹಿಸುವ ಸಂಬಂಧ ಜಿಲ್ಲಾಧಿಕಾರಿಗಳ ಅನುಮೋದನೆಗೆ ಕಳುಹಿಸಲಾಗಿದೆ. ಅವರು ಅನುಮತಿ ನೀಡಿದ ನಂತರ ಘಟಕ ಆರಂಭಿಸಲಾಗುವುದು.
ಟಿ ಪ್ರಸನ್ನ, ಪರಿಸರ ಎಂಜಿನಿಯರ್, ವಲಯ 7, ಮೈಸೂರು ನಗರ ಪಾಲಿಕೆ
ಎಸ್‌ಆರ್‌ಎಲ್ ಸಂಸ್ಥೆ ಸ್ಪಷ್ಟನೆ
ವಲಯ 6ರ ವ್ಯಾಪ್ತಿಯ ಶೂನ್ಯಕಸ ನಿರ್ವಹಣ ಘಟಕದಲ್ಲಿ ಮೂಲ ಸೌಕರ್ಯದ ಕೊರತೆಯಿದ್ದು, ಕಸ ಸಂಸ್ಕರಣೆ ಕಾರ್ಯದಲ್ಲಿ ಪ್ರತಿದಿನ 10-12 ಮಂದಿ ಮಹಿಳೆಯರು ಕೆಲಸ ಮಾಡುತ್ತಾರೆ. ಆದರೆ ಅವರಿಗೆ ಸರಿಯಾದ ರಕ್ಷಣೆ ಇಲ್ಲ. ಇಎಸ್‌ಐ ಮತ್ತು ಪಿಎಫ್ ಸೌಲಭ್ಯವಿಲ್ಲ. ಶೌಚಾಲಯ ಕಟ್ಟಿಸಲಾಗಿದ್ದರೂ ನೀರಿನ ವ್ಯವಸ್ಥೆ ಮಾಡಿಲ್ಲ ಎಂದು ಎಸ್‌ಆರ್‌ಎಲ್ ಸಂಸ್ಥೆಯ ಕಾರ್ಯದರ್ಶಿ ಮಂಜುಳಾ ತಿಳಿಸಿದ್ದಾರೆ. 'ಕನ್ನಡಪ್ರಭ'ದಲ್ಲಿ ಪ್ರಕಟವಾಗುತ್ತಿರುವ ಕಸಬ್ ಮೈಸೂರು ಸರಣಿಯಲ್ಲಿ ಜೂ.26 ರಂದು ಪ್ರಕಟವಾಗಿರುವ ಕಸ ಸಂಸ್ಕರಣೆ ಸ್ಥಗಿತ ವರದಿಗೆ ಸ್ಪಷ್ಟನೆ ನೀಡಿರುವ ಅವರು, ಆವರಣದ ಸುತ್ತ ಕಾಂಪೌಂಡ್ ಇಲ್ಲದ ಕಾರಣ ಭದ್ರತಾ ಸಮಸ್ಯೆ ಹಾಗೂ ಹಂದಿಗಳ ಹಾವಳಿಯಿದೆ. ಜೊತೆಗೆ ಕಟ್ಟಡದ ಪಕ್ಕದಲ್ಲಿಯೇ ಕೆಲವು ಯುವಕರು ಇಸ್ಪೀಟ್ ಆಡುತ್ತಾರೆ. ಈ ಎಲ್ಲಾ ತೊಂದರೆಗಳಿವೆ. ಇದರ ಬಗ್ಗೆ ಅಧಿಕಾರಿಗಳಿಗೆ ದೂರು ನೀಡಲಾಗಿತ್ತು. ಆದರೂ ಪ್ರಯೋಜನವಾಗಿಲ್ಲ. ಅಲ್ಲದೆ ಪಕ್ಕದಲ್ಲಿ ಸಿಮೆಂಟ್ ಉಗ್ರಾಣವಿದ್ದು ಅದರಿಂದ ಧೂಳು ಹೊರಬರುವ ಕಾರಣ ಆರೋಗ್ಯಕ್ಕೆ ತೊಂದರೆಯಾಗಲಿದೆ. ಇದಕ್ಕೆ ಮೆಸ್ ಅಳವಡಿಸಬೇಕು. ಎಲ್ಲಾ ಸೌಕರ್ಯಗಳನ್ನು ಒದಗಿಸಿಕೊಟ್ಟರೆ ನಮ್ಮ ಸಂಸ್ಥೆಯೇ ಘಟಕವನ್ನು ನಿರ್ವಹಿಸಲು ಸಿದ್ಧವಿದೆ ಎಂದಿದ್ದಾರೆ.



-ಮಾ. ವೆಂಕಟೇಶ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.